ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸಂದರ್ಭ ‘ರೋಜಾ ‘ (ರಂಜಾನ್ ಸಮಯದಲ್ಲಿ ಆಚರಿಸಲಾಗುವ ಉಪವಾಸ) ಮುರಿದಿದ್ದಕ್ಕಾಗಿ ಭಾರತೀಯ ಕ್ರಿಕೆಟಿಗ, ವೇಗಿ ಮೊಹಮ್ಮದ್ ಶಮಿ ಮುಸ್ಲಿಂ ಸಮುದಾಯದವರಲ್ಲಿ ಕ್ಷಮೆಯಾಚಿಸುತ್ತಿರುವುದನ್ನು ತೋರಿಸುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ವೀಡಿಯೋದಲ್ಲಿ, ಶಮಿ ಅವರು, “…ನಾನು ಆ ದಿನ ರೋಜಾ ಮುರಿದೆ. ಮುಸ್ಲಿಂ ಸಹೋದರ ಸಹೋದರಿಯರೇ, ದಯವಿಟ್ಟು ನನ್ನನ್ನು ತಪ್ಪಾಗಿ ಭಾವಿಸಬೇಡಿ. ನಾನು ಅದನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ. ರೋಜಾ ಮುರಿಯುವಂತೆ ಒತ್ತಾಯಿಸಲಾಯಿತು , ಇಲ್ಲದಿದ್ದರೆ ಆ ಜನರು ನನ್ನ ವೃತ್ತಿಜೀವನವನ್ನು ನಾಶಪಡಿಸುತ್ತಿದ್ದರು. ನಾನು ಮತ್ತೊಮ್ಮೆ ನನ್ನ ಮುಸ್ಲಿಂ ಸಹೋದರ ಸಹೋದರಿಯರಲ್ಲಿ ಕ್ಷಮೆಯಾಚಿಸುತ್ತೇನೆ” ಎಂದು ಹೇಳಿದ್ದಾನೆ.
ಕ್ರಿಕೆಟಿಗ ತನ್ನ ಉಪವಾಸವನ್ನು ಏಕೆ ಮುರಿದರು ಎಂಬುದನ್ನು “ವಿವರಿಸುತ್ತಿದ್ದಾರೆ” ಎಂದು ಹೇಳಿಕೊಂಡು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೋ ಹಣಂಚಿಕೊಂಡಿದ್ದಾರೆ. ಆದರೂ ಈ ವೀಡಿಯೋ ವನ್ನು ಎಐ ಮೂಲಕ ಮಾಡಲಾಗಿದೆ ಎಂಬುದನ್ನು ನ್ಯೂಸ್ ಚೆಕರ್ ಕಂಡುಹಿಡಿದಿದೆ.

ಅಂತಹ ಪೋಸ್ಟ್‌ಗಳನ್ನು ಇಲ್ಲಿ , ಇಲ್ಲಿ ಮತ್ತು ಇಲ್ಲಿ ನೋಡಬಹುದು .
ಇತ್ತೀಚೆಗೆ ಮುಸ್ಲಿಮರ ಪವಿತ್ರ ರಂಜಾನ್ ಮಾಸದ ಸಂದರ್ಭದಲ್ಲೇ ನಡೆದ ಐಸಿಸಿ ಟೂರ್ನಮೆಂಟ್‌ನಲ್ಲಿ ಶಮಿ ಪಾನೀಯ ಸೇವಿಸುತ್ತಿರುವ ದೃಶ್ಯಗಳು ವ್ಯತಿರಿಕ್ತ ಅಭಿಪ್ರಾಯಕ್ಕೆ ಕಾರಣವಾಯಿತು. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಅವರು ಉಪವಾಸ ಮುರಿದಿದ್ದಕ್ಕೆ ಟೀಕಿಸಿದರೆ, ಇತರರು ಅವರ ಬೆಂಬಲಕ್ಕೆ ಬಂದರು.
ಅಖಿಲ ಭಾರತ ಮುಸ್ಲಿಂ ಜಮಾಅತ್ನ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ, ರೋಜಾ ಆಚರಿಸದ ಕಾರಣ ಶಮಿ ಅವರನ್ನು ಶರಿಯತ್ (ಇಸ್ಲಾಮಿಕ್ ಕಾನೂನು) ದೃಷ್ಟಿಯಲ್ಲಿ “ಅಪರಾಧಿ” ಎಂದು ಕರೆದರು . ಅವರ ಹೇಳಿಕೆಗಳು ವ್ಯಾಪಕ ಟೀಕೆಗೆ ಗುರಿಯಾದವು, ಇತರ ಮುಸ್ಲಿಂ ಧರ್ಮಗುರುಗಳು ಶಮಿಯ ಪರವಾಗಿ ನಿಂತರು .
