Authors
ಸ್ವಾವಲಂಬಿ ಸಾರಥಿ ಯೋಜನೆ ಕುರಿತ ವಿವಾದವೊಂದು ಈಗ ಭುಗಿಲೆದ್ದಿದೆ. ಕರ್ನಾಟದಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೇವಲ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯ ಅನ್ವಯ, ಅವರಿಗೆ ಮಾತ್ರ ಸೀಮಿತವಾಗುವಂತೆ ವಾಹನಗಳನ್ನು ತೆಗೆಯಲು ಅನುಕೂಲ ಮಾಡಿಕೊಡುವ ಸಬ್ಸಿಡಿ ಯೋಜನೆಯೊಂದನ್ನು ಹೊರತಂದಿದೆ ಎಂಬುದು ಈ ಆರೋಪ.
ಈ ಕುರಿತು ಆಜ್‌ತಕ್ ಟಿವಿ ವಾಹನಿಯಲ್ಲಿ ಆಂಕರ್ ಸುಧೀರ್ ಚೌಧರಿ ಅಭಿಪ್ರಾಯವನ್ನು ಹೇಳಿದ್ದು, ಈ ಕುರಿತು ಅವರ ಮತ್ತು ವಾಹಿನಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಜೊತೆಗೆ ಯೋಜನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗಳೂ ನಡೆದಿವೆ. ಈ ಹಿನ್ನೆಲೆಯಲ್ಲಿ ನ್ಯೂಸ್‌ಚೆಕರ್ ಯೋಜನೆ ಮತ್ತು ವಸ್ತುಸ್ಥಿತಿಯ ಬಗ್ಗೆ ಪರಾಮರ್ಶೆ ನಡೆಸಿದ್ದು, ಅದು ಇಲ್ಲಿದೆ.
ಸಾರಥಿ ಯೋಜನೆ ಚರ್ಚೆ ಶುರುವಾಗಿದ್ದೆಲ್ಲಿಂದ?
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ಕೆಎಂಡಿಸಿಎಲ್) ಅಲ್ಪಸಂಖ್ಯಾತರಿಗೆ ಲಭ್ಯವಿರುವ ಯೋಜನೆ, ‘ಸ್ವಾವಲಂಬಿ ಸಾರಥಿ ಯೋಜನೆ’ ಅಂಗವಾಗಿ ಹೊಸ ಆಟೋ ರಿಕ್ಷಾ, ಟಾಕ್ಸಿ, ಗೂಡ್ಸ್ ವಾಹನಗಳ ಖರೀದಿಗೆ ಅನುಕೂಲವಾಗುವಂತಹ ಸಬ್ಸಿಡಿ ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಿದ್ದು, ಈ ಯೋಜನೆ ಚರ್ಚೆಗೆ ಬರಲು ಕಾರಣವಾಗಿತ್ತು.
ಸೆಪ್ಟೆಂಬರ್ 8ರಂದು ಕೇಂದ್ರ ಸಚಿವ ರಾಜೀವ್ ಚಂದ್ರ ಶೇಖರ್ ಅವರು ಟ್ವೀಟ್ ಒಂದನ್ನು ಮಾಡಿದ್ದು, ಇದರಲ್ಲಿ ರಾಹುಲ್ ಗಾಂಧಿಯವರ ಕಾಂಗ್ರೆಸ್ ಕರ್ನಾಟಕದಲ್ಲಿ ಕೆಲವು ನಿರ್ದಿಷ್ಟ ಸಮುದಾಯಗಳಿಗೆ ಹೇಗೆ ಲಂಚ ನೀಡಿ, ತುಷ್ಟೀಕರಣದ ರಾಜಕಾರಣವನ್ನು ಮಾಡುತ್ತದೆ ಎಂಬುದಕ್ಕೆ ಮತ್ತೊಂದು ಸ್ಪಷ್ಟ ಉದಾಹರಣೆ ಇಲ್ಲಿದೆ ಎಂದು ಟ್ವೀಟ್ ಮಾಡಿದ್ದರು.
ಇದೇ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ ಕೂಡ, ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಟ್ವೀಟ್ ಮಾಡಿದ್ದರು.
ಆಜ್ ತಕ್ ಸುಧೀರ್ ಚೌಧರಿ ಹೇಳಿದ್ದೇನು?
