Authors
ಬಾಂಗ್ಲಾದೇಶದಲ್ಲಿ ರಾಜಕೀಯ ಅನಿಶ್ಚಿತತೆ ಮುಂದುವರಿದಿರುವಂತೆಯೇ, ಹಿಂದೂಗಳ ಸ್ಥಿತಿ ಶೋಚನೀಯವಾಗಿದೆ ಸಂಪೂರ್ಣ ನಾಶ ಮಾಡುವತ್ತ ಮುಂದುವರಿಯಲಾಗುತ್ತಿದೆ ಎಂಬಂತೆ ಪೋಸ್ಟ್ ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಎರಡು ಕಾಲೇಜುಗಳ ವಿದ್ಯಾರ್ಥಿಗಳ ನಡುವಿನ ಘಟನೆಯನ್ನು ಹಿಂದೂಗಳ ನಾಶ ಎಂಬಂತೆ, ಮುಸ್ಲಿಂ ಶ್ರದ್ಧಾಕೇಂದ್ರವೊಂದರ ಮೇಲಿನ ದಾಳಿ ಕುರಿತ ಗಲಭೆಯನ್ನು ಹಳ್ಳಿಗಳಲ್ಲಿ ಹಿಂದೂಗಳನ್ನು ಕೊಲ್ಲಲಾಗುತ್ತಿದೆ ಎಂದು, ಇಸ್ಕಾನ್ ಹಸು ಕೊಟ್ಟಿಗೆ ಮೇಲೆ ದಾಳಿ ಎಂದು ಭಾರತದ ವೀಡಿಯೋ ಒಂದನ್ನು ವೈರಲ್ ಮಾಡಲಾಗಿದೆ. ಇವುಗಳ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧ ನಡೆಸಿ ನಿಜಾಂಶವನ್ನು ತೆರೆದಿಟ್ಟಿದೆ. ಇದರೊಂದಿಗೆ ಹುರಿಗಡಲೆ ಮತ್ತು ಹಾಲಿನ ಮಿಶ್ರಣ 15 ದಿನ ಕುಡಿಯುವುದರಿಂದ ವೀರ್ಯಾಣು ಸಂಖ್ಯೆ ಹೆಚ್ಚಿಸಲು ಸಾಧ್ಯ ಎಂಬ ಹೇಳಿಕೆಯನ್ನೂ ಶೋಧಿಸಲಾಗಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.
ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಹೊರಟಿದ್ದಾರೆ ಎಂದ ವೀಡಿಯೋ ಹಿಂದಿನ ಸತ್ಯಾಂಶವೇನು?
ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಹೊರಟಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸತ್ಯಶೋಧನೆ ಮಾಡಿದಾಗ, ಇದು ಕೋಮು ಗಲಭೆಯಲ್ಲ, ಎರಡು ಕಾಲೇಜುಗಳ ವಿದ್ಯಾರ್ಥಿಗಳ ನಡುವಿನ ಗಲಭೆಯಾಗಿದೆ ಎಂದು ತಿಳಿದುಬಂದಿದೆ. ಈ ಕುರಿತ ವರದಿ ಇಲ್ಲಿದೆ
ಬಾಂಗ್ಲಾದೇಶದ ಹಳ್ಳಿಗಳಲ್ಲಿ ಹಿಂದೂಗಳನ್ನು ಮುಸ್ಲಿಮರು ಕೊಲ್ಲುತ್ತಿದ್ದಾರೆ ಎಂದ ವೀಡಿಯೋ ನಿಜವೇ?
ಬಾಂಗ್ಲಾದೇಶದ ಹಳ್ಳಿಗಳಲ್ಲಿ ಹಿಂದೂಗಳನ್ನು ಮುಸ್ಲಿಮರು ಕೊಲ್ಲುತ್ತಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ನ್ಯೂಸ್‌ಚೆಕರ್ ಸತ್ಯಶೋಧನೆಯಲ್ಲಿ, ಬಾಂಗ್ಲಾದೇಶದ ಶೇರ್ಪುರ್ ಸದರ್ ಉಪಜಿಲ್ಲೆಯಲ್ಲಿರುವ ಮುರ್ಷಿದ್‌ಪುರ್ ದರ್ಬಾರ್ ಷರೀಫ್ ಹೆಸರಿನ ಶ್ರದ್ಧಾಕೇಂದ್ರದಲ್ಲಿ ಅನೈತಿಕ ಚಟುವಟಿಕೆಗಳ ಆರೋಪ ಹೊರಿಸಿ ನಡೆಸಲಾದ ದಾಳಿಯ ದೃಶ್ಯಾವಳಿ ಇದು ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
ಬಾಂಗ್ಲಾದೇಶದ ಇಸ್ಕಾನ್ ಹಸು ಕೊಟ್ಟಿಗೆಯ ಮೇಲೆ ದಾಳಿ ಎಂದ ಈ ವೀಡಿಯೋ ನಿಜಕ್ಕೂ ಭಾರತದ್ದು!
