Fact Check: ಮಂಗಳೂರಿನ ವಿವಾದಿತ ಮಳಲಿ ಮಸೀದಿಯಲ್ಲಿ ಹಿಂದೂ ಕಾರ್ಯಕರ್ತರಿಂದ ಹೋಮ, ವೈರಲ್‌ ಕ್ಲೇಮಿನ ಹಿಂದಿನ ಸತ್ಯ ಏನು?

ಮಳಲಿ ಮಸೀದಿ, ಹಿಂದೂ ಕಾರ್ಯಕರ್ತರು, ಧಾರ್ಮಿಕ ಕಾರ್ಯಕ್ರಮ

Claim
ಮಂಗಳೂರಿನ ವಿವಾದಿತ ಮಳಲಿ ಮಸೀದಿಯಲ್ಲಿ ಹಿಂದೂ ಕಾರ್ಯಕರ್ತರಿಂದ ಹೋಮ, ಧಾರ್ಮಿಕ ಕಾರ್ಯಕ್ರಮ

Fact
ಮಳಲಿ ಮಸೀದಿಯಲ್ಲಿ ಯಾವುದೇ ರೀತಿಯ ಹಿಂದೂ ಧಾರ್ಮಿಕ ಕಾರ್ಯಕ್ರಮ ನಡೆದಿಲ್ಲ, ಮತ್ತು ಕಾರ್ಯಕ್ರಮ ನಡೆದಿದ್ದು ಸಮೀಪದ ರಾಮಾಂಜನೇಯ ಭಜನಾ ಮಂದಿರದಲ್ಲಿ

ವಿವಾದಿತ ಮಳಲಿ ಮಸೀದಿ ಜಾಗದಲ್ಲಿ ಹಿಂದೂ ದೇಗುಲ ನಿರ್ಮಾಣಕ್ಕಾಗಿ ಹಿಂದೂ ಕಾರ್ಯಕರ್ತರು ಹೋಮ ನಡೆಸಿದ್ದಾರೆ ಎಂಬ ಕ್ಲೇಮ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಕುರಿತು ಕ್ಲೇಮ್‌ ಒಂದರಲ್ಲಿ “Hindu mob entered Malali Masjid Mangaluru of Dakshina Kanada and started Bhajat-Kirtan, Havan. BJP MLA Bharat Shetty was also in the crowd.” (ಹಿಂದೂ ಗುಂಪೊಂದು ದಕ್ಷಿಣ ಕನ್ನಡದ ಮಂಗಳೂರಿನ ಮಳಲಿ ಮಸೀದಿಗೆ ನುಗ್ಗಿ ಭಜನೆ, ಕೀರ್ತನೆ, ಹವನಗಳನ್ನು ನಡೆಸಿದೆ. ಆ ಗುಂಪಿನಲ್ಲಿ ಬಿಜೆಪಿ ಶಾಸಕ ಭರತ್‌ ಶೆಟ್ಟಿ ಕೂಡ ಇದ್ದರು) ಎಂದಿದೆ. ಈ ಕ್ಲೇಮ್‌ ಅನ್ನು ಇಲ್ಲಿ ನೋಡಬಹುದು.

ಮಂಗಳೂರಿನ ವಿವಾದಿತ ಮಳಲಿ ಮಸೀದಿಯಲ್ಲಿ ಹಿಂದೂ ಕಾರ್ಯಕರ್ತರಿಂದ ಹೋಮ
ಕ್ಲೇಮಿನ ಸ್ಕ್ರೀನ್‌ಶಾಟ್‌

ಇದೇ ರೀತಿಯ ವಿವಿಧ ಕ್ಲೇಮ್‌ ಇರುವ ಟ್ವೀಟ್‌ಗಳು ಟ್ವಿಟರ್‌ನಲ್ಲಿ ಕಂಡು ಬಂದಿವೆ. “ಕರ್ನಾಟಕದ ಮಂಗಳೂರಿನ ಮಳಲಿ ಮಸೀದಿಯೊಳಗೆ ಹಿಂದೂ ಪ್ರಾಬಲ್ಯವಾದಿಗಳು ಬಲವಂತವಾಗಿ ಪ್ರವೇಶಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಅದೂ ಬಿಜೆಪಿ ಶಾಸಕರ ಸಮ್ಮುಖದಲ್ಲಿ! ಪ್ರಚೋದನೆ ಮತ್ತು ಕೀಳರಿಮೆಗೆ ಇದೊಂದು ಪ್ರದರ್ಶನವಾಗಿದ್ದು, ಬೊಮ್ಮಾಯಿ ಸರ್ಕಾರ ಈ ಬಗ್ಗೆ ಮೌನವಾಗಿದೆ. ಕರ್ನಾಟಕ ಚುನಾವಣೆಗೆ ಕೋಮು ಧ್ರುವೀಕರಣ ಅವರ ತಂತ್ರವಾಗಿದೆ ಎಂದು ಇವುಗಳಲ್ಲಿ ಹೇಳಲಾಗಿದೆ.” ಈ ಕುರಿತ ಟ್ವೀಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಈ ಕುರಿತು ನ್ಯೂಸ್‌ಚೆಕರ್‌ ಸತ್ಯಶೋಧನೆಯನ್ನು ನಡೆಸಿದ್ದು, ಇದೊಂದು ತಪ್ಪು ಕ್ಲೇಮ್‌ ಎಂಬುದನ್ನು ಕಂಡುಕೊಂಡಿದೆ.

