ಬ್ರಾಹ್ಮಣರನ್ನು ನಿಂದಿಸಿದವರ ವಿರುದ್ಧ ದೌರ್ಜನ್ಯ ಕಾಯ್ದೆ? ಇಲ್ಲ, ಈ ವೈರಲ್‌ ಪೋಸ್ಟ್‌ ಸುಳ್ಳು!

ಬ್ರಾಹ್ಮಣ, ದೌರ್ಜನ್ಯ ಕಾಯ್ದೆ, ಸುಪ್ರೀಂ ಕೋರ್ಟ್

ಬ್ರಾಹ್ಮಣ ಸಮುದಾಯದವರನ್ನು ಅವಾಚ್ಯವಾಗಿ ನಿಂದಿಸುವವರ ವಿರುದ್ಧ ದೌರ್ಜನ್ಯ ಕಾಯ್ದೆಯಡಿಯಲ್ಲಿ ಶಿಕ್ಷೆಗೊಳಪಡಿಸಲು ಕ್ರಮ ಕೈಗೊಳ್ಳುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಾನ್ಯ ಮಾಡಿದೆ ಎಂಬ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ಆದರೆ ಅಂತಹ ಯಾವುದೇ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಾನ್ಯ ಮಾಡಿಲ್ಲ ಮತ್ತು ಈ ವೈರಲ್‌ ಪೋಸ್ಟ್‌ ಸುಳ್ಳಾಗಿದೆ ಎಂಬುದನ್ನು ನ್ಯೂಸ್‌ಚೆಕರ್‌ ಕಂಡುಹಿಡಿದಿದೆ.

ಈ ಪೋಸ್ಟ್‌ನಲ್ಲಿ “ಭಾರತದ ಸರ್ವೋಚ್ಚ ನ್ಯಾಯಾಲಯವು ಮಹತ್ವ ತೀರ್ಪು ನೀಡಿದೆ. ಬ್ರಾಹ್ಮಣ ಜಾತಿಗೆ ನಿಂದನೀಯ ಪದಗಳನ್ನು ಮಾತನಾಡಲು ದೌರ್ಜನ್ಯ ಕಾಯ್ದೆ ಅನ್ವಯಿಸುತ್ತದೆ. ಅಡ್ವೊಕೇಟ್‌ ಮುಖೇಶ್ ಭಟ್‌ ಜಿ. ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅದನ್ನು ಕೋರ್ಟ್‌ ಮಾನ್ಯ ಮಾಡಿದೆ. ಈ ಸಂದೇಶವನ್ನು ಎಲ್ಲ ಬ್ರಾಹ್ಮಣರಿಗೂ ಕಳುಹಿಸಿ” ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. 

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಪೋಸ್ಟ್‌ನ ಸ್ಕ್ರೀನ್‌ಶಾಟ್‌

ದೌರ್ಜನ್ಯ ಕಾಯ್ದೆ ಎಂದರೇನು?
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯಗಳನ್ನು ತಡೆಯಲು ಮತ್ತು ತಾರತಮ್ಯವನ್ನು ತೊಡೆದು ಹಾಕಲು ಭಾರತ ಸರ್ಕಾರ 1989ರಲ್ಲಿ ಪರಿಶಿಷ್ಟ ಜಾತಿ/ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯನ್ನು ಜಾರಿಗೆ ತಂದಿದೆ. 

ಈ ಕಾಯ್ದೆಯಲ್ಲಿ ಕೆಲವೊಂದು ಬದಲಾವಣೆ ಮಾಡಬೇಕೆಂದು ಹಲವು ವರ್ಷಗಳಲ್ಲಿ ಹಲವು ಬಾರಿ ಒತ್ತಾಯಗಳು ಕೇಳಿಬಂದಿದ್ದರೂ ಈ ಕುರಿತಂತೆ ಅನೇಕ ಪ್ರತಿಭಟನೆಗಳು ನಡೆದಿವೆ. 

2018 ಮಾ.20ರ ಸುಭಾಶ್‌ ಕಾಶೀನಾಥ್‌ ಮಹಾಜನ್‌ ವರ್ಸಸ್‌ ಮಹಾರಾಷ್ಟ್ರ ಸರ್ಕಾರದ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾ. ಎ.ಕೆ.ಗೋಯೆಲ್‌ ಮತ್ತು ಯುಯು ಲಲಿತ್‌ ಅವರಿದ್ದ ನ್ಯಾಯಪೀಠ, ಈ ಕಾಯ್ದೆಯ ಕುರಿತಾಗಿ ತೀರ್ಪೊಂದನ್ನು ನೀಡಿದೆ. ಇದರಲ್ಲಿ ಪೂರ್ವಾನುಮತಿ ಇಲ್ಲದೆ ಕಾಯಿದೆಯಡಿ ಯಾವುದೇ ಬಂಧನ ಮಾಡುವಂತಿಲ್ಲ. ನಿರ್ದಿಷ್ಟ ದೂರು ದುರುಪಯೋಗ, ಸುಳ್ಳು, ಪ್ರೇರಿತ ಮತ್ತು ವ್ಯಕ್ತಿಯನ್ನು ಬ್ಲ್ಯಾಕ್‌ ಮೇಲೆ ಮಾಡುವ, ಕಿರುಕುಳ ನೀಡುವ ಉದ್ದೇಶದಿಂದ ಕೂಡಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದರೆ ನ್ಯಾಯಾಲಯವು ನಿರೀಕ್ಷಣಾ ಜಾಮೀನನ್ನು ಆರೋಪಿತ ವ್ಯಕ್ತಿಗೆ ನೀಡಬಹುದು ಎಂದು ಹೇಳಿದೆ. 

