Fact Check: ಕೆಎಸ್ಆರ್ಟಿಸಿ ಬಸ್‌ ಗೆ ಕಿಟಕಿ ಮೂಲಕ ಹತ್ತುವ ವೇಳೆ ಮಹಿಳೆಯ ಕೈ ತುಂಡಾಗಿದೆಯೇ, ಸತ್ಯ ಏನು?

ಕೆಎಸ್‌ಆರ್‌ಟಿಸಿ, ಮಹಿಳೆಯ ಕೈ ತುಂಡು, ಅಪಘಾತ,

Claim
ಕೆಎಸ್ಆರ್ಟಿಸಿ ಬಸ್‌ ಕಿಟಕಿ ಮೂಲಕ ಹತ್ತುವ ವೇಳೆ ಮಹಿಳೆಯ ಕೈ ತುಂಡಾದ ಘಟನೆ ಮಂಡ್ಯದ ಹುಲ್ಲೇನಹಳ್ಳಿಯಲ್ಲಿ ನಡೆದಿದೆ

Fact
ಕೆಎಸ್‌ಆರ್‌ಟಿಸಿ ಬಸ್‌ಗೆ ಕಟಾವು ಯಂತ್ರ ಹೊತ್ತೊಯ್ಯುತ್ತಿದ್ದ ಟೆಂಪೋ ಒಂದು ಢಿಕ್ಕಿಯಾಗಿ ಅಪಘಾತ ಸಂಭವಿಸಿದ ವೇಳೆ ಬಲಭಾಗದಲ್ಲಿ ಕೂತಿದ್ದ ಮಹಿಳೆಯ ಕೈ ತುಂಡಾಗಿದೆ. ಈ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನ, ಬಿಳಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ನರಸೀಪುರ ರಸ್ತೆಯಲ್ಲಿ ನಡೆದಿದೆ

ಕರ್ನಾಟಕದ ನೂತನ ಕಾಂಗ್ರೆಸ್‌ ಸರ್ಕಾರ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಯೋಜನೆ ಘೋಷಿಸಿದ ಬೆನ್ನಲ್ಲೇ, ಮಹಿಳೆಯೊಬ್ಬರು ಬಸ್ಸಿಗೆ ಕಿಟಿಕಿಯಿಂದ ಹತ್ತಲು ಯತ್ನಿಸಿ ಕೈಯನ್ನೇ ಕಳೆದುಕೊಂಡಿದ್ದಾರೆ ಎಂಬ ಮೆಸೇಜ್‌ ಇರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಕುರಿತ ಫೇಸ್‌ಬುಕ್‌ ಕ್ಲೇಮಿನಲ್ಲಿ, “ಮಂಡ್ಯದ ಹತ್ತಿರ ಹುಲ್ಲೀನಹಳ್ಳಿಯಲ್ಲಿ ksrtc ಬಸ್ಸಿಗೆ ಜನ ಹತ್ತುವಾಗ ಲೇಡೀಸ್ ಸಂಕೇ ಜಾಸ್ಥಿ ಇದ್ದರಿಂದ ಕಿಟಿಕಿಯ ಮೂಲಕ ಹತ್ತಲು ಹೋಗಿ ಕೈ ತುಂಡಾಗಿರುವ ಘಟನೆ” ಎಂದು ಹೇಳಲಾಗಿದೆ. ಜೊತೆಗೆ ಇದರೊಂದಿಗಿನ ವೀಡಿಯೋದಲ್ಲಿ ಮಹಿಳೆಯೊಬ್ಬರ ಕೈ ತುಂಡಾಗಿ ಯಾತನೆ ಪಡುತ್ತಿರುವ ಹೃದಯ ವಿದ್ರಾವಕ ದೃಶ್ಯವೊಂದಿದೆ.

Also Read: ಒಡಿಶಾ ರೈಲು ದುರಂತದ ಸ್ಟೇಷನ್ ಮಾಸ್ಟರ್ ಶರೀಫ್‌ಗೆ ‘ಹೊಡೆದು ವಿಚಾರಣೆ’ ಎನ್ನುವ ವೀಡಿಯೋಕ್ಕೂ, ಪ್ರಕರಣಕ್ಕೂ ಸಂಬಂಧವಿಲ್ಲ!

