Authors
Claim
ಸಾರ್ಬಿಟ್ರೇಟ್ 10 ಎಂಜಿ ಮಾತ್ರೆಯನ್ನು ನಾಲಿಗೆ ಅಡಿ ಇಟ್ಟುಕೊಂಡರೆ ಹೃದಯಾಘಾತ ತಡೆಯುತ್ತದೆ, ಯಾರು ಬೇಕಾದರೂ ಇದನ್ನು ಕಿಸೆಯಲ್ಲಿ ಇಟ್ಟುಕೊಳ್ಳಬಹುದು
Fact
ಸಾರ್ಬಿಟ್ರೇಟ್ ಮಾತ್ರೆಯನ್ನು ಜನ ಸಾಮಾನ್ಯರು ಎದೆ ನೋವಿನ ಸಂದರ್ಭಗಳಲ್ಲಿ ವೈದ್ಯರ ಮೇಲ್ವಿಚಾರಣೆಯಿಲ್ಲದೆ ತೆಗೆದುಕೊಳ್ಳುವುದು ತಕ್ಕುದಲ್ಲ. ವೈದ್ಯರು ಸೂಚಿಸಿದ ರೋಗಿಯಷ್ಟೇ ಇದನ್ನು ಬಳಸಬಹುದು
ಸಾರ್ಬಿಟ್ರೇಟ್ ಎಂಬ ಮಾತ್ರೆಯನ್ನು ನಾಲಗೆ ಅಡಿ ಇಟ್ಟುಕೊಂಡರೆ ಹೃದಯಾಘಾತ ತಡೆಯುತ್ತದೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.
ಫೇಸ್ ಬುಕ್ ನಲ್ಲಿ ಕಂಡುಬಂದ ಕ್ಲೇಮಿನಲ್ಲಿ “ಯಾರಿಗಾದರು ಹೃದಯಾಘಾತವಾಗುವ ಮುನ್ಸೂಚನೆ ಇದ್ದರೆ, ದಯಮಾಡಿ Sorbitrate, 10mg ಎಂಬ ಮಾತ್ರೆಯನ್ನು ಯಾವಾಗಲು ಜೊತೆಯಲ್ಲಿ ಇಟ್ಟುಕೊಳ್ಳಿ. ಇದು ಎಲ್ಲಾರಿಗು ಸಿಗಬೇಕೆಂದು ಸರ್ಕಾರ 10 ಪೈಸೆಗೆ ಕೊಡುತ್ತದೆ, ಆದರೆ ಇದು ಯಾರಿಗು ತಿಳಿದಿಲ್ಲ.. ಮೆಡಿಕಲ್ ಶಾಪ್ನಲ್ಲಿ ಎರಡು ರೂಪಾಯಿಗೆ ಸಿಗುತ್ತದೆ, ಎದೆ ನೋವು ಬಂದ ತಕ್ಷಣ ಈ ಮಾತ್ರೆಯನ್ನು ನಾಲಿಗೆ ಅಡಿಗೆ ಇಟ್ಟುಕೊಳ್ಳಿ ಇದು ಎರಡು ಗಂಟೆಗಳ ಕಾಲ ಹೃದಯಘಾತವಾಗದಂತೆ ಕಾಪಾಡುತ್ತದೆ, ನಂತರ ಎರಡು ಗಂಟೆಯ ಬಳಿಕ ಮತ್ತೆ ಹೃದಯಘಾತವಾಗುತ್ತದೆ ಆ ವೇಳೆಗೆ ಮೊದಲು ಆಸ್ಪತ್ರೆಗೆ ಸೇರಿ ಪ್ರಾಣ ಉಳಿಸಿಕೊಳ್ಳಿ ದಯಮಾಡಿ ಎಲ್ಲಾರಿಗು ಈ ಮಾಹಿತಿ ತಿಳಿಸಿ..” ಎಂದಿದೆ.
Also Read: ಉಪ್ಪಿನ ರಾಶಿಯಲ್ಲಿ ಮೃತದೇಹವನ್ನಿಟ್ಟರೆ ವ್ಯಕ್ತಿ ಮತ್ತೆ ಜೀವಂತವಾಗುತ್ತಾನೆ ಎನ್ನುವುದು ಸತ್ಯವೇ?
