ವಿಶ್ವಕಪ್‌ ನಿರ್ಗಮನದ ನಂತರ ಬ್ರೆಜಿಲ್ ಫುಟ್ಬಾಲ್‌ ತಂಡದ ಮೇಲೆ ಅಭಿಮಾನಿಗಳು ಕಲ್ಲು-ಮೊಟ್ಟೆ ಎಸೆದರೇ? ಇಲ್ಲ ಅದು ಹಳೆ ವೀಡಿಯೋ

ಬ್ರೆಜಿಲ್‌, ಫುಟ್ಬಾಲ್‌, ಅಭಿಮಾನಿಗಳು, ಕಲ್ಲು-ಮೊಟ್ಟೆ ಎಸೆತ

ಒಂದು ಹಸಿರು ಬಣ್ಣದ ಬಸ್ಸಿನ ಮೇಲೆ ಜನರು ಕಲ್ಲು, ಮೊಟ್ಟೆಗಳನ್ನು ತೂರುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ವೀಡಿಯೋದ ಕ್ಲೇಮಿನಲ್ಲಿ, ಇತ್ತೀಚೆಗೆ ಖತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಹೊರಬಿದ್ದ ನಂತರ ರಾಷ್ಟ್ರೀಯ ಫುಟ್ಬಾಲ್‌ ತಂಡ ತವರಿಗೆ ವಾಪಾಸಾದಾಗ, ಬ್ರೆಜಿಲ್‌ ಫುಟ್ಬಾಲ್‌ ಅಭಿಮಾನಿಗಳು ಕಲ್ಲು, ಮೊಟ್ಟೆಗಳನ್ನು ಎಸೆದರು ಎಂದು ಹೇಳಲಾಗಿದೆ. ಆದರೆ ಇದೊಂದು ಹಳೆಯ ವೀಡಿಯೋವಾಗಿದ್ದು, ತಪ್ಪಾದ ಸಂದರ್ಭವಾಗಿದೆ.

ಹಲವು ಫೇಸ್‌ಬುಕ್‌ ಬಳಕೆದಾರರು, ಈ ವೀಡಿಯೋವನ್ನು “ಬ್ರೆಜಿಲ್‌ ಆಟಗಾರರು ವರ್ಲ್ಡ್ ಕಪ್‌ ಪಂದ್ಯಾವಳಿ 2022ರ ನಂತರ ತವರಿಗೆ ಮರಳಿದಾಗ” ಎಂಬ ಈ ಕ್ಯಾಪ್ಷನ್‌ ನೊಂದಿಗೆ ಹಂಚಿಕೊಂಡಿದ್ದಾರೆ.

@potpher.tembo ಫೇಸ್‌ಬುಕ್‌ ಸ್ಕ್ರೀನ್‌ ಗ್ರ್ಯಾಬ್‌ ಪೋಸ್ಟ್‌

ಇವುಗಳ ಲಿಂಕ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ, ಇಲ್ಲಿ ಕೊಡಲಾಗಿದೆ.

ಇದರ ವೀಡಿಯೋ ಯೂಟ್ಯೂಬ್‌ನಲ್ಲಿ ಕೂಡ ಇದೆ.

ಯೂಟ್ಯೂಬ್‌ ವೀಡಿಯೋದ ಲಿಂಕ್‌ಗಳು ಇಲ್ಲಿ ಮತ್ತು ಇಲ್ಲಿ ಇದೆ.

Fact Check

ಈ ಕ್ಲೇಮಿನ ಕುರಿತಂತೆ ವೀಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್‌ ರಿವರ್ಸ್ ಇಮೇಜ್‌ ಸರ್ಚ್ ನಡೆಸಿದ್ದು, ಇದರಿಂದ ಮಾರ್ಚ್‌ 27 2018ರಂದು ಅನಾ ಪೌಲ ಲಿಮಾ ಎಂಬವರ ಫೇಸ್‌ಬುಕ್‌ ಅಕೌಂಟ್‌ನಲ್ಲಿ ಇದೇ ವೀಡಿಯೋವನ್ನು ಪೋಸ್ಟ್‌ ಮಾಡಿದ್ದು ಪತ್ತೆಯಾಗಿದೆ. ಇದರಲ್ಲಿ ವೀಡಿಯೋದ ತುಸು ಸಣ್ಣ ಆವೃತ್ತಿ ಇದಾಗಿದೆ. ಈ ವೀಡಿಯೋಕ್ಕೆ “ Fascists attack Catarinense bus thinking it was Lula’s Caravan bus through the South” ಎಂಬ ಕ್ಯಾಪ್ಷನ್‌ ನೀಡಲಾಗಿದ್ದು, ಪೋರ್ಚುಗೀಸ್‌ ಭಾಷೆಯಿಂದ ಇದನ್ನು ಭಾಷಾಂತರಿಸಿದಾಗ, “ನಾವು ತಳ ಭಾಗವನ್ನು ತಲುಪಿದ್ದೇವೆ” ಎಂದಾಗಿದೆ.

