Fact Check: ಹೃದಯದ ಬ್ಲಾಕ್‌ಗೆ ಆಂಜಿಯೋಪ್ಲಾಸ್ಟಿ ಬದಲಿಗೆ ಮನೆಮದ್ದು, ಆಯುರ್ವೇದ ಔಷಧ ಪ್ರಯೋಜನವಾಗುತ್ತಾ, ಸತ್ಯ ಏನು?

ಹೃದಯಾಘಾತ ತಡೆಗೆ ಮನೆಮದ್ದು, ಆಯುರ್ವೇದ,

Claim
ಹೃದಯದ ಬ್ಲಾಕ್‌ಗೆ ಆಂಜಿಯೋಪ್ಲಾಸ್ಟಿ ಬದಲಿಗೆ ಮನೆಮದ್ದು, ಆಯುರ್ವೇದ ಔಷಧ ಪ್ರಯೋಜನಕಾರಿ

Fact
ಹೃದಯದ ಬ್ಲಾಕ್‌ ಸಮಸ್ಯೆಗೆ ತಕ್ಷಣಕ್ಕೆ ಮನೆಮದ್ದು ಆಯುರ್ವೇದ ಔಷಧ, ಶುಂಠಿ, ಬೆಳ್ಳುಳ್ಳಿ, ನಿಂಬೆ ರಸ ಇತ್ಯಾದಿಗಳನ್ನು ಬಳಸುವುದು ಪರಿಣಾಮಕಾರಿಯಲ್ಲ, ಉತ್ತಮ ಆಹಾರ, ಜೀವನಶೈಲಿಯಿಂದ ಪರಿಹಾರ ಕಾಣಬಹುದು

ಹೃದಯದ ನಾಳದ ಬ್ಲಾಕೇಜ್‌ ಸಮಸ್ಯೆಗೆ ಮನೆ ಮದ್ದು, ಆಯುರ್ವೇದ ಔಷಧ ಪರಿಣಾಮಕಾರಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಹರಿದಾಡುತ್ತಿದೆ.

ಈ ಕುರಿತ ಕ್ಲೇಮಿನಲ್ಲಿ, “ಆಂಜಿಯೋಪ್ಲಾಸ್ಟಿ ಬದಲಿಗೆ ಮನೆಮದ್ದು, ಆಯುರ್ವೇದ ಪ್ರಯೋಜನವಾಗುತ್ತದೆ. ಶುಂಠಿ ರಸ, ಬೆಳ್ಳುಳ್ಳಿ ರಸ, ಆಪಲ್‌ ಸೈಡರ್‌ ವಿನೆಗರ್‌ ತೆಗೆದುಕೊಂಡು ಎಲ್ಲಾ ನಾಲ್ಕನ್ನು ಮಿಶ್ರಣ ಮಾಡಿ ಮತ್ತು ಕಡಿಮೆ ಜ್ವಾಲೆಯ ಮೇಲೆ ಬಿಸಿ ಮಾಡಿ, 3 ಕಪ್ಗಳು ಉಳಿದಿರುವಾಗ, ಅದನ್ನು ತಣ್ಣಗಾಗಿಸಿ; ಈಗ ನೀನು ಇದಕ್ಕೆ 3 ಕಪ್ ಜೇನುತುಪ್ಪ ಸೇರಿಸಿ ಈ ಔಷಧಿಯ 3 ಟೇಬಲ್‌ ಸ್ಪೂನ್‌ಗಳನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಿ. ಎಲ್ಲಾ ಬ್ಲಾಕ್‌ಗಳು ಹೋಗುತ್ತವೆ.” ಎಂದು ಹೇಳಲಾಗಿದೆ.

ಈ ಕ್ಲೇಮ್‌ ಬರಹದ ರೂಪದಲ್ಲಿದ್ದು, ಅದರ ಸತ್ಯ ಪರಿಶೀಲನೆಗೆ ವಾಟ್ಸಾಪ್‌ ಬಳಕೆದಾರರೊಬ್ಬರು ನ್ಯೂಸ್‌ಚೆಕರ್‌ ಟಿಪ್‌ಲೈನ್‌ (+91-9999499044)ಗೆ ಕಳುಹಿಸಿದ್ದು ಇದು ತಪ್ಪು ಎಂದು ತಿಳಿದುಬಂದಿದೆ.

ಇದೇ ರೀತಿಯ ಕ್ಲೇಮ್ ಫೇಸ್‌ಬುಕ್‌ ನಲ್ಲಿಯೂ ಕಂಡುಬಂದಿದ್ದು ಅದು ಇಲ್ಲಿದೆ.