ಈ ಕುರಿತು ಸತ್ಯಶೋಧನೆಗೆ ನ್ಯೂಸ್ಚೆಕರ್ ಮುಂದಾಗಿದ್ದು ಇದು ತಪ್ಪಾದ ಸಂದರ್ಭ ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ಮೊದಲು Sorbitrate 10mg ಮಾತ್ರೆಯ ಬಗ್ಗೆ ಮಾಹಿತಿಗಳನ್ನು ಪರಿಶೀಲಿಸಿದ್ದೇವೆ. ಡ್ರಗ್ಸ್.ಕಾಮ್ನಲ್ಲಿರುವ ಮಾಹಿತಿಯ ಪ್ರಕಾರ,
“Sorbitrate ನಲ್ಲಿ Isosorbide dinitrate dilates ಎಂಬ ಅಂಶವಿದ್ದು ಇದು ಸಾಮಾನ್ಯವಾಗಿ ರಕ್ತನಾಳಗಳನ್ನು ಹಿಗ್ಗಿಸಿ ರಕ್ತ ಸಂಚಾರ ಸುಲಭವಾಗುವಂತೆ ಮಾಡುತ್ತದೆ. ಮತ್ತು ಹೃದಯ ಸುಲಭವಾಗಿ ಪಂಪ್ ಮಾಡುವಂತೆ ಮಾಡುತ್ತದೆ.
ಈ ಮಾತ್ರೆಯನ್ನು ನಿರ್ದಿಷ್ಟವಾಗಿ ರೋಗಿಗೆ ವೈದ್ಯರು ಕೊಟ್ಟಿರಬೇಕಾಗುತ್ತದೆ. ಇದನ್ನು ನಿರ್ದಿಷ್ಟ ಅವಧಿಗೆ ಮೀರಿ ಮತ್ತು ವೈದ್ಯರು ಹೇಳಿದ್ದಕ್ಕಿಂತ ಹೆಚ್ಚು ಅವಧಿ ತೆಗೆದುಕೊಳ್ಳಬಾರದು” ಎಂದಿದೆ
ವೈರಲ್ ಹೇಳಿಕೆಯ ಕುರಿತು ನಾವು ಯೆನೆಪೊಯ ಮೆಡಿಕಲ್ ಕಾಲೇಜಿನ ವೈದ್ಯರಾದ ಡಾ.ವಿನಾಯಕ ಯು.ಎಸ್. ಅವರನ್ನು ಸಂಪರ್ಕಿಸಿದ್ದು, “Sorbitrate ಎನ್ನುವುದು ಬಹು ಹಿಂದಿನಿಂದಲೇ ಬಳಸುತ್ತಿದ್ದ ಒಂದು ಮಾತ್ರೆ, ಅದನ್ನು ಎದೆನೋವು ಇತ್ಯಾದಿ ಕಾರಣಗಳ ಸಂದರ್ಭ ವೈದ್ಯರ ಸೂಚನೆ ಮೇರೆಗೆ ಬಳಸಲಾಗುತ್ತದೆ. ಹೃದಯಾಘಾತ ಆದವರಿಗೆ ಇದನ್ನು ಕೊಡಬಹುದಾದರೂ, ಎಲ್ಲ ಸಂದರ್ಭದಲ್ಲಿ, ಎಲ್ಲರಿಗೂ ಈ ಮಾತ್ರೆ ಪರಿಣಾಮಕಾರಿಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಮತ್ತು ತುರ್ತು ಸಂದರ್ಭದಲ್ಲಿ ಈ ಮಾತ್ರೆಯನ್ನು ವೈದ್ಯರ ಅನುಮತಿ ಮೇರೆಗೆ ಬಳಸಲಾಗುತ್ತದೆ” ಎಂದಿದ್ದಾರೆ.
