Authors
ಹುಡುಗಿಯ ದುಪ್ಪಟ್ಟಾ ಎಳೆದವರ ಪರಿಸ್ಥಿತಿ, ಮನೆ ಬಳಿ ಬಸ್ ನಿಲ್ಲಿಸದ್ದಕೆ ಬಸ್ ಪುಡಿಗೈದ ಮುಸ್ಲಿಂ ಗುಂಪು ಮಧ್ಯಪ್ರದೇಶದ ಹುಕ್ಕಾ ಬಾರ್ನಲ್ಲಿ ಹಿಂದೂ ಹುಡುಗಿಯರೊಂದಿಗೆ ಮುಸ್ಲಿಂ ಹುಡುಗರು, ಪಾಕಿಸ್ಥಾನ ಕ್ರಿಕೆಟಿಗರಿಗೆ ಕೇಸರಿಶಾಲು ಎಂಬ ಕೋಮು ಬಣ್ಣವಿರುವ ಕ್ಲೇಮ್ ಗಳೊಂದಿಗೆ ವಿವಿಧ ಕ್ಲೇಮ್ ಗಳು ಈವಾರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿವೆ. ಇದು ಹೊರತಾಗಿ ಕಾವೇರಿ ವಿವಾದ ಹಿನ್ನೆಲೆಯಲ್ಲಿ ತಮಿಳುನಾಡು ಲಾರಿ ಚಾಲಕನಿಗೆ ಹಲ್ಲೆ, ಅಂಜೂರದ ಹಣ್ಣು ನೆನೆಸಿಟ್ಟು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಉಸಿರಾಟ ತೊಂದರೆ, ಕಫ ನಿವಾರಣೆಯಾಗುತ್ತದೆ, ಮನೆ ಬಳಕೆ ಅಡುಗೆ ಅನಿಲಕ್ಕೆ ರಾಜ್ಯದ ಶೇ.55ರಷ್ಟು ತೆರಿಗೆ ಎಂಬ ಕ್ಲೇಮ್ ಗಳು ಹರಿದಾಡಿವೆ. ನ್ಯೂಸ್ಚೆಕರ್ ಇವುಗಳನ್ನು ಸತ್ಯಶೋಧನೆ ನಡೆಸಿದ್ದು ಸುಳ್ಳು ಎಂದು ಕಂಡುಬಂದಿದೆ.
ಹುಡುಗಿಯ ದುಪ್ಪಟ್ಟಾ ಎಳೆದ ಆರೋಪಿಗಳ ಪರಿಸ್ಥಿತಿ ಹೀಗಾಗಿದೆ ಎಂದ ವೈರಲ್ ವೀಡಿಯೋ ನಿಜವೇ?
ಕಾಲಿಗೆ ಬ್ಯಾಂಡೇಜ್ ಸುತ್ತಿಕೊಂಡಿರುವ ಮೂವರು ಯುವಕರು ನೆಲದ ಮೇಲೆ ಕಾಲುಗಳನ್ನು ಎಳೆಯುತ್ತ ಸಾಗುತ್ತಿರುವ ದೃಶ್ಯವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡಿತ್ತು. ಇದರೊಂದಿಗೆ ಉತ್ತರ ಪ್ರದೇಶದಲ್ಲಿ ಹುಡುಗಿಯ ದುಪ್ಪಟ್ಟಾ ಹಿಡಿದು ಬೈಕಿನಲ್ಲಿ ಎಳೆದುಕೊಂಡು ಹೋಗಿ ಹುಡುಗಿಯ ಸಾವಿಗೆ ಕಾರಣರಾದ ಮೂವರು ಇಸ್ಲಾಂ ಜಿಹಾದಿಗಳಿಗೆ ಯೋಗಿ ಸರ್ಕಾರ ನೀಡಿರುವ ಬಹುಮಾನ! ಎಂಬ ಹೇಳಿಕೆ ಇತ್ತು. ಪರಿಶೀಲನೆ ವೇಳೆ ಇದು ಉತ್ತರ ಪ್ರದೇಶದ್ದಲ್ಲ. ಇದು ರಾಜಸ್ಥಾನದ ಭರತ್ ಪುರದ್ದಾಗಿದ್ದು, ಅಲ್ಲಿ ಕೊಲೆ ಪ್ರಕರಣವೊಂದರ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದರು, ಅವರು ಹೀಗೆ ಕಾಲು ಎಳೆದ ವೀಡಿಯೋ ಇದು ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಮನೆ ಬಳಿ ಬಸ್ ನಿಲ್ಲಿಸದ್ದಕ್ಕೆ ಮುಸ್ಲಿಂ ಗುಂಪು ಬಸ್ ಪುಡಿಗಟ್ಟಿತೇ, ಸತ್ಯ ಏನು?