Fact Check/ Verification

ಕೆಲವು ಸಂಶೋಧನಾ ವರದಿಗಳು ಶುಂಠಿಯು ಹೃದಯದ ತಡೆಗಳನ್ನು ಗುಣಪಡಿಸುವ ಗುಣವನ್ನು ಹೊಂದಿದೆ ಎಂದು ತೋರಿಸುತ್ತವೆ. ಆದರೆ ಇದು ಒಂದು ನಿರ್ದಿಷ್ಟ ಅವಧಿಯವರೆಗೆ ಸೇವಿಸಿದರೆ ಮಾತ್ರ ಅದು ತಡೆಯನ್ನು ತೆಗೆದುಹಾಕುತ್ತದೆ. ಈ ಸಂಶೋಧನ ವರದಿಗಳ ಪ್ರಕಾರ, ಶುಂಠಿಯಲ್ಲಿರುವ ಜಿಂಜರಾಲ್‌, ಫೆನಾಲಿಕ್‌ ಅಂಶಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ಹೃದಯದಲ್ಲಿರುವ ತಡೆಯನ್ನು ಕಡಿಮೆ ಮಾಡಿ ಹೃದಯದ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸುತ್ತವೆ ಎಂದು ಹೇಳುತ್ತವೆ. ಆದರೆ ಈ ಯಾವುದೇ ವರದಿಗಳಲ್ಲಿ ರಕ್ತನಾಳಗಳ ಬಿಲ್ಲೆಗಳ ಮೇಲೆ ಶುಂಠಿ ತ್ವರಿತ ಪರಿಣಾಮ ಬೀರುತ್ತದೆ ಎಂದು ಹೇಳಿಲ್ಲ. ಇದರರ್ಥ, ಹೃದಯ ಸಮಸ್ಯೆ ಇರುವವರು, ನಿತ್ಯದ ಆಹಾರದಲ್ಲಿ ಶುಂಠಿಯನ್ನು ಸೇರಿಸಿಕೊಳ್ಳಬಹುದಾಗಿದೆ.

ಹೃದಯಾಘಾತದ ವೇಳೆ ಶುಂಠಿಯನ್ನು ತಿನ್ನುವುದರಿಂದ ವ್ಯಕ್ತಿಯನ್ನು ರಕ್ಷಿಸಬಹುದು ಎಂಬ ಕುರಿತ ಕ್ಲೇಮ್‌ ಅನ್ನು ಈ ಮೊದಲು ನ್ಯೂಸ್‌ಚೆಕರ್‌ ಸತ್ಯಶೋಧನೆ ನಡೆಸಿದ್ದು, ಅದು ತಪ್ಪು ಎಂದು ಕಂಡುಬಂದಿದೆ. ಈ ವರದಿಯನ್ನು ಇಲ್ಲಿ ಓದಬಹುದು

ಅಮೃತ ಸ್ಕೂಲ್‌ ಆಫ್‌ ಆಯುರ್ವೇದ ಇದರ ಸಂಶೋಧನಾ ನಿರ್ದೇಶಕರಾದ ಡಾ.ಪಿ. ರಾಮಮನೋಹರ್‌ ಅವರ ಹೃದಯ ಸಮಸ್ಯೆಗೆ ಶುಂಠಿಯನ್ನು ತೆಗೆದುಕೊಳ್ಳುವ ಬಗ್ಗೆ ಪ್ರತಿಕ್ರಿಯಿಸಿದ್ದು, “ಹೃದಯಾಘಾತ ನಡೆದ ಕೂಡಲೇ ಮನೆಮದ್ದುಗಳನ್ನು ತತೆಗೆದುಕೊಳ್ಳುವುದು ಕೂಡಲೇ ರಕ್ತನಾಳದ ತಡೆಯನ್ನು ನಿವಾರಿಸಲು ಸಹಾಯ ಮಾಡುವುದಿಲ್ಲ. ರಕ್ತನಾಳದ ತಡೆಯನ್ನು ತೆಗೆಯಬೇಕಾದರೆ ಸೂಕ್ತರೀತಿಯ ಆಹಾರ ಮತ್ತು ಜೀವನಶೈಲಿಯ ಅಗತ್ಯವಿದೆ. ಇಲ್ಲಿಯವರೆಗೆ ಯಾವುದೇ ಔಷಧದಿಂದ ರಕ್ತನಾಳದ ತಡೆಯನ್ನು ತೆಗೆದು ಹಾಕುವುದಕ್ಕೆ ಸಾಧ್ಯವಾಗಿಲ್ಲ. ಇಂತಹ ಕ್ಲೇಮುಗಳಿಂದ ಚಿಕಿತ್ಸೆಯನ್ನು ತೆಗೆದುಕೊಳ್ಳುವುದನ್ನು ವಿಳಂಬಿಸಿದರೆ, ವ್ಯಕ್ತಿಯು ಹೃದಯಾಘಾತದಿಂದ ತೊಂದರೆಗೆ ಒಳಗಾಗಬಹುದು” ಎಂದು ಹೇಳಿದ್ದಾರೆ.

