Weekly wrap: ರಾಣಿ ಕಾ ಹಜಿರಾದಲ್ಲಿ ದೇಗುಲ, ಮುಸ್ಲಿಂ ಆಗಿಯೇ ಹುಟ್ಟುತ್ತೇನೆಂದ ಸಿಎಂ ಸಿದ್ದರಾಮಯ್ಯ, ವಾರದ ಕ್ಲೇಮ್‌ ನೋಟ

weekly wrap

ಅಹಮದಾಬಾದ್‌ ರಾಣಿ ಕಾ ಹಜಿರಾದಲ್ಲಿ ದೇಗುಲ, ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿಯೇ ಹುಟ್ಟುತ್ತೇನೆಂದ ಸಿಎಂ ಸಿದ್ದರಾಮಯ್ಯ, ಬೆಂಗಳೂರು ಕುಡಿಯುವ ನೀರಿನ ವಿಚಾರದ ಸಭೆಯಲ್ಲಿ ಚಿಪ್ಸ್ ತಿಂದ ಡಿ.ಕೆ.ಶಿವಕುಮಾರ್, ಕುಡಿಯಲು ನೀರಿಲ್ಲದಿದ್ದರೂ ಕಾವೇರಿ ನೀರು ತಮಿಳುನಾಡಿಗೆ ಎಂಬ ಕ್ಲೇಮುಗಳು ಈ ವಾರ ಹರಿದಾಡಿವೆ. ಕುಡಿಯುವ ನೀರಿನ ಕುರಿತ ಎರಡು ಕ್ಲೇಮುಗಳು ಈ ವಾರ ಕಂಡುಬಂದಿದ್ದವು. ಇದು ಹೊರತಾಗಿ ಎರಡು ಕ್ಲೇಮುಗಳು ಕೋಮು ವಿಚಾರಕ್ಕೆ ಸಂಬಂಧಿಸಿದ್ದಾಗಿತ್ತು. ಇವುಗಳನ್ನು ನ್ಯೂಸ್‌ಚೆಕರ್‌ ತನಿಖೆ ಮಾಡಿದ್ದು, ಇವುಗಳು ಸುಳ್ಳು ಎಂದು ಕಂಡುಬಂದಿದೆ.

ಅಹಮದಾಬಾದ್‌ನ ರಾಣಿ ಕಾ ಹಜಿರಾದಲ್ಲಿ ದೇಗುಲ ಪತ್ತೆಯಾಗಿದೆಯೇ?

ಅಹಮದಾಬಾದ್‌ ನಲ್ಲಿ ರಾಣಿ ಕಾ ಹಜಿರಾ ಎಂಬ ಮುಸ್ಲಿಂ ಪ್ರದೇಶವನ್ನು ನೆಲಸಮಗೊಳಿಸಿ ಬಳಿಕ ಅಲ್ಲಿದ್ದ 1600 ವರ್ಷ ಹಳೆಯ ಹಿಂದೂ ದೇಗುಲವನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಹೇಳಿಕೆಯೊಂದು ವೀಡಿಯೋದೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಈ ಬಗ್ಗೆ ನ್ಯೂಸ್ ಚೆಕರ್ ತನಿಖೆ ನಡೆಸಿದ್ದು, ಅಹಮದಾಬಾದ್‌ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ರಾಣಿ ಕಾ ಹಜಿರಾ ಹೊರಭಾಗದಲ್ಲಿ ನಡೆದಿದೆ. ಇದು ಮೊಘಲ್ ರಾಣಿಯರ ಸಮಾಧಿಯಾಗಿದ್ದು ಇಲ್ಲಿ ಯಾವುದೇ ದೇಗುಲ ಕಂಡುಬಂದಿಲ್ಲ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

ಮುಂದಿನ ಜನ್ಮದಲ್ಲಿ ಹುಟ್ಟುವುದಾದರೆ ಮುಸ್ಲಿಂ ಆಗಿಯೇ ಹುಟ್ಟುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆಯೇ?