Ana Paula Lima ಫೇಸ್‌ಬುಕ್‌ ಪೋಸ್ಟ್‌ ಸ್ಕ್ರೀನ್‌ ಗ್ರ್ಯಾಬ್‌

 “Lula”, “caravan”, “Catarinense bus” ಎಂದು ಪೋರ್ಚುಗೀಸ್‌ ಭಾಷೆಯಲ್ಲಿರುವುದನ್ನು   ಒಂದು ಸುಳಿವಾಗಿ ತೆಗೆದುಕೊಂಡು, ಗೂಗಲ್‌ ಸರ್ಚ್ ನಡೆಸಲಾಗಿದ್ದು ಆಗ ಮಾರ್ಚ್ 27, 2018ರಂದು pt.org.br ಎಂಬ ವೆಬ್‌ಸೈಟ್‌ನಲ್ಲಿ “ಫ್ಯಾಸಿಸ್ಟರು ಗೊಂದಲಕ್ಕೀಡಾಗಿ” ಪರಾನಾದಲ್ಲಿ ಬಸ್‌ ಮೇಲೆ ದಾಳಿ” ಎಂಬ ಕುರಿತ ವರದಿ ಪ್ರಕಟಗೊಂಡಿದ್ದು ಲಭ್ಯವಾಗಿದೆ.

pt.org ವೆಬ್‌ಸೈಟ್‌ ಸ್ಕ್ರೀನ್‌ಗ್ರ್ಯಾಬ್‌ ಇದನ್ನು ಗೂಗಲ್‌ ಮೂಲಕ ಕನ್ನಡಕ್ಕೆ ಭಾಷಾಂತರಿಸಲಾಗಿದೆ.

ವೈರಲ್‌ ಆಗಿದ್ದ ವೀಡಿಯೋವನ್ನೇ ಈ ಬರಹ ಹೊಂದಿದ್ದು, ಇದರಲ್ಲಿ Viação Catarinense ಬಸ್‌ ಅನ್ನು ಫಾಝ್‌ ಡು ಇಗಾಕು ಎಂಬಲ್ಲಿ ಮೊಟ್ಟೆ, ಕಲ್ಲುಗಳಿಂದ ದಾಳಿ ನಡೆಸಲಾಯಿತು. “ದಾಳಿಕೋರರು ಬಸ್ಸಿನಲ್ಲಿ ಮಾಜಿ ಅಧ್ಯಕ್ಷ ಲುಲಾ ಇದ್ದಾರೆ ಎಂದು ಭಾವಿಸಿ ಹಾಗೆ ಮಾಡಿದ್ದು, ಆದರೆ ಈ ಬಸ್ಸಿನಲ್ಲಿ ಜನಸಾಮಾನ್ಯರು ಪ್ರಯಾಣಿಸುತ್ತಿದ್ದರು” ಎಂದು ಬರೆಯಲಾಗಿದೆ.

Also Read: ಸೌದಿ ದೊರೆ ಜೈ ಶ್ರೀ ರಾಮ್‌ ಘೋಷಣೆ ಮೊಳಗಿಸಿದರೇ?

catve.com ಎಂಬ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡ 2018 ಮಾರ್ಚ್ 26ರ ಇನ್ನೊಂದು ವರದಿ ಪ್ರಕಾರ, “ಪ್ರಯಾಣಿಕ ಸಾರಿಗೆ ಸಂಸ್ಥೆಯೊಂದರ ಬಸ್‌ ಬಿಆರ್ 277 ಮೇಲೆ ಕೆಲವು ನಿಮಿಷಗಳ ಹಿಂದೆ  ಸಾವೊ ಮಿಗೆಲ್‌ ಡು ಇಗಾಕೋ ಎಂಬಲ್ಲಿ ದಾಳಿಯಾಗಿದೆ ಎಂದು ಹೇಳಲಾಗಿದೆ. ಲುಲಾ ಕಾರ್ ವಾನ್‌ ವಿರುದ್ಧದ ಪ್ರತಿಭಟನಕಾರರು ಬಸ್‌ ಮೇಲೆ ಕಲ್ಲು, ಮೊಟ್ಟೆ ತೂರಿದ್ದಾರೆ. ಈ ಬಸ್‌ ರಿಯೋ ಡಿ ಜನೈರೋ ದಿಂದ  ಸಾವೊ ಮಿಗೆಲ್‌ ಡು ಇಗಾಕೋಗೆ ತೆರಳುತ್ತಿತ್ತು ಪ್ರಕರಣದ ಸಂಬ ಂಧ ಫೆಡರಲ್‌ ಪೊಲೀಸರು ಕೇಸು ದಾಖಲಿಸಿದ್ದಾರೆ ಎಂದು ಬಸ್‌ ಕಂಪೆನಿ ಹೇಳಿದೆ. ಪ್ರತಿಭಟನಗಾರರು ಲುಲಾ ಕಾರ್‌ವಾನ್‌ಗೆ ಕಾದು ನಿಂತು, ಅದು ಸಾವೊ ಮಿಗೆಲ್‌ ಡು ಇಗಾಕೋನಲ್ಲಿ ಚಲಿಸುತ್ತಿದ್ದಂತೆ ಮೊಟ್ಟೆಗಳನ್ನು ಎಸೆದರು ಎಂದು ಹೇಳಿದೆ” (ಇದನ್ನು ಪೋರ್ಚುಗೀಸ್‌ ಭಾಷೆಯಿಂದ ಭಾಷಾಂತರಿಸಲಾಗಿದೆ)