Fact Check/ Verification

ಸತ್ಯಶೋಧನೆಗಾಗಿ ನ್ಯೂಸ್‌ಚೆಕರ್‌ ಗೂಗಲ್‌ ಕೀವರ್ಡ್ ಸರ್ಚ್ ನಡೆಸಿದ್ದು, ಕನ್ನಡದಲ್ಲಿ “ಮಳಲಿ ಮಸೀದಿ, ಹೋಮ” ಎಂದು ಕೊಡಲಾಗಿದೆ. ಈ ವೇಳೆ ಹಲವು ವರದಿಗಳು ಲಭ್ಯವಾಗಿವೆ.

ಮಾರ್ಚ್ 16, 2023ರಂದು ಟಿವಿ 9 ಕನ್ನಡ ಪ್ರಕಟಿಸಿದ ವರದಿಯ ಪ್ರಕಾರ, “ಮಳಲಿ ಮಸೀದಿ ಜಾಗದಲ್ಲಿ ಮಂದಿರ ಇತ್ತು ಎನ್ನುವ ವಿಚಾರಕ್ಕೆ ಸಂಬಂಧಿಸಿ ಮಂದಿರ ನಿರ್ಮಾಣ ವಿಚಾರಕ್ಕೆ ಹಿಂದೂ ಪರ ಸಂಘಟನೆ ಇಂದು ಗಣಹೋಮ ನೆರವೇರಿಸಿದೆ. ಮಳಲಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಗಣಹೋಮ ನಡೆದಿದೆ. ಮಳಲಿ ಮಸೀದಿ ವಿವಾದ ಕುರಿತಂತೆ ತಾಂಬೂಲ ಪ್ರಶ್ನೆ ಬಳಿಕ ಪ್ರಶ್ನೆ ಚಿಂತನೆಯಲ್ಲಿ ಕಂಡಂತೆ ಈ ಹೋಮ ನೆರವೇರಿಸಲಾಗಿದೆ” ಎಂದು ಹೇಳಲಾಗಿದೆ.

ಮಂಗಳೂರಿನ ವಿವಾದಿತ ಮಳಲಿ ಮಸೀದಿಯಲ್ಲಿ ಹಿಂದೂ ಕಾರ್ಯಕರ್ತರಿಂದ ಹೋಮ
ಟಿವಿ9 ಕನ್ನಡ ವರದಿ

ಮಾರ್ಚ್‌ 16, 2023ರಂದು ನ್ಯೂಸ್‌ಫಸ್ಟ್‌ ಲೈವ್ ಪ್ರಕಟಿಸಿದ ವರದಿಯ ಪ್ರಕಾರ “ಮಳಲಿ ಮಸೀದಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಗಾವಿದ್ದ ಜಾಗದಲ್ಲಿ ಮಂದಿರವಿತ್ತು ಎಂಬ ವಿಚಾರಕ್ಕೆ ಸಂಬಂಧಿಸಿ ಇಂದು ವಿಶ್ವ ಹಿಂದೂ ಪರಿಷತ್ ಮಹಾಗಣಯಾಗ ನೆರವೇರಿಸಿದೆ. ಮಂದಿರ ನಿರ್ಮಾಣಕ್ಕೆ ಗಣಪತಿ ಹೋಮ ಮಾಡುವ ಮೂಲಕ ಸಂಕಲ್ಪ ಮಾಡಿದ್ದಾರೆ” ಎಂದು ಹೇಳಿದೆ.