ಈ ಬೆಳವಣಿಗೆಗಳೊಂದಿಗೆ ಹಿಂದಿ ಸುದ್ದಿ ವಾಹಿನಿ ಆಜ್ ತಕ್‌ನಲ್ಲಿ ಅದರ ಸಂಪಾದಕ ಸುಧೀರ್ ಚೌಧರಿ ಅವರು ಪ್ರಸಾರವೊಂದರಲ್ಲಿ ಈ ಯೋಜನೆಯ ಬಗ್ಗೆ ಪ್ರಸ್ತಾವಿಸಿ, ಇದು ಅಲ್ಪಸಂಖ್ಯಾತರಿಗೆ ಮಾತ್ರ ಇರುವ ಯೋಜನೆ ಎಂದಿದ್ದರು.
ಈ ಹಿನ್ನೆಲೆಯಲ್ಲಿ ಇದು ಅಲ್ಪಸಂಖ್ಯಾತರಿಗೆ ಮಾತ್ರ ಇರುವ ಯೋಜನೆಯಲ್ಲ, ಇದು ಹಿಂದುಳಿದ ವರ್ಗಗಳಿಗೂ ಇದೆ ಎಂದು ಸಚಿವರಾದ ಜಮೀರ್ ಅಹ್ಮದ್, ದಿನೇಶ್ ಗುಂಡೂರಾವ್, ಪ್ರಿಯಾಂಕ ಖರ್ಗೆ ಟ್ವೀಟ್ ಮಾಡಿದ್ದರು.
ಚೌಧರಿ ವಿರುದ್ಧ ಎಫ್‌ಐಆರ್
ಈ ಬೆಳವಣಿಗೆಗಳ ಬಳಿಕ ಸುಳ್ಳು ಹೇಳಿದ್ದಾರೆಂದು ಸುಧೀರ್ ಚೌಧರಿ ವಿರುದ್ಧ ಕ್ರಮಕ್ಕೆ ಸರ್ಕಾರ ಮುಂದಾಗಿತ್ತು.
ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಸೆಪ್ಟೆಂಬರ್ 11, 2023ರಂದು ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಇದರ ಎಫ್‌ಐಆರ್ ವಿವರಗಳು ಇಲ್ಲಿವೆ.
ಎಫ್‌ಐಆರ್ ನಲ್ಲೇನಿದೆ?
ಈ ಎಫ್‌ಐಆರ್ ಪ್ರಕಾರ, “ಅಲ್ಪಸಂಖ್ಯಾತ ಫಲಾನುಭವಿಗಳು ಬ್ಯಾಂಕ್ ಮೂಲಕ ಸಾಲ ಪಡೆದು ಟ್ಯಾಕ್ಸಿ, ಗೂಡ್ಸ್ ವಾಹನ ಆಟೋರಿಕ್ಷಾ ಖರೀದಿಸಲು ಬಯಸಿದಲ್ಲಿ ನಿಗಮದಿಂದ ಶೇ.50ರಷ್ಟು ಗರಿಷ್ಟ 3 ಲಕ್ಷ ರೂ.ಗಳಷ್ಟು ಸಹಾಯಧನವನ್ನು ನೀಡಲಾಗುವ ಯೋಜನೆಯಾಗಿರುತ್ತದೆ ಈ ಯೋಜನೆ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ಅಲ್ಲದೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಇತರ ಜಾತಿಯ ನಿಗಮಗಳಲ್ಲಿ ಅನುಷ್ಟಾನದಲ್ಲಿರುತ್ತದೆ. ಆದರೆ ದಿನಾಂಕ 11/09/2023ರಂದು ರಾತ್ರಿ ಸುಮಾರು 9.55ರ ವೇಳೆ ಪ್ರಸಾರವಾದ ರಾಷ್ಟ್ರೀಯ ಆಜ್‌ತಕ್ ಸುದ್ದಿ ಚಾನೆಲ್ ಕಾರ್ಯಕ್ರಮವೊಂದರಲ್ಲಿ ಅದರ ಮುಖ್ಯ ಸಂಪಾದಕರಾದ ಶ್ರೀ ಸುಧೀರ್ ಚೌಧರಿಯವರು ಈ ಯೋಜನೆ ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಕರ್ನಾಟಕ ಸರ್ಕಾರದಿಂದ ನೀಡಲಾಗುತ್ತಿದೆ. ಅಲ್ಪಸಂಖ್ಯಾತರಲ್ಲದ ಹಿಂದೂಗಳಿಗೆ ಈ ಯೋಜನೆಯನ್ನು ನಡಿದೆ ರಾಜ್ಯದಲ್ಲಿ ಸರ್ಕಾರವು ತುಷ್ಟೀಕರಣ ಮಾಡುತ್ತಿದೆ… ಎಂದು ಹೇಳಿದ್ದಾಗಿ ಹೇಳಲಾಗಿದೆ. ಇದು ಕೋಮು ಪ್ರಚೋದನಕಾರಿ ಮತ್ತು ಕೋಮುಗಲಭೆಗೆ ಪ್ರಚೋದನೆಯಾಗಿದ್ದು, ಈ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳಲು ದೂರಿನಲ್ಲಿ ಹೇಳಲಾಗಿದೆ.
