ಮುಸ್ಲಿಂ ಮೀಸಲಾತಿ ರದ್ದತಿ ವಿವಾದ ಮತ್ತು ಅದರ ಹಿಂದಿನ ರಾಜಕಾರಣ 

ಮುಸ್ಲಿಂ ಮೀಸಲಾತಿ ರದ್ದತಿ ವಿರುದ್ಧ ಪ್ರತಿಭಟನೆ

ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ ರಾಜ್ಯದ ಬಸವರಾಜ ಬೊಮ್ಮಾಯಿ ಸರ್ಕಾರ, ದಶಕಗಳ ಕಾಲ ಜಾರಿಯಲ್ಲಿದ್ದ ಶೇ.4ರಷ್ಟರ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿರುವುದು ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿದೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಮೀಸಲಾತಿಯ ಇತಿಹಾಸ, ಮೀಸಲಾತಿಯ ವಿಚಾರಗಳ ಕುರಿತ ಸಮಗ್ರ ವಿಚಾರಗಳ ಕುರಿತ ಒಂದು ನೋಟ ಇಲ್ಲಿದೆ.

ಈಗ ಸರ್ಕಾರ ಮಾಡಿದ್ದೇನು?

2022ರಲ್ಲಿ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಸಚಿವ ಸಂಪುಟ ಸಮಿತಿ ಮೀಸಲಾತಿಯಲ್ಲಿ ಹೊಸ ಎರಡು ವರ್ಗಗಳನ್ನು ಮಾಡಲು ಸಮ್ಮತಿಸಿತ್ತು ಒಬಿಸಿ ವರ್ಗದ 2ಸಿ ಮತ್ತು 2ಡಿ ಅಡಿಯಲ್ಲಿ ಒಕ್ಕಲಿಗರು ಮತ್ತು ವೀರಶೈವ ಲಿಂಗಾಯತರಿಗೆ ಮೀಸಲಾತಿ ನೀಡುವ ನಿರ್ಧಾರಕ್ಕೆ ಬರಲಾಗಿತ್ತು.(ರಾಜ್ಯದಲ್ಲಿ ಒಕ್ಕಲಿಗ ಮತ್ತು ವೀರಶೈವ ಸಮುದಾಯ ಅತಿ ದೊಡ್ಡ ಸಮುದಾಯವಾಗಿದ್ದು, ಒಕ್ಕಲಿಗರು ಒಟ್ಟು ಜನಸಂಖ್ಯೆಯ ಶೇ.11.5ರಷ್ಟಿದ್ದರೆ, ಲಿಂಗಾಯತರು ಶೇ.17 ರಷ್ಟಿದ್ದು, ರಾಜಕೀಯವಾಗಿ ಹೆಚ್ಚಿನ ಪ್ರಾತಿನಿಧ್ಯ ಹೊಂದಿದ್ದಾರೆ)  ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಧ್ಯಾಂತರ ವರದಿಯನ್ನು ಆಧರಿಸಿ ಸಚಿವ ಸಂಪುಟ ಸಮಿತಿ ಈ ತೀರ್ಮಾನಕ್ಕೆ ಬಂದಿತ್ತು.

ಮುಸ್ಲಿಂ ಮೀಸಲಾತಿ 2ಬಿ ರದ್ದತಿ ಮೊದಲು ಇದ್ದ ಚಿತ್ರಣ ಇಲ್ಲಿದೆ.

ಮುಸ್ಲಿಂ ಮೀಸಲಾತಿ ರದ್ದತಿ ವಿವಾದ ಮತ್ತು ಅದರ ಹಿಂದಿನ ರಾಜಕಾರಣ; ಮುಸ್ಲಿಂ ಮೀಸಲಾತಿ 2ಬಿ ರದ್ದತಿ ಮೊದಲು ಇದ್ದ ಚಿತ್ರಣ

ಮಾರ್ಚ್‌ 25, 2023ರಂದು ಹಿಂದುಗಳಿದ ವರ್ಗಗಳಿಗೆ ಮೀಸಲಾತಿಯನ್ನು ಪುನರ್‌ವರ್ಗೀಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಜೊತೆಗೆ ಒಕ್ಕಲಿಗರಿಗೆ ಇದ್ದ ಮೀಸಲಾತಿಯನ್ನು ಶೇ.4ರಿಂದ ಶೇ.6ಕ್ಕೆ ಮತ್ತು ವೀರಶೈವ ಲಿಂಗಾಯತರಿಗೆ ಶೇ.5ರಿಂದ ಶೇ.7ಕ್ಕೆ ಏರಿಕೆ ಮಾಡಲಾಗಿದೆ. ಮುಸ್ಲಿಮರಿಗೆ 2ಬಿ ಅಡಿಯಲ್ಲಿದ್ದ ಮೀಸಲಾತಿಯನ್ನು ರದ್ದುಮಾಡಲಾಗಿದೆ.