ಮಹಿಳೆಯರಿಗೆ ಕರ್ನಾಟಕ ಸರ್ಕಾರ, ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡಿದೆ. ಮುಸ್ಲಿಂ ಮಹಿಳೆಯೊಬ್ಬರು ಬಸ್ಸನ್ನು ತಮ್ಮ ಮನೆ ಬಳಿ ನಿಲ್ಲಿಸಲು ಹೇಳಿದರು. ಆದರೆ ನಿಲ್ಲಿಸದ್ದಕ್ಕೆ ಮುಸ್ಲಿಂ ಗುಂಪು ಬಸ್ ಪುಡಿ ಮಾಡಿದೆ ಎಂದು ಕ್ಲೇಮ್ ಒಂದು ಹರಿದಾಡಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದ ವೇಳೆ ಸೂರತ್ ನಲ್ಲಿ ಗುಂಪು ಹತ್ಯೆ ವಿರುದ್ಧ ನಡೆದ ಪ್ರತಿಭಟನೆ ಹಿಂಸಾತ್ಮಕವಾದಾಗ ಗುಂಪೊಂದು ಬಸ್ ಪುಡಿಗಟ್ಟಿದ ದೃಶ್ಯ ಇದಾಗಿದೆ ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಮಧ್ಯಪ್ರದೇಶದ ಹುಕ್ಕಾ ಬಾರ್ ನಲ್ಲಿ ಮುಸ್ಲಿಂ ಯುವಕರು, ಹಿಂದೂ ಹುಡುಗಿಯರು ಸಿಕ್ಕಿಬಿದ್ದಿದ್ದಾರೆಯೇ, ಸತ್ಯ ಏನು?
ಮಧ್ಯಪ್ರದೇಶದ ಹುಕ್ಕಾ ಬಾರ್ ಮೇಲೆ ನಡೆದ ದಾಳಿಯಲ್ಲಿ ಮುಸ್ಲಿಂ ಯುವಕರು, ಹಿಂದೂ ಹುಡುಗಿಯರು ಸಿಕ್ಕಿಬಿದ್ದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದನ್ನು ಶೇರ್ ಮಾಡಲಾಗಿತ್ತು. ಆದರೆ ವಾಸ್ತವವಾಗಿ ಈ ವೀಡಿಯೋ ಉತ್ತರ ಪ್ರದೇಶದ ಆಗ್ರಾದ್ದು ಮತ್ತು ಮುಸ್ಲಿಂ ಹುಡುಗಿಯರೊಂದಿಗೆ ಹಿಂದೂ ಹುಡುಗಿಯರು ಸಿಕ್ಕಿಬಿದ್ದಿದ್ದಾರೆ ಎನ್ನುವುದು ಸುಳ್ಳು, ಸಿಕ್ಕಿಬಿದ್ದವರು ಒಂದೇ ಕೋಮಿನವರಾಗಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಮನೆ ಬಳಕೆ ಅಡುಗೆ ಅನಿಲಕ್ಕೆ ರಾಜ್ಯ ಸರ್ಕಾರ ಶೇ.55 ತೆರಿಗೆ ಹಾಕುವುದು ನಿಜವೇ?
ಮನೆ ಬಳಕೆ ಅಡುಗೆ ಅನಿಲಕ್ಕೆ ರಾಜ್ಯ ಸರ್ಕಾರದಿಂದ ಶೇ.55 ತೆರಿಗೆ ವಿಧಿಸಲಾಗುತ್ತಿದೆ, ಕೇಂದ್ರ ಸರ್ಕಾರ 24 ರೂಪಾಯಿ ತೆರಿಗೆ ವಿಧಿಸಿದರೆ, ರಾಜ್ಯ ಸರ್ಕಾರ 291ರಷ್ಟು ತೆರಿಗೆ ವಿಧಿಸುತ್ತಿದೆ ಎಂದು ಕ್ಲೇಮಿನಲ್ಲಿ ಹೇಳಲಾಗಿತ್ತು. ಸತ್ಯಶೋಧನೆಯಲ್ಲಿ ನ್ಯೂಸ್ಚೆಕರ್, ದೇಶದಲ್ಲಿ ಈಗ ಜಿಎಸ್ ಟಿ ತೆರಿಗೆ ಪದ್ಧತಿ ಚಾಲ್ತಿಯಲ್ಲಿದ್ದು ಸಿಜಿಎಸ್ಟಿ ಶೇ.2.5 ಮತ್ತು ಎಸ್ಜಿಎಸ್ಟಿ ಶೇ.2.5 ಅಂದರೆ ಒಟ್ಟು ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಶೇ.55ರಷ್ಟು ತೆರಿಗೆ ಎನ್ನುವುದು ಸುಳ್ಳಾಗಿದೆ ಎಂದು ಕಂಡುಕೊಂಡಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಪಾಕಿಸ್ಥಾನ ಕ್ರಿಕೆಟಿಗರಿಗೆ ಕೇಸರಿ ಶಾಲುಗಳನ್ನು ಮಾತ್ರವೇ ಹಾಕಿ ಸ್ವಾಗತಿಸಲಾಯಿತು ಎನ್ನುವುದು ನಿಜವೇ?