ಏನಿದು ಸಾರಥಿ ಯೋಜನೆ?
ಈ ಹಿನ್ನೆಲೆಯಲ್ಲಿ ನಾವು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವೆಬ್‌ಸೈಟ್ ಅನ್ನು ನೋಡಿದ್ದು, ಅದರಲ್ಲಿ ಸಾರಥಿ ಯೋಜನೆಯ ಬಗ್ಗೆ ಹೀಗೆ ಹೇಳಲಾಗಿದೆ. “ಸದರಿ ಯೋಜನೆಯಡಿ ಬ್ಯಾಂಕುಗಳಿಂದ ಮಂಜೂರಾತಿ ನೀಡಿದ / ಪಡೆದ ಟ್ಯಾಕ್ಸಿ /ಸರಕು ವಾಹನಗಳನ್ನು ಖರೀದಿಸಲು ಪ್ರತಿ ಫಲಾನುಭವಿಗೆ ವಾಹನದ ಮೌಲ್ಯದ ಶೇ 50 ರಷ್ಟು ಅಥವಾ ಗರಿಷ್ಠ ರೂ. 3,00,000/- ರ ವರೆಗೆ, ಪ್ರಯಾಣಿಕ ಆಟೋ ರಿಕ್ಷಾ ಖರೀದಿಸಲು ಗರಿಷ್ಠ ರೂ. 75,000/- ಸಹಾಯಧನ ನೀಡಲಾಗುತ್ತದೆ. ವಾಹನದ ಉಳಿದ ಮೊತ್ತಕ್ಕೆ ಬ್ಯಾಂಕ್ ಸಾಲ ಪಡೆದುಕೊಂಡ ಬಗ್ಗೆ ಬ್ಯಾಂಕ್ ಪತ್ರವನ್ನು ಸಲ್ಲಿಸಬೇಕು” ಎಂದಿದೆ. ಇದಕ್ಕಿರುವ ಅರ್ಹತೆಯಲ್ಲಿ, ರಾಜ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿರಬೇಕು, ರಾಜ್ಯದ ಶಾಶ್ವತ ನಿವಾಸಿಯಾಗಿದ್ದು, 18ರಿಂದ 55 ವರ್ಷದವರಿರಬೇಕು. ಕುಟುಂಬದ ಆದಾಯ ವಾರ್ಷಿಕ ₹4.5 ಲಕ್ಷಕ್ಕಿಂತ ಕಡಿಮೆಯಿರಬೇಕು. ಚಾಲನಾ ಪರವಾನಗಿ ಹೊಂದಿದ್ದು, ಸರ್ಕಾರಿ ಉದ್ಯೋಗಿಗಳಾಗಿರಬಾರದು ಮತ್ತು ನಿಗಮದ ಇತರ ಯಾವುದೇ ಸೌಲಭ್ಯ (ಅರಿವು ಯೋಜನೆ ಹೊರತು) ಪಡೆದಿರಬಾರದು ಎಂದಿದೆ.