ಕೆಎಸ್ಆರ್ಟಿಸಿ ಬಸ್‌ ಕಿಟಕಿ ಮೂಲಕ ಹತ್ತುವ ವೇಳೆ ಮಹಿಳೆಯ ಕೈ ತುಂಡಾಗಿದೆಯೇ, ವೈರಲ್‌ ವೀಡಿಯೋದ ಸತ್ಯ ಏನು?
ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮ್‌

ಟ್ವಿಟರ್‌ನಲ್ಲೂ ಇಂತಹ ಕ್ಲೇಮ್‌ಗಳು ಕಂಡುಬಂದಿವೆ.

ಈ ಕ್ಲೇಮುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

Fact Check/Verification

ಈ ಕುರಿತ ಸತ್ಯಶೋಧನೆಗೆ ನ್ಯೂಸ್ ಚೆಕರ್ ಮುಂದಾಗಿದ್ದು, ಕ್ಲೇಮಿನಲ್ಲಿ ಹೇಳಿರುವ ಮಾಹಿತಿ ಸುಳ್ಳು ಎಂದು ಕಂಡುಬಂದಿದೆ.

ಸತ್ಯಶೋಧನೆಗಾಗಿ ನ್ಯೂಸ್‌ಚೆಕರ್‌ ಗೂಗಲ್‌ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದು, ಈ ವೇಳೆ ವಿವಿಧ ಮಾಧ್ಯಮ ವರದಿಗಳು ಲಭ್ಯವಾಗಿವೆ.

ಜೂನ್‌ 26, 2023ರ ಕನ್ನಡ ನ್ಯೂಸ್‌ 18 ವರದಿ ಪ್ರಕಾರ, “ಕೆಎಸ್​ಆರ್​ಟಿಸಿ ಬಸ್​​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರಿನ ಟಿ. ನರಸೀಪುರದ ಬಳಿ ನಡೆದಿದೆ. ಟಿ.ನರಸೀಪುರ ಮತ್ತು ನಂಜನಗೂಡು ಮೈನ್ ರಸ್ತೆಯ ಬಸವಪುರದಲ್ಲಿ ನಡೆದಿರುವ ಘಟನೆ ಇದಾಗಿದ್ದು, ಕಳೆದ ನಾಲ್ಕು ದಿನಗಳ ಹಿಂದೆ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.” ಎಂದಿದೆ.

ಜೂನ್‌ 25, 2023ರ ಕನ್ನಡ ಪ್ರಭ ವರದಿ ಪ್ರಕಾರ “ಕೆಎಸ್ ಆರ್ ಟಿಸಿ ಬಸ್ ಹತ್ತುವಾಗ ಮಹಿಳೆಯೊಬ್ಬರ ಕೈ ಕಟ್ ಆಗಿದ್ದು ಈ ಕುರಿತು ಸ್ಪಷ್ಟನೆ ನೀಡಿರುವ ರಾಜ್ಯ ಸರ್ಕಾರಿ ಸಾರಿಗೆ ನಿಗಮ KSRTC ಚಾಲಕನ ತಪ್ಪಿಲ್ಲ ಎಂದು ಹೇಳಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹಿಳೆಯರ ಉಚಿತ ಪ್ರಯಾಣ ಶಕ್ತಿ ಯೋಜನೆಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವಂತೆಯೇ ಇತ್ತ ಕೆಲ ಅಹಿತಕರ ಘಟನೆಗಳೂ ಕೂಡ ವರದಿಯಾಗುತ್ತಿವೆ. ಇದಕ್ಕೆ ನೂತನ ಸೇರ್ಪಡೆಯಾಗಿ ಸೀಟ್ ಹಿಡಿಯುವ ಧಾವಂತದಲ್ಲಿ ಮಹಿಳೆಯೊಬ್ಬರು ಬಸ್ ಹತ್ತಲು ಹೋಗಿ ಅಪಘಾತದಲ್ಲಿ ತಮ್ಮ ಕೈ ಕಳೆದುಕೊಂಡಿದ್ದಾರೆ ಎಂಬ ವಿಡಿಯೋವೊಂದು ವೈರಲ್ ಆಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸರ್ಕಾರಿ ಸಾರಿಗೆ ನಿಗಮ ಕೆಎಸ್ ಆರ್ ಟಿಸಿ ಮಹಿಳೆಗೆ ಬಸ್ ಹತ್ತುವಾಗ ಕೈ ಕಟ್ ಆಗಿಲ್ಲ.. ಬದಲಿಗೆ ಲಾರಿ ಅಪಘಾತದಲ್ಲಿ ಆಕೆಗೆ ಗಾಯಗಳಾಗಿವೆ” ಎಂದು ಹೇಳಿದೆ.

