ಬಿಜೆಪಿ ನಾಯಕರ ಪಕ್ಷಾಂತರ ಪರ್ವ: ಇದು ಪ್ಲಸ್‌ ಆಗುತ್ತಾ ಮೈನಸ್‌ ಆಗುತ್ತಾ?

ಬಿಜೆಪಿ ನಾಯಕರ ಪಕ್ಷಾಂತರ ಪರ್ವ; ಬಿಜೆಪಿ ತೊರೆದವರು

ವಿಧಾನಸಭೆ ಚುನಾವಣೆ ಘೋಷಣೆಯಾಗಿ ಟಿಕೆಟ್‌ ಹಂಚಿಕೆ ನಡೆಯುತ್ತಿದ್ದಂತೆ ಬಿಜೆಪಿ ನಾಯಕರ ಪಕ್ಷಾಂತರ ಪರ್ವ ಆರಂಭವಾಗಿದೆ. ಹಲವು ಮಂದಿ ಶಾಸಕರಿಗೆ, ಹಿರಿಯ ನಾಯಕರಿಗೆ ಟಿಕೆಟ್ ನಿರಾಕರಿಸಿರುವುದು ಬಂಡಾಯ ಭುಗಿಲೇಳುವಂತೆ ಮಾಡಿದೆ. ಪರಿಣಾಮ ನಾಯಕರು ಒಬ್ಬೊಬ್ಬರಾಗಿ ಬಿಜೆಪಿಗೆ ರಾಜೀನಾಮೆ ನೀಡಿ ಹೊರನಡೆದಿದ್ದಾರೆ. ವಿಪಕ್ಷಗಳ ಪಾಳಯ ಸೇರಿದ್ದಾರೆ. ಅಲ್ಲಿ ತಮಗೆ ಬೇಕಾದ ಕ್ಷೇತ್ರಕ್ಕೆ ಟಿಕೆಟ್‌ ಕೂಡ ಗಿಟ್ಟಿಸಿಕೊಂಡಿದ್ದಾರೆ. ಹೀಗೆ ಬಿಜೆಪಿ ಬಿಟ್ಟ ನಾಯಕರಾರು? ಅವರಿಂದ ಕದನ ಕಣದಲ್ಲಿ ಆಗುವ ಪರಿಣಾಮ ಏನು ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ.

ಜಗದೀಶ್‌ ಶೆಟ್ಟರ್‌

ಬಿಜೆಪಿಗೆ ತೊರೆದು ಕಾಂಗ್ರೆಸ್‌ಗೆ

ಜಗದೀಶ್‌ ಶೆಟ್ಟರ್‌
ಚಿತ್ರಕೃಪೆ @ Jagadeesh Shetter

ಬಿಜೆಪಿಯ ಹಿರಿಯ ನಾಯರಾಗಿದ್ದ ಜಗದೀಶ್ ಶೆಟ್ಟರ್‌ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್‌ ನೀಡಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಶೆಟ್ಟರ್‌ ಬಣಜಿಗ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಹುಬ್ಬಳ್ಳಿ ಧಾರವಾಡ ಕ್ಷೇತ್ರದಿಂದ ಟಿಕೆಟ್‌ ಬಯಸಿದ ಇವರಿಗೆ ಟಿಕೆಟ್‌ ಸಿಗದಿದ್ದರಿಂದ ಮುನಿಸಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಬಣಜಿಗ ಲಿಂಗಾಯತ ಸಮುದಾಯದವರಾದ ಜಗದೀಶ್‌ ಶೆಟ್ಟರ್ ಬಿಜೆಪಿಯಲ್ಲಿದ್ದಾಗ ಈ ಸ್ಥಾನಗಳನ್ನು ಹೊಂದಿದ್ದರು. 