ಪರಿಶಿಷ್ಟ ಜಾತಿ/ಪಂಗಡಗಳಿಗೆ ಸಾರಥಿ ರೀತಿ ಐರಾವತ ಯೋಜನೆ ಚಾಲ್ತಿಯಲ್ಲಿ
ನಾವು ಪರಿಶಿಷ್ಟ ಜಾತಿ/ಪಂಗಡಗಳಿಗೂ “ಸ್ವಾವಲಂಬಿ ಸಾರಥಿ ಯೋಜನೆ” ಇದೆಯೇ ಎಂಬ ಬಗ್ಗೆ ಪರಿಶೀಲಿಸಿದ್ದು, ಈ ವೇಳೆ ಪರಿಶಿಷ್ಟ ವರ್ಗ/ಪಂಗಡಗಳ ಅಭಿವೃದ್ದಿ ನಿಗಮಗಳಲ್ಲೊಂದಾದ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಲ್ಲಿ “ಐರಾವತ ಯೋಜನೆ” ಎಂಬ ಯೋಜನೆ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದರ ಪ್ರಕಾರ “ನಿಗಮದಿಂದ ಲಘು ವಾಹನ ಚಲನಾ ಪರವಾನಗಿ ಹೊಂದಿರುವ ಪರಿಶಿಷ್ಟ ಜಾತಿಯ ನಿರುದ್ಯೋಗಿ ವಿದ್ಯಾವಂತ ಯುವಕ/ಯುವತಿಯರಿಗೆ ಪ್ರವಾಸಿ ಟ್ಯಾಕ್ಸಿಗಳ ಮಾಲೀಕರನ್ನಾಗಿ ಮಾಡಿ “ಓಲಾ/ಉಬರ್/ಮೇರು” ಸಂಸ್ಥೆಗಳ ಸಹಯೋಗದಲ್ಲಿ ಅತಿ ಹೆಚ್ಚು ಆದಾಯ ಪಡೆಯುವ “ಐರಾವತ ಯೋಜನೆ” ಅನುಷ್ಠಾನಗೊಳಿಸಲು ಉದ್ದೇಶಿಸಿದೆ. ಕರ್ನಾಟಕ ರಾಜ್ಯ ಅಂತರಾಷ್ಟ್ರೀಯ ಮಟ್ಟದ ಪ್ರವಾಸಿಗರ ತಾಣವಾಗಿದ್ದು, ಈ ಯೋಜನೆಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಈ ಯೋಜನೆಗೆ ಹರಿಷ್ಠ ರೂ. 5.00 ಲಕ್ಷಗಳವರೆಗೆ ನಿಗಮದಿಂದ ಸಹಾಯಧನ ಒದಗಿಸಲಾಗುವುದು. ಉಳಿದ ಭಾಗ ಬ್ಯಾಂಕ್/ಹಣಕಾಸು ಸಂಸ್ಥೆ/ಫಲಾನುಭವಿಯ ವಂತಿಕೆಯಿಂದ ಭರಿಸಿ ಯೋಜನೆಯನ್ನು ಅನುಷ್ಠಾನ ಮಾಡಲಾಗುವುದು. ಆಯ್ಕೆಯಾದ ಫಲಾನುಭವಿಗಳಿಗೆ “ ಓಲಾ /ಉಬರ್ / ಮೇರು” ಸಂಸ್ಥೆಗಳೊಂದಿಗೆ ಟೈ-ಅಫ್ ಮಾಡಿಕೊಂಡು ಬೇಡಿಕೆ ಇರುವ ಮುಖ್ಯ ನಗರ ಪ್ರದೇಶಗಳಾದ ರಾಜಧಾನಿ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ ಇನ್ನಿತರೇ ಜಿಲ್ಲಾ ಕೇಂದ್ರಗಳಲ್ಲಿ ವಾಹನ ಚಾಲನೆ ಮಾಡಲು ವ್ಯವಸ್ಥೆ ಮಾಡಿ, ಯೋಜನೆಯನ್ನು ರೂಪಿಸಲಾಗಿದೆ.” ಎಂದಿದೆ.
ಇದರೊಂದಿಗೆ ಈ ಯೋಜನೆ ಪರಿಶಿಷ್ಟ ಸಮುದಾಯಗಳ ಕುರಿತ ಎಲ್ಲ ನಿಗಮಗಳಲ್ಲೂ ಇರುವುದನ್ನು ನಾವು ಕಂಡುಕೊಂಡಿದ್ದೇವೆ.