ಈ ವರದಿಗಳನ್ನು ಸಾಕ್ಷ್ಯವಾಗಿ ಪರಿಗಣಿಸಿ ಕೆಎಸ್‌ಆರ್ಟಿಸಿಯ ಟ್ವೀಟ್‌ ಅನ್ನು ಪರಿಶೀಲಿಸಲಾಗಿದ್ದು, ಇದು ಮಹಿಳೆ ಬಸ್‌ ಹತ್ತುವ ವೇಳೆ ಆದ ಘಟನೆಯಲ್ಲ ಬದಲಾಗಿ, ಲಾರಿಯೊಂದು ಬಸ್ಸಿಗೆ ಗುದ್ದಿ ಅಪಘಾತವಾದ ಪರಿಣಾಮ ಎಂದು ತಿಳಿದುಬಂದಿದೆ. ಈ ಟ್ವೀಟ್‌ ಅನ್ನು ಇಲ್ಲಿ ನೋಡಬಹುದು.

Also Read: ಶಿರಡಿ ಸಾಯಿ ಟ್ರಸ್ಟ್ ಹಜ್ ಸಮಿತಿಗೆ ₹35 ಕೋಟಿ ದೇಣಿಗೆ ನೀಡಿದೆಯೇ? ಇಲ್ಲ, ವೈರಲ್ ಹೇಳಿಕೆ ಸುಳ್ಳು

ಕೆಎಸ್‌ಆರ್‌ಟಿಸಿ ಟ್ವೀಟ್ ಸ್ಪಷ್ಟೀಕರಣದಲ್ಲಿ ಹೀಗೆ ಹೇಳಿದೆ. “ಸಾಮಾಜಿಕ ಜಾಲತಾಣಗಳಲ್ಲಿ ಮಂಡ್ಯ ಜಿಲ್ಲೆಯ ಹುಲ್ಲೇನಹಳ್ಳಿ ಬಳಿ ಬಸ್ ನಲ್ಲಿ ಕಿಟಕಿ ಮೂಲಕ ಹತ್ತೋವಾಗ ನಡೆದಿರುವ ಘಟನೆ ಎಂದು ಬಿಂಬಿಸಿ ಅಪಘಾತದ ವಿಡಿಯೋವನ್ನು ತಪ್ಪಾಗಿ ತೋರಿಸುತ್ತಿರುವ ಬಗ್ಗೆ ಸ್ಪಷ್ಟೀಕರಣ