ಅಮೆರಿಕದ ಹೃದಯ ತಜ್ಞರಾದ ಡಾ ಡೀನ್‌ ಆರ್ನಿಶ್‌ ಅವರು ತೋರಿಸುವ ಪ್ರಕಾರ “ಹೃದಯದ ಅಡೆತಡೆಗಳನ್ನು ತೆಗೆದುಹಾಕುವುದು ನೀವು ಏನು ತಿನ್ನುತ್ತೀರಿ, ನೀವು ಒತ್ತಡವನ್ನು ಹೇಗೆ ನಿರ್ವಹಿಸುತ್ತೀರಿ, ನೀವು ಎಷ್ಟು ಚಲಿಸುತ್ತೀರಿ ಮತ್ತು ನಿಮಗೆ ಎಷ್ಟು ಪ್ರೀತಿ ಮತ್ತು ಬೆಂಬಲವಿದೆ ಎಂಬುದರ ಮೇಲೆ ಮತ್ತು ಆಹಾರ ಮತ್ತು ಜೀವನಶೈಲಿಯ ಮೇಲೆ ಅವಲಂಬಿತವಾಗಿದೆ” ಎಂದು ಹೇಳಿದ್ದಾರೆ.

ಆಯುರ್ವೇದ ವೈದ್ಯರಾದ ಅನಸೂಯ ಗೊಹಿಲ್‌ ಅವರ ಪ್ರಕಾರ, “ಇತ್ತೀಚಿನ ದಿನಗಳಲ್ಲಿ ಗಿಡಮೂಲಿಕೆಗಳು ಮತ್ತು ಆಯುರ್ವೇದ ಔಷಧಿಗಳ ಜನಪ್ರಿಯತೆಯೊಂದಿಗೆ, ಮಾನವ ದೇಹದ ಮೇಲೆ ಅವುಗಳ ಪರಿಣಾಮವನ್ನು ವೈಜ್ಞಾನಿಕವಾಗಿ ಅಧ್ಯಯನಗಳನ್ನು ಮಾಡಲಾಗುತ್ತಿದೆ, ಆದರೆ ಇದರೊಂದಿಗೆ ಬಹಳಷ್ಟು ಸುಳ್ಳು ಹೇಳಿಕೆಗಳು ಸಹ ಪ್ರಚಲಿತದಲ್ಲಿವೆ” ಎಂದು ಹೇಳಿದ್ದಾರೆ.

ಹೃದಯದಲ್ಲಿ ರಕ್ತ ಸಂಚಾರಕ್ಕೆ ತಡೆ ಉಂಟಾದರೆ, ವೈದ್ಯಕೀಯ ಪದ್ಧತಿಯಲ್ಲಿ ಆಂಜಿಯೋಪ್ಲಾಸ್ಟಿ, ಬೈಪಾಸ್‌ ಸರ್ಜರಿ, ತೆರೆದ ಹೃದಯ ಶಸ್ತ್ರ ಚಿಕಿತ್ಸೆಯಂತಹ ಪ್ರಕ್ರಿಯೆಗಳನ್ನು ಮಾಡಲಾಗುತ್ತದೆ. ಇವುಗಳ ಕುರಿತ ವಿವರಗಳನ್ನು ನೋಡೋಣ.

