Authors
ಕೋವಿಡ್ 19 ತೀವ್ರಗೊಳ್ಳುತ್ತಿರುವಂತೆ, ‘ಎಕ್ಸ್‌ಬಿಬಿ ಒಮಿಕ್ರಾನ್ ರೂಪಾಂತರಿ’ಯ ರೋಗ ಲಕ್ಷಣ, ಮುನ್ನೆಚ್ಚರಿಕೆ ಬಗ್ಗೆ ಮೆಸೇಜ್ ಒಂದು ವಾಟ್ಸಾಪ್‌ನಲ್ಲಿ ವೈರಲ್ ಆಗುತ್ತಿದೆ.
ಈ ವೈರಲ್ ಮೆಸೇಜ್‌ನಲ್ಲಿ”ಕೋವಿಡ್ ಒಮಿಕ್ರಾನ್ ಎಕ್ಸ್ ಬಿಬಿ ಮಾದರಿಯು ಡೆಲ್ಟಾ ಮಾದರಿಗಿಂತ 5 ಪಟ್ಟು ತೀವ್ರ ಸ್ವರೂಪದ್ದಾಗಿದ್ದು, ಹೆಚ್ಚು ಸಾವಿನ ಪ್ರಮಾಣವನ್ನು ಹೊಂದಿದೆ” ಎನ್ನಲಾಗಿದೆ. ಇದರೊಂದಿಗೆ “ಎಕ್ಸ್‌ಬಿಬಿ ರೋಗಲಕ್ಷಣದಲ್ಲಿ ಕಫ, ಜ್ವರ ಯಾವುದೂ ಇಲ್ಲದೆ ಗಂಟು ನೋವು, ತಲೆನೋವು, ಬೆನ್ನಿನ ಮೇಲ್ಭಾಗ ನೋವು, ಕುತ್ತಿಗೆ ನೋವು, ನ್ಯುಮೋನಿಯಾ ಮಾತ್ರ ಇದರ ರೋಗ ಲಕ್ಷಣವಾಗಿದೆ” ಎಂದು ಹೇಳಲಾಗಿದೆ.
ಈ ಮೆಸೇಜ್‌ನ ಪೂರ್ಣ ಪಾಠ ಇಲ್ಲಿದೆ.
ಇದೇ ರೀತಿಯ ಕ್ಲೇಮ್‌ಗಳನ್ನು ನ್ಯೂಸ್‌ಚೆಕರ್ ವಾಟ್ಸಾಪ್ ಟಿಪ್‌ಲೈನ್ (+91-9999499044) ಮೂಲಕ ವಿವಿಧ ಗ್ರಾಹಕರಿಂದ ಪಡೆದಿದ್ದು ಸತ್ಯಶೋಧನೆ ನಡೆಸುವಂತೆ ಮನವಿಗಳು ಬಂದಿವೆ.
Fact Check/ Verification
ಅದರಂತೆ ನಾವು ಸತ್ಯಶೋಧನೆಗೆ ಮುಂದಾಗಿದ್ದು, ಈ ಕುರಿತು ಕೀವರ್ಡ್ ಸರ್ಚ್ ನಡೆಸಿದಾಗ, ಕೇಂದ್ರ ಆರೋಗ್ಯ ಸಚಿವಾಲಯ ವೈರಲ್ ಮೆಸೇಜ್ ಸುಳ್ಳು ಎಂಬುದಾಗಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿರುವುದು ಕಂಡು ಬಂದಿದೆ. “ಕೋವಿಡ್ 19ನ ಎಕ್ಸ್ ಬಿಬಿ ರೂಪಾಂತರಿ ಕುರಿತಂತೆ, ವಾಟ್ಸಾಪ್‌ನ ಕೆಲವು ಗ್ರೂಪ್ಗಳಲ್ಲಿ ಈ ಮೆಸೇಜ್ ಹರಡುತ್ತಿರುವುದು ಕಂಡು ಬಂದಿದೆ. ಈ ಮೆಸೇಜ್ ಸುರ್ಳಳಾಗಿದ್ದು, ದಾರಿ ತಪ್ಪಿಸುವಂತೆ ಇದೆ” ಎಂದು ಆ ಟ್ವೀಟ್ ಹೇಳಿದೆ.
ಕಥುವಾ ಡಿಐಪಿಆರ್ ಕೂಡ ಈ ಬಗ್ಗೆ ಟ್ವೀಟ್ ಮಾಡಿರುವುದು ಪತ್ತೆಯಾಗಿದ್ದು, ಅದರಲ್ಲೂಎಕ್ಸ್ ಬಿಬಿ ಕುರಿತ ಮೆಸೇಜ್ ಸುಳ್ಳು ಎಂದು ಹೇಳಲಾಗಿದೆ.