ದಿನಾಂಕ 18/06/2023 ರಂದು ಕ.ರಾ.ರ.ಸಾ.ನಿಗಮ, ಚಾಮರಾಜನಗರ ವಿಭಾಗದ ನಂಜನಗೂಡು ಘಟಕದ ವಾಹನ‌ ಸಂಖ್ಯೆ KA-10-F-151 ಅನುಸೂಚಿ ಸಂಖ್ಯೆ34 ರಲ್ಲಿ ನಂಜನಗೂಡಿನಿಂದ ಟಿ.ನರಸೀಪುರ ಕ್ಕೆ ಕಾರ್ಯಚರಣೆ ಮಾಡುತ್ತಿರುವಾಗ, ಮಧ್ಯಾಹ್ನ ಸಮಯ ಸುಮಾರು 1.45 ರಲ್ಲಿ  ಬಸವರಾಜಪುರದ ಹತ್ತಿರ ಎದುರು ದಿಕ್ಕಿನಿಂದ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಲಾರಿ ಸಂಖ್ಯೆ TN-77-Q-8735 ಯ ಚಾಲಕನು ಸಂಸ್ಥೆಯ ವಾಹನದ ಬಲ‌ಹಿಂಬದಿಯ ಕಿಟಕಿಯ ಬಳಿ ಢಿಕ್ಕಿ ಮಾಡಿ ಅಪಘಾತವಾಗಿರುತ್ತದೆ. ಈ ಅಪಘಾತದಲ್ಲಿ ಕಿಟಕಿಗಳ ಬಳಿ ಇರುವ ಆಸನಗಳಲ್ಲಿ ಕುಳಿತಿದ್ದ ಮಹಿಳಾ ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿರುತ್ತದೆ.  ಶ್ರೀಮತಿ ಶಾಂತ ಕುಮಾರಿ,  W/O ಲೇ!! ಬಸವರಾಜು, 33 ವರ್ಷ, ಮಾಗುಡಿಲು, ಹೆಚ್.ಡಿ.ಕೋಟೆ ತಾಲೂಕು ಇವರಿಗೆ ಬಲಗೈ ತುಂಡಾಗಿದೆ ಹಾಗೂ ಶ್ರೀಮತಿ ರಾಜಮ್ಮ, W/O ನಾಗರಾಜ ನಾಯಕ, 50 ವರ್ಷ, ಹುಲ್ಲಹಳ್ಳಿ, ನಂಜನಗೂಡು ತಾಲೂಕು ಇವರಿಗೆ ಬಲಗೈ ತೀವ್ರ ಪೆಟ್ಟಾಗಿರುತ್ತದೆ. ಸಂಸ್ಥೆಯ ಅಧಿಕಾರಿಗಳು ಸ್ಥಳಪರಿಶೀಲನೆ ನಡಿಸಿದ್ದು, ಗಾಯಾಳುಗಳನ್ಬು ನಂಜನಗೂಡಿನ ಸರ್ಕಾರಿ ಆಸ್ಪತ್ರೆಯ ಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆ ಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಹಾಗೂ ಉತ್ತಮ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿರುತ್ತದೆ.

ಲಾರಿ ಚಾಲಕನ ವಿರುದ್ಧ ಬಿಳಿಗೆರೆ ಪೋಲೀಸ್ ಠಾಣೆಯಲ್ಲಿ ಎಫ್‌ಐ.ಆರ್ ದಾಖಲಾಗಿರುತ್ತದೆ. ಈ ಅಪಘಾತದಲ್ಲಿ ಸಂಸ್ಥೆಯ ಚಾಲಕರ ತಪ್ಪಿರುವುದಿಲ್ಲ.  ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ನಿಗಮವು ಭರಿಸುತ್ತಿದೆ. ಆದ್ದರಿಂದ ಸಾಮಾಜಿಕ‌ ಜಾಲತಾಣಗಳಲ್ಲಿ ಬಿಂಬಿಸುತ್ತಿರುವ ಹಾಗೆ ಕಿಟಿಕಿಯ ಮೂಲಕ ಬಸ್ಸನ್ನು‌ ಹತ್ತುವಾಗ ನಡೆದಿರುವ ಘಟನೆ ಇದಾಗಿರುವುದಿಲ್ಲ ಎಂಬುದನ್ನು ತಮ್ಮಗಳ ಆದ್ಯ ಗಮನಕ್ಕೆ ತರಲಾಗಿದೆ.” ಎಂದಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಕೆಎಸ್‌ಆರ್‌ಟಿಸಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ಡಾ.ಲತಾ ಟಿ.ಎಸ್‌. ಅವರನ್ನು ನ್ಯೂಸ್‌ಚೆಕರ್‌ ಸಂಪರ್ಕಿಸಿದೆ. ಪ್ರತಿಕ್ರಿಯೆ ವೇಳೆ ಅವರು “ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದ ಹೇಳಿಕೆಗಳು ಸಂಪೂರ್ಣ ಸುಳ್ಳಾಗಿದ್ದು, ಮಹಿಳೆಯ ಕೈ ಅಪಘಾತದ ವೇಳೆ ತುಂಡಾಗಿದೆ ಎಂದು ತಿಳಿಸಿದ್ದಾರೆ.” ಈ ಹೇಳಿಕೆಗೆ ಪೂರಕವಾಗಿ ಅವರು ನ್ಯೂಸ್‌ಚೆಕರ್‌ಗೆ ಘಟನೆ ಬಳಿಕ ತೆಗೆದ ಫೋಟೊಗಳನ್ನು ಕೂಡ ಕಳಿಸಿದ್ದಾರೆ.

