Authors
Claim
ಪಾನ್-ಆಧಾರ್ ಲಿಂಕ್‌ಗೆ ಮಾರ್ಚ್ 31 ಕೊನೆ ದಿನ ಇಲ್ಲದಿದ್ದರೆ 10 ಸಾವಿರ ರೂ. ದಂಡ
Fact
ಮಾರ್ಚ್ 31, 2023ರ ವರೆಗೆ 1 ಸಾವಿರ ರೂ. ದಂಡದೊಂದಿಗೆ ಪಾನ್-ಆಧಾರ್ ಲಿಂಕ್ ಮಾಡಲು ಅವಕಾಶವಿದೆ. ಒಂದು ವೇಳೆ ತಪ್ಪಿದ್ದೇ ಆದಲ್ಲಿ ಎಪ್ರಿಲ್ 1, 2023ರ ನಂತರ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ
ಪಾನ್ ಕಾರ್ಡ್, ಆಧಾರ್ ಕಾರ್ಡ್ ಲಿಂಕ್ ಕುರಿತ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ಹರಿದಾಡುತ್ತಿದೆ. ಪಾನ್ ಆಧಾರ್ ಲಿಂಕ್ ಮಾಡಿಸಲು ಇದೇ ಮಾರ್ಚ್ 31 ಕೊನೆಯ ದಿನವಾಗಿದ್ದು ಇಲ್ಲವಾದರೆ 10 ಸಾವಿರ ರೂ. ದಂಡ ಕಟ್ಟಬೇಕೆಂದು ಹೇಳಲಾಗಿದೆ.
ವಾಟ್ಸಾಪ್‌ನಲ್ಲಿ ಕಂಡುಬಂದ ಕ್ಲೇಮ್‌ನಲ್ಲಿ “ಇನ್ನೂ ಪಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿಲ್ಲವೇ? ಇದು ನಿಮಗೆ ಕೊನೇಯ ಅವಕಾಶ ಮಾರ್ಚ್ 31, 2023ರ ಒಳಗೆ ಪಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿ 10,000 ರೂ. ದಂಡ ದಿಂದ ಪಾರಾಗಿ, ಪಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯ ಗೊಳ್ಳುತ್ತದೆ ಮತ್ತೆ ಆಕ್ಟಿವೇಟ್ ಮಾಡಲು 10,000 ರೂ. ದಂಡ ಪಾವತಿಸಬೇಕಾಗುತ್ತದೆ” ಎಂದು ಇದರಲ್ಲಿ ಹೇಳಲಾಗಿದೆ.
ವಾಟ್ಸಾಪ್ ಬಳಕೆದಾರರೊಬ್ಬರು ಸತ್ಯಶೋಧನೆಗಾಗಿ ಈ ಕ್ಲೇಮ್ ಅನ್ನು ನ್ಯೂಸ್‌ಚೆಕರ್ ವಾಟ್ಸಾಪ್ ಟಿಪ್‌ಲೈನ್ () ಗೆ ಕಳುಹಿಸಿದ್ದು, ಇದು ಭಾಗಶಃ ಸುಳ್ಳು ಎಂದು ಕಂಡುಬಂದಿದೆ.
Fact Check/ Verification
ಸತ್ಯಶೋಧನೆಗಾಗಿ ನ್ಯೂಸ್‌ಚೆಕರ್, ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದೆ. ಈ ವೇಳೆ ಹಲವು ಮಾಧ್ಯಮ ವರದಿಗಳು ಲಭ್ಯವಾಗಿವೆ.