ಆಂಜಿಯೋಪ್ಲಾಸ್ಟಿ ಎನ್ನುವುದು ಹೃದಯದ ಮುಚ್ಚಿಹೋದ ಅಥವಾ ಕಿರಿದಾದ ಅಪಧಮನಿಗಳನ್ನು ಸರಿಪಡಿಸುವ ಶಸ್ತ್ರಚಿಕಿತ್ಸೆ ರಹಿತವಾದ ಪ್ರಕ್ರಿಯೆಯಾಗಿದೆ. ರಕ್ತನಾಳದಲ್ಲಿರುವ ತಡೆ ಅಥವಾ ಬ್ಲಾಕ್‌ಗಳು ಕೊಲೆಸ್ಟ್ರಾಲ್ ಅಥವಾ ಕೊಬ್ಬಿನಿಂದಾಗಿರುತ್ತದೆ. ಈ ಬ್ಲಾಕ್‌ಗಳು ರಕ್ತ ಹೆಪ್ಪುಗಟ್ಟುವ ಸಮಸ್ಯೆಗೆ ಕಾರಣವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹೃದಯಾಘಾತದ ಸಾಧ್ಯತೆ ಹೆಚ್ಚಿರುತ್ತದೆ. ಹೃದಯಾಘಾತವನ್ನು ಹೃದಯದ ಸುತ್ತ ಮತ್ತು ಎಡದ ಕೈನಲ್ಲಿ ತೀವ್ರ ನೋವಿನ ಮೂಲಕ ಗುರುತಿಸಬಹುದು. ಹೃದಯಕ್ಕೆ ರಕ್ತ ಮತ್ತು ಆಮ್ಲಜನಕವನ್ನು ಸಾಗಿಸುವ ರಕ್ತನಾಳವು ನಿರ್ಬಂಧಿಸಿದಾಗ ಹೃದಯಾಘಾತ ಸಂಭವಿಸುತ್ತದೆ.

ಆಂಜಿಯೋಗ್ರಫಿಯನ್ನು ಮಾಡಿದ ಕೂಡಲೇ ಆಂಜಿಯೋಪ್ಲಾಸ್ಟಿಯನ್ನು ಮಾಡಲಾಗುತ್ತದೆ. ಆಂಜಿಯೋಗ್ರಫಿ ಪ್ರಕ್ರಿಯೆಯಲ್ಲಿ ಆಂಜಿಯೋಗ್ರಾಮ್‌ ಎಂದು ಕರೆಯಲಾಗುವ ಚಿತ್ರಗಳನ್ನು ತೆಗೆಯಲಾಗುತ್ತದೆ. ಇದು ಹೃದಯದ ರಕ್ತನಾಳದಲ್ಲಿ ಆದ ತಡೆಯ ಸರಿಯಾದ ಪ್ರದೇಶವನ್ನು ಗುರುತಿಸುತ್ತದೆ. ಆಂಜಿಯೋಪ್ಲಾಸ್ಟಿ ಎನ್ನುವುದು ಹೃದಯದ ಮುಚ್ಚಿಹೋದ ಅಥವಾ ಕಿರಿದಾದ ಅಪಧಮನಿಗಳನ್ನು ಸರಿಪಡಿಸುವ ಶಸ್ತ್ರಚಿಕಿತ್ಸೆ ರಹಿತವಾದ ಪ್ರಕ್ರಿಯೆ. ರಕ್ತನಾಳದ ದೊಡ್ಡ ಪ್ರದೇಶದಲ್ಲಿ ತಡೆ ಇದ್ದರೆ, ಅದನ್ನು ಶಸ್ತ್ರ ಚಿಕಿತ್ಸೆ ಇಲ್ಲದೆ ಸರಿಪಡಿಸಲು ಸಾಧ್ಯವಿಲ್ಲ. ಇದಕ್ಕಾಗಿ ವೈದ್ಯರು ಇತರ ಚಿಕಿತ್ಸಾ ಪ್ರಕ್ರಿಯೆಗಳಾದ ಬೈಪಾಸ್‌ ಅಥವಾ ತೆರೆದ ಹೃದಯ ಶಸ್ತ್ರ ಚಿಕಿತ್ಸೆಯನ್ನು ಮಾಡುತ್ತಾರೆ.

ಆಂಜಿಯೋಪ್ಲಾಸ್ಟಿ ಅಂದರೇನು?