ಈ ಹಿಂದೆಯೂ ವಾಹನ ಖರೀದಿಗೆ ಸಬ್ಸಿಡಿ
ಸ್ವಾವಲಂಬಿ ಸಾರಥಿ ಯೋಜನೆ ರೀತಿ ಸಬ್ಸಿಡಿ ನೀಡುವ ಯೋಜನೆ 2021-22ರಲ್ಲೇ ಚಾಲ್ತಿಗೆ ಬಂದಿತ್ತು. ಆಗ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು, ಯೋಜನೆಯ ವಿವರಣೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದಲ್ಲಿ ನೀಡಲಾಗಿದೆ. ಇದರಲ್ಲಿ “ಟ್ಯಾಕ್ಸಿ/ಗೂಡ್ಸ್ ವಾಹನ ಖರೀದಿಗಾಗಿ ಸಹಾಯಧನ ಯೋಜನೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸಿರುವ ಟ್ಯಾಕ್ಸಿ / ಗೂಡ್ಸ್ ವಾಹನ ಖರೀದಿಸಲು ಯೋಜನೆಗೆ ನೀಡಲಾಗುತ್ತಿದ್ದ ಸಹಾಯಧನವನ್ನು ಟ್ಯಾಕ್ಸಿ / ಗೂಡ್ಸ್ ವಾಹನ ಜೊತೆಗೆ ಹೊಸ ಪ್ಯಾಸೆಂಜರ್ ಆಟೋರಿಕ್ಷಾ ಖರೀದಿಗೆ ತೆರಿಗೆ ಸೇರಿಸಿ ಗರಿಷ್ಠ ರೂ .75,000 ಸಹಾಯಧನವನ್ನು ನೀಡಲಾಗುತ್ತದೆ.” ಎಂದಿದೆ. ಆದರೆ ಈ ಯೋಜನೆ ಚಾಲ್ತಿಯಲ್ಲಿ ಇಲ್ಲ ಎಂದು ವೆಬ್‌ಸೈಟ್ನಲ್ಲಿದೆ.
ಬಜೆಟ್ ನಲ್ಲಿ ಘೋಷಣೆಯಾಗಿತ್ತು!
ಇದೇ ವೇಳೆ ಸಾರಥಿ ಯೋಜನೆ ಬಗ್ಗೆ ಹುಡುಕಾಟ ನಡೆಸಿದ ವೇಳೆ, ಜುಲೈನಲ್ಲಿ ಸಿಎಂ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಅನ್ನು ನೋಡಿದ್ದೇವೆ. ಇದರಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಅವರು ಸ್ವಾವಲಂಬಿ ಸಾರಥಿ ಹೆಸರಿನಲ್ಲಿ ಯೋಜನೆ ಘೋಷಣೆ ಮಾಡಿರುವುದನ್ನು ಗಮನಿಸಿದ್ದೇವೆ. ಇದರ ಪ್ರಕಾರ “ ಸ್ವಾವಲಂಬಿ ಸಾರಥಿ ಯೋಜನೆಯಡಿ ಅಲ್ಪಸಂಖ್ಯಾತ ನಿರುದ್ಯೋಗಿ ಯುವಜನರು ನಾಲ್ಕು ಚಕ್ರಗಳ ವಾಹನ ಖರೀದಿಗೆ ಪಡೆಯುವ ಸಾಲಕ್ಕೆ ಶೇ.50ರಷ್ಟು, ಗರಿಷ್ಠ 3 ಲಕ್ಷ ರೂ.ಗಳ ಸಹಾಯಧನ ನೀಡುವ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹಿಸಲಾಗುವುದು ಎಂದಿದೆ. (ಪುಟ ಸಂಖ್ಯೆ 62, ಟಿಪ್ಪಣಿ ಸಂಖ್ಯೆ 177)
ಇನ್ನು ಇದೇ ಯೋಜನೆಯನ್ನ ಹಿಂದುಳಿದ ವರ್ಗಗಳಿಗೂ ಘೋಷಿಸಲಾಗಿತ್ತು. ಆ ಪ್ರಕಾರ “ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಕರು ನಾಲ್ಕು ಚಕ್ರಗಳ ವಾಹನ ಖರೀದಿಗೆ ಪಡೆಯುವ ಸಾಲಕ್ಕೆ ಶೇ.50ರಷ್ಟು, ಗರಿಷ್ಠ 3 ಲಕ್ಷ ರೂ. ಸಹಾಯಧನ ನೀಡುವ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹಿಸಲಾಗುವುದು” ಎಂದಿದೆ. (ಪುಟ ಸಂಖ್ಯೆ 58, ಟಿಪ್ಪಣಿ 161)
ನಿಜಾಂಶ ಏನು?
