Authors
Claim
ಬರೇಲಿಯ ಎಸ್‌ಆರ್‌ಎಂಎಸ್ ಮೆಡಿಕಲ್ ಕಾಲೇಜಿನ ಪೋಸ್ಟ್‌ಮಾರ್ಟಮ್ ಹೌಸ್‌ನಲ್ಲಿ ತಾನಾಗಿಯೇ ಚಲಿಸಿದ ಬಿದಿರಿನ ಏಣಿ
Fact
ಬಿದಿರಿನ ಏಣಿ ತಾನಾಗಿಯೇ ಚಲಿಸಿದ್ದರ ಹಿಂದೆ ವೈಜ್ಞಾನಿಕ ಕಾರಣವಿದೆ. ಜೊತೆಗೆ ಇದು ಬರೇಲಿಯ ಎಸ್‌ಆರ್‌ಎಂಎಸ್ ಮೆಡಿಕಲ್ ಕಾಲೇಜಿನ ಪೋಸ್ಟ್‌ಮಾರ್ಟಮ್ ಹೌಸ್‌ನಲ್ಲಿ ನಡೆದಿದೆ ಎಂಬುದು ಖಚಿತವಾಗಿಲ್ಲ
ಮೆಡಿಕಲ್ ಕಾಲೇಜಿನ ಪೋಸ್ಟ್ ಮಾರ್ಟಂ ವಿಭಾಗದಲ್ಲಿ ಚಲಿಸಿದ ಏಣಿ ಎಂಬ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಕುರಿತು ವಾಟ್ಸಾಪ್ ನಲ್ಲಿ ಕಂಡುಬಂದ ಸಂದೇಶವೊಂದರಲ್ಲಿ, “ಉತ್ತರ ಪ್ರದೇಶದ ಬರೇಲಿಯ ಎಸ್‌ಆರ್‌ಎಂಎಸ್ ಮೆಡಿಕಲ್ ಕಾಲೇಜಿನ ಪೋಸ್ಟ್‌ಮಾರ್ಟಮ್ ಹೌಸ್‌ನಲ್ಲಿ ಯಾರ ಸಹಾಯವಿಲ್ಲದೆ ತನ್ನಿಂದ ತಾನಾಗಿಯೇ ನಡೆದ ಬಿದಿರಿನ ಏಣಿ!! ಭಯಾನಕ ವಿಡಿಯೋ ವೈರಲ್!!” ಎಂದಿದೆ.
Also Read: ಪೊಲೀಸರೊಂದಿಗೆ ಯುವತಿ ಆಕ್ರಮಣಕಾರಿ ವರ್ತನೆ, ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
ಈ ಕುರಿತು ಸತ್ಯಶೋಧನೆ ನಡೆಸುವಂತೆ ವಾಟ್ಸಾಪ್ ಬಳಕೆದಾರರೊಬ್ಬರು ನ್ಯೂಸ್‌ಚೆಕರ್ ವಾಟ್ಸಾಪ್ ಟಿಪ್‌ಲೈನ್ ಮೂಲಕ ವಿನಂತಿಸಿಕೊಂಡಿದ್ದು, ಅದನ್ನು ಅಂಗೀಕರಿಸಲಾಗಿದೆ.
ಸತ್ಯಶೋಧನೆಗಾಗಿ ನಾವು ಮೊದಲು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಹಲವು ಮಾಧ್ಯಮ ವರದಿಗಳು ಕಂಡುಬಂದಿವೆ.
