Authors
ರಾಜ್ಯಕ್ಕೆ ಸಂಬಂಧಿಸಿದ ವಿಚಾರಗಳು, ಈ ವಾರದ ಟಾಪ್ ಕ್ಲೇಮ್ ಗಳಲ್ಲಿ ಸ್ಥಾನ ಪಡೆದಿವೆ. ಇದರಲ್ಲಿ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ರಾತ್ರಿ ಸಂಚಾರ ಅಪಾಯ, ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ರೈತರಿಗೆ ಅನ್ಯಾಯ, ಮಹಿಳೆಯರ ಉಚಿತ ಬಸ್ ಪ್ರಯಾಣ ಬಂದ್ ಮಾಡಲು ಹೈಕೋರ್ಟ್ ಆದೇಶ ಎಂಬ ವಿಚಾರಗಳು ಪ್ರಮುಖವಾಗಿದ್ದವು. ಇದು ಹೊರತಾಗಿ ಹೌರಾ ಸೇತುವೆಯಲ್ಲಿ ವಿರೂಪಗೊಳಿಸಿದ ತ್ರಿವರ್ಣ ಧ್ವಜ ಹಾರಾಟ, ಎಂಟಿ ಆರ್ ಕಂಪೆನಿಯನ್ನು ಜಿಹಾದಿಗಳ ಈಸ್ಟರ್ನ್ ಮಸಾಲಾ ಖರೀದಿಸಿದೆ ಎಂಬ ಕೋಮು ಭಾವನೆ ಕೆರಳಿಸುವ ಕ್ಲೇಮ್‌ಗಳೂ ಇದ್ದವು. ಇದರೊಂದಿಗೆ ಈರುಳ್ಳಿ ರಸ ಜೇನುತುಪ್ಪ ಮಿಶ್ರಣದಿಂಧ ಮೂಲವ್ಯಾಧಿ ಮಾಯ ಮತ್ತು ಅಮೆರಿಕದಲ್ಲಿ ರಾಮನ ಹೆಸರಲ್ಲಿ ಹೊಸ ಕಾರು ಬಂದಿದೆ ಎನ್ನುವ ಹೇಳಿಕೆಗಳು ಈ ವಾರ ಇದ್ದವು.
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಯಲ್ಲಿ ರಾತ್ರಿ ಸಂಚಾರ ಅಪಾಯವೇ, ಸತ್ಯ ಏನು?
ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್‌ವೇನಲ್ಲಿ ಪುಂಡರು, ದರೋಡೆಕೋರರು ತಿರುಗಾಡುತ್ತಿದ್ದಾರೆ. ಈ ಹೈವೇ ಈಗ ಅಪಾಯಕಾರಿ, ರಾತ್ರಿ ಇಲ್ಲಿ ಬರುವುದು ಡೇಂಜರ್ ಎಂಬಂತೆ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಸತ್ಯಶೋಧನೆ ವೇಳೆ, ಹೇಳಿಕೆಯೊಂದಿಗೆ ಲಗತ್ತಿಸಲಾದ ರಸ್ತೆ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಅಲ್ಲ, ಅದು ಆಫ್ರಿಕಾದ ಮಾಧ್ಯಮದಲ್ಲಿ ಪ್ರಕಟವಾಗಿರುವುದನ್ನು ಗುರುತಿಸಲಾಗಿದೆ. ಅಲ್ಲದೇ ಇತ್ತೀಚಿಗೆ ದರೋಡೆಯಂತಹ ಯಾವುದೇ ಪ್ರಕರಣಗಳು ನಡೆದಿಲ್ಲ ಎನ್ನವುದನ್ನು ಪೊಲೀಸ್ ಉನ್ನತಾಧಿಕಾರಿಗಳ ಮೂಲಗಳು ನ್ಯೂಸ್‌ಚೆಕರ್‌ಗೆ ಖಚಿತಪಡಿಸಿವೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಆಗಸ್ಟ್ 10ರಿಂದ ಮಹಿಳೆಯರ ಉಚಿತ ಬಸ್ ಪ್ರಯಾಣ ಬಂದ್ ಹೈಕೋರ್ಟ್ ತೀರ್ಪು, ಎನ್ನುವುದು ನಿಜವೇ?