Also Read: ಆಗುಂಬೆ ಘಾಟಿ ರಸ್ತೆಯಲ್ಲಿ ಹುಲಿ ಕಾಣಿಸಿಕೊಂಡಿದೆಯೇ, ವೈರಲ್‌ ವೀಡಿಯೋ ನಿಜವೇ?

ಮಾರ್ಚ್‌ 16, 2023ರಂದು ವಿಸ್ತಾರ ನ್ಯೂಸ್‌ ಪ್ರಕಟಿಸಿದ ವರದಿಯ ಪ್ರಕಾರ “ಮಂಗಳೂರು ಹೊರವಲಯದಲ್ಲಿರುವ ಮಳಲಿ ಮಸೀದಿ ಜಾಗದಲ್ಲಿ ಮಂದಿರ ವಿವಾದ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವಂತೆಯೇ, ಆ ಜಾಗದಲ್ಲಿ ಮಂದಿರ ನಿರ್ಮಾಣ ಮಾಡುವ ಸಂಕಲ್ಪವನ್ನು ಹಿಂದೂ ಪರ ಸಂಘಟನೆಗಳು ಮಾಡಿವೆ. ಈ ಹಿನ್ನೆಲೆಯಲ್ಲಿ ಮಳಲಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ಗಣಹೋಮ ನಡೆಸಿದ್ದು ಯಾಗಕ್ಕೆ ಮಸೀದಿ ಜಾಗದ ಮಣ್ಣನ್ನು ಸಮರ್ಪಣೆ ಮಾಡಲಾಗಿದೆ” ಎಂದಿದೆ. ಜೊತೆಗೆ “ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದ್ದು ಶಾಸಕ ಭರತ್‌ ಶೆಟ್ಟಿ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಇದ್ದರು” ಎಂದು ವರದಿ ಹೇಳಿದೆ.

ಮಂಗಳೂರಿನ ವಿವಾದಿತ ಮಳಲಿ ಮಸೀದಿಯಲ್ಲಿ ಹಿಂದೂ ಕಾರ್ಯಕರ್ತರಿಂದ ಹೋಮ
ವಿಸ್ತಾರ ನ್ಯೂಸ್‌ ವರದಿ

ಜೊತೆಗೆ ಈ ಬಗ್ಗೆ ಮಂಗಳೂರು ಕಮಿಷನರೇಟ್‌ನ, ಕಾನೂನು ಸುವ್ಯವಸ್ಥೆ ಕುರಿತ ಡಿಸಿಪಿ  ಅನ್ಶು ಕುಮಾರ್‌ ಅವರನ್ನು ನ್ಯೂಸ್‌ಚೆಕರ್‌ ಸಂಪರ್ಕಿಸಿದ್ದು, ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮ ಏನೂ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತ ಹೆಚ್ಚಿನ ಮಾಹಿತಾಗಿ ಉದಯವಾಣಿ ಪತ್ರಿಕೆಯ ಸ್ಥಳೀಯ ವರದಿಗಾರ, ಸುಬ್ರಾಯ ನಾಯಕ್‌ ಅವರನ್ನು ಸಂಪರ್ಕಿಸಲಾಗಿದ್ದು, ಅವರು ನ್ಯೂಸ್‌ಚೆಕರ್‌ಗೆ ಪ್ರತಿಕ್ರಿಯಿಸಿ “ಮಳಲಿ ಮಸೀದಿ ವಿವಾದ ಶುರುವಾದಾಗಿನಿಂದ ಮಸೀದಿಯಲ್ಲಿ ಪೊಲೀಸ್‌ ಪಹರೆಯಿದ್ದು, ಯಾರೊಬ್ಬರೂ ಸುಲಭವಾಗಿ ಮಸೀದಿ ಪ್ರವೇಶಿಸುವುದು ಸಾಧ್ಯವಿಲ್ಲ. ಮತ್ತು ಮಸೀದಿ ವಿವಾದಕ್ಕೆ ಸಂಬಂಧಿಸಿ, ಹಿಂದೂ ಸಂಘಟನೆಗಳು ಮಸೀದಿಯಿಂದ 200-300 ಮೀಟರಿನಷ್ಟು ದೂರದಲ್ಲಿರುವ ರಾಮಾಂಜನೇಯ ಭಜನಾ ಮಂದಿರದಲ್ಲಿ ಹೋಮ, ಧಾರ್ಮಿಕ ಕಾರ್ಯಕ್ರಮ ನಡೆಸಿವೆ” ಎಂದು ತಿಳಿಸಿದ್ದಾರೆ.

ಏನಿದು ಮಳಲಿ ಮಸೀದಿ ವಿವಾದ?