ಎಕ್ಸ್ ಬಿಬಿ ಮಾದರಿಯು ಮೊದಲು ಆಗಸ್ಟ್ 13, 2022ರಂದು ಪತ್ತೆಯಾಗಿದ್ದು ಅದರ ತೀವ್ರತೆ ಮತ್ತು ಮರು ಸೋಂಕಿನ ಅಪಾಯದ ಕುರಿತು ಇತ್ತೀಚಿನ ಲಭ್ಯ ಮಾಹಿತಿ ಅಕ್ಟೋಬರ್ 2022 ರ ವರದಿಯಿಂದ ತಿಳಿದುಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ (WHO)ಯ ತಾಂತ್ರಿಕ ಸಲಹಾ ಗುಂಪು ಭಾರತ, ಸಿಂಗಾಪುರ ಮತ್ತು ವಿಶ್ವದ ಇತರ ಕೆಲವು ದೇಶಗಳಿಂದ ಇದರ ಕುರಿತ ಆರಂಭಿಕ ಪುರಾವೆಗಳನ್ನು ಪರಿಶೀಲಿಸಿದ್ದು, ಎಕ್ಸ್‌ಬಿಬಿ ರೂಪಾಂತರಿಯು ರೋಗದ ತೀವ್ರತೆಯನ್ನು ಹೆಚ್ಚಿಸುತ್ತದೆ ಎಂಬುದಕ್ಕೆ ಯಾವುದೇ ಪುರಾವೆಳಿಲ್ಲ ಎಂದು ಹೇಳಿದೆ. “ಹೆಚ್ಚಿನ ಅಧ್ಯಯನಗಳು ಅಗತ್ಯವಿದ್ದರೂ, ಪ್ರಸ್ತುತ ದತ್ತಾಂಶಗಳು ಎಕ್ಸ್‌ಬಿಬಿ ಸೋಂಕುಗಳಿಗೆ ರೋಗದ ತೀವ್ರತೆಯಲ್ಲಿ ಗಣನೀಯ ವ್ಯತ್ಯಾಸಗಳಿವೆ ಎಂದು ಹೇಳುವುದಿಲ್ಲ” ಎಂದು ಇದು ಹೇಳುತ್ತದೆ.
ಇನ್ನು ಎಕ್ಸ್ ಬಿಬಿ ರೂಪಾಂತರಿ ಒಮಿಕ್ರಾನ್ ರೂಪಾಂತರಿಯ ಉಪವರ್ಗವಾಗಿದೆ. ಇದರ ಕುರಿತ ಅಧ್ಯಯನಗಳ ಪ್ರಕಾರ, ಡೆಲ್ಟಾ ರೂಪಾಂತರಿಗಿಂತ ಕಡಿಮೆ ತೀವ್ರತೆ ಹೊಂದಿರುತ್ತದೆ. ಆದ್ದರಿಂದ ಇದು ಡೆಲ್ಟಾ ರೂಪಾಂತರಿಗಿಂತ ಐದು ಪಟ್ಟು ಹೆಚ್ಚು ತೀವ್ರತೆಯ ವೈರಾಣು ಎಂದು ಹೇಳುವುದು ಸತ್ಯವಲ್ಲ.
ಈ ಕುರಿತ ಸ್ಪಷ್ಟೀಕರಣಕ್ಕಾಗಿ ನ್ಯೂಸ್‌ಚೆಕರ್ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗ ವಿಭಾಗದ ಮಾಜಿ ಮುಖ್ಯಸ್ಥರಾದ ಡಾ.ಆರ್.ಗಂಗಾಖೇಡ್ಕರ್ ಅವರನ್ನು ಸಂಪರ್ಕಿಸಿದ್ದು, ಅವರು, ಈ ವೈರಲ್ ಮೆಸೇಜ್ ಸತ್ಯವಲ್ಲ ಎಂದು ಹೇಳಿದ್ದಾರೆ.
