Authors
Claim
ಭ್ರಷ್ಟಾಚಾರ ಪ್ರಕರಣದ ಆರೋಪಿ ಶಾಸಕ ವಿರೂಪಾಕ್ಷಪ್ಪ ಪಕ್ಷದಿಂದ ವಜಾಕ್ಕೆ ಆಗ್ರಹಿಸಿ ಅಮಿತ್ ಶಾ ಬಿಜೆಪಿ ಅಧ್ಯಕ್ಷರಿಗೆ ಪತ್ರ
Fact
ಅಮಿತ್ ಶಾ ಅವರು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರ ನಿಜವಾದ್ದಲ್ಲ.
ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವ ಚೆನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ತಾತ್ಕಾಲಿಕವಾಗಿ ಪಕ್ಷದ ಸದಸ್ಯತ್ವದಿಂದ ವಜಾ ಮಾಡುವ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಬರೆದಿದ್ದಾರೆ ಎನ್ನಲಾದ ಪತ್ರವೊಂದು ವೈರಲ್ ಆಗಿದೆ.
ವಾಟ್ಸಾಪ್‌ನಲ್ಲಿ ಕಂಡುಬಂದ ಈ ಕ್ಲೇಮಿನಲ್ಲಿ, ಅಮಿತ್ ಶಾ ಅವರು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಈ ಪತ್ರದಲ್ಲಿ
“ಪಕ್ಷದ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ ಅವರಿಂದಾಗಿ ಬಿಜೆಪಿ ಕರ್ನಾಟಕದ ವರ್ಚಸ್ಸು ಹಾಳಾಗಿದೆ. ಮಾಧ್ಯಮದಲ್ಲಿ ಪ್ರಕರಣದ ಬಗ್ಗೆ ಹೆಚ್ಚಿನ ಪ್ರಚಾರ ಆಗದಂತೆ ಇರಲು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ತಾತ್ಕಾಲಿಕವಾಗಿ ನಿಷೇಧಿಸಬೇಕು. ಇದರಿಂದ ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಪರಿಣಾಮ ಆಗದು. ಈ ಪ್ರಕರಣದಿಂದಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಕರ್ನಾಟಕದ ನಾಯಕತ್ವ ವಿರುದ್ಧ ಸಿಟ್ಟಾಗಿದ್ದಾರೆ. ಈ ಪರಿಸ್ಥಿತಿಯನ್ನು ಸುಗಮವಾಗಿ ನಿಭಾಯಿಸುತ್ತೀರಿ ಮತ್ತು ಪಕ್ಷದ ಪರವಾಗಿ ನಡೆದುಕೊಳ್ಳುತ್ತೀರಿ ಎಂದು ನಾಣು ನಂಬಿದ್ದೇನೆ. ನಾನು ನಿಮಗೆ ಮತ್ತು ತಂಡಕ್ಕೆ ಶುಭಾಶಯವನ್ನು ಕೋರುತ್ತೇನೆ” ಎಂದು ಬರೆಯಲಾಗಿದೆ. ಪತ್ರದ ಕೆಳಗೆ ಅಮಿತ್ ಶಾ ಅವರ ಸಹಿ ಕೂಡ ಇದೆ.
ಇದೇ ವೈರಲ್ ಪತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧೆಡೆ ಕಂಡುಬಂದಿದೆ.
ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಈ ಪತ್ರದ ಸತ್ಯಶೋಧನೆಗೆ ಬಳಕೆದಾರರೊಬ್ಬರು ವಾಟ್ಸಾಪ್ ಟಿಪ್‌ಲೈನ್ (+91-9999499044) ಗೆ ದೂರು ಸಲ್ಲಿಸಿದ್ದಾರೆ. ಆ ಪ್ರಕಾರ ಸತ್ಯಶೋಧನೆ ನಡೆಸಲಾಗಿದ್ದು, ಇದೊಂದು ಸುಳ್ಳು ಪತ್ರ ಎಂದು ತಿಳಿದುಬಂದಿದೆ.
Fact Check/ Verification
ಸತ್ಯ ಶೋಧನೆಗಾಗಿ ಈ ಪತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಮೂಲಕ ಸರ್ಚ್ ಮಾಡಲಾಗಿದ್ದು ವಿರೂಪಾಕ್ಷ ಅವರ ಬಗ್ಗೆ ಅಮಿತ್ ಶಾ ಅವರು ಪತ್ರ ಬರೆದ ಬಗ್ಗೆ, ತಾತ್ಕಾಲಿಕವಾಗಿ ವಜಾ ಮಾಡುವ ಬಗ್ಗೆ ಯಾವುದೇ ವರದಿಗಳು ಕಂಡುಬಂದಿಲ್ಲ.
