Authors
3ಸಾವಿರ ವರ್ಷ ಹಳೆಯ ಅನಂತ ಪದ್ಮನಾಭ ಸ್ವಾಮಿ ವಿಗ್ರಹ, ಮೆಕ್ಕಾದಲ್ಲಿ ಶಾರುಖ್ ಖಾನ್, ಗೌರಿ ಖಾನ್ ಫೋಟೋ, ಆರ್ ಬಿಐನಿಂದ ಹೊಸ ₹5000 ನೋಟು, ತಿರುಪತಿ ಕಾಲ್ತುಳಿತ ಸಂದರ್ಭ ಮಗುವಿನ ಶವ ಬೈಕಿನಲ್ಲಿ ಸಾಗಿಸಲಾಯಿತು, ಬಿಸಿನೀರು, ಕಾಫಿ ಮತ್ತು ತುಪ್ಪದ ಮಿಶ್ರಣ ಕುಡಯುವುದರಿಂದ ಕೊಬ್ಬಿನ ಯಕೃತ್ತು, ಕ್ಯಾನ್ಸರ್ ಗೆ ತಡೆ, ನಾಳೆ ಸಂಜೆಯಿಂದ ಲಾಕ್ ಡೌನ್ ಎಂಬ ಹೇಳಿಕೆಗಳು ಈ ವಾರ ಹರಿದಾಡಿವೆ. ಇವುಗಳ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ಸುಳ್ಳು ಎಂದು ನಿರೂಪಿಸಿದೆ.
3000 ವರ್ಷಗಳಷ್ಟು ಹಳೆಯದಾದ ಅನಂತ ಪದ್ಮನಾಭಸ್ವಾಮಿ ವಿಗ್ರಹ ಎಂದ ವೀಡಿಯೋದ ಅಸಲಿಯತ್ತೇನು?
7,800 ಕೆಜಿ ಶುದ್ಧ ಚಿನ್ನ ಮತ್ತು 7,80,000 ವಜ್ರದಿಂದ 780 ಕ್ಯಾರೆಟ್ನ 3 ಸಾವಿರ ವರ್ಷಗಳಷ್ಟು ಹಳೆಯದಾದ ಅನಂತ ಪದ್ಮನಾಭಸ್ವಾಮಿಯ ಪ್ರತಿಮೆ ಇದೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಇದು 3000 ವರ್ಷಗಳಷ್ಟು ಹಳೆಯ ವಿಗ್ರಹವಲ್ಲ, ಹೈದರಾಬಾದ್ನ ಶಿವನಾರಾಯಣ ಜ್ಯುವೆಲ್ಲರಿಯವರು ತಯಾರಿಸಿದ್ದಾಗಿದೆ ಈ ಕುರಿತ ವರದಿ ಇಲ್ಲಿ ಓದಿ
ಮೆಕ್ಕಾದಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್, ಎಐ ಫೋಟೋ ವೈರಲ್!
ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಗೌರಿ ಖಾನ್ ಮೆಕ್ಕಾದಲ್ಲಿರುವ ಫೋಟೋ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಒಂದು ವೈರಲ್ ಆಗಿದೆ, ಈ ಬಗ್ಗೆ ಪರಿಶೀಲನೆ ನಡೆಸಿದಾಗ, ಮೆಕ್ಕಾದಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್ ಎಂದು ಹೇಳಲಾದ ಫೊಟೋ ಎಐ ಮೂಲಕ ಮಾಡಿದ್ದಾಗಿದೆ ಎಂದು ತಿಳಿದುಬಂದಿದೆ. ಈ ಕುರಿತ ವರದಿ ಇಲ್ಲಿ ಓದಿ
ತಿರುಪತಿ ಕಾಲ್ತುಳಿತದ ಸಂದರ್ಭ ಮಗುವಿನ ಶವವನ್ನು ಬೈಕಿನಲ್ಲಿ ಸಾಗಿಸಲಾಯಿತು ಎನ್ನುವುದು ಸುಳ್ಳು!