ಸೆಪ್ಟೆಂಬರ್ 4, 2023ರ ನ್ಯೂಸ್18 ವರದಿಯ ಪ್ರಕಾರ, ಇದು ಎಸ್‌ಆರ್ ಎಂಎಸ್ ಮೆಡಿಕಲ್ ಕಾಲೇಜು ಬರೇಲಿ, ಉತ್ತರ ಪ್ರದೇಶದ ವೀಡಿಯೋವಾಗಿದ್ದು, ಬಿದಿರಿನ ಏಣಿ ನಡೆದಾಡುವ ದೃಶ್ಯ ವೈರಲ್ ಆಗಿದೆ ಎಂದಿದೆ. ಇದೇ ವರದಿಯಲ್ಲಿ ಈ ವೀಡಿಯೋ ಕಾಲೇಜಿನದ್ದೇ ಎಂದು ಕಾಲೇಜಿನ ಉಸ್ತುವಾರಿ ಡಾ.ಅಮಿತ್ ಸಿಂಗ್ ನೇಕಿ ಅವರು ಹೇಳಿದ್ದಾರೆ ಎಂದಿದೆ. ಆದರೆ ಕಾಲೇಜಿನ ಮುಖ್ಯ ವೈದ್ಯಕೀಯ ಅಧೀಕ್ಷಕರು ಇಂತಹ ಯಾವುದೇ ವರದಿಯನ್ನು ಕೇಳಿಲ್ಲ. ಪೋಸ್ಟ್ ಮಾರ್ಟಂ ವಿಭಾಗದಲ್ಲಿ ಏಣಿ ನಡೆಯುತ್ತಿರುವ ಬಗ್ಗೆ ಯಾವುದೇ ವೀಡಿಯೋ ಇಲ್ಲ ಎಂದು ಹೇಳಿದ್ದಾಗಿ ತಿಳಿಸಿದೆ.
ಸೆಪ್ಟೆಂಬರ್ 3, 2023ರ ಕಳಿಂಗ ಟಿವಿ ವರದಿಯಲ್ಲಿಯೂ ಬರೇಲಿ ಉತ್ತರ ಪ್ರದೇಶದ ಮೆಡಿಕಲ್ ಕಾಲೇಜಿನ ಪೋಸ್ಟ್ ಮಾರ್ಟಂ ವಿಭಾಗದಲ್ಲಿ ಬಿದಿರಿನ ಏಣಿ ನಡೆದಾಡುತ್ತಿರುವ ದೃಶ್ಯ ಪತ್ತೆಯಾಗಿದೆ ಎಂದಿದೆ. ಜೊತೆಗೆ ಹೀಗೆ ಏಣಿ ಚಲನೆಗೆ ಕಾರಣವಾಗಿರುವುದು ನ್ಯೂಟನ್ ಜಡತ್ವ ನಿಯಮವಾಗಿದೆ. ಈ ನಿಯಮದ ಪ್ರಕಾರ ಯಾವುದೇ ಬಾಹ್ಯ ಶಕ್ತಿಯ ಮಧ್ಯ ಪ್ರವೇಶದ ಹೊರತು ಇಳಿಜಾರಾದ ಮೇಲ್ಮೈಯಲ್ಲಿ ಜಡ ವಸ್ತು ತನ್ನ ಚಲನೆಯನ್ನು ಮುಂದುವರಿಸುತ್ತದೆ ಎಂದಿದೆ.
Also Read: ರಕ್ಷಾಬಂಧನ ದಿನ ಹಿಂದೂ ಹುಡುಗಿಗೆ ಕಿರುಕುಳ ನೀಡಿದ್ದಕ್ಕೆ ಮುಸ್ಲಿಂ ಯುವಕನಿಗೆ ಗುಜರಾತ್ ಪೊಲೀಸರು ಥಳಿಸಿದರೇ?
ಇದರೊಂದಿಗೆ ಇದೇ ವೀಡಿಯೋ ಉತ್ತರಾಖಂಡ ಮೂಲದ್ದು ಎನ್ನುವ ಹೇಳಿಕೆಯುಳ್ಳ ವೀಡಿಯೋಗಳನ್ನು ನಾವು ನೋಡಿದ್ದೇವೆ. ಆದ್ದರಿಂದ ಈ ವೀಡಿಯೋ ನಿರ್ದಿಷ್ಟವಾಗಿ ಬರೇಲಿಯ ಎಸ್‌ಆರ್‌ಎಂಎಸ್ ಮೆಡಿಕಲ್ ಕಾಲೇಜಿನ ಪೋಸ್ಟ್‌ಮಾರ್ಟಮ್ ಹೌಸ್‌ನದ್ದು ಎಂದು ಹೇಳಲು ನಮಗೆ ಸ್ವತಂತ್ರ್ಯವಾಗಿ ಸಾಧ್ಯವಾಗಲಿಲ್ಲ.
