Authors
Claim
ಮಹಾಮಳೆಗೆ ಬೆಂಗಳೂರಿನ ರಸ್ತೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್
Fact
ಬೆಂಗಳೂರಿನ ರಸ್ತೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಎಂದ ವೈರಲ್ ವೀಡಿಯೋ ನಿಜವಾಗಿ ವಿಯೆಟ್ನಾಂನದ್ದು
ಬೆಂಗಳೂರಿಲ್ಲಿ ಭಾರೀ ಮಳೆ ಸುರಿದ ವರದಿಗಳ ಮಧ್ಯೆ ರಸ್ತೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗುತ್ತಿರುವ ದೃಶ್ಯವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಅಕ್ಟೋಬರ್ 21, 2024ರಂದೂ ಹೆಚ್ಚಿನ ಮಳೆಯ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು ಶಾಲೆಗಳಿಗೆ ರಜೆ ಘೋಷಣೆಯನ್ನು ಮಾಡಲಾಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜಧಾನಿ ಬೆಂಗಳೂರನ್ನು “ಬ್ರ್ಯಾಂಡ್ ಬೆಂಗಳೂರು” ಎಂಬಂತೆ ಮಾಡಲಾಗುವುದು ಎಂದು ಹೇಳಲಾಗಿತ್ತು. ರಾಜಧಾನಿಯನ್ನು ವಿಶ್ವದರ್ಜೆ ನಗರವನ್ನಾಗಿಸುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇದನ್ನು ಹೇಳಿದ್ದು, ಈ ಹಿನ್ನೆಲೆಯಲ್ಲಿ ಮಳೆಯಿಂದಾದ ಅನಾಹುತಗಳ ಕುರಿತಾಗಿ ಬ್ರ್ಯಾಂಡ್ ಬೆಂಗಳೂರು ಬಗ್ಗೆ ಟೀಕೆಗಳನ್ನು ಮಾಡಲಾಗುತ್ತಿದೆ.
ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಬ್ರಾಂಡ್ ಬೆಂಗಳೂರು ಬಿಸಿ ನೀರು ಭಾಗ್ಯ ಅಷ್ಟೇ…. ಯಾರಿಗೆ ಏನಾದ್ರೆ ನಮಗೇನು ಅಂತಿದೆ ಕಾಸಿಲ್ಲದ ಸರ್ಕಾರ..” ಎಂಬ ಹೇಳಿಕೆಯೊಂದಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
Also Read: ಕುಂಭಕರ್ಣನ ಖಡ್ಗ ಸಿಕ್ಕಿದೆ ಎಂದ ವೈರಲ್ ಫೊಟೋ ಎಐ ಸೃಷ್ಟಿ!
ನ್ಯೂಸ್ಚೆಕರ್ ವೈರಲ್ ವೀಡಿಯೋ ಬಗ್ಗೆ ಸತ್ಯಶೋಧನೆ ನಡೆಸಿದ್ದು, ಇದು ತಪ್ಪಾದ ಹೇಳಿಕೆ ಎಂದು ಕಂಡುಕೊಂಡಿದೆ. ರಸ್ತೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆದ ವೀಡಿಯೋ ವಿಯೆಟ್ನಾಂನಲ್ಲಿ ನಡೆದ ಘಟನೆ ಎಂದು ಗೊತ್ತಾಗಿದೆ.
Fact Check/Verification
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಅನೇಕ ಫಲಿತಾಂಶಗಳು ಇದು ವಿಯೆಟ್ನಾಂನದ್ದು ಎಂಬಂತೆ ಪೋಸ್ಟ್ ಗಳಿರುವುದನ್ನು ಗಮನಿಸಿದ್ದೇವೆ.
ಅಕ್ಟೋಬರ್ 16, 2024ರಂದು ರೆಡಿಟ್ ನಲ್ಲಿ ವಿಯೆಟ್ನಾಂ ನೇಷನ್ ಎಂಬ ಬಳೆಕೆದಾರರು ಮಾಡಿದ ಪೋಸ್ಟ್ ನಲ್ಲಿ, “ಅಕ್ಟೋಬರ್ 14 ರ ಮಧ್ಯಾಹ್ನ, 2 ಗಂಟೆಗಳಿಗೂ ಹೆಚ್ಚು ಕಾಲ ಸುರಿದ ಭಾರೀ ಮಳೆಯು ಕ್ಯಾನ್ ಥೋ ನಗರದ ಮಧ್ಯ ಪ್ರದೇಶದ ಬೀದಿಗಳಲ್ಲಿ ಪ್ರವಾಹಕ್ಕೆ ಕಾರಣವಾಯಿತು. ಗುಡುಗು ಸಹಿತ ಭಾರೀ ಮಳೆಯಿಂದಾಗಿ ನಿನ್ಹ್ ಕಿಯು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಸುಮಾರು ಒಂದು ಗಂಟೆಗಳ ಕಾಲ ವಿದ್ಯುತ್ ಕಡಿತಗೊಂಡಿತು. ನ್ಗುಯೆನ್ ವ್ಯಾನ್ ಲಿನ್ಹ್ ಬೀದಿಯಲ್ಲಿ, ವಿದ್ಯುತ್ ತಂತಿ ಪ್ರವಾಹದ ನೀರಿದ್ದ ರಸ್ತೆಯ ಮೇಲೆ ಬಿದ್ದಿತು, ಅದರಿಂದ ಕಿಡಿಗಳು ಸಿಡಿದಿದ್ದರಿಂದ ಅನೇಕ ಜನರು ಭಯಭೀತರಾಗಿದ್ದರು. ನಿಹು ಕಿಯು ಜಿಲ್ಲೆಯ ಹಲವು ಮನೆಗಳ ಮನೆಗಳಿಗೆ ನೀರು ನುಗ್ಗಿ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿತು” ಎಂದಿದೆ. (ವಿಯೆಟ್ನಾಮೀಸ್ ನಿಂದ ಅನುವಾದಿಸಲಾಗಿದೆ)
ಇದನ್ನು ಅನುಸರಿಸಿ ನಾವು ಇನ್ನಷ್ಟು ಶೋಧ ನಡೆಸಿದ್ದು, ಪೂರಕ ಮಾಹಿತಿಗಳು ಲಭ್ಯವಾಗಿವೆ.