ಒಂದು ಬಾರಿ ಆಂಜಿಯೋಗ್ರಾಮ್‌ ಮೂಲಕ ರಕ್ತನಾಳದ ತಡೆಯನ್ನು ಸರಿಯಾಗು ಗುರುತಿಸಿದ ಬಳಿಕ ವೈದ್ಯರು, ಆಂಜಿಯೋಪ್ಲಾಸ್ಟಿ ಪ್ರಕ್ರಿಯೆಯನ್ನು ನಡೆಸುತ್ತಾರೆ. ತೆಳುವಾದ ಅಥವಾ ಕಿರಿದಾದ ಕ್ಯಾಥೆಟರ್ ಎಂಬ ಹೊಂದಿಕೊಳ್ಳುವ ಟ್ಯೂಬ್‌ ಅನ್ನು ರಕ್ತನಾಳಕ್ಕೆ ಸೇರಿಸುವ ಮೂಲಕ ಈ ಪ್ರಕ್ರಿಯೆ ಶುರುವಾಗುತ್ತದೆ. ಅನಂತರ ಈ ಕ್ಯಾತೆಟರ್‌ ಅನ್ನು ಸರಿಯಾದ ಪ್ರದೇಶದಲ್ಲಿ ಇರಿಸಿದ ಬಳಿಕ ಬಲೂನ್‌ ಅನ್ನು ಸೇರಿಸುತ್ತಾರೆ. ಬಲೂನ್‌ ಸರಿಯಾದ ಪ್ರದೇಶವನ್ನು ತಲುಪಿದಾಗ, ಆ ಪ್ರದೇಶವನ್ನು ವಿಸ್ತರಿಸುವಂತೆ,  (ತಡೆ ಇರುವ ಜಾಗದಲ್ಲಿ ರಕ್ತ ಸರಾಗವಾಗಿ ಹರಿಯುವಂತೆ) ಬಲೂನ್‌ ಅನ್ನು ಉಬ್ಬಿಸುತ್ತಾರೆ. ಆದರೆ ರಕ್ತನಾಳದ ತಡೆ ಇರುವ ಪ್ರದೇಶವನ್ನು ಬಿಡಿಸಿದ್ದರೂ ಮತ್ತು ತಡೆಯಾಗುವ ಸಾಧ್ಯತೆ ಇರುತ್ತದೆ. ಅಂತಹ ಸನ್ನಿವೇಶದಲ್ಲಿ ಅಪಾಯವನ್ನು ಕಡಿಮೆ ಮಾಡಲು ವೈದ್ಯರು ಸ್ಟೆಂಟ್‌ ಅನ್ನು ಹಾಕುತ್ತಾರೆ.

ಬೈಪಾಸ್ ಸರ್ಜರಿ ಎಂದರೇನು?

ಹೃದಯವನ್ನು ತಲುಪುವ ರಕ್ತನಾಳಕ್ಕೆ ತೊಡಕು ಬಂದಾಗ, ರಕ್ತದ ಹರಿವಿಗೆ ಹೊಸ ಅಭಿಧಮನಿಯನ್ನು ಒದಗಿಸುವುದು ಬೈಪಾಸ್‌ ಸರ್ಜರಿ ಅಥವಾ ಶಸ್ತ್ರಚಿಕಿತ್ಸೆ. ಈ ಪ್ರಕ್ರಿಯೆಯಲ್ಲಿ ಕಾಲು, ತೋಳು ಅಥವಾ ಎದೆಯಿಂದ ಆರೋಗ್ಯಕರ ರಕ್ತನಾಳವನ್ನು ತೆಗೆದುಕೊಂಡು ಅದನ್ನು ನಿರ್ಬಂಧಿಸಿದ ಅಭಿಧಮನಿಯ ಕೆಳಗೆ ಅಥವಾ ಮೇಲಕ್ಕೆ ಸಂಪರ್ಕಿಸಲಾಗುತ್ತದೆ.

Conclusion

ಈ ಸತ್ಯ ಶೋಧನೆಯ ಪ್ರಕಾರ, ಹೃದಯದ ರಕ್ತ ನಾಳಗಳ ಬ್ಲಾಕ್‌ ಸಮಸ್ಯೆಗೆ ತಕ್ಷಣಕ್ಕೆ ಮನೆಮದ್ದು ಆಯುರ್ವೇದ ಔಷಧ, ಶುಂಠಿ, ಬೆಳ್ಳುಳ್ಳಿ, ನಿಂಬೆ ರಸ ಇತ್ಯಾದಿಗಳನ್ನು ಬಳಸುವುದು ಪರಿಣಾಮಕಾರಿಯಲ್ಲ, ಉತ್ತಮ ಆಹಾರ, ಜೀವನಶೈಲಿಯಿಂದ ಪರಿಹಾರ ಕಾಣಬಹುದು.

Result: False

Our Sources:

Angioplasty – StatPearls – NCBI Bookshelf (nih.gov)

Myocardial Infarction – StatPearls – NCBI Bookshelf (nih.gov)

The Amazing and Mighty Ginger – Herbal Medicine – NCBI Bookshelf (nih.gov)

Ginger on Human Health: A Comprehensive Systematic Review of 109 Randomized Controlled Trials – PMC (nih.gov)

Indian Spices for Healthy Heart – An Overview – PMC (nih.gov)

Anti-Oxidative and Anti-Inflammatory Effects of Ginger in Health and Physical Activity: Review of Current Evidence – PMC (nih.gov)

Myocardial Infarction – StatPearls – NCBI Bookshelf (nih.gov)

UnDo It With Ornish | Ornish Lifestyle Medicine

(This article has been published in collaboration with THIP Media)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.