Authors
ಅಯೋಧ್ಯೆಯಲ್ಲಿ ಕೋತಿಯೊಂದು ರಾಮನಿಗೆ ತಡರಾತ್ರಿ ಯಾರೂ ಇಲ್ಲದಾಗ ನಿತ್ಯವೂ ನಮಸ್ಕರಿಸುತ್ತದೆ ಎಂಬ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಕುರಿತ ಕ್ಲೇಮಿನಲ್ಲಿ “ಅಯೋಧ್ಯೆಯಲ್ಲಿ ಮಂಗವು ಪ್ರತಿ ದಿನ ರಾತ್ರಿ ಯಾರು ಇಲ್ಲದ ಸಮಯದಲ್ಲಿ ಬಂದು ಶ್ರೀರಾಮನ ಮಂದಿರದಲ್ಲಿ ನಮಿಸಿ ಹೋಗುತ್ತಿತ್ತು ಒಂದು ದಿನ ರಾತ್ರಿ ಆ ದೇವಸ್ಥಾನದ ಅರ್ಚಕರೊಬ್ಬರು ಆಕಸ್ಮಿಕ ಈ ಘಟನೆಯನ್ನು ನೋಡಿ ಅಚ್ವರಿಗೊಂಡಿದ್ದಾರೆ, ಮಾರನೆ ದಿನ ಮತ್ತೆ ಅದೇ ಸಮಯಕ್ಕೆ ಮಂಗವು ಬಂದಿದೆ , ಈ ಮಂಗನ ಶ್ರೀರಾಮನ ಭಕ್ತಿ ನೋಡಿ ಅಚ್ಚರಿಗೊಂಡಿದ್ದಾರೆ. ಇದನ್ನು ಮೊಬೈಲ್ ನಲ್ಲಿ ಸೇರೆ ಹಿಡಿದ್ದಾರೆ. ಈಗ ವಿಡಿಯೋ ಭಾರಿ ವೈರಲ್ ಆಗಿದ್ದು ಮನುಷ್ಯರಂತೆ ಪ್ರಾಣಿಗಳಿಗೂ ಧೈವ ಭಕ್ತಿ ಇದೆ ಎಂಬುದನ್ನು ನಾವು ಮರೆಯಬಾರದು.” ಎಂದು ಹೇಳಲಾಗಿದೆ.
ಈ ಕುರಿತ ಸತ್ಯ ಪರಿಶೀಲನೆಯನ್ನು ನ್ಯೂಸ್‌ಚೆಕರ್ ನಡೆಸಿದ್ದು, ಇದು ಅಯೋಧ್ಯೆಯಲ್ಲಿ ನಡೆದ ಘಟನೆಯಲ್ಲ, ಇದು ಬೇರೆ ಕಡೆಯಲ್ಲಿ ಆಗಿದ್ದು, ಭಾಗಶಃ ತಪ್ಪು ಎಂದು ತಿಳಿದುಬಂದಿದೆ.
Fact Check/Verification
ಈ ವೈರಲ್ ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲನೆಗೆ ಒಳಪಡಿಸಲಾಗಿದ್ದು, ಇದರಲ್ಲಿ ಕೋತಿಯೊಂದು ರಾತ್ರಿ, ದೇಗುಲದ ಮೆಟ್ಟಿಲುಗಳನ್ನು ಹತ್ತಿ ಬಂದು ಗುಡಿಯೊಂದರ ಎದುರು ನಮಸ್ಕರಿಸುವುದು ಕಾಣಿಸುತ್ತದೆ. ಅನಂತರ ಮತ್ತಷ್ಟು ನಡೆದು, ಮೆಟ್ಟಿಲುಗಳನ್ನು ಹತ್ತಿ ಇನ್ನೊಂದು ಗುಡಿಯ ಎದುರು ನಮಸ್ಕರಿಸುವುದು ಕಾಣಿಸುತ್ತದೆ. ಅನಂತರ ಪರಿಶೀಲನೆಗಾಗಿ, ವೀಡಿಯೋದ ಕೀಫ್ರೇಂಗಳನ್ನು ತೆಗೆದು ಸರ್ಚ್ ನಡೆಸಲಾಗಿದ್ದು, ಈ ವೇಳೆ ಒಡಿಶಾ ಟೀವಿ ವರದಿಯೊಂದು ಲಭ್ಯವಾಗಿದೆ.
ಇದರಲ್ಲಿ ಕೋತಿಯೊಂದು ಪ್ರತಿ ದಿನವೂ ಪೂಜೆ ಸಲ್ಲಿಸಲು ದೇವಾಲಯಕ್ಕೆ ತೆರಳುತ್ತಿದೆ ಎಂದು ಶೀರ್ಷಿಕೆ ಕೊಡಲಾಗಿದ್ದು, ದೇಗುಲದಲ್ಲಿ ಆರಂಭದಲ್ಲಿ ಪರಶುರಾಮ ಗುಡಿಗೆ ಅನಂತರ ಶಿವನ ಗುಡಿಗೆ ಕೋತಿ ನಮಸ್ಕರಿಸುತ್ತದೆ ಎಂದು ಹೇಳಲಾಗಿದೆ.
ಈ ವರದಿಯ ಪ್ರಕಾರ ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಲಕ್ನೋದ ಶ್ರೀ ಬುದ್ಧೇಶ್ವರ ಮಹಾದೇವ ದೇಗುಲದಲ್ಲಿ ಎಂದು ಹೇಳಲಾಗಿದೆ.