ಅಕ್ಟೋಬರ್ 17, 2024ರಂದು KÊNH VTC14 ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಕಟಿಸಲಾದ ವೀಡಿಯೋಕ್ಕೆ “ತುಂಡಾದ ವಿದ್ಯುತ್ ತಂತಿಗಳು ಜಲಾವೃತಗೊಂಡ ರಸ್ತೆಗೆ ಬೀಳುವ ಭಯಾನಕ ದೃಶ್ಯ, ಇದರಿಂದ ಎಲ್ಲೆಡೆ ಕಿಡಿಗಳು ಹಾರಿವೆ” (ವಿಯೆಟ್ನಾಮೀಸ್ ನಿಂದ ಅನುವಾದಿಸಲಾಗಿದೆ) ಶೀರ್ಷಿಕೆ ನೀಡಲಾಗಿದೆ. ಜೊತೆಗೆ ವೀಡಿಯೋದ ವಿವರಣೆಯಲ್ಲಿ “ಅಕ್ಟೋಬರ್ 14 ರ ಮಧ್ಯಾಹ್ನ, ಸುಮಾರು 2 ಗಂಟೆಗಳ ಕಾಲ ಭಾರೀ ಮಳೆಯು ಕ್ಯಾನ್ ಥೋ ನಗರದ ಮಧ್ಯ ಭಾಗದ ಬೀದಿಗಳಲ್ಲಿ ವಿಪರೀತ ಪ್ರವಾಹಕ್ಕೆ ಕಾರಣವಾಯಿತು. ಕೆಲವೆಡೆ ವಾಹನದ ಟೈರ್ ಗಳ ಅರ್ಧಕ್ಕೂ ಮೇಲ್ಪಟ್ಟು ನೀರು ತುಂಬಿತ್ತು. ದೈನಂದಿನ ಚಟುವಟಿಕೆ ಹಾಗೂ ಸಂಚಾರಕ್ಕೆ ಇದರಿಂದ ತೊಂದರೆಯಾಯಿತು” ಎಂದಿದೆ. (ವಿಯೆಟ್ನಾಮೀಸ್ ನಿಂದ ಅನುವಾದಿಸಲಾಗಿದೆ)
ಅಕ್ಟೋಬರ್ 16, 2024ರ ವಿಯೆಟ್ನಾಂ ಪ್ಲಸ್ ಪ್ರಕಟಿಸಿದ ವರದಿಯಲ್ಲಿ, “ಕ್ಯಾನ್ ಥೋದಲ್ಲಿ ವಿದ್ಯುತ್ ತಂತಿಗಳು ಜಲಾವೃತಗೊಂಡ ರಸ್ತೆಯ ಮೇಲೆ ಬಿದ್ದಾಗ ಸಂಭವಿಸಿದ ಆಘಾತಕಾರಿ ದೃಶ್ಯ. ತುಂಡಾದ ವಿದ್ಯುತ್ ತಂತಿಯು ನೀರಿನ ಮೇಲ್ಮೈಯಲ್ಲಿ ಅಪಾಯಕಾರಿಯಾಗಿ ಮತ್ತು ವಿಚಿತ್ರವಾಗಿ ಕಾಣುವ ಕಿಡಿಗಳ ವಿದ್ಯಮಾನವನ್ನು ಸೃಷ್ಟಿಸುತ್ತಿರುವುದನ್ನು ಕಂಡು ಜನರು ಭಯಭೀತರಾಗಿದ್ದರು.” ಎಂದಿದೆ. (ವಿಯೆಟ್ನಾಮೀಸ್ ನಿಂದ ಅನುವಾದಿಸಲಾಗಿದೆ)
Conclusion
ಈ ಸಾಕ್ಷ್ಯಗಳ ಆಧಾರದಲ್ಲಿ ವಿದ್ಯುತ್ ತಂತಿಗಳು ಮಳೆನೀರು ಹರಿಯುತ್ತಿದ್ದ ರಸ್ತೆಮೇಲೆ ಬಿದ್ದು ಶಾರ್ಟ್ ಸರ್ಕ್ಯೂಟ್ ಸಂಭವಿಸಿದ ವಿದ್ಯಮಾನ ವಿಯೆಟ್ನಾಂನದ್ದು, ಇದು ಬೆಂಗಳೂರಿನದ್ದಲ್ಲ. ಆದ್ದರಿಂದ ಹೇಳಿಕೆ ತಪ್ಪಾಗಿದೆ ಎಂದು ತಿಳಿದುಬಂದಿದೆ.
Also Read: ಬೆಂಗಳೂರಲ್ಲಿ ಬೀಚ್ ಉದ್ಘಾಟನೆಯಾಗಿದೆ ಎಂದ ಈ ನೆರೆ ವೀಡಿಯೋ ಎರಡು ವರ್ಷ ಹಳೆಯದು!
Result: False
Our Sources
Post By Vietnam Nation, Dated: October 16, 2024
YouTube Video By KÊNH VTC14, Dated: 17, 2024
Report By Vietnam First, Dated: October 16, 2024
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.