ಗಮನಿಸಬೇಕಾದ ಅಂಶವೆಂದರೆ, ಅಮಿತ್ ಶಾ ಅವರು ಸಾಮಾನ್ಯವಾಗಿ ಪತ್ರಗಳನ್ನು ಇಂಗ್ಲಿಷ್ ನಲ್ಲಿ ಬರೆಯದೇ ಹಿಂದಿಯಲ್ಲೇ ಬರೆಯುತ್ತಾರೆ. ಅಂತಹ ಪತ್ರಗಳನ್ನು ಇಲ್ಲಿ ಇಲ್ಲಿ ಇಲ್ಲಿ ಮತ್ತು ಇಲ್ಲಿ ನೋಡಬಹುದು. ಇದರೊಂದಿಗೆ ಪಕ್ಷದ ಆಂತರಿಕ ಸಂವಹನಕ್ಕೆ ಸರ್ಕಾರದ ಲೆಟರ್ ಹೆಡ್ ಅನ್ನು ಯಾವುದೇ ರಾಜಕಾರಣಿಗಳು ಮಾಡುವುದಿಲ್ಲ. ಆದರೆ ಈ ವೈರಲ್ ಪತ್ರದಲ್ಲಿ ಗೃಹಮಂತ್ರಿಯ ಲೆಟರ್ ಹೆಡ್ ಇದೆ.
ವೈರಲ್ ಪತ್ರದ ಅವಲೋಕನಗಳು
ಅಮಿತ್ ಶಾ ಅವರು ಜೆ.ಪಿ. ನಡ್ಡಾ ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಕೂಲಂಕಷವಾಗಿ ಪರಿಶೀಲಿಸಾಗಿದ್ದು ಇದರಲ್ಲಿ ಹಲವು ವ್ಯಾಕರಣ, ವಿರಾಮ ಚಿಹ್ನೆ ದೋಷಗಳು, ಸರಿಯಾಗಿಲ್ಲದ ಫಾಂಟ್‌ಗಳು, ಜೋಡಣೆ ಸಮಸ್ಯೆ ಕಂಡುಬಂದಿದೆ. ಸರ್ಕಾರಿ ಸಂವಹನ, ಸುತ್ತೋಲೆ ಇತ್ಯಾದಿಗಳಲ್ಲಿ ಅಂತಹ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುವುದಿಲ್ಲ.
Also Read: ಭ್ರಷ್ಟಾಚಾರದಲ್ಲಿ ಕರ್ನಾಟಕವೇ ನಂ.1 ಆಗಿದೆಯೇ, ವೈರಲ್ ಪೋಸ್ಟ್ ಹಿಂದಿನ ಅಸಲಿಯತ್ತು ಇದೇ!
“ಶ್ರೀ ಜಗತ್ ಪ್ರಕಾಶ್ ನಡ್ಡಾ” ಮತ್ತು “ಅಮಿತ್ ಷಾ” ಅವರ ಹೆಸರು ಬರೆದ ಫಾಂಟ್ ಅಕ್ಷರಗಳು ಸರಿಯಾಗಿಲ್ಲ
ವಾಕ್ಯಗಳಲ್ಲಿನ ಪದಗಳ ಜೋಡಣೆ ಅಸಮರ್ಪಕವಾಗಿದೆ. ಕೆಲವು ಪದಗಳಲ್ಲಿನ ಅಕ್ಷರಗಳು ಸರಿಯಾಗಿ ಜೋಡಿಸಲ್ಪಟ್ಟಿಲ್ಲ.
- “Priority to divert the media hype, temporarily ban MLA Madal Virupakshappa membership…” ಎಂಬ ಈ ವಾಕ್ಯ ರಚನೆಯು ತಪ್ಪಾಗಿದೆ
- ವಾಕ್ಯದ ಮಧ್ಯದಲ್ಲಿ ಮೊದಲ ಪ್ಯಾರಾಗ್ರಾಫ್‌ನಲ್ಲಿ “leadership” ಎಂಬ ಪದವು “L” ದೊಡ್ಡ ಅಕ್ಷರದಿಂದ ಪ್ರಾರಂಭವಾಗುತ್ತದೆ.
