Weekly wrap: ರೈತ ಪ್ರತಿಭಟನೆಯಲ್ಲಿ ಪೊಲೀಸರ ಮೇಲೆ ಖಡ್ಗದಿಂದ ಹಲ್ಲೆ, ಮದ್ಯದ ಬಾಟಲಿಗಳು ಪತ್ತೆ, ವಾರದ ಕ್ಲೇಮ್ ನೋಟ

weekly wrap

ರೈತ ಪ್ರತಿಭಟನೆ ಕುರಿತ ಸುಳ್ಳು ಹೇಳಿಕೆಗಳು ಈ ವಾರವೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಪೊಲೀಸರ ಮೇಲೆ ಖಡ್ಗದಿಂದ ಹಲ್ಲೆ ನಡೆಸಿದ ಪ್ರತಿಭಟನಕಾರರು, ರೈತ ಪ್ರತಿಭಟನೆಯಲ್ಲಿ ಮದ್ಯದ ಬಾಟಲಿಗಳು ಸಿಕ್ಕಿವೆ ಎನ್ನುವುದು ಪ್ರಮುಖವಾಗಿದ್ದವು. ಇವುಗಳ ಹೊರತಾಗಿ ಕೋಮು ಬಣ್ಣದೊಂದಿಗೆ ಹೇಳಿಕೆಗಳು ಹರಿದಾಡಿವೆ. ಪ.ಬಂಗಾಳದಲ್ಲಿ ಹಿಂದೂ ದಂಪತಿ ಹೊಲಗದ್ದೆಗೆ ಹೋದಾಗ ಮುಸ್ಲಿಮರಿಂದ ಕಿರುಕುಳಕ್ಕೆ ಈಡಾಗುತ್ತಿದ್ದಾರೆ, ಸೌದಿಯಲ್ಲಿ ಇಫ್ತಾರ್ ಗೆ ನಿಷೇಧ, ಉತ್ತರ ಪ್ರದೇಶದಲ್ಲಿ ಮದರಸಾ ಮೇಲೆ ಪೊಲೀಸ್‌ ದಾಳಿಯಾದಾಗ ಮೆಷಿನ್‌ ಗನ್‌ ಸಿಕ್ಕಿದೆ ಎನ್ನುವುದು ಇದ್ದವು. ಇದರೊಂದಿಗೆ ಆರೋಗ್ಯ ಕುರಿತಂತೆ ಮಕ್ಕಳಿಗೆ ಜ್ವರ ಬಂದಾಗ ದೊಡ್ಡಪತ್ರೆ ಎಲೆಯನ್ನು ಬಾಡಿಸಿ ನೆತ್ತಿ ಮೇಲೆ ಇಟ್ಟರೆ ಜ್ವರ ಕಡಿಮೆಯಾಗುತ್ತದೆ ಎಂದು ಹೇಳಲಾಗಿದೆ. ಇವುಗಳ ಬಗ್ಗೆ ನ್ಯೂಸ್‌ಚೆಕರ್‌ ಸತ್ಯಶೋಧನೆಯನ್ನು ಮಾಡಿದ್ದು ಇವುಗಳು ಸುಳ್ಳು ಎಂದು ಸಾಬೀತು ಪಡಿಸಿದೆ.

ಪೊಲೀಸರ ಮೇಲೆ ಖಡ್ಗದಿಂದ ಹಲ್ಲೆ ನಡೆಸಿದ ರೈತ ಪ್ರತಿಭಟನಕಾರರು?

ಪೊಲೀಸರ ಮೇಲೆ ಖಡ್ಗದಿಂದ ಹಲ್ಲೆ ನಡೆಸಿದ ರೈತ ಪ್ರತಿಭಟನಕಾರರು ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಆದರೆ ಸತ್ಯಶೋಧನೆಯಲ್ಲಿ ತಿಳಿದುಬಂದ ಪ್ರಕಾರ ಪಂಜಾಬ್ ನ ತಾರ್ನ್ ತರಣ್ ನ ಗುರುದ್ವಾರ ಆವರಣದಿಂದ ಸಿಖ್ ಪ್ರತ್ಯೇಕತಾವಾದಿ ಜರ್ನೈಲ್ ಸಿಂಗ್ ಭಿಂದ್ರನ್ವಾಲೆ ಪೋಸ್ಟರ್ ಅನ್ನು ತೆಗೆದುಹಾಕಿದ ನಂತರ ನಡೆದ ಪ್ರತಿಭಟನೆಯ ವೀಡಿಯೋವನ್ನು ರೈತರ ಪ್ರತಿಭಟನೆಯದ್ದು ಎಂದು ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ. ಈ ಕುರಿತು ವಿವರಗಳನ್ನು ಇಲ್ಲಿ ಓದಿ

ರೈತ ಪ್ರತಿಭಟನೆಯಲ್ಲಿ ಮದ್ಯದ ಬಾಟಲಿಗಳು ಸಿಕ್ಕಿವೆ ಎನ್ನುವುದು ನಿಜವೇ?