1999ರಲ್ಲಿ ವಿರೋಧ ಪಕ್ಷದ ನಾಯಕ 

2005ರಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ 

2006ರಲ್ಲಿ ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಕಂದಾಯ ಸಚಿವ

2012ರಲ್ಲಿ ಮುಖ್ಯಮಂತ್ರಿ 

ಪ್ರಬಲ ಲಿಂಗಾಯತ ಸಮುದಾಯದವಾಗಿದ್ದರಿಂದ ಬಿಜೆಪಿ ಪಾಲಿಗೆ ಶೆಟ್ಟರ್ ಪ್ಲಸ್‌ ಪಾಯಿಂಟ್‌ ಆಗಿದ್ದರು. ಈ ಹಿಂದೆ ಪಂಚಮಸಾಲಿ ಮೀಸಲಾತಿ ವಿವಾದ, ಲಿಂಗಾಯತರಿಗೆ ಹೆಚ್ಚಿನ ಅವಕಾಶದ ಮಾತುಗಳು ಕೇಳಿ ಬಂದಾಗೆಲ್ಲ ಶೆಟ್ಟರ್‌ ಬಿಜೆಪಿಯಲ್ಲಿದ್ದೇ ಸಮೀಕರಣಕ್ಕೆ ಯತ್ನಿಸಿದವರು.

ಈಗ ಜಗದೀಶ್‌ ಶೆಟ್ಟರ್‌ ಪಾಳಯ ಬದಲು ಮಾಡಿ ಕಾಂಗ್ರೆಸ್‌ ಸೇರಿರುವುದರಿಂದ ಹುಬ್ಬಳಿ-ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಪ್ರಬಲ ಲಿಂಗಾಯತ ಸಮುದಾಯದ ನಾಯಕರನ್ನು ಕಳೆದುಕೊಂಡಂತೆ ಆಗಲಿದೆ. ಶೆಟ್ಟರ್‌ ಅವರು ಈಗಾಗಲೇ ತಮಗೆ ಟಿಕೆಟ್‌ ಕೊಡದಿದ್ದರೆ 25 ಸೀಟು ಖೋತಾ ಆದಂತೆ ಎಂದು ಬಿಜೆಪಿಗೆ ಎಚ್ಚರಿಕೆ ಕೊಟ್ಟಿದ್ದರು. ಈಗ ಅವರು ಕಾಂಗ್ರೆಸ್ ಪಾಳಕ್ಕೆ ಜಿಗಿದಿರುವುದರಿಂದ ಕಾಂಗ್ರೆಸ್‌ ಕೂಡ ಉತ್ತರ ಕರ್ನಾಟಕದಲ್ಲಿ ತಮ್ಮ ಪ್ರಾಬಲ್ಯ ತೋರಿಸುವುದು ಖಚಿತ ಎಂದು ಹೇಳುತ್ತಿದೆ.  

ಲಕ್ಷ್ಮಣ ಸವದಿ

ಬಿಜೆಪಿ ತೊರೆದು ಕಾಂಗ್ರೆಸ್‌ಗೆ

ಲಕ್ಷ್ಮಣ ಸವದಿ
ಚಿತ್ರಕೃಪೆ: ಒನ್‌ ಇಂಡಿಯಾ ಕನ್ನಡ

ಮಾಜಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ಎಂಎಲ್‌ಸಿ, ಪ್ರಬಲ ಲಿಂಗಾಯತ ಸಮುದಾಯದ ನೇತಾರ. ಲಕ್ಷ್ಮಣ್ ಸವದಿ ಬಿಜೆಪಿ ಜೊತೆಗಿನ ಬಾಂಧವ್ಯ ತ್ಯಜಿಸಿದ್ದು ಬಿಜೆಪಿಗೆ ತೀವ್ರ ಸವಾಲೊಡ್ಡಬಹುದು ಎಂದು ಹೇಳಲಾಗಿದೆ. 2019ರಲ್ಲಿ ಯಡಿಯೂರಪ್ಪ ಸರ್ಕಾರದಲ್ಲಿ ಸವದಿ ಉಪ ಮುಖ್ಯಮಂತ್ರಿಯಾಗಿದ್ದರು. ಇದರೊಂದಿಗೆ ಸಾರಿಗೆ ಸಚಿವರಾಗಿದ್ದರು. 2004, 2008, 2013ರಲ್ಲಿ ಅಥಣಿಯಿಂದ ಗೆದ್ದಿದ್ದ ಸವದಿ 2018ರಲ್ಲಿ ಕಾಂಗ್ರೆಸ್‌ನ ಮಹೇಶಸ್‌ ಕುಮಟಹಳ್ಳಿ ವಿರುದ್ಧ ಸೋತಿದ್ದರು. ಆನಂತರ ಎಂಎಲ್‌ಸಿ ಆಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಗವಾಡ, ಅಥಣಿ (ಉಪಚುನಾವಣೆ), ಸಿಂದಗಿ ಮತ್ತು ಬಸವಕಲ್ಯಾಣದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿನಲ್ಲಿ ಸವದಿ ಪ್ರಮುಖ ಪಾತ್ರ ವಹಿಸಿದ್ದರು. ಅದಕ್ಕೂ ಮೊದಲು ಬಿಜೆಪಿಗೆ ಇಲ್ಲಿ ಅಸ್ತಿತ್ವ ಇರಲಿಲ್ಲ. ಸಹಕಾರಿ, ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಹಿಡಿತ ಸ್ಥಾಪಿಸಲು ಸವದಿ ಕೆಲಸ ಮಾಡಿದ್ದರು. ವಿಜಯಪುರ, ಕಲಬುರ್ಗಿಯಲ್ಲಿ ಸವದಿ ಜನಪ್ರಿಯ ನಾಯಕ. ಮಹಾರಾಷ್ಟ್ರ, ಗಡಿ, ಸಾಂಗ್ಲಿ, ಕೊಲ್ಹಾಪುರದಲ್ಲೂ ಸವದಿ ಪ್ರಭಾವ ಇದೆ.