ಬಾಂಗ್ಲಾದೇಶದ ಇಸ್ಕಾನ್ ಹಸು ಕೊಟ್ಟಿಗೆಯ ಮೇಲೆ ದಾಳಿ ಎಂಬ ಹೇಳಿಕೆಯುಳ್ಳ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಕೊಟ್ಟಿಗೆಯಲ್ಲಿ ಗೂಳಿಯನ್ನು ನಾಲ್ವರು ಥಳಿಸಿ ಕೊಂದಿರುವ ವೀಡಿಯೋ ಇದಾಗಿದೆ. ವೀಡಿಯೋ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಗೂಳಿಯನ್ನು ಹೊಡೆದು ಕೊಲ್ಲುವ ವೀಡಿಯೋ ಪಂಜಾಬ್ ನ ಜಲಂಧರ್ ನ ಜಮ್ಶೇರ್ ಡೈರಿ ಕಾಂಪ್ಲೆಕ್ಸಿನದ್ದಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
ಆಂಧ್ರ ಪ್ರದೇಶದಲ್ಲಿ ಸರ್ಕಾರ ವಕ್ಫ್ ಬೋರ್ಡ್ ವಿಸರ್ಜಿಸಿದ್ದನ್ನು ‘ರದ್ದು’ ಮಾಡಲಾಗಿದೆ ಎಂದು ಪ್ರಚಾರ!
ಆಂಧ್ರ ಪ್ರದೇಶ ಸರ್ಕಾರ ವಕ್ಫ್ ಬೋರ್ಡ್ ವಿಸರ್ಜನೆ ಮಾಡಿದ ಸುದ್ದಿಯ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಬೋರ್ಡ್ ರದ್ದುಮಾಡಲಾಗಿದೆ ಎಂಬಂತೆ ಸುದ್ದಿಗಳು ಹರಿದಾಡಿವೆ. ಸತ್ಯಶೋಧನೆ ನಡೆಸಿದಾಗ, ಹೊಸ ವಕ್ಫ್ ಮಂಡಳಿಗಾಗಿ ಅಸ್ತಿತ್ವದಲ್ಲಿರುವ ವಕ್ಫ್ ಮಂಡಳಿಯನ್ನು ವಿಸರ್ಜಿಸುವ ಸರ್ಕಾರದ ಆದೇಶವನ್ನು ಆಂಧ್ರಪ್ರದೇಶ ಸರ್ಕಾರವು ವಕ್ಫ್ ಮಂಡಳಿಯನ್ನು ಶಾಶ್ವತವಾಗಿ ರದ್ದುಗೊಳಿಸಿದೆ ಎಂಬ ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
ಬಾಂಗ್ಲಾದೇಶದ ಅಶಾಂತಿಗೆ ಪ.ಬಂಗಾಳದ ಕಾಳಿ ವಿಸರ್ಜನೆ ವೀಡಿಯೋ ಸಂಬಂಧ ಕಲ್ಪಿಸಿ ಕೋಮು ಹೇಳಿಕೆಯೊಂದಿಗೆ ವೈರಲ್!
ಬಾಂಗ್ಲಾದೇಶದಲ್ಲಿ ಮುಸ್ಲಿಮರು ಕಾಳಿ ದೇಗುಲದ ಮೇಲೆ ದಾಳಿ ಮಾಡಿದ್ದಾರೆ ಎಂಬಂತೆ ಹೇಳಿಕೆಯೊಂದಿಗೆ ವೀಡಿಯೋ ಒಂದನ್ನುಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ವೈರಲ್ ವೀಡಿಯೋ ಬಗ್ಗೆ ಬಾಂಗ್ಲಾದೇಶದಲ್ಲಿ ಮುಸ್ಲಿಮರು ಕಾಳಿ ದೇಗುಲದ ಮೇಲೆ ದಾಳಿ ಮಾಡಿದ್ದಾರೆ ಎನ್ನುವ ಹೇಳಿಕೆ ತಪ್ಪಾಗಿದೆ. ಇದು ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್‌ನ ಸುಲ್ತಾನ್‌ಪುರ ಗ್ರಾಮದಲ್ಲಿ ಕಾಳಿ ಪೂಜೆಯ ಬಳಿಕ 12 ವರ್ಷಗಳಿಗೊಮ್ಮೆ ನಡೆಯುವ ವಿಸರ್ಜನೆಯ ಪ್ರಕ್ರಿಯೆಯ ವೀಡಿಯೋವಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
ಹುರಿಗಡಲೆ ಮತ್ತು ಹಾಲಿನ ಮಿಶ್ರಣ 15 ದಿನ ಕುಡಿಯುವುದರಿಂದ ವೀರ್ಯಾಣು ಸಂಖ್ಯೆ ಹೆಚ್ಚಿಸಲು ಸಾಧ್ಯವೇ?
ಹುರಿಗಡಲೆ, ಹಾಲು, ಬಾಳೆಹಣ್ಣು, ಖರ್ಜೂರ ಮತ್ತು ಬೆಲ್ಲದ ಮಿಶ್ರಣವನ್ನು 15 ದಿನಗಳವರೆಗೆ ಪ್ರತಿದಿನ ಕುಡಿಯುವುದರಿಂದ ವೀರ್ಯಾಣುಗಳ ಸಂಖ್ಯೆ ನೂರು ಪಟ್ಟು ಹೆಚ್ಚಾಗುತ್ತದೆ ಎಂಬ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಈ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದಾಗ, ಈ ಪಾನೀಯ ಒಂದರಿಂದಲೇ 15 ದಿನದಲ್ಲಿ ಫಲಿತಾಂಶ ಪಡೆಯಲು ಸಾಧ್ಯವಿಲ್ಲ ಇದು ತಪ್ಪು ಹೇಳಿಕೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.