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಹತ್ವದ ಗ್ಯಾರೆಂಟಿ “ಶಕ್ತಿ” ಮಹಿಳೆಯರಿಗೆ ರಾಜ್ಯ ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ ಆ.10ರಿಂದ ಯೋಜನೆ ಸ್ಥಗಿತಕ್ಕೆ ಹೈಕೋರ್ಟ್ ತೀರ್ಪು ಎಂದು ಹೇಳಲಾಗಿದೆ. ಈ ಬಗ್ಗೆ ಸತ್ಶಶೋಧನೆ ವೇಳೆ ಇದು ಸುಳ್ಳು ಎಂದು ಕಂಡುಬಂದಿದೆ. ಜೊತೆಗೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕುರಿತು ಹೈಕೋರ್ಟ್ ಈವರೆಗೂ ಯಾವುದೇ ತೀರ್ಪು ನೀಡಿಲ್ಲ. ಈ ವಿಚಾರದಲ್ಲಿ ಪಿಐಎಲ್ ಸಲ್ಲಿಕೆಯಾಗಿದೆ ಆದರೆ ಇನ್ನೂ ಅದು ವಿಚಾರಣೆಗೆ ಬಂದಿಲ್ಲ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ರೈತರಿಗೆ ಅನ್ಯಾಯ, ವೀಡಿಯೋ ನಿಜವೇ?
ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲಿ ರೈತರಿಗೆ ಅನ್ಯಾಯ, ದೌರ್ಜನ್ಯ ನಡೆದಿದೆ ಎಂಬ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಸತ್ಯಶೋಧನೆಯಲ್ಲಿ ಇದು 2022ರ ವೀಡಿಯೋ ಎಂದು ತಿಳಿದುಬಂದಿದೆ. ಜೊತೆಗೆ ಘಟನೆ ಕುರಿತು ಪೊಲೀಸ್ ಪ್ರಕರಣ ದಾಖಲಾದ ವಿವರಗಳು ನ್ಯೂಸ್‌ಚೆಕರ್‌ಗೆ ಲಭ್ಯವಾಗಿದ್ದು, ಇದನ್ನು ದೃಢಪಡಿಸಲಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಹೌರಾ ಸೇತುವೆಯಲ್ಲಿ ವಿರೂಪಗೊಳಿಸಿದ ಭಾರತದ ತ್ರಿವರ್ಣ ಧ್ವಜ ಹಾರಾಡಿದೆ ಎನ್ನುವುದು ನಿಜವೇ?
ಮುಸ್ಲಿಂ ಮತೀಯವಾದಿಗಳು ದೇಶದ ತ್ರಿವರ್ಣ ಧ್ವಜವನ್ನು ತಿರುಚಿ ಇಸ್ಲಾಂ ಚಿಹ್ನೆಯನ್ನು ಹಾಕಿ ಕೋಲ್ಕತಾದ ಹೌರಾ ಸೇತುವೆಯಲ್ಲಿ ಹಾರಾಡಿಸಿದ್ದಾರೆ ಎಂಬ ಕ್ಲೇಮ್ ಒಂದು ಹರಿದಾಡಿತ್ತು. ಸತ್ಯಶೋಧನೆ ವೇಳೆ ಇದು ಹೌರಾ ಸೇತುವೆಯಲ್ಲ, 24 ಪರಗಣ ಜಿಲ್ಲೆಯಲ್ಲಿರುವ ಕಂಕಿನಾರಾ ಸೇತುವೆ ಎಂದು ಎಂದು ತಿಳಿದುಬಂದಿದೆ. ಜೊತೆಗೆ ಇಂಥದ್ದೊಂದು ತಿರುಚಿದ ಧ್ವಜ ಹಾಕಿರುವ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಅಲ್ಲಗೆಳೆದಿದ್ದರು. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಎಂಟಿಆರ್ ಕಂಪೆನಿಯನ್ನು ಜಿಹಾದಿಗಳ ಈಸ್ಟರ್ನ್ ಮಸಾಲಾ ಖರೀದಿಸಿದೆ ಎನ್ನುವ ಹೇಳಿಕೆ ಸತ್ಯವೇ?
