Authors
Claim
ನಾಡಿನ ಖ್ಯಾತ ಸುಬ್ರಹ್ಮಣ್ಯ ದೇಗುಲ, ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ದೇಗುಲ ಸನಿಹದ ನದಿಯಲ್ಲಿ ದೊಡ್ಡ ನಾಗ ಪ್ರತ್ಯಕ್ಷವಾಗಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಫೇಸ್ಬುಕ್ನಲ್ಲಿ ಹರಿದಾಡುತ್ತಿರುವ ಈ ಹೇಳಿಕೆಯಲ್ಲಿ “ಸುಬ್ರಹ್ಮಣ್ಯ ದೇವಾಲಯದ ನದಿಯಲ್ಲಿ ಸಾಕ್ಷಾತ್ ನಾಗ ಪ್ರತ್ಯಕ್ಷ, ಗ್ರಾಮಸ್ಥರು ಮಾಡಿದ ಕೆಲಸಕ್ಕೆ ಏನು ಗೊತ್ತಾ” ಎಂದಿದ್ದು ಇದರೊಂದಿಗೆ ಐದು ಹೆಡೆಗಳಿರುವ ದೊಡ್ಡ ಸರ್ಪ ಮತ್ತು ಜನರು ನೋಡುತ್ತಿರುವ ಫೋಟೋ ಒಂದನ್ನು ಹಾಕಲಾಗಿದೆ.
Also Read: ಗೋಮಾಂಸ ರಫ್ತಿನಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಕಿಂಗ್ ಆಗಿದ್ದಾರೆಯೇ, ಸತ್ಯ ಏನು?
ಈ ಕುರಿತು ನ್ಯೂಸ್ಚೆಕರ್ ಸತ್ಯಶೋಧನೆ ಮಾಡಿದ್ದು, ಇದು ಸುಳ್ಳು ಸುದ್ದಿ ಎಂದು ಕಂಡುಬಂದಿದೆ.
Fact
ಸತ್ಯಶೋಧನೆಗಾಗಿ ನ್ಯೂಸ್ ಚೆಕರ್ ಹೇಳಿಕೆಯೊಂದಿಗೆ ನೀಡಿದ ಫೋಟೋದ ರಿವರ್ಸ್ ಇಮೇಜ್ ಸರ್ಚ್ ಮಾಡಿದೆ. ಈ ವೇಳೆ ಈ ಫೋಟೋವನ್ನು ವಿವಿಧೆಡೆ ಬಳಸಿರುವುದು ಕಂಡುಬಂದಿದೆ. ಇದನ್ನು ನಾವು ಗೂಗಲ್ ಲೆನ್ಸ್ ಮೂಲಕ ಪತ್ತೆ ಹಚ್ಚಿದ್ದೇವೆ.
ಆದರೆ ನ್ಯೂಸ್ಚೆಕರ್, ಈ ಫೋಟೋದ ಮೂಲ ಯಾವುದು ಎಂಬುದನ್ನು ಸ್ವತಂತ್ರವಾಗಿ ಶೋಧಿಸಲು ಸಾಧ್ಯವಾಗಿಲ್ಲ.
ಇನ್ನು ನಾಗ ಪ್ರತ್ಯಕ್ಷ ಎಂಬ ವಿಚಾರದ ಬಗ್ಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಅವರನ್ನು ಸಂಪರ್ಕಿಸಿದೆ. ಈ ವೇಳೆ ಅವರು ನ್ಯೂಸ್ಚೆಕರ್ಗೆ ಪ್ರತಿಕ್ರಿಯಿಸಿ “ದೇಗುಲಕ್ಕೆ ಸಂಬಂಧಪಟ್ಟಂತಿರುವ ಕುಮಾರಧಾರಾ ನದಿಯಲ್ಲಿ ಅಂತಹ ಯಾವುದೇ ವಿದ್ಯಮಾನ ನಡೆದಿಲ್ಲ, ಯಾವುದೇ ನಾಗ ಪ್ರತ್ಯಕ್ಷವಾಗಿಲ್ಲ” ಎಂದು ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಹೆಚ್ಚಿನ ಸ್ಪಷ್ಟನೆಗಾಗಿ ಸುಬ್ರಹ್ಮಣ್ಯದ ಸ್ಥಳೀಯರಾದ ನಿತಿನ್ ಭಟ್ ಇವರನ್ನು ನ್ಯೂಸ್ಚೆಕರ್ ಸಂಪರ್ಕಿಸಿತು. “ನಾಗ ಪ್ರತ್ಯಕ್ಷಗೊಂಡ ಯಾವುದೇ ಘಟನೆ ದೇಗುಲ ಆಸುಪಾಸಿನಲ್ಲಿ ನಡೆದಿಲ್ಲ” ಎಂದು ಅವರು ತಿಳಿಸಿದ್ದಾರೆ.
ಮತ್ತೊಬ್ಬ ಸ್ಥಳೀಯರಾದ, ಸುಬ್ರಹ್ಮಣ್ಯದ ದಿನೇಶ್ ಮಲ್ಲಿಗೆ ಮಜಲು ಅವರನ್ನು ನ್ಯೂಸ್ಚೆಕರ್ ಸಂಪರ್ಕಿಸಿದ್ದು, “ಸುಬ್ರಹ್ಮಣ್ಯಕ್ಕೆ ಹೊಂದಿಕೊಂಡಿರುವ, ಕುಮಾರಧಾರಾ ನದಿಯಲ್ಲಿ ಯಾವುದೇ ಸರ್ಪ ಪ್ರತ್ಯಕ್ಷವಾದ ಘಟನೆ ನಡೆದಿಲ್ಲ” ಎಂದು ಹೇಳಿದ್ದಾರೆ.
Also Read: ಏಕರೂಪ ನಾಗರಿಕ ಸಂಹಿತೆ ಬೆಂಬಲಿಸಿ ಎಂದು ಬಿಜೆಪಿ ಮಿಸ್ಡ್ ಕಾಲ್ ಅಭಿಯಾನದ ನಂಬರ್ ವೈರಲ್
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಸುಬ್ರಹ್ಮಣ್ಯದ ದೇವಾಲಯ ನದಿಯಲ್ಲಿ ಸಾಕ್ಷಾತ್ ನಾಗ ಪ್ರತ್ಯಕ್ಷ ಎನ್ನುವುದು ಸುಳ್ಳಾಗಿದೆ.
Result: False
Our Sources
Google lens
Conversation with Ningaiah, Executive officer of Shri Kukke Subrahmanya Temple, Subrahmanya
Conversation with Nitin Bhat, Resident of Subrahmanya
Conversation with Dinesh Malligemajalu, Resident of Subrahmanya
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.