Authors
ಲೋಕಸಭೆ ಚುನಾವಣೆ ಮುಗಿದಿದ್ದರೂ ಆ ಕುರಿತ ಹೇಳಿಕೆಗಳು ಈ ವಾರವೂ ಹರಿದಾಡಿವೆ. ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟ ಸರ್ಕಾರ ಬಂದ ಬೆನ್ನಲ್ಲೇ, ಐಎನ್‌ಡಿಐ ಒಕ್ಕೂಟದ ನಾಯಕರಿಂದ ಎನ್‌ಡಿಎ ನಾಯಕರ ಭೇಟಿ, ಕಾಂಗ್ರೆಸ್ ನೀಡುವ ಒಂದು ಲಕ್ಷ ರೂ. ಯೋಜನೆಗೆ ಈಗಲೇ ಸರತಿ, ಈ ಬಾರಿ 110 ಮಂದಿ ಮುಸ್ಲಿಂ ಅಭ್ಯರ್ಥಿಗಳು ಸಂಸತ್ತಿಗೆ ಆಯ್ಕೆಯಾಗಿದ್ದಾರೆ ಎಂದು ಹೇಳಿಕೆಗಳು ಹರಿದಾಡಿದ್ದವು. ಇದು ಹೊರತಾಗಿ ನೇಪಾಳ ವಿಮಾನದಲ್ಲಿ ಸಂಸ್ಕೃತದಲ್ಲಿ ಸೂಚನೆ, ನೆಲ್ಲಿಕಾಯಿರಸದಿಂದ ಬಿಳಿ ಕೂದಲು ಸಮಸ್ಯೆ ಪರಿಹಾರ ಎಂಬ ಹೇಳಿಕೆಗಳೂ ಇದ್ದವು. ಇವುಗಳ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದದು, ಇವುಗಳು ಸುಳ್ಳು ಎಂದು ನಿರೂಪಿಸಿದೆ.
ಡಿ.ಕೆ.ಶಿವಕುಮಾರ್-ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್-ತೇಜಸ್ವಿ ಯಾದವ್ ಭೇಟಿಯಾಗಿದ್ದಾರೆಯೇ?
ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಸರ್ಕಾರ ಬಂದ ಬೆನ್ನಲ್ಲೇ, ಎನ್ ಡಿಎ ಮೈತ್ರಿಕೂಟದ ಭಾಗವಾಗಿರುವ ನಾಯಕರು, ಐಎನ್‌ಡಿ ಒಕ್ಕೂಟದ ನಾಯಕರನ್ನು ಭೇಟಿಯಾಗಿದ್ದಾರೆ ಎಂಬಂತೆ ಹೇಳಲಾಗುತ್ತಿದೆ. ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಮತ್ತು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಆರ್‍ಜೆಡಿ ನಾಯಕ ತೇಜಸ್ವಿ ಯಾದವ್ ಭೇಟಿಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಡಿ.ಕೆ.ಶಿವಕುಮಾರ್, ಚಂದ್ರಬಾಬು ನಾಯ್ಡು ಭೇಟಿ 2023ರದ್ದಾದರೆ, ನಿತೀಶ್, ತೇಜಸ್ವಿ ಯಾದವ್ ಒಂದೇ ವಿಮಾನದಲ್ಲಿ ಸಂಚರಿಸಿದ ವಿದ್ಯಮಾನ ಇತ್ತೀಚಿನದ್ದು. ನಿತೀಶ್-ತೇಜಸ್ವಿ ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದು ರಾಜಕೀಯ ಚರ್ಚೆಗಳಿಗೆ ಕಾರಣವಾಗಿತ್ತು. ಆ ಬಳಿಕ ನಿತೀಶ್ ಎನ್‌ಡಿಎ ಬೆಂಬಲಿಸುವ ಪತ್ರವನ್ನು ನೀಡಿದ್ದರು ಎಂದು ಗೊತ್ತಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಕಂಗನಾ ರಾಣಾವತ್ ಕೆನ್ನೆಯಲ್ಲಿ ಏಟಿನ ಗುರುತು ಇದೆ ಎಂದು ವೈರಲ್ ಆಗಿರುವ ಫೋಟೋದ ಸತ್ಯಾಂಶ ಏನು?
ಕಂಗನಾ ರಾಣಾವತ್ ಕೆನ್ನೆಯಲ್ಲಿ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಕಾನ್‌ಸ್ಟೇಬಲ್ ಕುಲ್ವಿಂದರ್ ಕೌರ್ ಅವರು ಹೊಡೆದ ಏಟಿನ ಗುರುತು ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಫೊಟೋ ಒಂದು ಹರಿದಾಡಿತ್ತು. ವೈರಲ್ ಆಗುತ್ತಿರುವ ಕೆನ್ನೆಯಲ್ಲಿ ಏಟಿನ ಗುರುತು ಇರುವ ಫೋಟೋ, ನಟಿ ಮತ್ತು ಸಂಸದೆ ಕಂಗನಾ ರಾಣಾವತ್ ಅವರದ್ದಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ವಿಮಾನದಲ್ಲಿ ಸಂಸ್ಕೃತದಲ್ಲಿ ಸೂಚನೆಗಳನ್ನು ನೀಡಲಾಗಿದೆಯೇ, ನಿಜಾಂಶ ಏನು?