ಐಸಿಯು ವಿಭಾಗದ ಅರಿವಳಿಕೆ ತಜ್ಞರಾದ ಡಾ.ಸ್ವಾತಿ ಅವರು ಹೇಳುವ ಪ್ರಕಾರ, ಈ ಮಾತ್ರೆ ಹೃದಯಾಘಾತಕ್ಕೆ ಬಳಸಲಾಗುತ್ತದೆ. ಆದರೆ ಎದೆನೋವು ಇರುವ ಪ್ರತಿಯೊಬ್ಬರಿಗೂ ಇದನ್ನು ಬಳಸುವುದಿಲ್ಲ. ಕಡಿಮೆ ಬಿ.ಪಿ. ಹೊಂದಿರುವ ಕೆಲವು ರೋಗಿಗಳಲ್ಲಿಇದು ತೀವ್ರವಾದ ಅಡ್ಡಪರಿಣಾಮವನ್ನು ಉಂಟುಮಾಡಬಹುದು. ಆದ್ದರಿಂದ ಎಲ್ಲ ರೀತಿಯ ಎದೆನೋವುಗಳಿಗೆ ಇದನ್ನು ಶಿಫಾರಸು ಮಾಡುವುದಿಲ್ಲ. ವೈದ್ಯರ ಸಲಹೆ ಮತ್ತು ಮೇಲ್ವಿಚಾರಣೆಯಲ್ಲೇ ಈ ಮಾತ್ರೆಯನ್ನು ಬಳಸಬೇಕಾಗುತ್ತದೆ” ಎಂದಿದ್ದಾರೆ.
Also Read: ಕಂಪ್ಯೂಟರ್ ಮುಂದೆ ಕೆಲಸ ಮಾಡುವವರು ಬೆಂಡೆಕಾಯಿ ತಿಂದರೆ ಕಣ್ಣಿನ ಶಕ್ತಿ ಹೆಚ್ಚುತ್ತದೆ ಎಂಬುದು ನಿಜವೇ?
ಹೃದ್ರೋಗ ತಜ್ಞ ಡಾ.ಸತ್ಯಂ ರಾಜವಂಶಿ ಅವರು ಹೇಳುವ ಪ್ರಕಾರ, “Sorbitrate ಎದೆ ಸೆಳೆತದ ಸಮಸ್ಯೆಗೆ ತಾತ್ಕಾಲಿಕ ಪರಿಹಾರವನ್ನು ನೀಡಬಹುದು. ಆದರೆ ಇದು ಜೀವ ರಕ್ಷಕ ಔಷಧವಲ್ಲ. ಎದೆನೋವು ಕಾಣಿಸಿಕೊಂಡ ಬಳಿಕ ರೋಗಿ ಸಾಧ್ಯವಾದಷ್ಟು ಬೇಗ ಎರಡು Dispirin ಮಾತ್ರೆಗಳನ್ನು ಅಗಿಯುವುದು ಅಥವಾ ಕರಗಿಸುವುದರಿಂದ ಬದುಕುಳಿವ ಸಾಧ್ಯತೆ ಹೆಚ್ಚು. Clopidogrel ಮತ್ತು Statin ಎಂಬ ಮಾತ್ರೆಗಳನ್ನು ಕೂಡ ತೆಗೆದುಕೊಳ್ಳುವುದು ಬದುಕುಳಿವ ಸಾಧ್ಯತೆಯನ್ನು ಖಚಿತವಾಗಿ ಹೆಚ್ಚು ಮಾಡುತ್ತದೆ. Sorbitrate ಮಾತ್ರೆಯನ್ನು ರೋಗಿಗಳು ಅವರ ವೈದ್ಯರ ಸೂಚನೆ ಮೇರೆಗಷ್ಟೇ ತಮ್ಮೊಂದಿಗೆ ಇರಿಸಿಕೊಳ್ಳಬಹುದು. ಜನ ಸಾಮಾನ್ಯರು ಅಂತಹ ಸಂದರ್ಭದಲ್ಲಿ ನೇರವಾಗಿ ಬಳಸುವುದು ತಕ್ಕುದಾದ್ದಲ್ಲ. ವೈದ್ಯರ ಮೇಲ್ವಿಚಾರಣೆ ಅಗತ್ಯವಿದೆ” ಎಂದು ಹೇಳಿದ್ದಾರೆ.
ವೈದ್ಯರಾದ ಡಾ.ಪೂರ್ಣಿಮಾ ಅವರು ಹೇಳುವ ಪ್ರಕಾರ, “Sorbitrate ಮಾತ್ರೆಯನ್ನು ಎಲ್ಲ ರೋಗಿಗಳಿಗೆ ಅನ್ವಯಿಸಲು ಸಾಧ್ಯವಿಲ್ಲ. ರೋಗಿಯ ಸ್ಥಿತಿಗತಿಯನ್ನು ಆಧರಿಸಿ ಮಾತ್ರೆಯನ್ನು ಉಪಯೋಗಿಸಬಹುದು. ತಜ್ಞ ವೈದ್ಯರ ಶಿಫಾರಸು ಮತ್ತು ಮೇಲ್ವಿಚಾರಣೆ ಅಗತ್ಯ” ಎಂದಿದ್ದಾರೆ.