ರೈತ ಪ್ರತಿಭಟನೆಯಲ್ಲಿ ಮದ್ಯದ ಬಾಟಲಿಗಳು ಸಿಕ್ಕಿವೆ, ದೆಹಲಿ ಚಲೋಗೆ ಸಾಗುತ್ತಿರುವ ರೈತರ ನಿಜಬಣ್ಣ ಇದು ಎಂಬರ್ಥದಲ್ಲಿ ಎಂದು ಹೇಳಿ ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಲಾಗುತ್ತಿದೆ. ಸತ್ಯಶೋಧನೆಯ ಪ್ರಕಾರ, ಈ ವೀಡಿಯೋ 2021ರ ರೈತ ಪ್ರತಿಭಟನೆಯ ಸಂದರ್ಭದ್ದಾಗಿದೆ. ಈಗಿನ ರೈತ ಪ್ರತಿಭಟನೆಗೆ ಸಂಬಂಧಿಸಿದ್ದಲ್ಲ ಎಂದು ತಿಳಿದುಬಂದಿದೆ. ಈ ಕುರಿತು ವಿವರಗಳನ್ನು ಇಲ್ಲಿ ಓದಿ

ಪ.ಬಂಗಾಳದಲ್ಲಿ ಹಿಂದೂ ದಂಪತಿ ಹೊಲಗದ್ದೆ ಕಡೆ ಹೋದಾಗ ಮುಸ್ಲಿಮರಿಂದ ಕಿರುಕುಳಕ್ಕೆ ಈಡಾಗುತ್ತಿದ್ದಾರೆಯೇ?

ಹಿಂದೂ ದಂಪತಿ ಹೊಲಗದ್ದೆ ಕಡೆ ಹೋದಾಗ ಮುಸ್ಲಿಮರಿಂದ ಕಿರುಕುಳಕ್ಕೆ ಈಡಾಗುತ್ತಿದ್ದಾರೆ ಎಂದು ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆದರೆ ಮಹಿಳೆಯೊಬ್ಬರು ಬೈಕಿನಲ್ಲಿ ಸಂಚರಿಸುತ್ತಿದ್ದ ವೇಳೆ ಅವರಿಗೆ ಲೈಂಗಿಕ ಕಿರುಕುಳ ನೀಡಿ ಹಲ್ಲೆ ನಡೆಸಿದ ವಿದ್ಯಮಾನ ಬಿಹಾರದ ಸರನ್‌ ನಲ್ಲಿ 2021ರಲ್ಲಿ ನಡೆದಿದ್ದು ಪ್ರಕರಣದಲ್ಲಿ ಬಂಧಿತರಾದವರು ಒಂದೇ ಕೋಮಿಗೆ ಸೇರಿದವರು ಎಂದು ಸತ್ಯಶೋಧನೆಯಲ್ಲಿ ಗೊತ್ತಾಗಿದೆ. ಈ ಕುರಿತು ವಿವರಗಳನ್ನು ಇಲ್ಲಿ ಓದಿ

ಸೌದಿ ಅರೇಬಿಯಾದ ಮಸೀದಿಯಲ್ಲಿ ಇಫ್ತಾರ್ ಆಯೋಜನೆಗೆ ಹಾಗೂ ಆಜಾನ್‌ಗೆ ನಿಷೇಧ ಹೇರಲಾಗಿದೆಯೇ?

