Authors
ಕರ್ನಾಟಕ ವಿಧಾನಸಭಾ ಚುನಾವಣೆ ಕಳೆದ ಬಳಿಕವೂ ಚುನಾವಣೆ ಕುರಿತ ಕ್ಲೇಮುಗಳೇ ಈ ವಾರ ಹೆಚ್ಚಾಗಿತ್ತು. ಮತದಾನದ ವೇಳೆ ಕಾಂಗ್ರೆಸ್ ನಿಂದ ವಂಚನೆ, ಭಟ್ಕಳದ ವಿಜಯೋತ್ಸವದಲ್ಲಿ ಪಾಕಿಸ್ಥಾನ ಧ್ವಜ ಹಾರಾಟ, ಕಾಂಗ್ರೆಸ್ ಗೆಲುವಿಗೆ ಬಿಜೆಪಿ ಧ್ವಜದ ಮೇಲೆ ಗೋಹತ್ಯೆಗೈದು ಸಂಬ್ರಮ, ಮೇ 18ರಂದು ಸಿದ್ದರಾಮಯ್ಯ ಪ್ರಮಾಣವಚನ ಎಂಬ ಸುಳ್ಳು ಆಮಂತ್ರಣ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಮುಸ್ಲಿಂ ಶಾಸಕರಿಂದ ಪೊಲೀಸರಿಗೆ ತಾಕೀತು ಎಂಬ ಕ್ಲೇಮುಗಳು ಈ ವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಇವುಗಳ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಹೆಚ್ಚಿನವುಗಳು ತಪ್ಪು ಕ್ಲೇಮುಗಳಾಗಿದ್ದವು.
ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನದ ವೇಳೆ ಕಾಂಗ್ರೆಸ್ನಿಂದ ವಂಚನೆ, ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಂಚನೆ ಮಾಡಿದೆ ಎಂದು ಚುನಾವಣೆ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ವೀಡಿಯೋ ಹರಿದಾಡಿತ್ತು. ಒಬ್ಬನೇ ಬೇರೆ ಬೇರೆ ಮಂದಿಯ ಹೆಸರಲ್ಲಿ ಮತಯಂತ್ರದ ಗುಂಡಿಯನ್ನು ಒತ್ತಿದ್ದು, ಮತದಾರರ ಪರವಾಗಿ ತಾನೇ ಮತ ಹಾಕಿದ್ದಾನೆ ಎಂದು ಹೇಳಲಾಗಿತ್ತು. ಸತ್ಯಶೋಧನೆ ವೇಳೆ ಈ ವೈರಲ್ ವೀಡಿಯೋ 2022ರ ಪಶ್ಚಿಮ ಬಂಗಾಳ ಸ್ಥಳೀಯಾಡಳಿತ ಚುನಾವಣೆ ಸಂದರ್ಭದ್ಟಿದು ಎಂದು ತಿಳಿದು ಬಂದಿದೆ. ಟಿಎಂಸಿ ಚುನಾವಣಾ ಏಜೆಂಟ್ ಬೇರೆಯವರ ಹೆಸರಲ್ಲಿ ಮತದಾನ ನಡೆಸಿದ್ದಾಗಿ ಆರೋಪಿಸಲಾಗಿತ್ತು. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಭಟ್ಕಳ ಕಾಂಗ್ರೆಸ್ ವಿಜಯೋತ್ಸವದಲ್ಲಿ ಪಾಕಿಸ್ಥಾನ ಧ್ವಜ ಹಾರಿಸಲಾಗಿದೆಯೇ? ಇಲ್ಲ, ಈ ಕ್ಲೇಮ್ ಸುಳ್ಳು
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ಬೆನ್ನಲ್ಲೇ, ಭಟ್ಕಳದಲ್ಲಿ ಪಾಕಿಸ್ಥಾನ ಧ್ವಜ ಹಾರಾಡಿದೆ ಎಂದ ಹೇಳಲಾದ ಕ್ಲೇಮ್ ಒಂದು ಸಾಕಷ್ಟು ವೈರಲ್ ಆಗಿತ್ತು. ಭಟ್ಕಳದಲ್ಲಿ ಪಾಕಿಸ್ಥಾನದ ಧ್ವಜ ಹಾರಾಡಿದೆ ಎಂದು ವೀಡಿಯೋ ಓಡಾಡಿದ್ದು ಸದ್ದು ಮಾಡಿತ್ತು. ಹಲವು ಬಳಕೆದಾರರು ಭಟ್ಕಳದಲ್ಲಿ ಪಾಕಿಸ್ಥಾನ ಧ್ವಜ ಹಾರಿಸಲಾಗಿದೆ ಎಂದು ಹೇಳಿದ್ದರೆ, ಇನ್ನು ಕೆಲವರು ಇಸ್ಲಾಮಿಕ್ ಧ್ವಜವನ್ನು ಹಾರಿಸಲಾಗಿದೆ ಎಂದು ಪೋಸ್ಟ್ಗಳನ್ನು ಮಾಡಿದ್ದರು. ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ ವೇಳೆ ಕಾಂಗ್ರೆಸ್ ವಿಜಯೋತ್ಸವದಲ್ಲಿ ಪಾಕಿಸ್ಥಾನ ಧ್ವಜ ಹಾರಾಡಿಲ್ಲ. ಅದು ಮುಸ್ಲಿಂ ಧಾರ್ಮಿಕ ಧ್ವಜವಾಗಿದ್ದು, ಸ್ಥಳೀಯ ತಂಝೀಮ್ ಸಂಘಟನೆ ಬೆಂಬಲಿಗರು ಇದನ್ನು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿಗೆ ಬಿಜೆಪಿ ಧ್ವಜದ ಮೇಲೆ ಗೋಹತ್ಯೆಗೈದು ಸಂಭ್ರಮ, ಸತ್ಯ ಏನು?