ಆಂಧ್ರಪ್ರದೇಶದ ತಿರುಪತಿಯಲ್ಲಿ ಜನವರಿ 8ರಂದು ಸಂಭವಿಸಿದ ಕಾಲ್ತುಳಿತಕ್ಕೆ ಸಂಬಂಧಿಸಿದ್ದು ಎಂದು ವ್ಯಕ್ತಿಯೊಬ್ಬರು ಮಗುವಿನ ಶವವನ್ನು ಆಸ್ಪತ್ರೆಯಿಂದ ಮೋಟಾರ್ ಸೈಕಲ್ನಲ್ಲಿ ಸಾಗಿಸುವ 43 ಸೆಕೆಂಡುಗಳ ವೀಡಿಯೋವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಸತ್ಯಶೋಧನೆ ನಡೆಸಿದಾಗ ತಿರುಪತಿ ಕಾಲ್ತುಳಿತದ ಸಂದರ್ಭ ಮಗುವಿನ ಶವವನ್ನು ಬೈಕಿನಲ್ಲಿ ಸಾಗಿಸಲಾಯಿತು ಎನ್ನುವುದು ಸುಳ್ಳು. 2022ರಲ್ಲಿ ತಿರುಪತಿ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವೊಂದು ಮೃತಪಟ್ಟ ಬಳಿಕ ಊರಿಗೆ ಸಾಗಿಸಲು ಅಂಬ್ಯುಲೆನ್ಸ್ ಗೆ ಹೆಚ್ಚಿನ ಬಾಡಿಗೆ ಕೇಳಿದ್ದರಿಂದ ಮಗುವಿನ ತಂದೆ ಶವವನ್ನು ಬೈಕಿನಲ್ಲಿ ಸಾಗಿಸಿದ ಪ್ರಕರಣ ಇದಾಗಿದೆ.ಈ ಕುರಿತ ವರದಿ ಇಲ್ಲಿ ಓದಿ
ಆರ್ ಬಿಐ ಹೊಸದಾಗಿ ₹5000 ನೋಟು ಬಿಡುಗಡೆ ಮಾಡಿದೆಯೇ?
ಆರ್ ಬಿಐ ಹೊಸದಾಗಿ ₹5000 ಗಳ ನೋಟುಗಳನ್ನು ಬಿಡುಗಡೆ ಮಾಡಿದೆ ಎಂಬತೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆಯಲ್ಲಿ ಕಂಡುಬಂದಂತೆ, ಆರ್ ಬಿಐ ಹೊಸದಾಗಿ 5000 ರೂ.ಗಳ ನೋಟುಗಳನ್ನು ಬಿಡುಗಡೆ ಮಾಡಿಲ್ಲ. ಈ ಹೇಳಿಕೆ ಸುಳ್ಳಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ
ಬಿಸಿನೀರು, ಕಾಫಿ ಮತ್ತು ತುಪ್ಪದ ಮಿಶ್ರಣ ಕುಡಿಯುವುದರಿಂದ ಕೊಬ್ಬಿನ ಯಕೃತ್ತು ಮತ್ತು ಕ್ಯಾನ್ಸರ್ ತಡೆಯಬಹುದೇ?
ಮದ್ಯಪಾನ ಮಾಡಿ ಲಿವರ್ (ಯಕೃತ್ತು) ಹಾಳಾಗಿದ್ದರೆ, ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಕಾಫಿ ಪುಡಿ ಮತ್ತು ಒಂದು ಚಮಚ ತುಪ್ಪವನ್ನು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಲಿವರ್ ನಲ್ಲಿ ಕೊಬ್ಬು ಕಡಿಮೆ ಮಾಡುಬಹುದು ಮತ್ತು ಕ್ಯಾನ್ಸರ್ ತಡೆಯಬಹುದು ಎಂಬಂತೆ ಹೇಳಿಕೆಯನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಸತ್ಯಶೋಧನೆಯಲ್ಲಿ ಕಂಡುಬಂದಂತೆ ಕಾಫಿ, ತುಪ್ಪ ಮತ್ತು ಬಿಸಿನೀರಿನ ಸಂಯೋಜನೆ ಕೊಬ್ಬಿನ ಯಕೃತ್ ಕಾಯಿಲೆ, ಕ್ಯಾನ್ಸರ್ ತಡೆಗಟ್ಟುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ.ಈ ಕುರಿತ ವರದಿ ಇಲ್ಲಿ ಓದಿ
15 ದಿನ ಲಾಕ್ ಡೌನ್ ಎಂಬ ಬ್ರೇಕಿಂಗ್ ಸುದ್ದಿ ನಿಜವೇ?
ನಾಳೆ ಸಂಜೆಯಿಂದ ಕರ್ನಾಟಕ ಲಾಕ್ ಡೌನ್ ಎಂಬ ಬ್ರೇಕಿಂಗ್ ಸುದ್ದಿಯ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆ ಪ್ರಕಾರ ಸರ್ಕಾರ ಕೋವಿಡ್ ಸಂದರ್ಭ ಅಂದರೆ 2021ರಲ್ಲಿ ಅಂತಹ ತೀರ್ಮಾನ ತೆಗೆದುಕೊಂಡಿತ್ತು. ಸದ್ಯ ಎಚ್ಎಂಪಿವಿ ವಿಚಾರದಲ್ಲಿ ಅಂತಹ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.