ಅಥಣಿಯಲ್ಲಿ ತನಗೆ ಟಿಕೆಟ್‌ ಕೊಡದೇ ಇದ್ದರಿಂದ ಲಕ್ಷ್ಮಣ ಸವದಿ ಗುಡ್‌ ಬೈ ಹೇಳಿದ್ದಾರೆ. ಕಾಂಗ್ರೆಸ್‌ ಪಾಳಯದಲ್ಲಿ ಅವರು ಬೆಳಗಾವಿ ಭಾಗದಲ್ಲಿ ಶಕ್ತಿ ತುಂಬುವ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ. ಇದರೊಂದಿಗೆ 2012ರಲ್ಲಿ ಸವದಿ ವಿಧಾನಸಭೆಯಲ್ಲಿ ಬ್ಲೂಫಿಲಂ ನೋಡಿದ ಆರೋಪ ಇದ್ದು ಈ ವಿಚಾರದಲ್ಲಿ ಬಿಜೆಪಿಗೆ ಸಾಕಷ್ಟು ಮುಜುಗರ ಆಗಿತ್ತು. ಆಗ ಬಿಜೆಪಿಯನ್ನು ಟೀಕಿಸಿದ್ದ ಕಾಂಗ್ರೆಸ್‌, ಇದೀಗ ಅದೇ ಸವದಿಯನ್ನು ಪಕ್ಷಕ್ಕೆ ಸೆಳೆದುಕೊಂಡಿದೆ.