ಐಸಿಸಿ ಕ್ರಿಕೆಟ್ ವರ್ಲ್ಡ್ ಕಪ್ಗಾಗಿ ಭಾರತಕ್ಕೆ ಬಂದಿಳಿದ ಪಾಕಿಸ್ಥಾನ ಕ್ರಿಕೆಟಿಗರಿಗೆ ಕೇಸರಿ ಶಾಲುಗಳನ್ನು ಹಾಕಿ ಸ್ವಾಗತಿಸಲಾಯಿತು ಎಂದು ಕ್ಲೇಮೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಹೈದ್ರಾಬಾದ್ನ ಪಾರ್ಕ್ ಹಯಾಟ್ ಹೋಟೆಲ್ಗೆ ಬಂದ ಪಾಕಿಸ್ತಾನ ಕ್ರಿಕೆಟಿಗರಿಗೆ ಸಾಂಪ್ರದಾಯಿಕವಾಗಿ ಶಾಲು ಹಾಕಿ ಬರಮಾಡಿಕೊಳ್ಳಲಾಗಿದೆ. ಈ ವೇಳೆ ಕೇಸರಿ ಶಾಲು ಮಾತ್ರವಲ್ಲದೆ ಇತರ ಬಣ್ಣದ ಶಾಲುಗಳನ್ನೂ ಹಾಕಿ ಬರಮಾಡಿಕೊಳ್ಳಲಾಗಿತ್ತು ಎಂದು ನ್ಯೂಸ್ ಚೆಕರ್ ಸತ್ಯಶೋಧನೆಯಲ್ಲಿ ಗೊತ್ತಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಕಾವೇರಿ ವಿವಾದ ಹಿನ್ನೆಲೆ ತಮಿಳುನಾಡು ಲಾರಿ ಚಾಲಕನ ಮೇಲೆ ಹಲ್ಲೆಯ ವೀಡಿಯೋ ಈಗಿನದ್ದಲ್ಲ!
ಕನ್ನಡ ಕಾರ್ಯಕರ್ತರು ಎಂದು ಗುರುತಿಸಲಾದ ವ್ಯಕ್ತಿಗಳು ತಮಿಳುನಾಡು ಲಾರಿ ಚಾಲಕನೊಬ್ಬನ ಮೇಲೆ ಹಲ್ಲೆ ಮಾಡುತ್ತಿರುವ ವೀಡಿಯೋವನ್ನು ಕಾವೇರಿ ವಿವಾದ ಹಿನ್ನೆಲೆಯಲ್ಲಿ ಹಂಚಿಕೊಳ್ಳಲಾಗುತ್ತಿದೆ. ಶೋಧನೆ ವೇಳೆ ಈ ವೀಡಿಯೋ ಇತ್ತೀಚಿನದ್ದಲ್ಲ, ಇದು 2016ರ ಕಾವೇರಿ ವಿವಾದದ ಸಮಯದ್ದು ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಅಂಜೂರದ ಹಣ್ಣು ಖಾಲಿ ಹೊಟ್ಟೆಯಲ್ಲಿ ತಿಂದರೆ ಉಸಿರಾಟ ತೊಂದರೆ, ಕಫ ನಿವಾರಣೆಯಾಗುತ್ತದೆಯೇ?
ಅಂಜೂರದ ಹಣ್ಣು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಉಸಿರಾಟ ತೊಂದರೆಗಳು ನಿವಾರಣೆಯಾಗುತ್ತದೆ ಮತ್ತು ಕಫ ಕರಗುತ್ತದೆ ಎಂದು ಹೇಳಿಕೆಯೊಂದರಲ್ಲಿ ಹೇಳಲಾಗಿದೆ. ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಕಂಡುಬಂದಿಲ್ಲ. ಜೊತೆಗೆ ಈ ಹೇಳಿಕೆ ಸತ್ಯವಾದ್ದಲ್ಲ ಎಂದು ಕಂಡುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.