ಮುಂದಿನ ಜನ್ಮದಲ್ಲಿ ಹುಟ್ಟುವುದಾದರೆ ಮುಸ್ಲಿಂ ಆಗಿಯೇ ಹುಟ್ಟುತ್ತೇನೆ ಎಂದು ಸಿದ್ದರಾಮಯ್ಯ ಹೇಳಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಗಳು ಹರಿದಾಡುತ್ತಿವೆ. ಆದರೆ ಮಂಡ್ಯದಲ್ಲಿ ನಡೆದ ಗ್ಯಾರೆಂಟಿ ಸಮಾವೇಶದಲ್ಲಿ ಸಿದ್ದರಾಮಯ್ಯನವರು ದೇವೇಗೌಡರನ್ನು ಉದ್ದೇಶಿಸಿ ಹೇಳಿದ ಮಾತುಗಳ ವೀಡಿಯೋವನ್ನು ಎಡಿಟ್ ಮಾಡಿ ಬಳಸಿರುವುದು ಕಂಡುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

ಬೆಂಗಳೂರು ಕುಡಿಯುವ ನೀರಿನ ಕುರಿತ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಚಿಪ್ಸ್ ತಿನ್ನುತ್ತಿದ್ದರೇ?

ಬೆಂಗಳೂರು ಕುಡಿಯುವ ನೀರಿನ ಕುರಿತ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಚಿಪ್ಸ್ ತಿನ್ನುತ್ತಿದ್ದರು ಅರ್ಥಾತ್‌, ಸಮಸ್ಯೆ ಬಗ್ಗೆ ಅವರು ಅಷ್ಟು ಗಂಭೀರವಾಗಿರಲಿಲ್ಲ ಎಂಬರ್ಥದಲ್ಲಿ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ನ್ಯೂಸ್ ಚೆಕರ್ ತನಿಖೆ ನಡೆಸಿದಾಗ, ವೈರಲ್ ವೀಡಿಯೋ ಬೆಂಗಳೂರಿನ ನೀರಿನ ಬಿಕ್ಕಟ್ಟಿನ ಬಗ್ಗೆ ಕರೆದ ಸಭೆಯದ್ದಲ್ಲ, ಅದು ಸುಮಾರು ಮೂರು ತಿಂಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಸಭೆಯ ವೀಡಿಯೋ ಆಗಿದೆ ಎಂದು ಕಂಡುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ

ಬೆಂಗಳೂರಲ್ಲಿ ಕುಡಿಯಲು ನೀರಿಲ್ಲದಿದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆಯೇ?

ಬೆಂಗಳೂರಲ್ಲಿ ಕುಡಿಯಲು ನೀರಿಲ್ಲದಿದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಬೆಂಗಳೂರಿನಲ್ಲಿ ನೀರಿಗೆ ತೀವ್ರವಾದ ಹಾಹಾಕಾರ ಕಂಡುಬಂದ ಬೆನ್ನಲ್ಲೇ, ಕೆಆರ್ ಎಸ್‌ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ಆದರೆ ತನಿಖೆಯಲ್ಲಿ ಕಂಡುಬಂದತೆ, ಕೆಎಸ್‌ಆರ್ ಎಸ್‌ನಿಂದ ಇದೀಗ ನೀರು ಹರಿಸಿರುವುದು ಬೆಂಗಳೂರಿನ ನೀರಿನ ಉದ್ದೇಶಕ್ಕಾಗಿ. ಮಳವಳ್ಳಿಯ ಶಿವಾ ಡ್ಯಾಂ ಗೆ ನೀರು ಬಿಟ್ಟು ಅಲ್ಲಿಂದ ಅದನ್ನು ಬೆಂಗಳೂರಿಗೆ ಪೂರೈಸಲು ನೀರು ಹರಿಯಬಿಡಲಾಗಿದೆ ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.