ಎ.ಬಿ.ಮಾಲಕರೆಡ್ಡಿ

ಬಿಜೆಪಿ ತೊರೆದು ಜೆಡಿಎಸ್‌ಗೆ 

ಎ.ಬಿ.ಮಾಲಕರೆಡ್ಡಿ

ಕಾಂಗ್ರೆಸ್‌ನಿಂದ ಐದು ಬಾರಿ ಶಾಸಕರಾಗಿದ್ದ ಎ.ಬಿ. ಮಾಲಕರೆಡ್ಡಿ ಈ ಪಕ್ಷದಿಂದ ಆ ಪಕ್ಷಕ್ಕೆ ಆ ಪಕ್ಷದಿಂದ ಈ ಪಕ್ಷಕ್ಕೆ ಜಂಪ್‌ ಆದವರು! ಕಳೆದ ಲೋಕಸಭೆ ಚುನಾವಣೆ ವೇಳೆ ಅವರು ಬಿಜೆಪಿಗೆ ಬಂದಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ವೈಯಕ್ತಿಕ ದ್ವೇಷ ಇದ್ದುದರಿಂದ ಅವರು ಬಿಜೆಪಿಗೆ ಬಂದಿದ್ದರು. ಮಾಲಕರೆಡ್ಡಿಯವರು ಈ ಬಾರಿ ಯಾದಗಿರಿಯಿಂದ ಟಿಕೆಟ್‌ ನಿರೀಕ್ಷೆ ಇಟ್ಟಕೊಂಡಿದ್ದು ತಮ್ಮ ಹೆಸರು ಪಟ್ಟಿಯಲ್ಲಿ ಬರುವ ನಿರೀಕ್ಷೆ ಇಟ್ಟುಕೊಂಡಿದ್ದರು. 87 ವರ್ಷದ ಮಾಲಕರೆಡ್ಡಿಯವರನ್ನು ಬಿಜೆಪಿ ಪರಿಗಣಿಸಿರಲಿಲ್ಲ. ಆ ನಂತರ ಅವರು ಕಾಂಗ್ರೆಸ್‌ನಲ್ಲಿ ಟಿಕೆಟ್‌ ಕೇಳಿದ್ದು, ಅಲ್ಲಿ ಪ್ರಯೋಜನವಾಗಲಿಲ್ಲ. ಬಳಿಕ ಜೆಡಿಎಸ್‌ನಲ್ಲಿ ಕೇಳಿದ್ದು, ಅಲ್ಲಿ ಟಿಕೆಟ್‌ ಸಿಕ್ಕಿದೆ. ಮಾಲಕರೆಡ್ಡಿಯವರು ಬಿಜೆಪಿಯಿಂದ ಹೋಗಿದ್ದರಿಂದ ಯಾದಗಿರಿಯಲ್ಲಿ ಪಕ್ಷದ ಪರವಾಗಿ ಚುನಾವಣಾ ತಂತ್ರಗಳನ್ನು ಹೆಣೆಯುವುದಕ್ಕೆ ಕೊರತೆಯಾಗಬಹುದು. ಇನ್ನು 87 ವರ್ಷದವರಿಗೆ ಟಿಕೆಟ್‌ ಕೊಡದ ಬಿಜೆಪಿ ಬೇರೆಯವರಿಗೆ ಪ್ರಾಶಸ್ತ್ಯ ನೀಡುವ ಬಿಜೆಪಿ ಧೋರಣೆಯಿಂದ ಮಾಲಕರೆಡ್ಡಿಯವರಿಗೆ ಟಿಕೆಟ್‌ ಸಿಕ್ಕಿಲ್ಲ ಎನ್ನಲಾಗಿದೆ.

ನೆಹರೂ ಓಲೇಕಾರ

ಬಿಜೆಪಿ ತೊರೆದು ಜೆಡಿಎಸ್‌ಗೆ 

ನೆಹರೂ ಓಲೇಕಾರ
ಚಿತ್ರಕೃಪೆ: @ManjuBAngadi2

ಹಾವೇರಿ ವಿಧಾನಸಭೆ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದವರು ನೆಹರೂ ಓಲೇಕಾರ. ಹಾವೇರಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದ್ದು, ಅಲ್ಲಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಪ್ಲ್ಯಾನ್‌ ಮಾಡಿದ್ದರು. ಇತ್ತೀಚಿಗೆ  ಶಾಸಕ ಶಾಸಕ ನೆಹರೂ ಓಲೇಕಾರ್ ಹಾಗೂ ಇಬ್ಬರು ಪುತ್ರರು ಸೇರಿ ಐವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ  ಎರಡು ವರ್ಷ ಜೈಲು, ಎರಡು ಸಾವಿರ ದಂಡ ವಿಧಿಸಿ ಆದೇಶ ಪ್ರಕಟಿಸಿತ್ತು. 2012ರಲ್ಲಿ ನಗರಸಭೆ ಕಾಮಗಾರಿಯಲ್ಲಿ 5ಕೋಟಿ ರೂ. ಹೆಚ್ಚು ಅವ್ಯವಹಾರ ಮಾಡಿದ್ದ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿತ್ತು. ಈ ಶಿಕ್ಷೆಗೆ ಓಲೇಕಾರ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ಓಲೇಕಾರ್ ರಿಂದ ಅಂತರ ಕಾಯ್ದುಕೊಂಡಿತ್ತು ಎನ್ನಲಾಗಿದೆ. ಹೊಸ ಮುಖಕ್ಕೆ ಅವಕಾಶ ಕೊಟ್ಟಿದ್ರಿಂದ ಓಲೇಕಾರ್‌ ಸಿಡಿದೆದ್ದಿದ್ದರು. ಓಲೇಕಾರ್ ಅವರೀಗ ಜೆಡಿಎಸ್‌ ಸೇರ್ಪಡೆಯಾಗಿದ್ದು, ಅವರು ಬಿಜೆಪಿಯಿಂದ ಹೊರನಡೆದಿರುವುದು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಅನ್ನೋದನ್ನು ಚುನಾವಣೆ ಫಲಿತಾಂಶದಲ್ಲೇ ಕಾದುನೋಡಬೇಕಿದೆ.