ಕಾಂಗ್ರೆಸ್ ಗೆಲುವಿನ ಬೆನ್ನಲ್ಲೇ ಇಸ್ಲಾಮಿಕ್ ಮತಾಂಧರು ಬಿಜೆಪಿ ಧ್ವಜದ ಮೇಲೆ ಹಸುವಿನ ಕೊರಳನ್ನು ಕತ್ತರಿಸಿ ವಿಜಯೋತ್ಸವ ಆಚರಿಸಿದರು ಎಂಬ ಕ್ಲೇಮ್ ಈವಾರ ಸುದ್ದಿಮಾಡಿತ್ತು. ಸತ್ಯಶೋಧನೆ ನಡೆಸಿದಾಗ ಇದು ಸುಳ್ಳು ಎಂದು ಕಂಡುಬಂದಿತ್ತು. ಬಿಜೆಪಿ ಧ್ವಜದ ಮೇಲೆ ಹಸುವನ್ನು ಕಡಿದ ಘಟನೆ ಕರ್ನಾಟಕದ್ದಲ್ಲ. ಇದು 2022ರಲ್ಲಿ ಮಣಿಪುರದಲ್ಲಿ ನಡೆದ ಘಟನೆಯಾಗಿತ್ತು. ಸ್ಥಳೀಯ ಬಿಜೆಪಿ ನಾಯಕರೊಬ್ಬರಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಈ ಕೃತ್ಯವನ್ನು ನಡೆಸಿದ್ದಾಗಿ ಹೇಳಲಾಗಿತ್ತು. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಮೇ 18ರಂದು ಕರ್ನಾಟಕದ ಸಿಎಂ ಆಗಿ ಸಿದ್ದರಾಮಯ್ಯ ಪ್ರಮಾಣವಚನ ಎಂಬ ಆಮಂತ್ರಣ ಸುಳ್ಳು!
ಮೇ 18ರಂದು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮತ್ತು ಸಂಪುಟ ಸಚಿವರ ಪ್ರಮಾಣ ವಚನ ಎಂಬ ಕ್ಲೇಮ್ ಹರಿದಾಡಿತ್ತು. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ಈ ಆಮಂತ್ರಣ ರೀತಿಯ ಪತ್ರದಲ್ಲಿ ಹೇಳಲಾಗಿತ್ತು. ಕರ್ನಾಟಕದ ನೂತನ ಸಿಎಂ ಯಾರಾಗುತ್ತಾರೆ ಎಂಬ ಚರ್ಚೆಗಳಿದ್ದ ಸಮಯದಲ್ಲೇ ಈ ಆಮಂತ್ರಣ ಹರಿದಾಡಿತ್ತು. ಸತ್ಯಶೋಧನೆ ವೇಳೆ ಇದೊಂದು ನಕಲಿ ಆಮಂತ್ರಣ ಪತ್ರ ಎಂದು ತಿಳಿದುಬಂದಿದೆ. ಮೇ 18ರಂದು ನೂತನ ಸಿಎಂ ಪ್ರಮಾಣ ವಚನಕ್ಕೆ ರಾಜಭವನ ಕರ್ನಾಟಕದಿಂದ ಯಾವುದೇ ಅಧಿಕೃತ ಘೋಷಣೆ ಆಗದೇ ಇರುವುದೂ ಗೊತ್ತಾಗಿತ್ತು. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಪ್ರತಿ ದಿನ ಬೂದು ಕುಂಬಳಕಾಯಿ ಜ್ಯೂಸ್ ಕುಡಿದರೆ ಕೊಲೆಸ್ಟ್ರಾಲ್, ಕಿಡ್ನಿಯಲ್ಲಿ ಕಲ್ಲು ನಿವಾರಣೆ ಎನ್ನುವುದು ನಿಜವೇ?
ಪ್ರತಿದಿನ ಬೂದು ಕುಂಬಳಕಾಯಿ ಜ್ಯೂಸ್ ಕುಡಿಯುವುದರಿಂದ ಕಾಲು ನೋವು, ಕಿಡ್ನಿಯಲ್ಲಿ ಕಲ್ಲುಗಳು, ಕೊಲೆಸ್ಟ್ರಾಲ್, ನಿಶ್ಯಕ್ತಿ ಮತ್ತು ಆಮ್ಲೀಯತೆ (ಆಸಿಡಿಟಿ) ಕಡಿಮೆಯಾಗುತ್ತದೆ ಎಂಬ ಕ್ಲೇಮ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಬೂದು ಕುಂಬಳಕಾಯಿ ಜ್ಯೂಸ್ನಿಂದ ಸಾಕಷ್ಟು ಪ್ರಯೋಜನಗಳಿವೆ ಎಂಬ ರೀತಿಯಲ್ಲಿ ಹೇಳಲಾಗಿತ್ತು. ಆದರೆ ಸತ್ಯಶೋಧನೆಯಲ್ಲಿ, ಇದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳು, ಪುರಾವೆಗಳು ಇಲ್ಲದೇ ಇರುವುದು ಗೊತ್ತಾಗಿದೆ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಇದರ ಪರಿಣಾಮ ಬೇರೆ ಬೇರೆ ಆಗಬಹುದು ಎಂದು ಹೇಳಲಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