ಇದರ ನಂತರ ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿಯನ್ನೂ ಸಲ್ಲಿಸಲಾಗಿದ್ದು ನ್ಯಾ.ಅರುಣ್‌ ಮಿಶ್ರಾ, ನ್ಯಾ.ಎಂಆರ್‌ ಷಾ ಮತ್ತು ನ್ಯಾ.ಬಿಆರ್‌ ಗವಾಯಿ ಅವರಿದ್ದ ತ್ರಿಸದಸ್ಯ ಪೀಠ ಕುರಿತು ಹಿಂದಿನ ತೀರ್ಪನ್ನೇ ಪುನರುಚ್ಚರಿಸಿತು. 

Also Read: ವೈರಲ್‌ ವೀಡಿಯೋದಲ್ಲಿ ಹಿಂದೂ ಭಜನೆ ಹಾಡುತ್ತಿರುವ ಯುವತಿ ಗಾಯಕ ಮಹಮ್ಮದ್‌ ರಫಿ ಮೊಮ್ಮಗಳಲ್ಲ

Fact check

ಈ ಕ್ಲೇಮಿನ ಕುರಿತಂತೆ ನಾವು ಗೂಗಲ್‌ನಲ್ಲಿ ಕೀವರ್ಡ್ ಸರ್ಚ್‌ ನಡೆಸಿದ್ದು, ಬ್ರಾಹ್ಮಣರ ವಿರುದ್ಧ ನಿಂದೆಗೆ ದೌರ್ಜನ್ಯ ಕಾಯ್ದೆ ಅನ್ವಯಿಸುತ್ತದೆ ಎನ್ನುವ ತೀರ್ಪಿನ ಕುರಿತ ಯಾವುದೇ ವರದಿಗಳೂ ಲಭ್ಯವಾಗಿಲ್ಲ. ಕಾನೂನು ಸುದ್ದಿಗಳನ್ನು ಪ್ರಕಟಿಸುವ ಲೈವ್‌ ಲಾ ಮತ್ತು ಬಾರ್ ಆಂಡ್‌ ಬೆಂಚ್‌ನಲ್ಲೂ ಕೂಡ ಈ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. 

ಅನಂತರ ನಾವು ಸುಪ್ರೀಂ ಕೋರ್ಟ್‌ ಅಧಿಕೃತ ವೆಬ್‌ಸೈಟ್ ನಲ್ಲಿ ಈ ತೀರ್ಪಿನ ಬಗ್ಗೆ ಪರಿಶೀಲನೆ ನಡೆಸಿದ್ದು, ಅಲ್ಲಿಯೂ ಅಂತಹ ಯಾವುದೇ ತೀರ್ಪಿನ ಮಾಹಿತಿಗಳು ಕಂಡು ಬಂದಿಲ್ಲ. 

ಈ ಕುರಿತು ನ್ಯೂಸ್ ಚೆಕರ್ ಹಿಂದಿ ತಂಡ ಸುಪ್ರೀಂ ಕೋರ್ಟ್‌ ವಕೀಲರಾದ ಅನುರಾಗ್‌ ಓಝಾ ಅವರನ್ನು ಸಂಪರ್ಕಿಸಿದ್ದು, ಅವರು ಈ ಕ್ಲೇಮ್‌ ಅನ್ನು ನಿರಾಕರಿಸಿದ್ದಾರೆ. ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದು “ ಬ್ರಾಹ್ಮಣರ ವಿರುದ್ಧ ನಿಂದೆಗೆ ದೌರ್ಜನ್ಯ ತಡೆ ಕಾಯ್ದೆ ಅನ್ವಯಿಸುವ ಬಗ್ಗೆ ಸುಪ್ರೀಂ ಕೋರ್ಟ್‌ ಈ ಕುರಿತಾಗಿ ಯಾವುದೇ ತೀರ್ಪು ಪ್ರಕಟಿಸಿಲ್ಲ. ಈ ಕ್ಲೇಮ್‌ ಸಂಪೂರ್ಣ ತಪ್ಪಾಗಿದೆ. ಸಂವಿಧಾನದ ಪರಿಚ್ಛೇದ 15 (ತಾರತಮ್ಯ ನಿಷೇಧ) ಮತ್ತು ಪರಿಚ್ಛೇದ 17 (ಅಸ್ಪೃಶ್ಯತೆ ನಿರ್ಮೂಲನೆ) ಅಡಿಯಲ್ಲಿ ಉಲ್ಲೇಖಿಸಲಾದ ಸಾಂವಿಧಾನಿಕ ಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಸಮಾಜದಿಂದ ಅಸ್ಪೃಶ್ಯತೆಯನ್ನು ತೊಡೆದು ಹಾಕದೆ ಸಮಾನತೆ ತರಲು ಸಾಧ್ಯವಿಲ್ಲ. ಆ ಉದ್ದೇಶದಿಂದ ಈ ಕಾಯ್ದೆ ರಚಿಸಿದ್ದಾಗಿದೆ” ಎಂದು ಹೇಳಿದ್ದಾರೆ. 

Conclusion

ಬ್ರಾಹ್ಮಣರನ್ನು ನಿಂದೆ ಮಾಡುವವರ ವಿರುದ್ಧ ದೌರ್ಜನ್ಯ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಾನ್ಯ ಮಾಡಿದೆ ಎಂಬ ವೈರಲ್‌ ಪೋಸ್ಟ್‌ ಸುಳ್ಳಾಗಿದೆ. 

Result: False

Our Sources
Official Website Of The Supreme Court Of India
Telephonic Conversation With Supreme Court Advocate Anurag Ojha

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.