ನಾವು ಈ ಬಗ್ಗೆ ಇನ್ನಷ್ಟು ಶೋಧವನ್ನು ನಡೆಸಿದ್ದು ಫೆಬ್ರವರಿ 17, 2020ರ ವೇಳೆ ಡೈಲಿ ಮೇಲ್ ಯುಕೆನಲ್ಲಿ ಏಣಿಯೊಂದು ನಡೆದಾಡುತ್ತಿರುವ ವಿದ್ಯಮಾನದ ಬಗ್ಗೆ ವರದಿಯನ್ನು ನೋಡಿದ್ದೇವೆ. ಈ ವರದಿಯಲ್ಲಿ, ಇಳಿಜಾರಾದ ಪ್ರದೇಶದಲ್ಲಿ ಗುರುತ್ವಾಕರ್ಷಣ ಶಕ್ತಿಯಿಂದ ಏಣಿ ಚಲಿಸುತ್ತದೆ ಎಂದಿದೆ. ನಿರ್ದಿಷ್ಟ ವೀಡಿಯೋದ ಬಗ್ಗೆ ವರದಿಯಲ್ಲಿದ್ದು ಅದು ಹೈದ್ರಬಾದ್‌ನದ್ದು ಎಂದಿದೆ. ಇದರೊಂದಿಗೆ ಕೇರಳದ ವಿದ್ಯಮಾನದ ಬಗ್ಗೆಯೂ ವರದಿಯಲ್ಲಿದ್ದು, ಡಿಸೆಂಬರ್ 1, 2018ರ ಆ ವೀಡಿಯೋದಲ್ಲಿ ಇಳಿಜಾರು ಪ್ರದೇಶದಲ್ಲಿ ಏಣಿ ನಡೆಯುವಂತೆ ಕಾಣುತ್ತದೆ.
ಇಂತಹ ವೀಡಿಯೋಗಳ ಬಗ್ಗೆ ನಾವು ಯೂಟ್ಯೂಬ್‌ನಲ್ಲಿ ಸರ್ಚ್ ನಡೆಸಿದ್ದು ಹಲವು ಫಲಿತಾಂಶಗಳನ್ನು ಕಂಡುಕೊಂಡಿದ್ದೇವೆ. ಏಣಿ ನಡೆದಾಡುವ ಬಗ್ಗೆ ಫೆಬ್ರವರಿ 10, 2020ರಂದು ಹಾಂಕ್ ಹೈ ಬರ್ಗ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ವ್ಯಕ್ತಿಯೊಬ್ಬರು ಏಣಿಯನ್ನು ಇಳಿಜಾರಿನಲ್ಲಿ ನಡೆಯುತ್ತಿರುವಂತೆ ಮಾಡುವ ವೀಡಿಯೋವನ್ನು ನಾವು ನೋಡಿದ್ದೇವೆ.
ಇದೇ ರೀತಿ ರುಯ್ನಾ ಲ್ಯಾಬ್ ಎನ್ನುವ ಯೂಟ್ಯೂಬ್ ಚಾನೆಲ್‌ನಲ್ಲಿ ಆಗಸ್ಟ್ 2, 2017ರಂದು ಪೋಸ್ಟ್ ಮಾಡಲಾದ ವೀಡಿಯೋದಲ್ಲಿ “ಪಾಸಿವ್ ಡೈನಾಮಿಕ್ ವಾಕಿಂಗ್” ಶೀರ್ಷಿಕೆಯಲ್ಲಿ ಗುರುತ್ವಾಕರ್ಷಣೆ ಅನ್ವಯ ವಸ್ತುಗಳ ಚಲನೆಯ ಬಗ್ಗೆ ಹೇಳಲಾಗಿದೆ.