ಡಿಸೆಂಬರ್ 26, 2022ರ ಇಂಡಿಯಾ ಟುಡೇ ವರದಿ ಪ್ರಕಾರ, ಆದಾಯ ತೆರಿಗೆ ಇಲಾಖೆ, ಆಧಾರ್-ಪಾನ್ ಲಿಂಕ್ ಮಾಡುವಂತೆ ಕೊನೆಯ ಎಚ್ಚರಿಕೆ ನೀಡಿದೆ. ಈ ಕುರಿತ ನೋಟಿಸ್‌ನಲ್ಲಿ ಮಾರ್ಚ್ 31, 2023ರ ಒಳಗಾಗಿ 1 ಸಾವಿರ ರೂ. ದಂಡದೊಂದಿಗೆ ಲಿಂಕ್ ಮಾಡುವಂತೆ ಹೇಳಿದೆ. ಒಂದು ವೇಳೆ ತಪ್ಪಿದ್ದೇ ಆದಲ್ಲಿ ಪಾನ್ ಕಾರ್ಡ್ ನಿಷ್ಕ್ರಿಯ ಗೊಳ್ಳಲಿದೆ. ಈ ಅಂತಿಮ ಗಡುವಿನ ದಿನಾಂಕದ ಅಂದರೆ ಎಪ್ರಿಲ್ 1, 2023 ರ ಬಳಿಕ ಪಾನ್ ಕಾರ್ಡ್ ಬಳಸುವಂತೆ ಇರುವುದಿಲ್ಲ ಮತ್ತು ಆ ಪಾನ್ ನಿಂದ ಆಗುವ ಎಲ್ಲ ವ್ಯವಹಾರಕ್ಕೆ ತಡೆಯಾಗಲಿದೆ. ಪಾನ್ ಆಧಾರ್ ಲಿಂಕ್ ಕಡ್ಡಾಯಗೊಳಿಸುವಿಕೆಯನ್ನು ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಮೇಘಾಲಯ ಸೇರಿದಂತೆ, 1961ರ ಆದಾಯ ತೆರಿಗೆ ಕಾಯಿದೆ ಪ್ರಕಾರ, ಭಾರತದ ನಿವಾಸಿಗಳಲ್ಲದವರಿಗೆ ಅನ್ವಯಿಸುವುದಿಲ್ಲ” ಎಂದು ವರದಿ ಹೇಳಿದೆ.
ಮಾರ್ಚ್ 22, 2023ರ ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ “ ಮಾರ್ಚ್ 31 2023ರ ಒಳಗೆ ಪಾನ್ ಕಾರ್ಡ್, ಆಧಾರ್ ಲಿಂಕ್ ಮಾಡಿಸದೇ ಇದ್ದರೆ, ಪಾನ್ ನಿಷ್ಕ್ರಿಯಗೊಳ್ಳಲಿದೆ. ಹಲವು ಬಾರಿ ಕೇಂದ್ರ ನೇರ ತೆರಿಗೆ ಇಲಾಖೆ (ಸಿಟಿಬಿಟಿ) ಪಾನ್-ಆಧಾರ್ ಲಿಂಕ್ ಮಾಡುವ ಅವಕಾಶವನ್ನು ವಿಸ್ತರಿಸಿದ್ದು, ಈ ಹಿಂದೆ ಮಾರ್ಚ್ 31, 2022 ಎಂದು ಹೇಳಲಾಗಿತ್ತು. ಜೂನ್ 30, 2022ರವರೆಗೆ ತಡವಾದ ಶುಲ್ಕ ಎಂದು 500 ರೂ. ಪಾವತಿ ಮಾಡಬೇಕಾಗುತ್ತಿತ್ತು. ಜೂನ್ 30, 2022ರಿಂದ ಮಾರ್ಚ್ 31, 2023ರವರೆಗೆ ತಡವಾದ ಶುಲ್ಕವನ್ನು 1 ಸಾವಿರ ರೂ.ಗಳಿಗೆ ಏರಿಸಲಾಗಿದೆ.