“ಶ್ರೀ” ಎಂಬ ಗೌರವ ಸೂಚಕವನ್ನು ಸಾಮಾನ್ಯವಾಗಿ ವ್ಯಕ್ತಿಯ ಹೆಸರಿನ ಮೊದಲು ಇರಿಸಲಾಗುತ್ತದೆ, ಮತ್ತು ಅದು ಪದನಾಮವಲ್ಲ. ಆದರೂ ವೈರಲ್ ಪತ್ರದಲ್ಲಿ “ಶ್ರೀ ಪ್ರಧಾನಿ ಮೋದಿ ಜೀ” ಎಂದು ಬರೆಯಲಾಗಿದೆ.
ಹಳೆಯ ಟೆಂಪ್ಲೆಂಟ್ ಜೊತೆ ಹೊಸ ವಂಚನೆ!
ನೂಪುರ್ ಶರ್ಮಾ ಅವರಿಗೆ ಝಡ್ ಕೆಟಗರಿ ಭದ್ರತೆ ನೀಡಲು ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಅಮಿತ್ ಶಾ ಬರೆದಿದ್ದಾರೆ ಎಂದು ಹೇಳಲಾದ ಇದೇ ರೀತಿಯ ಪತ್ರ ಕಳೆದ ವರ್ಷ ವೈರಲ್ ಆಗಿತ್ತು. ಇದನ್ನು ಸರ್ಕಾರದ್ದೇ ಆದ ಪಿಐಬಿ ಫ್ಯಾಕ್ಟ್ ಚೆಕ್ ಈ ಪತ್ರವನ್ನು “ನಕಲಿ” ಎಂದು ಹೇಳಿತ್ತು.
2022 ರಲ್ಲಿ ವೈರಲ್ ಆಗಿದ್ದ “ನಕಲಿ” ಪತ್ರವನ್ನು ಇತ್ತೀಚಿನದಕ್ಕೆ ಹೋಲಿಸಿದಾಗ, ಅದರಲ್ಲಿರುವ ಗೆರೆಗಳು, ಲಾಂಛನದ ಬಳಿ ಇರುವ ಚುಕ್ಕೆ ಮತ್ತು ಪತ್ರದ ಫೋಟೋವನ್ನು ತೆಗೆಯುವ ವ್ಯಕ್ತಿಯ ನೆರಳಿನ ಸಾಧ್ಯತೆಗಳು ಒಂದೇ ರೀತಿ ಇರುವುದನ್ನು ನಾವು ಗಮನಿಸಿದ್ದೇವೆ.
2021ರಲ್ಲಿ ಇದೇ ರೀತಿಯ ಪತ್ರವನ್ನು ಅಮಿತ್ ಶಾ ಅವರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥರಿಗೆ ಬರೆದಿದ್ದಾರೆ ಎನ್ನಲಾಗಿತ್ತು. ಅದರಲ್ಲಿ ಕೋವಿಡ್ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಣೆ ಮಾಡಿದ್ದಕ್ಕೆ ಅಭಿನಂದನೆಗಳನ್ನು ಹೇಳಲಾಗಿತ್ತು.
2021ರ ಮತ್ತು ಈಗಿನ ಪತ್ರದ ನಡುವಿನ ಹೋಲಿಕೆಗಳನ್ನು ಇಲ್ಲಿ ಗಮನಿಸಬಹುದು.
ಇದರೊಂದಿಗೆ ಈ ಪತ್ರದ ಬಗ್ಗೆ ಕರ್ನಾಟಕ ಬಿಜೆಪಿಯ ಮಾಧ್ಯಮ ಸಂಯೋಜಕರಾದ ಕರುಣಾಕರ್ ಅವರು ಪ್ರತಿಕ್ರಿಯಿಸಿ, “ಇದೊಂದು ಸುಳ್ಳು ಪತ್ರ. ಅಂತಹ ಯಾವುದೇ ಪತ್ರವನ್ನು ಶಾಸಕ ವಿರೂಪಾಕ್ಷಪ್ಪ ಬಗ್ಗೆ ಅಮಿತ್ ಶಾ ಅವರು ಬರೆದಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.
Conclusion
ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ವಿರೂಪಾಕ್ಷಪ್ಪ ವಿಚಾರದಲ್ಲಿ ಕೇಂಧ್ರ ಗೃಹಸಚಿವ ಅಮಿತ್ ಶಾ ಅವರು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರ ತಪ್ಪು.
Result: False
Our Sources:
Tweet By PIB Fact Check, Dated June 7, 2021
Tweet By PIB Fact Check, Dated June 14, 2022
Telephonic Conversation with Karunakar, BJP Media coordinator Karnataka
Self-Analysis
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.