catve.com ವೆಬ್‌ಸೈಟ್‌ ಸ್ಕ್ರೀನ್‌ ಗ್ರ್ಯಾಬ್‌ ಇದನ್ನು ಗೂಗಲ್‌ ಮೂಲಕ ಕನ್ನಡಕ್ಕೆ ಭಾಷಾಂತರಿಸಲಾಗಿದೆ.

ಇದರೊಂದಿಗೆ, ವೈರಲ್‌ ವೀಡಿಯೋವನ್ನು ಯೂಟ್ಯೂಬ್‌ನಲ್ಲಿ 2018 ಮಾರ್ಚ್ 27ರಂದು ಅಪ್ಲೋಡ್‌ ಮಾಡಿದ್ದು ಕಂಡು ಬಂದಿದೆ. ಇದರ ಶೀರ್ಷಿಕೆ ಕೂಡ ಪೋರ್ಚುಗೀಸ್‌ನಲ್ಲಿದ್ದು, “ಆಗ್ರೋ ಹುಡುಗರು ಲುಲಾಕ್ಕೆ ಸೇರಿದ ಟೂರಿಸ್ಟ್‌ ಬಸ್‌ ಮೇಲೆ (03/26/2018) ದಾಳಿ ಮಾಡುತ್ತಿರುವುದು” ಎಂದು ಹೇಳಲಾಗಿದೆ.

ವೀಡಿಯೋದ ವಿವರಣೆ ಪ್ರಕಾರ”ಆಗ್ರೋ ಹುಡುಗರು (ಶ್ರೀಮಂತ ಭೂಮಾಲಕರು) ಗುರುತು ತಪ್ಪಿ ರಿಯೊ ಡಿ ಜನೈರೋದಿಂದ ಬರುತ್ತಿದ್ದ ಪ್ರವಾಸಿಗರಿರುವ ಬಸ್‌ ಮೇಲೆ ದಾಳಿ ಮಾಡಿದ್ದಾರೆ. ಅವರು ಮಾಜಿ ಅಧ್ಯಕ್ಷ ಲುಲಾ ಅವರು ಬಸ್‌ ನಲ್ಲಿದ್ದಾರೆ ಎಂದು ಭಾವಿಸಿದ್ದರು” ಎಂದು ಹೇಳಿದೆ.

Conclusion

ಈ ವೀಡಿಯೋ ಇತ್ತೀಚಿನದ್ದಲ್ಲ ಮತ್ತು 2022ರ ಪಿಫಾ ವಿಶ್ವಕಪ್‌ನಲ್ಲಿ ಬ್ರೆಜಿಲ್‌ ನಿರ್ಗಮಿಸಿದ ಬಳಿಕ ತವರಿಗೆ ಆಗಮಿಸಿದಾಗ ಜನರು ಮೊಟ್ಟೆ ಎಸೆಯುತ್ತಿರುವ ಘಟನೆ ಅಲ್ಲ. ಇದು 2018ರ ಹೊತ್ತಿನ ಘಟನೆಯಾಗಿದ್ದು, ಬ್ರೆಜಿಲ್‌ ಮಾಜಿ ಅಧ್ಯಕ್ಷ ಲೂಯಿಝ್‌ ಇನಾಸಿಯೋ ಲುಲಾ ದ ಸಿಲ್ವಾ ಅವರ ಕಾರವ್ಯಾನ್‌ ಎಂದು ಗ್ರಹಿಸಿ ಪ್ರಯಾಣಿಕ ಬಸ್‌ ಮೇಲೆ ಮೊಟ್ಟೆ, ಕಲ್ಲು ಎಸೆಯುತ್ತಿರುವ ದೃಶ್ಯವಾಗಿದೆ. ಆದ್ದರಿಂದ ಈ ಕ್ಲೇಮ್‌ ತಪ್ಪಾಗಿದೆ.

Result: False

Our Sources
Facebook Post By Ana Paula Lima, Dated March 27, 2018
Article By pt.org.br, Dated March 27, 2018
Report By catve.com, dated March 26, 2018

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.