ಗೂಳಿಹಟ್ಟಿ ಶೇಖರ್

ಬಿಜೆಪಿ ತೊರೆದು ಸ್ವತಂತ್ರ ಸ್ಪರ್ಧೆ

ಗೂಳಿಹಟ್ಟಿ ಶೇಖರ್
ಚಿತ್ರಕೃಪೆ: ಪ್ರಜಾವಾಣಿ

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್‌ ಪಕ್ಷೇತರರಾಗಿ ರಾಜಕೀಯಕ್ಕೆ ಬಂದವರು. 2008ರಲ್ಲಿ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ಅನಂತರ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, 2018ರಲ್ಲಿ ಬಿಜೆಪಿಗೆ ಸೇರಿ ಶಾಸಕನಾಗಿ ಆಯ್ಕೆಯಾಗಿದ್ದರು. ಪರಿಶಿಷ್ಟ ಜಾತಿಯವರಾಗಿರುವ ಗೂಳಿಹಟ್ಟಿಯವರು ಸಾಮಾನ್ಯ ಕ್ಷೇತ್ರವಾದ ಹೊಸದುರ್ಗದಲ್ಲಿ ಮತ್ತೆ ಸ್ಪರ್ಧಿಸಲು ಬಯಸಿದ್ದರು. ಆದರೆ ಈ ಬಾರಿ ಬಿಜೆಪಿ ಅವರಿಗೆ ಟಿಕೆಟ್‌ ಕೊಟ್ಟಿಲ್ಲ.

ಗೂಳಿಹಟ್ಟಿ ಶೇಖರ್‌ 2018ರಲ್ಲಿ ಕಾಂಗ್ರೆಸ್‌ ಕೈಲಿದ್ದ ಕ್ಷೇತ್ರವನ್ನು ಬಿಜೆಪಿಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಈ ಬಗ್ಗೆ ಅವರಿಗೆ ಹೆಸರಿತ್ತು. ಈಗ ಟಿಕೆಟ್‌ ತಪ್ಪಿದ್ದರಿಂದ ಸ್ವತಂತ್ರವಾಗಿ ಸ್ಪರ್ಧೆಯ ಇಚ್ಛೆ ಹೊಂದಿದ್ದು, ಇದು ಬಿಜೆಪಿಗೆ ತಿರುಗುಬಾಣವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಎಂ.ಪಿ. ಕುಮಾರಸ್ವಾಮಿ

ಬಿಜೆಪಿ ತೊರೆದು ಜೆಡಿಎಸ್‌ಗೆ 

ಎಂ.ಪಿ. ಕುಮಾರಸ್ವಾಮಿ
ಚಿತ್ರಕೃಪೆ: ದಿ ಇಂಡಿಯನ್‌ ಎಕ್ಸ್‌ಪ್ರೆಸ್‌

ಬಿಜೆಪಿಯಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಎಂ.ಪಿ.ಕುಮಾರಸ್ವಾಮಿ ಮೂಡಿಗೆರೆ ಶಾಸಕರು. ಈ ಬಾರಿಯ ಚುನಾವಣೆಗೆ ಬಿಜೆಪಿಯಿಂದ ಅವರಿಗೆ ಟಿಕೆಟ್‌ ಸಿಕ್ಕಿಲ್ಲ. ಇತ್ತೀಚೆಗೆ ಚೆಕ್‌ ಬೌನ್ಸ್ ಸಂಬಂಧಿಸಿದ ಎಂಟು ಪ್ರತ್ಯೇಕ ಕ್ರಿಮಿನಲ್‌ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಕುಮಾರಸ್ವಾಮಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 1.36ಕೋಟಿ ರೂ.ಗಳನ್ನು ದೂರುದಾರರಿಗೆ ಪಾವತಿಸುವಂತೆ ಹೇಳಿತ್ತು. ತಪ್ಪಿದರೆ ಆರು ತಿಂಗಳ ಜೈಲು ಶಿಕ್ಷೆ ಎದುರಿಸುವಂತೆ ಆದೇಶಿಸಿತ್ತು.