ಪಾನ್ ಆಧಾರ್ ಲಿಂಕ್ ಕುರಿತಂತೆ ಇತರ ಮಾಧ್ಯಮ ವರದಿಗಳನ್ನು ಇಲ್ಲಿ ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಪಾನ್-ಆಧಾರ್ ಲಿಂಕ್ ಕುರಿತ ಹೆಚ್ಚಿನ ಮಾಹಿತಿಗೆ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ ಅನ್ನು ಪರಿಶೀಲಿಸಲಾಗಿದ್ದು, ಇದರಲ್ಲಿ ಮಾರ್ಚ್ 30, 2022ರಂದು ಹೊರಡಿಸಿದ ಸುತ್ತೋಲೆ ಲಭ್ಯವಾಗಿದೆ. ಇದರಲ್ಲಿ ಮಾರ್ಚ್ 30, 2022ರ ನಂತರ ಪಾನ್ ಆಧಾರ್ ಲಿಂಕ್ ಮಾಡಿಸುವವರು 1 ಸಾವಿರ ರೂ. ದಂಡ ಕಟ್ಟಬೇಕೆಂದು ಹೇಳಲಾಗಿದೆ. ಮತ್ತು ಆ ನಂತರ ಪಾನ್ ನಿಷ್ಕ್ರಿಯವಾಗಲಿದ್ದು, ಪಾನ್ ಬಳಕೆ ಮೂಲಕ ಮಾಡುವ ಯಾವುದೇ ರೀತಿಯ ವ್ಯವಹಾರಗಳನ್ನು (ಬ್ಯಾಂಕ್, ಷೇರು ವಹಿವಾಟು, ಖರೀದಿ ಇತ್ಯಾದಿ)ಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದಿದೆ.
ಇದರೊಂದಿಗೆ ಪಾನ್ ಆಧಾರ್ ಲಿಂಕ್ ಮಾಡುವ ಕುರಿತಾಗಿ ಕೇಂದ್ರೀಯ ನೇರ ತೆರಿಗೆ ಮಂಡಳಿ ಮಾರ್ಚ್ 30, 2022ರಂದು ಹೊರಡಿಸಿದ ಪತ್ರಿಕಾ ಪ್ರಕಟನೆಯನ್ನು ಇಲ್ಲಿ ನೋಡಬಹುದು.
ಜೊತೆಗೆ ಆದಾಯ ತೆರಿಗೆ ಇಲಾಖೆ ಪಾನ್-ಆಧಾರ್ ಲಿಂಕ್ ಕುರಿತಾಗಿ ವೆಬ್‌ಸೈಟ್‌ನಲ್ಲಿ ಹೊರಡಿಸಿದ ಆಗಾಗ್ಗೆ ಕೇಳಲಾದ ಪ್ರಶ್ನೆಗಳು (FAQ) ಅನ್ನು ಇಲ್ಲಿ ನೋಡಬಹುದು. ಇದರಲ್ಲಿ ಹೇಳಿರುವ ಪ್ರಕಾರವೂ, ಮಾರ್ಚ್ 31, 2023ರ ವರೆಗೆ 1 ಸಾವಿರ ರೂ. ದಂಡದೊಂದಿಗೆ ಪಾನ್-ಆಧಾರ್ ಲಿಂಕ್ ಮಾಡಲು ಅವಕಾಶವಿದೆ. ಒಂದು ವೇಳೆ ತಪ್ಪಿದ್ದೇ ಆದಲ್ಲಿ ಎಪ್ರಿಲ್ 1, 2023ರ ನಂತರ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ ಎಂಬುದು ಗೊತ್ತಾಗಿದೆ.
ಕೆಲವು ಮಾಧ್ಯಮ ವರದಿಗಳನ್ನು ನ್ಯೂಸ್‌ಚೆಕರ್ ಗಮನಿಸಿದ್ದು, ಮಾರ್ಚ್ 31ರ ಒಳಗಾಗಿ ಪಾನ್ ಆಧಾರ್ ಕಾರ್ಡ್ ಲಿಂಕ್ ಮಾಡದೇ ಇದ್ದು, ಅನಂತರ ಬಳಸಿದರೆ, 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎನ್ನಲಾಗಿದೆ.