ನೇಪಾಳ ಪ್ರವಾಸದ ವೇಳೆ ವಿಮಾನದಲ್ಲಿ ಸಂಸ್ಕೃತದಲ್ಲಿ ಸೂಚನೆಗಳನ್ನು ನೀಡಲಾಗಿದೆ ಎಂಬಂತೆ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಆದರೆ ತನಿಖೆ ಪ್ರಕಾರ, ಇದು ವೀಡಿಯೋ ಒಂದಕ್ಕೆ ಸಂಸ್ಕೃತದ ವಾಯ್ಸ್ ಓವರ್ ಆಗಿದ್ದು ನಿಜವಲ್ಲ, ನೇಪಾಳ ಪ್ರವಾಸದ ವೇಳೆ ವಿಮಾನದಲ್ಲಿ ಸಂಸ್ಕೃತದಲ್ಲಿ ಸೂಚನೆಗಳನ್ನು ನೀಡಲಾಗಿದೆ ಎನ್ನುವುದು ತಪ್ಪಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಈ ಬಾರಿ ಲೋಕಸಭೆಗೆ 110 ಮಂದಿ ಮುಸ್ಲಿಂ ಸಂಸದರು ಚುನಾಯಿತರಾಗಿದ್ದಾರೆ ಎಂಬ ಹೇಳಿಕೆ ವೈರಲ್
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸಂಸತ್ತಿಗೆ ಒಟ್ಟು ಸದಸ್ಯ ಬಲದಲ್ಲಿ ಶೇ.20ರಷ್ಟು ಅಂದರೆ 110 ಮಂದಿ ಮುಸ್ಲಿಮರು ಆಯ್ಕೆಯಾಗಿದ್ದಾರೆ ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಸತ್ಯಶೋಧನೆಯಲ್ಲಿ ಕಂಡುಬಂದಂತೆ, 24 ಮುಸ್ಲಿಂ ಸಂಸದರು ಲೋಕಸಭೆಗೆ ಚುನಾಯಿತರಾಗಿದ್ದಾರೆ ಮತ್ತು ಹೇಳಿಕೆಯಲ್ಲಿರುವಂತೆ ಅದು 110 ಅಲ್ಲ ಎಂದು ವರದಿಗಳು ದೃಢೀಕರಿಸಿವೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಕಾಂಗ್ರೆಸ್ ನೀಡುವ ಒಂದು ಲಕ್ಷ ರೂ. ಯೋಜನೆಗೆ ಈಗಲೇ ಸರತಿ ಎಂದ ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
ಕಾಂಗ್ರೆಸ್ ನೀಡುವ ಒಂದು ಲಕ್ಷ ರೂ. ಯೋಜನೆಗೆ ಈಗಲೇ ಸರತಿ ಕಂಡುಬಂದಿದೆ ಎಂದು ವೀಡಿಯೋ ಒಂದು ವೈರಲ್ ಆಗಿದೆ. ಸತ್ಯಶೋಧನೆ ಪ್ರಕಾರ, ವೈರಲ್ ವೀಡಿಯೊವು ಏಪ್ರಿಲ್ 2020 ರ ಸಮಯದ್ದಾಗಿದೆ. ಉತ್ತರಪ್ರದೇಶದಲ್ಲಿ ಜನ್ ಧನ್ ಖಾತೆಗಳ ಕುರಿತಾದ ವದಂತಿಯಿಂದ ಆತಂಕಿತರಾದ ಮಹಿಳೆಯರು ಹಣವನ್ನು ಹಿಂಪಡೆಯಲು ಸರದಿಯಲ್ಲಿ ನಿಂತಿರುವುದನ್ನು ಇದು ತೋರಿಸುತ್ತದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ನೆಲ್ಲಿಕಾಯಿ ರಸ ಹಚ್ಚಿದರೆ ಬಿಳಿ ಕೂದಲು ಕಪ್ಪಾಗುತ್ತದೆಯೇ, ಸತ್ಯ ಏನು?
ನೆಲ್ಲಿಕಾಯಿ ರಸ ಹಚ್ಚಿದರೆ ಕೂದಲು ಕಪ್ಪಾಗುತ್ತದೆ, ಬಿಳಿ ಕೂದಲಿನ ಸಮಸ್ಯೆಗೆ ಪ್ರಯೋಜನಕಾರಿ ಎಂಬಂತೆ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ತನಿಖೆ ನಡೆಸಿದ ವೇಳೆ, ನೆಲ್ಲಿಕಾಯಿ ರಸ ಹಚ್ಚಿದರೆ ಬಿಳಿ ಕೂದಲು ಕೂದಲು ಕಪ್ಪಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳು ಇಲ್ಲ ಕೂದಲಿನ ಕೋಶಕಗಳು ಕಾಲಾಂತರದಲ್ಲಿ ಕಡಿಮೆ ಬಣ್ಣವನ್ನು ಉತ್ಪಾದಿಸುವುದರಿಂದ ಕೂದಲು ಬಿಳಿಯಾಗುತ್ತದೆ. ಇದನ್ನು ತಡೆಯುವುದು ಸಾಧ್ಯವಿಲ್ಲ ಎಂದು ಗೊತ್ತಾಗಿದೆ. ಈ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.