ಕೆಎಂಸಿ ಮಂಗಳೂರಿನ ಹೃದ್ರೋಗ ತಜ್ಞ, ಡಾ.ಪದ್ಮನಾಭ ಕಾಮತ್ ಅವರನ್ನು ನ್ಯೂಸ್ಚೆಕರ್ ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು, “Sorbitrate ಮಾತ್ರೆಯನ್ನು ಹೃದಯ ಸಂಜೀವಿನಿ ಎಂದು ಬಣ್ಣಿಸಲಾಗಿದೆ ಮತ್ತು ಎರಡು ಘಂಟೆಗಳ ಕಾಲ ಹೃದಯ ಸುರಕ್ಷಿತ ಎಂದು ತಪ್ಪಾಗಿ ಚಿತ್ರಿಸಲಾಗಿದೆ. ಆದರೆ ಇದು ಅಕ್ಷರಶಃ ಸುಳ್ಳು. Sorbitrate ಮಾತ್ರೆ anti anginal ಪಟ್ಟಿಗೆ ಸೇರುತ್ತದೆ. ಇದರ ಬಳಕೆ ವೈದ್ಯಕೀಯ ಶಿಫಾರಸಿನ ಮೇರೆಗೆ ಮಾತ್ರ ಮಾಡಬೇಕು. ಹೃದಯಾಘಾತವನ್ನು ತಡೆಗಟ್ಟುವ ಮಾತ್ರೆಯನ್ನು ಹುಡುಕುವ ಬದಲು ಸಾಧ್ಯವಾದಷ್ಟು ಬೇಗ ಒಳ್ಳೆಯ ಆಸ್ಪತ್ರೆಯನ್ನು ಹುಡುಕಿ ಅಲ್ಲಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಬೇಕು. ಮಾತ್ರೆಯನ್ನು ಶರ್ಟಿನ ಜೇಬಿನಲ್ಲಿ ಇಡುವ ಬದಲು ಫ್ಯಾಮಿಲಿ ಫಿಸಿಷಿಯನ್/ ಕಾರ್ಡಿಯೋಲಾಜಿಸ್ಟ್ ನಂಬರ್ ಇಟ್ಟುಕೊಳ್ಳುವುದು ಉತ್ತಮ. ಕೆಲವೊಮ್ಮೆ ಅನವಶ್ಯ Sorbitrate ನುಂಗಿದಲ್ಲಿ ಬಿಪಿ ಏರುಪೇರು ಆಗುವ ಸಾಧ್ಯತೆಯೂ ಇದೆ. ಹೃದಯಾಘಾತ ತಡೆಗಟ್ಟುವುದು ನಮ್ಮ ಆದ್ಯತೆಯಾಗಿರಲಿ” ಎಂದು ಅವರು ಹೇಳಿದ್ದಾರೆ.
Conclusion
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ Sorbitrate 10mg ಮಾತ್ರೆಯನ್ನು ಜನ ಸಾಮಾನ್ಯರು ಎದೆ ನೋವಿನ ಸಂದರ್ಭಗಳಲ್ಲಿ ವೈದ್ಯರ ಮೇಲ್ವಿಚಾರಣೆಯಿಲ್ಲದೆ ತೆಗೆದುಕೊಳ್ಳುವುದು ತಕ್ಕುದಲ್ಲ ಎಂದು ತಿಳಿದುಬಂದಿದ್ದು, ವೈರಲ್ ಹೇಳಿಕೆಯು ಭಾಗಶಃ ತಪ್ಪಾಗಿದೆ.
Result: Partly False
Our Sources
Sorbitrate Uses, Side Effects & Warnings (drugs.com)
Conversation with Dr. Swathi, Anaesthetist
Conversation with Dr. Sathyam Rajavamshi, Cardiologist
Conversation with Dr. Poornima Santanakrishnan
Conversation with Dr. Vinayakaka U.S.
Conversation with Dr. Padmanabha Kamath, Cardiologist, KMC Mangalore
(ಈ ಲೇಖನವನ್ನು ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಅವರ ಹೇಳಿಕೆಯೊಂದಿಗೆ ನವೆಂಬರ್ 15, 2023ರಂದು ಪರಿಷ್ಕರಿಸಲಾಗಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.