ಇದನ್ನು ಸಾಕ್ಷ್ಯವಾಗಿಟ್ಟುಕೊಂಡು “वानर” “दर्शन” ‘मंदिर” ಎಂದು ಹಿಂದಿಯಲ್ಲಿ ಕೀವರ್ಡ್ ಸರ್ಚ್ ನಡೆಸಲಾಗಿದ್ದು ಈ ವೇಳೆ ನವಭಾರತ್ ಟೈಮ್ಸ್‌ನ ವರದಿಯೊಂದು ಲಭ್ಯವಾಗಿದೆ.
ಈ ವರದಿಯಲ್ಲಿ “ಇತ್ತೀಚಿನ ದಿನಗಳಲ್ಲಿ ಹನುಮಂತನ ವಾನರ ರೂಪ ಎಂದು ದೇಗುಲದಲ್ಲಿ ಕಪಿಯೊಂದು ನಮಸ್ಕರಿಸುವ ವೀಡಿಯೋ ವೈರಲ್ ಆಗುತ್ತಿದೆ. ಕೋತಿಯೊಂದ ದೇಗುಲಕ್ಕೆ ಅಗಮಿಸಿ ದೇಗುಲ ವಿಗ್ರಹಗಳ ಎದುರು ನಮಸ್ಕರಿಸಿ ಹೋಗುತ್ತದೆ ಅನಂತರ ಅಲ್ಲಿ ಇಟ್ಟಿರುವ ಪ್ರಸಾದವನ್ನು ತೆಗೆದುಕೊಂಡು ಹೋಗುತ್ತದೆ. ಕೋತಿ ಇದನ್ನು ಹಲವು ತಿಂಗಳುಗಳಿಂದ ಮಾಡುತ್ತಿದ್ದು, ಈ ಘಟನೆ ಲಕ್ನೋದಲ್ಲಿ ಬೆಳಕಿಗೆ ಬಂದಿದೆ” ಎಂದು ಹೇಳಿದೆ ಜೊತೆಗೆ “ಲಕ್ನೋದ ಬುಧೇಶ್ವರ ಮಹಾದೇವಸ್ಥಾನದಲ್ಲಿ ಈ ಘಟನೆ ನಡೆಯುತ್ತಿದ್ದು, ಕೋತಿ ಮೊದಲು ದಂಡವತ್ ಪರಶುರಾಮ ಮತ್ತು ಬಾಬಾ ಬುಧೇಶ್ವರನಿಗೆ ನಮಸ್ಕರಿಸುತ್ತದೆ. ಹನುಮಂತ ಕೋತಿ ರೂಪದಲ್ಲಿ ಪ್ರತಿ ದಿನ ಬರುತ್ತಾನೆ ಮತ್ತು ದೇವರ ಪ್ರಸಾದ ಸ್ವೀಕರಿಸಿ ಮತ್ತೆ ಹೋಗುತ್ತದೆ ಎಂದು ಅರ್ಚಕರು ತಿಳಿಸಿದ್ದಾರೆ” ಎಂದು ವರದಿ ಹೇಳಿದೆ.
Also Read: ಬಿಬಿಸಿಗೆ ಮೋದಿ ಡಾಕ್ಯುಮೆಂಟರಿ ಮಾಡಿದ ನಿರ್ಮಾಪಕನನ್ನು ರಾಹುಲ್ ಗಾಂಧಿ ಭೇಟಿ ಮಾಡಿದರೇ?
ನವಭಾರತ್ ಟೈಮ್ಸ್‌ನ ವೀಡಿಯೋ ವರದಿಯಲ್ಲಿ ಅರ್ಚಕರು ಹೇಳಿಕೆಗಳನ್ನ ದಾಖಲೆಯಾಗಿ ನೀಡಲಾಗಿದೆ. ಈ ಕುರಿತ ವೀಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಬುದ್ಧದೇವ ಮಹದೇಶ್ವರ ಮಂದಿರದಲ್ಲಿ ಕಪಿ ದೇವರ ದರ್ಶನ ರೂಪ ಮಾಡುತ್ತಿರುವುದು, ಹನುಮಂತ ರೂಪದ ವಾನರ |ಲಕ್ನೋ|ಎನ್‌ಬಿಟಿ ಎಂದು ಶೀರ್ಷಿಕೆ ಕೊಡಲಾಗಿದೆ. ಇದನ್ನು ಡಿಸೆಂಬರ್ 31, 2022ರಂದು ಅಪ್‌ಲೋಡ್ ಮಾಡಲಾಗಿದೆ.
ಆದ್ದರಿಂದ ಕೋತಿ ಪ್ರತಿದಿನವೂ ಬಂದು ನಮಸ್ಕರಿಸುತ್ತದೆ ಎನ್ನಲಾದ ದೇಗುಲ ಅಯೋಧ್ಯೆಯಲ್ಲ ಎಂಬುದು ಸ್ಪಷ್ಟವಾಗಿದೆ.
Conclusion
ಈ ಸತ್ಯ ಪರಿಶೀಲನೆಯ ಪ್ರಕಾರ, ಕೋತಿ ಬಂದು ದೇಗುಲದಲ್ಲಿ ನಮಸ್ಕರಿಸುತ್ತದೆ ಎನ್ನುವುದು ನಿಜವಾದರೂ ಇದು ಅಯೋಧ್ಯೆಯಲ್ಲಿ ನಡೆಯುವ ಘಟನೆಯಲ್ಲ. ಬದಲಾಗಿ ಲಕ್ನೋದ ಬುಧೇಶ್ವರ ದೇವಾಲಯ. ಆದ್ದರಿಂದ ಈ ಕ್ಲೇಮ್ ಭಾಗಶಃ ತಪ್ಪಾಗಿದೆ.
Our Sources
YouTube Video by Navbharat times, Dated 31.12.22
Report by OdishaTv, Dated 26.12.22
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.