ಘಟನೆ ಕುರಿತು ಹೆಚ್ಚಿನ ಸ್ಪಷ್ಟತೆಗೆ ನಾವು ಘಟನೆ ನಡೆದ ವ್ಯಾಪ್ತಿಯ ಮೈಸೂರು ಜಿಲ್ಲಾ ಪೊಲೀಸ್‌ ಮೂಲಗಳನ್ನು ಸಂಪರ್ಕಿಸಿದ್ದು, ಈ ವೇಳೆ ಅವರು ಎಫ್ಐಆರ್‌ ಪ್ರತಿಯನ್ನು ನ್ಯೂಸ್‌ಚೆಕರ್‌ಗೆ ಕಳಿಸಿದ್ದಾರೆ.

ಈ ಎಫ್‌ಐಆರ್ ಪ್ರಕಾರ, “ಜೂನ್‌ 18, 2023ರಂದು ಘಟನೆ ನಡೆದಿದ್ದು, ದೂರುದಾರರು ಮತ್ತು ಅವರ ಪತ್ನಿ ಈ ರಾಜಮ್ಮ, ಅವರ ಮಗ ಮಹದೇವ ಸ್ವಾಮಿ, ಮಗ ಮಧು ಮತ್ತು ಸಂಬಂಧಿ ಶಾಂತಕುಮಾರಿ ಬೆಳಗ್ಗೆ 10 ಗಂಟೆಗೆ ನಂಜನಗೂಡಿನಿಂದ ಮಲೆ ಮಹದೇಶ್ವರಕ್ಕೆ ತೆರಳಲು ಕೆಎಸ್‌ಆರ್‌ಟಿಸಿ ಬಸ್ಸು ಹತ್ತಿದ್ದಾರೆ. ಜೊತೆಗೆ ಬಸ್ಸಿನ ಬಲಭಾಗದ ಸೀಟುಗಳಲ್ಲಿ ಕುಳಿತಿದ್ದಾರೆ. ಬಸ್ಸು ಟಿ ನರಸೀಪುರ ರಸ್ತೆಯಲ್ಲಿ ಸಂಚರಿಸುವ ವೇಳೆ ಟಿ ನರಸೀಪುರ ಕಡೆಯಿಂದ ಭತ್ತವನ್ನು ಕಟಾವು ಮಾಡುವ ಯಂತ್ರವನ್ನು ಹೊತ್ತ ಟೆಂಪೋ ಒಂದು ಬಸ್ಸಿನ ಬಲಭಾಗಕ್ಕೆ ಡಿಕ್ಕಿ ಹೊಡೆದಿದ್ದು ಈ ವೇಳೆ ದೂರುದಾರರ ಹೆಂಡತಿ ಈರಾಜಮ್ಮ ಅವರ ಬಲಗೈ ತುಂಡಾಗಿದೆ ಮತ್ತು ದೂರುದಾರರ ಅತ್ತಿಗೆ ಮಗಳು ಶಾಂತಕುಮಾರಿ ಅವರ ಬಲಗೈಗೆ ಗಾಯವಾಗಿದೆ. ಜೊತೆಗೆ ಮಗ ಮಹದೇವಸ್ವಾಮಿ ಅವರಿಗೆ ಪೆಟ್ಟಾಗಿದೆ. ಹಾಗೂ ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರಿಗೆ ಸಣ್ಣ ಪುಟ್ಟ ಪೆಟ್ಟಾಗಿದೆ.” ಎಂದಿದೆ.