Also Read: ರಾಹುಲ್ ಗಾಂಧಿ ಶೂ ಲೇಸ್ ಕಟ್ಟಿದ ಮಾಜಿ ಸಚಿವ?: ಸುಳ್ಳು ಕ್ಲೇಮ್‌ನೊಂದಿಗೆ ವೀಡಿಯೋ ವೈರಲ್
“ಎಕ್ಸ್ ಬಿಬಿ ಕೂಡ ಇತರ ಯಾವುದೇ ಒಮಿಕ್ರಾನ್ ರೂಪಾಂತರಿ ರೀತಿ ಒಂದೇ ರೀತಿ ರೋಗಲಕ್ಷಣಗಳನ್ನು ಹೊಂದಿದ್ದು, ಇವುಗಳನ್ನು ಪತ್ತೆ ಹಚ್ಚಬಹುದಾಗಿದ್ದು, ವೈರಲ್ ಮೆಸೇಜ್‌ನಲ್ಲಿ ಹೇಳುರುವಂತೆ ಇಲ್ಲ. ಎಕ್ಸ್ ಬಿಬಿ ರೂಪಾಂತರಿ ತಗುಲಿದ ಜನರು ಜ್ವರ, ಕಫ ಮತ್ತು ದೇಹದಲ್ಲಿ ಸಾಮಾನ್ಯ ರೀತಿಯ ನೋವನ್ನು ಹೊಂದಿರುತ್ತಾರೆ. ಜೊತೆಗೆ ಇವೆಲ್ಲ ಸಣ್ಣ ಪ್ರಮಾಣದ ಲಕ್ಷಣಗಳಾಗಿರುತ್ತವೆ. ಆದರೆ ಇದು ಯಾವುದೇ ಕಾರಣಕ್ಕೂ ಡೆಲ್ಟಾಕ್ಕಿಂತ ತೀವ್ರತರವಾದ್ದಲ್ಲ. ಎಕ್ಸ್ ಬಿಬಿ ರೂಪಾಂತರಿಯಲ್ಲಿ ಕಡಿಮೆ ಪ್ರಮಾಣದ ಆಸ್ಪತ್ರೆ ದಾಖಲಾತಿ ಮತ್ತು ಸಾವಿನ ಪ್ರಮಾಣಹೊಂದಿದ್ದು, ಇದು ಭಾರತಕ್ಕೆ ಹೊಸದೇನೂ ಅಲ್ಲ” ಎಂದು ಡಾ.ಗಂಗಾಖೇಡ್ಕರ್ ಅವರು ಹೇಳಿದ್ದಾರೆ.
“ಯಾವುದೇ ಜಿನೋಮ್ ಸೀಕ್ವೆನ್ಸಿಂಗ್ ದತ್ತಾಂಶವು ಬಿಡುಗಡೆಯಾದಾಗ ಕೆಲವರು ಅದರಲ್ಲಿ ಒಂದು ಪದವನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮಗಳ ಮೂಲಕ ಸಮಾಜದಲ್ಲಿ ಅನಗತ್ಯ ಭಯವನ್ನು ಸೃಷ್ಟಿಸುತ್ತಾರೆ” ಎಂದು ಅವರು ಹೇಳಿದ್ದಾರೆ.
ಇನ್ನು, ಕೋವಿಡ್ ಸಾಂಕ್ರಾಮಿಕ ರೋಗ ಶುರುವಾದಾಗಿನಿಂದ ಅದರ ಬಗ್ಗೆ ನಿರಂತರ ಗಮನ ಇಡುತ್ತಿರುವ ವಿಶ್ವ ಆರೋಗ್ಯ ಸಂಸ್ಥೆಯ ವೆಬ್‌ಸೈಟ್‌ನ ಇತ್ತೀಚಿನ ಅಪ್ಡೇಟ್‌ಗಳ ಪ್ರಕಾರ, ಒಮಿಕ್ರಾನ್ ರೂಪಾಂತರವೇ ವಿಶೇಷವಾಗಿ ಬಿ.1.1.529 ಸದ್ಯದ ಆತಂಕವಾಗಿದ್ದು ಎಕ್ಸ್ ಬಿಬಿ ರೂಪಾಂತರಿ ಅಲ್ಲ ಎಂಬುದನ್ನು ನಾವು ಕಂಡುಕೊಂಡಿದ್ದೇವೆ.
Conclusion
ಕೋವಿಡ್ 19ನ ಎಕ್ಸ್‌ಬಿಬಿ ರೂಪಾಂತರಿ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೈರಲ್ ಮೆಸೇಜ್ ತಪ್ಪು ಎಂಬುದನ್ನು ನ್ಯೂಸ್‌ಚೆಕರ್ ಕಂಡುಕೊಂಡಿದೆ.
Result: False
Our Sources
Tweet by Ministry of Health and Family Welfare, on December 22, 2022
Tweet by Information & PR, Kathua, on December 22, 2022
Press note by WHO on October 22, 2022
Conversation with Dr R Gangakhedkar, former head of epidemiology and communicable diseases at the Indian Council of Medical Research
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.