ಈ ಬಗ್ಗೆ ಹೆಚ್ಚಿನ ವಿವರಗಳಿಗೆ ಹಿರಿಯ ಲೆಕ್ಕ ಪರಿಶೋಧಕರಾದ ರವೀಶ್ ಪಿ.ಜಿ. ಅವರನ್ನು ಸಂಪರ್ಕಿಸಲಾಗಿದ್ದು, ಅವರು ನ್ಯೂಸ್‌ಚೆಕರ್‌ನೊಂದಿಗೆ ಮಾತನಾಡಿ, “ತೆರಿಗೆ ಕಾಯ್ದೆಯ 272ಬಿ ಪ್ರಕಾರ 10 ಸಾವಿರ ರೂ. ದಂಡ ವಿಧಿಸಲು ಸಾಧ್ಯವಿದೆ. ಆದರೆ ಪಾನ್ ಆಧಾರ್ ಲಿಂಕ್ ಕುರಿತ ವಿಚಾರದಲ್ಲಿ ಸರ್ಕಾರ ಇದನ್ನು ಪ್ರಸ್ತಾವಿಸಿಲ್ಲ. ಇದುವರೆಗೆ ಮೂರು ಬಾರಿ ಪಾನ್ ಆಧಾರ್ ಲಿಂಕ್ ಕುರಿತಂತೆ ಸರ್ಕಾರ ಅಧಿಸೂಚನೆಗಳನ್ನು ಹೊರಡಿಸಿದ್ದು, ಕಳೆದ ವರ್ಷ ಹೊರಡಿಸಿದ ಅಧಿಸೂಚನೆಯಲ್ಲಿ ಮಾರ್ಚ್ 31, 2023ರವರೆಗೆ 1 ಸಾವಿರ ರೂ. ದಂಡದೊಂದಿಗೆ ಲಿಂಕ್ ಮಾಡಲು ಅವಕಾಶ ನೀಡಿದೆ. ಮತ್ತು ಆ ನಂತರ ಲಿಂಕ್ ಮಾಡಲು ಸಾಧ್ಯವಿಲ್ಲ ಮತ್ತು ಪಾನ್ ಅನ್ನು ರದ್ದು ಮಾಡಲಾಗುತ್ತದೆ ಎಂದಷ್ಟೇ ಹೇಳಿದೆ. ಇದರಲ್ಲೆಲ್ಲೂ 10 ಸಾವಿರ ರೂ. ದಂಡದ ಬಗ್ಗೆ ಹೇಳಿಲ್ಲ. ಒಂದು ವೇಳೆ ಸರ್ಕಾರಕ್ಕೆ ಉದ್ದೇಶವಿದ್ದರೆ, ಮುಂದಿನ ದಿನಗಳಲ್ಲಿ ಇದಕ್ಕೆ ಪ್ರತ್ಯೇಕ ಅಧಿಸೂಚನೆಯನ್ನು ಹೊರಡಿಸಬಹುದು, ಆ ಸಾಧ್ಯತೆಗಳೂ ಇವೆ. ಈ ವಿಚಾರದಲ್ಲಿ ಸರ್ಕಾರ ಇನ್ನೂ ಸ್ಪಷ್ಟವಾಗಿ ಹೇಳಿಲ್ಲ” ಎಂದು ಹೇಳಿದ್ದಾರೆ.
ಲೆಕ್ಕ ಪರಿಶೋಧಕಾರದ ಗೌತಮ್ ಬೆತ್ತಸರವು ಅವರೊಂದಿಗೆ ಮಾತನಾಡಿದಾಗ ಅವರು ನ್ಯೂಸ್‌ಚೆಕರ್‌ನೊಂದಿಗೆ ಹೇಳಿದ್ದಿಷ್ಟು “ಸೆಕ್ಷನ್ 139ಎ ಅನ್ನು ಪಾಲಿಸದಿದ್ದಲ್ಲಿ ಆದಾಯ ತೆರಿಗೆ ಕಾಯಿದೆಯ 272ಬಿ ಅಡಿಯಲ್ಲಿ ದಂಡವನ್ನು ಮೌಲ್ಯಮಾಪನ ಅಧಿಕಾರಿಯ ವಿವೇಚನೆಯ ಅಡಿಯಲ್ಲಿ ವಿಧಿಸಲಾಗುತ್ತದೆ. ಸೆಕ್ಷನ್ 139ಎ, ಪಾನ್‌ಗೆ ಅರ್ಜಿ ಸಲ್ಲಿಸಬೇಕಾದ ವ್ಯಕ್ತಿಗಳನ್ನು ಅದರಲ್ಲಿ ಉಲ್ಲೇಖಿಸಿರುವ ಮಾನದಂಡಗಳ ಆಧಾರದ ಮೇಲೆ ನಿರ್ದಿಷ್ಟಪಡಿಸಿದೆ. (ಮೂಲ ಆದಾಯ ಮಿತಿ (2.5 ಲಕ್ಷಗಳು), ವಹಿವಾಟು 5 ಲಕ್ಷಗಳನ್ನು ಮೀರುವುದು, ಇತ್ಯಾದಿ) 139ಎ ಅನ್ನು ಅನುಸರಿದೇ ಇದ್ದಾಗ ಮಾತ್ರ 272B ಅಡಿಯಲ್ಲಿ ದಂಡ ಹೇರುವುದಕ್ಕೆ ಕಾರಣವಾಗುತ್ತದೆ” ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಪಾನ್-ಆಧಾರ್ ಲಿಂಕ್ ಕುರಿತ ಅಂತಿಮ ದಿನಾಂಕವನ್ನು ಕೇಂದ್ರ ತೆರಿಗೆ ಇಲಾಖೆ ವಿಸ್ತರಣೆ ಮಾಡಿದೆ. ಜೂ.30, 2023ರವರೆಗೆ ಲಿಂಕ್ ಮಾಡಲಿರುವ ದಿನಾಂಕವನ್ನು ವಿಸ್ತರಣೆ ಮಾಡಿ ಘೋಷಣೆ ಮಾಡಿದೆ. 