ನ್ಯೂಸ್‌ಚೆಕರ್‌ ಈ ಎಫ್‌ಐಆರ್ ಪ್ರತಿಯನ್ನು ಕೂಲಂಕಷವಾಗಿ ಪರೀಕ್ಷಿಸಿದ ವೇಳೆ, ಕೈ ತುಂಡಾದವರ ಹೆಸರು ಮತ್ತು ಕೈಗೆ ಗಂಭೀರ ಗಾಯಗೊಂಡವರ ಹೆಸರು ಎಫ್‌ಐಆರ್‌ ಪ್ರತಿಯಲ್ಲಿ ಮತ್ತು ಕೆಎಸ್‌ಆರ್‌ಟಿಸಿ ಸ್ಪಷ್ಟೀಕರಣದ ಪ್ರತಿಯಲ್ಲಿ ವ್ಯತ್ಯಾಸವಾಗಿರುವುದು ಕಂಡುಬಂದಿದೆ.

Also Read: ಫೋಟೋ ತೆಗೆಸಿಕೊಳ್ಳುತ್ತಿರುವ ಯುವತಿಯನ್ನು ಮೊಸಳೆ ನುಂಗಿದ್ದು ನಿಜವೇ, ಸತ್ಯ ಏನು?

ಈ ಬಗ್ಗೆ ಹೆಚ್ಚಿನ ಮಾಹಿತಿಗೆ ನ್ಯೂಸ್‌ಚೆಕರ್‌ ಬಿಳಿಗೇರಿ ಠಾಣೆಯನ್ನು ಸಂಪರ್ಕಿಸಿದ್ದು, ಈ ವೇಳೆ “ಅಪಘಾತದ ತೀವ್ರತೆಗೆ ಈರಾಜಮ್ಮ ಅವರ ಕೈ ದೇಹದಿಂದ ಬೇರ್ಪಟ್ಟಿದ್ದು, ಶಾಂತಕುಮಾರಿ ಅವರ ಬಲ ಮುಂಗೈಗೆ ತೀವ್ರ ರೀತಿಯ ಗಾಯಗಳಾಗಿವೆ” ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.

Conclusion

ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಘಟನೆ ನಂಜನಗೂಡಿನಿಂದ ಟಿ.ನರಸೀಪುರ ಮಾರ್ಗದಲ್ಲಿ ನಡೆದಿದ್ದು, ಅಪಘಾತದಿಂದಾಗಿ ಮಹಿಳೆಯೊಬ್ಬರ ಕೈ ತುಂಡಾಗಿರುತ್ತದೆ. ಹೊರತಾಗಿ ಕ್ಲೇಮಿನಲ್ಲಿ ಹೇಳಿದಂತೆ ಮಂಡ್ಯದ ಹತ್ತಿರ ಹುಲ್ಲೀನಹಳ್ಳಿಯಲ್ಲಿ ನಡೆದಿದೆ ಮತ್ತು ಕೆಎಸ್‌ಆರ್‌ಟಿಸಿ ಬಸ್ಸಿಗೆ ಜನ ಹತ್ತುವಾಗ ಮಹಿಳೆಯರ ಸಂಖ್ಯೆ ಜಾಸ್ಥಿ ಇದ್ದರಿಂದ ಕಿಟಿಕಿಯ ಮೂಲಕ ಹತ್ತಲು ಹೋಗಿ ಕೈ ತುಂಡಾಗಿದೆ ಎನ್ನುವುದು ಸುಳ್ಳಾಗಿದೆ.

Result: False

Report By Kannada News 18, Dated: June 26, 2023

Report By Kannadaprabha, Dated: June 25, 2023

Tweet By KSRTC, Dated: June 25, 2023

Conversation with Dr. Latha T.S., Chief Public Relation Officer, KSRTC

Conversation with SP office, Mysore District Police

Conversation with Biligeri Police station, Mysore


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.