ಹೀಗೆ ‘ನಡೆದಾಡುವ ಏಣಿ’ ಕುರಿತಂತೆ ನಾವು ಹೆಚ್ಚಿನ ಮಾಹಿತಿಗೆ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್‌ನ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ರವಿಪ್ರಕಾಶ್ ಇಂದುಗುಳಿ ಇವರನ್ನು ಸಂಪರ್ಕಿಸಿದ್ದೇವೆ. ಅವರು ನ್ಯೂಸ್‌ಚೆಕರ್ ಗೆ ಪ್ರತಿಕ್ರಿಯಿಸಿ, ಇದನ್ನು ‘ಪಾಸಿವ್ ಡೈನಾಮಿಕ್ ವಾಕಿಂಗ್’ ಎಂದು ಕರೆಯಲಾಗುತ್ತದೆ, ಇದಕ್ಕೆ ಯಾವುದೇ ಬಾಹ್ಯ ಶಕ್ತಿಯ ಅಗತ್ಯವಿಲ್ಲ. ಗುರುತ್ವಾಕರ್ಷಣೆ ಮತ್ತು ಜಡತ್ವದಿಂದಾಗಿ ಇದು ಆಳವಿಲ್ಲದ ಇಳಿಜಾರಿನಲ್ಲಿ ಹೀಗಾಗುತ್ತದೆ. (ಒಂದೇ ಸ್ಥಿತಿಯಲ್ಲಿ ಉಳಿಯುವ ವಸ್ತುವಿನ ಪ್ರವೃತ್ತಿ). ದ್ರವ್ಯರಾಶಿಯ ಕೇಂದ್ರದ ವರ್ಗಾವಣೆಗೆ ವಸ್ತುಗಳ ಸಂಯೋಜನೆಯಲ್ಲಿರುವ ನಿಖರವಾದ ನಿಯಂತ್ರಣವು ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಪ್ರಮುಖವಾದ ಅಂಶವೆಂದರೆ ಅವುಗಳ ಕೀಲುಗಳಲ್ಲಿ ಮತ್ತು ಮೇಲ್ಮೈಯಲ್ಲಿ ಘರ್ಷಣೆಯು ತುಂಬಾ ಕಡಿಮೆಯಿರಬೇಕಾಗುತ್ತದೆ” ಎಂದು ಅವರು ಹೇಳಿದ್ದಾರೆ.
Conclusion
ಈ ಸತ್ಯಶೋಧನೆಯ ಪ್ರಕಾರ, ಬಿದಿರಿನ ಏಣಿ ನಡೆದಿದೆ ಎನ್ನವುದು ಸುಳ್ಳಾಗಿದ್ದು, ಒಂದು ಇಳಿಜಾರಾದ ಪ್ರದೇಶದಲ್ಲಿ ಏಣಿಯ ರೀತಿಯ ಸಂರಚನೆಯನ್ನು ಸ್ವಲ್ಪ ತಳ್ಳಿದರೆ, ಗುರುತ್ವಾಕರ್ಷಣೆ ಮತ್ತು ಜಡತ್ವದ ಕಾರಣದಿಂದ ಅದು ಚಲಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು.
Also Read: ಮ್ಯಾನ್ಮಾರ್ ನಿಂದ ಮಣಿಪುರಕ್ಕೆ ಕಳ್ಳದಾರಿಯಲ್ಲಿ ರೊಹಿಂಗ್ಯಾಗಳು ಬರುತ್ತಿದ್ದಾರೆಯೇ, ಸತ್ಯವೇನು?
Result: Missing Context
Our Sources
Report By News 18, Dated: September 4, 2023
Report By Kalinga TV, Dated: September 3, 2023
Report By Daily Mail UK, Dated: February 17, 2020
YouTube Video By Daily Mail UK, Dated: December 1, 2018
YouTube Video By Hank Heiberg, Dated: February 10, 2020
YouTube Video By Ruina Lab, Dated: August 2, 2017
Conversation with Prof. Raviprakash Induguli, Department of Physics, Manipal Institute of Technology
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.