ಸ್ವಾವಲಂಬಿ ಸಾರಥಿ ಯೋಜನೆ ಎನ್ನುವುದು, ಹೊಸ ಯೋಜನೆಯಾಗಿದ್ದು, ಕಳೆದ ಬಜೆಟ್ ನಲ್ಲಿ ಸಿದ್ದರಾಮಯ್ಯ ಸರ್ಕಾರ ಘೋಷಿಸಿದ ಯೋಜನೆಯಾಗಿದೆ. ಬಜೆಟ್ ಘೋಷಣೆ ಪ್ರಕಾರ ಇದು ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಮೀಸಲಾದ ವಾಹನ ಖರೀದಿ ಸಬ್ಸಿಡಿ ಯೋಜನೆಯಾಗಿದೆ. ಇತ್ತೀಚೆಗೆ ಈ ಯೋಜನೆಯನ್ವಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಅರ್ಜಿಯನ್ನು ಕರೆದಿದ್ದು ಈ ಬಗ್ಗೆ ಸುದ್ದಿಯಾಗಿ ವಿವಾದಕ್ಕೆಡೆ ಮಾಡಿದೆ. ಇದೇ ವೇಳೆ ಸರ್ಕಾರದ ಯಾವುದೇ ವೆಬ್‌ಸೈಟ್ಗಳಲ್ಲಿ ಹಿಂದುಳಿದ ವರ್ಗಗಳಿಗೂ ಈ ಯೋಜನೆ ಇರುವುದು ಕಂಡುಬಂದಿರುವುದಿಲ್ಲ. ಬದಲಾಗಿ ಐರಾವತ ಎಂಬ ಯೋಜನೆ ಚಾಲ್ತಿಯಲ್ಲಿರುವುದಾಗಿ ಕಂಡುಬಂದಿದೆ. ಇದು 2019ರಿಂದ ಚಾಲ್ತಿಯಲ್ಲಿದ್ದು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ಚಾಲನೆ ನೀಡಲಾಗಿತ್ತು. ಯೋಜನೆ ಬಗ್ಗೆ ವಿವಾದ ಎದ್ದ ಬಳಿಕ ಆಜ್‌ತಕ್ ವಿರುದ್ಧ ಎಫ್‌ಐಆರ್ ವಿಚಾರಕ್ಕೆ ಸಂಬಂಧಿಸಿ ಒಪಿಇಂಡಿಯಾದಲ್ಲಿ ಲೇಖನವನ್ನು ಬರೆಯಲಾಗಿದ್ದು, ಅದರಲ್ಲಿ ಆಜ್ ತಕ್‌ನಲ್ಲಿ ಈ ಬಗ್ಗೆ ವರದಿಯಾದ ಬಳಿಕ ಅಂದರೆ ಸೆಪ್ಟೆಂಬರ್ 11ರಂದು ಹಿಂದುಳಿದ ವರ್ಗಗಳಿಗೂ ಯೋಜನೆ ವಿಸ್ತರಿಸಿ ಆದೇಶಿಸಲಾಗಿದೆ ಎಂದು ಹೇಳಲಾಗಿದೆ.
ಸೆಪ್ಟೆಂಬರ್ 14, 2023ರಂದು ಮಾಡಲಾದ ಟ್ವೀಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದುಳಿದ ವರ್ಗಗಳಿಗೂ ಸಾರಥಿ ಯೋಜನೆ ಅನ್ವಯವಾಗುವುದಾಗಿ ಹೇಳಿದ್ದಾರೆ. ಆದರೆ ಈ ಕುರಿತ ಸೆಪ್ಟೆಂಬರ್ 11ರ ಆದೇಶದ ಬಗ್ಗೆ ಸ್ವತಂತ್ರ್ಯವಾಗಿ ಶೋಧನೆ ನಡೆಸಲು ನಮಗೆ ಸಾಧ್ಯವಾಗಲಿಲ್ಲ.
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.