Fact Check/Verification
ಶಮಿ ಅವರದ್ದು ಎನ್ನಲಾದ ಕ್ಲಿಪ್ ಅನ್ನು ಎಚ್ಚರಿಕೆಯಿಂದ ವಿಶ್ಲೇಷಿಸಿದಾಗ, ಅವರ ತುಟಿ ಚಲನೆಗಳು ಮತ್ತು ಆಡಿಯೋ ಪರಸ್ಪರ ಹೊಂದಿಕೆಯಾಗುತ್ತಿಲ್ಲ ಎಂದು ನಾವು ಗಮನಿಸಿದ್ದೇವೆ.
ಅನಂತರ ನಾವು ಗೂಗಲ್ ಲೆನ್ಸ್‌ನಲ್ಲಿ ವೈರಲ್ ಕ್ಲಿಪ್‌ನ ಕೀ ಫ್ರೇಮ್‌ಗಳನ್ನು ಸರ್ಚ್ ಮಾಡಿದ್ದೇವೆ. ಅದು ಏಪ್ರಿಲ್ 11, 2024 ರಂದು ಮೊಹಮ್ಮದ್ ಶಮಿ (@CircleofCricket.MDShami) ಅವರ ಫೇಸ್‌ಬುಕ್ ಪೋಸ್ಟ್‌ಗೆ ನಮ್ಮನ್ನು ಕರೆದೊಯ್ಯಿತು.
ವೈರಲ್ ಕ್ಲಿಪ್‌ನಲ್ಲಿ ಕಂಡುಬರುವಂತೆಯೇ ಶಮಿ ಅದೇ ಉಡುಗೆ ಮತ್ತು ಹಿನ್ನೆಲೆಯಲ್ಲಿ ಇರುವ ವೀಡಿಯೋವನ್ನು ಪೋಸ್ಟ್‌ನಲ್ಲಿದೆ. “ಈದ್‌ನ ಮಾಂತ್ರಿಕತೆಯು ನಿಮ್ಮ ಜೀವನದಲ್ಲಿ ಎಂದಿಗೂ ಮುಗಿಯದ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ. ಈದ್ ಮುಬಾರಕ್!” ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.

ಈ ವೀಡಿಯೋವನ್ನು ಏಪ್ರಿಲ್ 2024 ರಲ್ಲಿ ಕ್ರಿಕೆಟಿಗನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅದೇ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಲಾಗಿದೆ. ವೀಡಿಯೋದಲ್ಲಿ, ಶಮಿ ಜನರಿಗೆ ಈದ್‌ಗೆ ಶುಭ ಹಾರೈಸುತ್ತಾ, “.. ಈದ್‌ನಲ್ಲಿ ಸಿಹಿತಿಂಡಿಗಳನ್ನು ಆನಂದಿಸುತ್ತಲೇ ಇರಿ. ಇಂದು ಈದ್. ಈದ್ ಹಬ್ಬವನ್ನು ಚೆನ್ನಾಗಿ ಆಚರಿಸಿ” ಎಂದು ಹೇಳುತ್ತಿರುವುದು ಕೇಳಿಸುತ್ತದೆ.

ವೈರಲ್ ಕ್ಲಿಪ್‌ನ ಕೀಫ್ರೇಮ್‌ಗಳನ್ನು ಶಮಿ ಪೋಸ್ಟ್ ಮಾಡಿದ ವೀಡಿಯೋದ ಕೀಫ್ರೇಮ್‌ಗಳೊಂದಿಗೆ ಹೋಲಿಸಿದಾಗ, ಮೊದಲನೆಯದನ್ನು ತಿದ್ದಲಾಗಿದೆ ಎಂದು ಕಂಡುಬಂದಿದೆ.