ಮಯ್ಯರ ಕುಟುಂಬದಿಂದ ವಿದೇಶಿ ಕಂಪನಿ ಪಾಲಾಗಿದ್ದ ಎಂ.ಟಿ.ಆರ್. ಈಗ ಜಿಹಾದಿಗಳ ಈಸ್ಟರ್ನ್ ಮಸಾಲೆ ತೆಕ್ಕೆಗೆ ಎಂದು ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದ ವೇಳೆ ಎಂಟಿಆರ್ ಒಡೆತನವನ್ನು ಹೊಂದಿದ ನಾರ್ವೆಯ ಓರ್ಕಾಲಾ ಕಂಪೆನಿ, ಈಸ್ಟರ್ನ್ ಮಸಾಲಾದಲ್ಲಿ ಗರಿಷ್ಠ ಷೇರುಗಳನ್ನು ಖರೀದಿಸಿರುವುದು ಗೊತ್ತಾಗಿದೆ. ಆ ಪ್ರಕಾರ, ಜಿಹಾದಿ ಕಂಪೆನಿ ಈಸ್ಟರ್ನ್ ಮಸಾಲಾ ಎಂಟಿಆರ್ನ್ನು ತೆಕ್ಕೆಗೆ ತೆಗೆದುಕೊಂಡಿದೆ ಎನ್ನವುದು ಸುಳ್ಳು ಎಂದು ಕಂಡುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಹಿಂದೂ ಧರ್ಮದ ಮೇಲಿನ ಗೌರವಕ್ಕೆ ಅಮೆರಿಕದ ಹೊಸ ಕಾರಿಗೆ ‘ರಾಮ್’ ಹೆಸರಿಡಲಾಗಿದೆಯೇ?
ಅಮೆರಿಕದಲ್ಲಿ ಹೊಸದಾಗಿ ಬಿಡುಗಡೆಯಾದ ಕಾರಿಗೆ, ಹಿಂದೂ ಧರ್ಮದ ಮೇಲಿನ ಗೌರವದಿಂದ ‘ರಾಮ್’ ಎಂದು ಹೆಸರಿಡಲಾಗಿದೆ ಎಂದು ಹೇಳಲಾಗಿತ್ತು. ಆದರೆ ರಾಮ್ ಎಂಬ ಕಾರು ಕಂಪೆನಿ ಅಮೆರಿಕದ ಹಳೆಯ ಕಂಪೆನಿಗಳಲ್ಲಿ ಒಂದಾಗಿದೆ. ಅದು ‘ರಾಮ್’ ಎಂದರೆ ಗಂಡು ಕುರಿ ಎಂದು ಹೆಸರಿಟ್ಟಿದ್ದು, ಹಿಂದೂ ಧರ್ಮ ಅಥವಾ ರಾಮನ ಮೇಲಿನ ನಂಬಿಕೆಯಿಂದಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಈರುಳ್ಳಿ ರಸ ಮತ್ತು ಜೇನುತುಪ್ಪ ಮಿಶ್ರ ಮಾಡಿ ತಿಂದರೆ ಮೂಲವ್ಯಾಧಿ ಗುಣವಾಗುತ್ತದೆಯೇ?
ಈರುಳ್ಳಿ ರಸದೊಂದಿಗೆ ಜೇನುತುಪ್ಪ ಮಿಕ್ಸ್ ಮಾಡಿ ದಿನಕ್ಕೆ 2 ಚಮಚ ತಿನ್ನಿ, ಮೂಲವ್ಯಾಧಿ (ಪೈಲ್ಸ್) ಮಾಯವಾಗುತ್ತದೆ ಎಂಬ ಕ್ಲೇಮ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ ವೈದ್ಯರಾಗಲಿ, ಆಹಾರ ತಜ್ಞರಾಗಲಿ ಈ ಹೇಳಿಕೆಯನ್ನು ಬೆಂಬಲಿಸಿಲ್ಲ, ಜೊತೆಗೆ ಹೇಳಿಕೆಯನ್ನು ದೃಢಪಡಿಸುವಂತೆ ಇದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳೂ ಲಭ್ಯವಾಗಿಲ್ಲ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.