ಈ ಹಿಂದೆ ಬಿಜೆಪಿ ನಾಯಕ ಯಡಿಯೂರಪ್ಪ ಕ್ಷೇತ್ರಕ್ಕೆ ಬಂದಿದ್ದ ವೇಳೆ ಸ್ಥಳೀಯ ಕಾರ್ಯಕರ್ತರು ಕುಮಾರಸ್ವಾಮಿಗೆ ಟಿಕೆಟ್‌ ಕೊಡದಂತೆ ಯಡಿಯೂರಪ್ಪನವರ ಕಾರಿಗೆ ಅಡ್ಡ ನಿಂತು ಪ್ರತಿಭಟಿಸಿದ್ದರು. ಕ್ಷೇತ್ರದಲ್ಲಿ ಅವರ ವಿರುದ್ಧ ಅಸಮಾಧಾನ ಇತ್ತು ಎಂದು ಮೂಲಗಳು ಹೇಳುತ್ತಿವೆ. ಆದರೆ, ಈ ಹಿಂದೆ ಬಿಜೆಪಿ ಗೆಲ್ಲಿಸುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಿದ್ದರು. ಇದೀಗ ಕುಮಾರಸ್ವಾಮಿ ಅವರು ಜೆಡಿಎಸ್‌ ಟಿಕೆಟ್‌ ಪಡೆದುಕೊಂಡಿದ್ದು ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.

ಸೂರ್ಯಕಾಂತ ನಾಗಮಾರಪಳ್ಳಿ

ಬಿಜೆಪಿ ತೊರೆದು ಜೆಡಿಎಸ್‌ಗೆ 

ಸೂರ್ಯಕಾಂತ ನಾಗಮಾರಪಳ್ಳಿ
ಚಿತ್ರಕೃಪೆ: ಪ್ರಜಾವಾಣಿ

ಬೀದರ್‌ ಉತ್ತರ ಕ್ಷೇತ್ರದಲ್ಲಿ 2009ರ ಉಪಚುನಾವಣೆ ಮತ್ತು 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸೂರ್ಯಕಾಂತ ನಾಗಮಾರಪಳ್ಳಿ ಎರಡು ಬಾರಿಯೂ ಸೋಲು ಕಂಡಿದ್ದರು. 2023ರಲ್ಲಿ ಶತಾಯಗತಾಯ ಗೆಲ್ಲಲೇಬೇಕು ಎಂದು ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪಕ್ಷ ಸಂಘಟಿಸಿದ್ದರು.‌ ಆದರೆ, ಬಿಜೆಪಿಯು ಬೀದರ್‌ ಉತ್ತರದಿಂದ ಸೂರ್ಯಕಾಂತ ನಾಗಮಾರಪಳ್ಳಿ ಅವರಿಗೆ ಟಿಕೆಟ್ ಕೊಡಲು ನಿರಾಕರಿಸಿ ಇನ್ನೋರ್ವ ಟಿಕೆಟ್ ಆಕಾಂಕ್ಷಿ ಈಶ್ವರಸಿಂಗ್ ಠಾಕೂರ್‌ಗೆ ಟಿಕೆಟ್ ನೀಡಿದೆ. ಇದರಿಂದ ಸೂರ್ಯಕಾಂತ ಅವರು ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ.

ಸೂರ್ಯಕಾಂತ ನಾಗಮಾರಪಳ್ಳಿ ಅವರ ತಂದೆ ಗುರುಪಾದಪ್ಪ ನಾಗಮಾರಪಳ್ಳಿ ಅವರು ಜನತಾದಳದಲ್ಲಿದ್ದು, 1989 ಮತ್ತು 1994ರಲ್ಲಿ ಗೆದ್ದು ಸಚಿವರಾಗಿದ್ದರು. ಸಂಘಟನೆ ದೃಷ್ಟಿಯಿಂದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿದ್ದ ಸೂರ್ಯಕಾಂತ ಅವರು ಪಕ್ಷಬಿಟ್ಟಿದ್ದು ಬಿಜೆಪಿಗೆ ಹಿನ್ನಡೆ ಎಂದು ಹೇಳಲಾಗಿದೆ. ಆದರೆ, ಎರಡು ಬಾರಿ ಅವಕಾಶ ನೀಡಿದ್ದಾಗ ಅವರು ನಿರೀಕ್ಷಿತ ಫಲಿತಾಂಶ ನೀಡದ್ದರಿಂದ ಬಿಜೆಪಿ ಬೇರೆಯವರನ್ನು ಆಯ್ಕೆ ಮಾಡಿದೆ ಎನ್ನಲಾಗಿದೆ.