ಸೌದಿ ಅರೇಬಿಯಾದಲ್ಲಿ ಇಫ್ತಾರ್ ಆಯೋಜನೆಗೆ ಹಾಗೂ ಆಜಾನ್‌ ಗೆ ನಿಷೇಧ ಹೇರಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಗಳು ಹರಿದಾಡಿದೆ. ಸತ್ಯಶೋಧನೆಯಲ್ಲಿ ಕಂಡುಬಂದ ಪ್ರಕಾರ ರಮ್ಜಾನ್ ಮಾಸದಲ್ಲಿ ಮಸೀದಿಯ ಒಳಗಡೆ ಇಫ್ತಾರ್ ಕೂಟದ ಕುರಿತು ಮತ್ತು ಪ್ರಾರ್ಥನೆಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡುವ ಕುರಿತು ಕೆಲವೊಂದು ಸೂಚನೆ ಹೊರಡಿಸಲಾಗಿದೆ. ನಿಷೇಧ ಹೇರಿಲ್ಲ ಎಂದು ಗೊತ್ತಾಗಿದೆ. ಈ ಕುರಿತು ವಿವರಗಳನ್ನು ಇಲ್ಲಿ ಓದಿ

ಉತ್ತರ ಪ್ರದೇಶದ ಮದರಸಾ ಮೇಲೆ ನಡೆದ ದಾಳಿಯಲ್ಲಿ ಮೆಷಿನ್‌ ಗನ್‌ ಸಿಕ್ಕಿದೆಯೇ?

ಉತ್ತರ ಪ್ರದೇಶದ ಮದರಸಾ ಒಂದರ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಮೆಷಿನ್‌ ಗನ್‌ ಸೇರಿದಂತೆ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಈ ಬಗ್ಗೆ ನ್ಯೂಸ್‌ ಚೆಕರ್ ಪರಿಶೀಲನೆ ನಡೆಸಿದ ವೇಳೆ ಉತ್ತರಪ್ರದೇಶದಲ್ಲಿ ಮದರಸಾ ಮೇಲಿನ ದಾಳಿ 2019ರಲ್ಲಿ ನಡೆದಿದ್ದಾಗಿದ್ದು, ಈ ಕುರಿತ ವರದಿಗಳಲ್ಲಿ ಪಿಸ್ತೂಲುಗಳು, ಬುಲೆಟ್ ಗಳನ್ನು ವಶಪಡಿಸಿಕೊಂಡ ವಿಚಾರಗಳು ಇವೆಯೇ ವಿನಾ, ಮೆಷಿನ್‌ ಗನ್‌ ಪತ್ತೆಯಾಗಿರುವ, ಪಶಪಡಿಸಿಕೊಂಡ ವಿಚಾರ ಕಂಡುಬಂದಿಲ್ಲ ಎಂದು ಗೊತ್ತಾಗಿದೆ. ಈ ಕುರಿತು ವಿವರಗಳನ್ನು ಇಲ್ಲಿ ಓದಿ

ಬಾಡಿಸಿದ ದೊಡ್ಡಪತ್ರೆ ಎಲೆಯನ್ನು ನೆತ್ತಿಯ ಮೇಲೆ ಇಡುವುದರಿಂದ ಮಕ್ಕಳಲ್ಲಿ ಜ್ವರ ಕಡಿಮೆಯಾಗುತ್ತದೆಯೇ?

ಮಕ್ಕಳಲ್ಲಿ ಜ್ವರ ಬಂದಾಗ ದೊಡ್ಡಪತ್ರೆ ಎಲೆ ಪ್ರಯೋಜನಕಾರಿ ಇದನ್ನು ಬಾಡಿಸಿ ನೆತ್ತಿಯಲ್ಲಿ ಇಡುವುದರಿಂದ ಜ್ವರ ಕಡಿಮೆಯಾಗುತ್ತದೆ ಎಂಬ ಹೇಳಿಕೆಯುಳ್ಳ ಸಂದೇಶವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಆದರೆ ಮಕ್ಕಳಿಗೆ ಜ್ವರ ಬಂದಾಗ ದೊಡ್ಡ ಪತ್ರೆಯ ಎಲೆಯನ್ನು ಬಾಡಿಸಿ ನೆತ್ತಿಯ ಮೇಲೆ ಇಡುವುದರಿಂದ ಜ್ವರ ಕಡಿಮೆಯಾಗುತ್ತದೆ ಎನ್ನುವುದು ತಪ್ಪಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ ಎಂದು ಸತ್ಯಶೋಧನೆಯಲ್ಲಿ ತಿಳಿದುಬಂದಿದೆ. ಈ ಕುರಿತು ವಿವರಗಳನ್ನು ಇಲ್ಲಿ ಓದಿ


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.