1 ಸಾವಿರ ಶುಲ್ಕದೊಂದಿಗೆ ಲಿಂಕ್ ಮಾಡಬಹುದು ಎಂದು ಅದು ಹೇಳಿದೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಹೊರಡಿಸಿದ ಪ್ರಕಟನೆ ಟ್ವೀಟ್ ಮಾಡಲಾಗಿದ್ದು ಅದು ಇಲ್ಲಿದೆ.
Conclusion
ಈ ಸತ್ಯಶೋಧನೆ ಪ್ರಕಾರ, ಆದರೆ ಕ್ಲೇಮಿನಲ್ಲಿ ಹೇಳಿದಂತೆ ಇದೇ ಮಾರ್ಚ್ 31 ಕೊನೆಯ ದಿನವಾಗಿದ್ದು ಇಲ್ಲವಾದರೆ 10 ಸಾವಿರ ರೂ. ದಂಡ ಕಟ್ಟಬೇಕೆಂದು ಹೇಳಿರುವುದು ಭಾಗಶಃ ತಪ್ಪಾಗಿದೆ.
Result: Partly False
Our Sourses:
Income Tax Department Circular, Dated: March 30, 2022
Income Tax Department Press Note, Dated: March 30, 2022
Link Aadhar FAQ
Report by India Today, Dated: December, 26 2022
Report by Finacial Express, Dated: March 22, 2023
Conversation with Senior Charted Accountant Raveesh P.G.
Conversation with Charted Accountant Gautham Bethasaravu
(ಈ ಲೇಖನವನ್ನು ಲೆಕ್ಕಪರಿಶೋಧಕರಾದ ರವೀಶ್ ಪಿ.ಜಿ., ಮತ್ತು ಗೌತಮ್ ಬೆತ್ತಸರವು ಇವರ ಪ್ರತಿಕ್ರಿಯೆಯೊಂದಿಗೆ ದಿನಾಂಕ 27-03-2023ರಂದು ಪರಿಷ್ಕರಿಸಲಾಗಿದೆ.
ಪಾನ್-ಆಧಾರ್ ಲಿಂಕ್ ಕುರಿತ ಅಂತಿಮ ದಿನಾಂಕದ ವಿಸ್ತರಣೆ ಬಗೆಗಿನ ಮಾಹಿತಿಯೊಂದಿಗೆ ಪರಿಷ್ಕರಿಸಲಾಗಿದೆ)
(ಪಾನ್-ಆಧಾರ್ ಲಿಂಕ್ ಕುರಿತ ಅಂತಿಮ ದಿನಾಂಕ ಮಾರ್ಚ್ 31, 2023ರಿಂದ ಜೂನ್ 30, 2023ರವರೆಗೆ ವಿಸ್ತರಣೆಯಾಗಿದ್ದು, ಈ ಕುರಿತ ಮಾಹಿತಿಯೊಂದಿಗೆ ಈ ಲೇಖನವನ್ನು 28-03-2023ರಂದು ಪರಿಷ್ಕರಣೆ ಮಾಡಲಾಗಿದೆ.)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.