ವೈರಲ್ ವೀಡಿಯೋದಲ್ಲಿ ಕಂಡುಬರುವ ರೀತಿ ಬಟ್ಟೆ ಹಾಕಿರುವ ಕ್ರಿಕೆಟಿಗನ ಫೋಟೋಗಳನ್ನು ಏಪ್ರಿಲ್ 11, 2024 ರಂದು ಶಮಿ ಅವರದ್ದೇ ಆದ ಇನ್ನೊಂದು ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ ನೋಡಿದ್ದೇವೆ.. “ನನ್ನ ಎಲ್ಲಾ ಆತ್ಮೀಯ ಸ್ನೇಹಿತರು ಮತ್ತು ಕುಟುಂಬಕ್ಕೆ ಈದ್ ಮುಬಾರಕ್… ಈ ವಿಶೇಷ ದಿನವು ನಿಮಗೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಸಂತೋಷ, ಪ್ರೀತಿ ಮತ್ತು ಆಶೀರ್ವಾದಗಳಿಂದ ತುಂಬಿರಲಿ. ಈ ಸಂತೋಷದಾಯಕ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ಹಾರೈಸುತ್ತೇನೆ” ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.
ಇದಲ್ಲದೆ, ಐಸಿಸಿ ಚಾಂಪಿಯನ್‌ಶಿಪ್ ಟ್ರೋಫಿಯ ಸಮಯದಲ್ಲಿ ರಂಜಾನ್ ಉಪವಾಸವನ್ನು ಮುರಿದಿದ್ದಕ್ಕಾಗಿ ಶಮಿ “ಕ್ಷಮೆಯಾಚಿಸಿದ್ದಾರೆ” ಎಂದು ಹೇಳುವ ಯಾವುದೇ ವರದಿಗಳು ನಮಗೆ ಕಂಡುಬಂದಿಲ್ಲ.
ನ್ಯೂಸ್ ಚೆಕರ್ ಒಂದು ಭಾಗವಾಗಿರುವ ದಿ ಮಿಸ್‌ಇನ್‌ಫಾರ್ಮೇಶನ್ ಕಾಂಬ್ಯಾಟ್ ಅಲೈಯನ್ಸ್ (ಎಂಸಿಎ) ನ ಡೀಪ್‌ಫೇಕ್ಸ್ ಅನಾಲಿಸಿಸ್ ಯೂನಿಟ್ (ಡಿಎಯು), ಹಿಯಾ ಎಐ ವಾಯ್ಸ್ ಡಿಟೆಕ್ಷನ್ ಟೂಲ್‌ನಲ್ಲಿನ ಆಡಿಯೊವನ್ನು ಪರಿಶೀಲಿಸಿತು, ಅದು “ಈ ಧ್ವನಿಯನ್ನು ಎಐ ಮೂಲಕ ರಚಿಸಿದಂತೆ ಅಥವಾ ಮಾರ್ಪಡಿಸಿದಂತೆ ತೋರುತ್ತದೆ” ಎಂದು ತೀರ್ಮಾನಿಸಿತು ಮತ್ತು ಲೈವ್ ಮಾನವ ಮಾರ್ಕರ್‌ಗಳೊಂದಿಗೆ ಕೇವಲ 4% ಹೊಂದಾಣಿಕೆಯನ್ನು ಕಂಡುಕೊಂಡಿತು, ಇದು ಶಮಿ ಅವರ ವೀಡಿಯೋವನ್ನು ಸುಳ್ಳು ಹೇಳಿಕೆ ನೀಡಲು ಡಿಜಿಟಲ್ ಆಗಿ ತಿದ್ದಲಾಗಿದೆ ಎಂದು ದೃಢಪಡಿಸಿದೆ.
Conclusion
ಸತ್ಯಶೋಧನೆಯ ಪ್ರಕಾರ, ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ ಭಾರತದ ಕ್ರಿಕೆಟಿಗ, ವೇಗಿ ಮೊಹಮ್ಮದ್ ಶಮಿ ರಂಜಾನ್ ಉಪವಾಸವನ್ನು ಆಚರಿಸದಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ ಎಂದು ಸುಳ್ಳು ಹೇಳಲು ಹಳೆಯ ವೀಡಿಯೋದ ಮೇಲೆ ಎಐನಿಂದ ರಚಿತವಾದ ಆಡಿಯೊವನ್ನು ಡಿಜಿಟಲ್ ರೂಪದಲ್ಲಿ ಅಂಟಿಸಲಾಗಿದೆ ಎಂದು ನಾವು ತೀರ್ಮಾನಿಸಬಹುದು.
Sources
Facebook Post By @CircleofCricket.MDShami, Dated: April 11, 2024
Instagram Post By @mdshami.11, Dated: April 11, 2024
DAU Analysis
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)