ಮಂಗಳೂರು ಹೊರವಲಯದ ಗಂಜಿಮಠ ಬಳಿಯ ಮಳಲಿ ಬಳಿ ಅಸಯ್ಯಿದ್ ಅಬ್ದುಲ್ಲಾ ಹಿಲ್ ಮದನಿ ದರ್ಗಾವನ್ನು ನವೀಕರಣಕ್ಕಾಗಿ ಕೆಡವಿದಾಗ ಹಿಂದೂ ದೇಗುಲ ಹೋಲುವ ವಾಸ್ತುಶಿಲ್ಪದ ಕಟ್ಟಡ ಪತ್ತೆಯಾಗಿತ್ತು. ಈ ಬಗ್ಗೆ ಅಷ್ಟಮಂಗಲ ಪ್ರಶ್ನೆಗೆ ವಿಶ್ವ ಹಿಂದೂ ಪರಿಷತ್ ಮುಂದಾಗಿತ್ತು. ಆದರೆ ಇದು ಸಾಧ್ಯವಾಗದ ಹಿನ್ನೆಲೆಯಲ್ಲಿ ತಾಂಬೂಲ ಪ್ರಶ್ನೆ ವಿಧಾನದಿಂದ ಪರಿಶೀಲಿಸಿದಾಗ ದೈವ ಸಾನ್ನಿಧ್ಯ ಇರುವುದು ಗೋಚರಿಸಿತ್ತು ಎನ್ನಲಾಗಿದೆ. ಇದು ರಾಜ್ಯಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಈ ಸಂಬಂಧ ಹಿಂದೂಪರ ಸಂಘಟನೆಗಳು ಮತ್ತು ಮುಸ್ಲಿಂ ಸಂಘಟನೆಗಳ ಕಾನೂನು ತಿಕ್ಕಾಟಕ್ಕೆ ಕಾರಣವಾಗಿತ್ತು. ಆ ಪ್ರಶ್ನಾಚಿಂತನೆಯಲ್ಲಿ ಕಂಡತೆ, ಗಣಪತಿ ಹೋಮ, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಹಿಂದೂ ಸಂಘಟನೆಗಳು ಮುಂದಾಗಿದ್ದವು.  

ಇನ್ನೂ ಹೆಚ್ಚಿನ ಖಚಿತತೆಗೆ ಮಳಲಿ ಪ್ರದೇಶವನ್ನು ಗೂಗಲ್‌ ನಕ್ಷೆಯ ಮೂಲಕ ಪರಿಶೀಲಿಸಲಾಗಿದ್ದು, ಈ ವೇಳೆ ಮಳಲಿ ಮಸೀದಿ ಮತ್ತು ರಾಮಾಂಜನೇಯ ಭಜನಾ ಮಂದಿರಕ್ಕೆ ಸುಮಾರು 160 ಮೀಟರ್‌ ದೂರವಿರುವುದು ಗೊತ್ತಾಗಿದೆ. ಈ ಕುರಿತ ಗೂಗಲ್‌ ನಕ್ಷೆಯ ಮಾಹಿತಿಯನ್ನು ಇಲ್ಲಿ ನೋಡಬಹುದು.

ಮಂಗಳೂರಿನ ವಿವಾದಿತ ಮಳಲಿ ಮಸೀದಿ ಮತ್ತು ರಾಮಾಂಜನೇಯ ಮಂದಿರ ಇರುವ ಸ್ಥಳ. (ಕೃಪೆ: ಗೂಗಲ್‌ ಮ್ಯಾಪ್‌)

Conclusion

ಈ ಸತ್ಯಶೋಧನೆಯ ಪ್ರಕಾರ, ವಿವಾದಿತ ಮಸೀದಿ ವಿಚಾರದಲ್ಲಿ ಹಿಂದೂ ಕಾರ್ಯಕರ್ತರು, ಮಳಲಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಿದ್ದಾರೆ. ಆದರೆ ಬಲವಂತವಾಗಿ ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಲಾಗಿದೆ ಎನ್ನುವುದು ತಪ್ಪು ಕ್ಲೇಮ್‌ ಆಗಿದೆ.

Results: False

Our Sources:

Conversation with DCP Law & Order ANSHU KUMAR IPS, Mangalore Police Commissionerate

Conversation with Udayvani Reporter, Subraya Nayak Bajpe

Report by Tv9 Kannada, Dated: March 16, 2023

Report by Newsfirst live, Dated: March 16, 2023

Report by Vistara News, Dated: March 16, 2023


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.