ಆಯನೂರು ಮಂಜುನಾಥ್‌

ಬಿಜೆಪಿ ತೊರೆದು ಜೆಡಿಎಸ್‌ಗೆ

ಆಯನೂರ್‌ ಮಂಜುನಾಥ್‌ ಅವರು ಬಿಜೆಪಿ ಮುಖಂಡ ಮತ್ತು ನೈಋತ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್‌ ಸದಸ್ಯ. ಈ ಬಾರಿ ಶಿವಮೊಗ್ಗ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ದಶಕಗಳಿಂದ ಇವರು ಬಿಜೆಪಿಯಲ್ಲೇ ಗುರುತಿಸಿಕೊಂಡಿದ್ದರು. 1994-98ರ ಅವಧಿಯಲ್ಲಿ ಹೊಸನಗರ ಶಾಸಕರಾಗಿದ್ದ ಮಂಜುನಾಥ್‌ ಅವರು, 1998ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. 2010-16 ಅವಧಿಯಲ್ಲಿ ರಾಜ್ಯಸಭೆ ಸದಸ್ಯರಾಗಿದ್ದರು. 2018ರಲ್ಲಿ ಮತ್ತೆ ರಾಜ್ಯ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದರು. ಶಿವಮೊಗ್ಗ ನಗರದಿಂದ ಬಿಜೆಪಿ ಉಮೇದುವಾರಿಕೆ ಆಕಾಂಕ್ಷೆ ಹೊಂದಿದ್ದರು. ಆದರೆ ಟಿಕೆಟ್‌ ಸಿಗದೇ ಇದ್ದುದರಿಂದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ.

ವಿಪಕ್ಷಗಳ ಪಾಳಯ ಸೇರಿದ ಇತರ ನಾಯಕರು

ಬಿಜೆಪಿಯಿಂದ ಇತರ ನಾಯಕರಾದ ಮಾಜಿ ಶಾಸಕ, ಶಹಾಪುರ ಟಿಕೆಟ್‌ ಆಕಾಂಕ್ಷಿಯಾಗಿದ್ದ ಗುರುಪಾಟೀಲ್‌ ಶಿರವಾಳ ಜೆಡಿಎಸ್ ಸೇರಿದ್ದಾರೆ. ಕೊಳ್ಳೇಗಾಲದ ಮಾಜಿ ಶಾಸಕ, ಬಿಜೆಪಿ ಎಸ್‌ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ನಂಜುಂಡ ಸ್ವಾಮಿ ಕಾಂಗ್ರೆಸ್‌ ಸೇರಿದ್ದಾರೆ. ವಿಜಯಪುರದ ಮಾಜಿ ಶಾಸಕ ಮನೋಹರ ಐನಾಪುರ ಕಾಂಗ್ರೆಸ್‌ ಪಾಳಯವನ್ನು ಸೇರಿದ್ದಾರೆ. 

ವಿಪಕ್ಷಗಳ ಪಾಳಯ ಸೇರಿದ ಬಿಜೆಪಿಯ18 ಮಂದಿಗೆ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಟಿಕೆಟ್‌ ನೀಡಿದ್ದು, ವಿವಿಧೆಡೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಹೀಗೆ ಟಿಕೆಟ್‌ ಗಳಿಸಿದವರಲ್ಲಿ ಬಿಜೆಪಿಯಿಂದ ಟಿಕೆಟ್‌ ಸಿಗದೆ ಪಕ್ಷಾಂತರ ಮಾಡಿದವರೇ ಇದ್ದಾರೆ.

Our Sources
Report by Economic Times, Dated: April 15, 2023

Report by NDTV, Dated: April 17, 2023

Report by Hindustan Times, Dated: April 14, 2023

Report by Asianet Suvarnanews, Dated: April 16, 2023

Report by Asianet Suvarnanews, Dated: April 16, 2023

Report by, Vijayakarnataka, Dated: April 14, 2023

Report by Varthabharathi, Dated: April 14, 2023

Report by One India, Dated: April 17, 2023

Report by Vijayakarnataka, Dated: April 19, 2023

ಈ ಲೇಖನವನ್ನು ಮೇ 1, 2023ರಂದು ಪರಿಷ್ಕರಿಸಲಾಗಿದೆ


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.