ಮುಸ್ಲಿಂ ಮೀಸಲಾತಿ 2ಬಿ ರದ್ದತಿ ನಂತರದ ಚಿತ್ರಣ ಇಲ್ಲಿದೆ.

ಮುಸ್ಲಿಂ ಮೀಸಲಾತಿ ರದ್ದತಿ ವಿವಾದ ಮತ್ತು ಅದರ ಹಿಂದಿನ ರಾಜಕಾರಣ; ಮುಸ್ಲಿಂ ಮೀಸಲಾತಿ 2ಬಿ ರದ್ದತಿ ನಂತರದ ಚಿತ್ರಣ

 

ಮೀಸಲಾತಿ ಹುಟ್ಟಿದ್ದು ಹೇಗೆ?

ಸಮಾನತೆಯ ಆಶಯದನ್ವಯ, ಹಿಂದುಳಿದ ವರ್ಗಗಳಿಗೆ, ಪರಿಶಿಷ್ಟ ವರ್ಗಗಳಿಗೆ ಸ್ಥಾನಮಾನ ಕಲ್ಪಿಸಲು ದೇಶದಲ್ಲಿ ಮೀಸಲಾತಿಯ ಕಲ್ಪನೆ ಜಾರಿಗೆ ಬಂದಿದ್ದು, 1955ರ ಕಾಕಾ ಕಾಲೆಲ್‌ಕರ್‌ ಕಮಿಷನ್‌ ಮತ್ತು 1979ರ ಮಂಡಲ್ ಕಮಿಷನ್‌ ಅನ್ವಯ ಮೀಸಲಾತಿಗೆ ಜಾರಿಗೆ ಬಂದಿತ್ತು. ಆರಂಭದಲ್ಲಿ ಮುಸ್ಲಿಂ ಮೀಸಲಾತಿ ಇಲ್ಲದಿದ್ದರೂ, ಮುಸ್ಲಿಮರು ಸಮಾಜದ ಮುಖ್ಯಭೂಮಿಕೆಗೆ ಬಾರದೇ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದನ್ನು ಮನಗಂಡು ಅವರಿಗೆ ಪ್ರತ್ಯೇಕ ಮೀಸಲಾತಿ ನೀಡುವ ಪರಿಪಾಠ ಜಾರಿಗೆ ಬಂದಿತು.

1977ರಲ್ಲಿ ದೇವರಾಜ್‌ ಅರಸ್ ಅವರು ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ 16 ಜಾತಿಗಳಿಗೆ ಮೀಸಲಾತಿಯನ್ನ ನೀಡಲಾಗಿತ್ತು. ಅನಂತರ ಎಚ್‌.ಡಿ.ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಅಂದರೆ 1995ರಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು.

Also Read: ಎಬಿಪಿ-ಸಿಓಟರ್ ಸಮೀಕ್ಷೆ ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ ಎಂದು ಹೇಳಿದೆಯೇ, ಇಲ್ಲ ಇದೊಂದು ತಿರುಚಿದ ಚಿತ್ರ!

ಅದರಂತೆ ಮುಸ್ಲಿಮರನ್ನು ಹಿಂದುಳಿದ ವರ್ಗವೆಂದು ಪರಿಗಣಿಸಿ, ಒಬಿಸಿ ಅಡಿಯಲ್ಲಿ 2ಬಿ ಉಪ ವರ್ಗವಾಗಿ ಪರಿಗಣಿಸಿ ಶೇ.4ರಷ್ಟು ಮೀಸಲಾತಿಯನ್ನು ನೀಡಲಾಯಿತು. 

ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿ ಇತಿಹಾಸ

ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿ ನೂರು ವರ್ಷಗಳಷ್ಟು ಹಳೆಯದು. ಮೈಸೂರು ಸಂಸ್ಥಾನ 1919ರಲ್ಲಿ ಮಿಲ್ಲರ್‌ ವರದಿಯನ್ನು ಅನುಷ್ಠಾನಕ್ಕೆ ತಂದ ನಂತರ ಮುಸ್ಲಿಮರನ್ನು ಸಾಮಾಜಿಕ, ಆರ್ಥಿ, ಶೈಕ್ಷಣಿಕವಾಗಿ ಹಿಂದುಳಿದವರು ಎಂದು ಪರಿಗಣಿಸಲಾಗಿತ್ತು. ಆ ನಂತರದಲ್ಲಿ ನಾಗನಗೌಡ ಸಮಿತಿ (1966), ವಜೀರ್‌ ಸಮಿತಿ (1966), ಹಾವನೂರು ಆಯೋಗ (1975), ವೆಂಕಟಸ್ವಾಮಿ ಆಯೋಗ (1986), ಒ.ಚಿನ್ನಪ್ಪ ರೆಡ್ಡಿ ಆಯೋಗ(1990) ಮುಸ್ಲಿಮರು ಸಮಾಜದಲ್ಲಿ ಹಿಂದೆ ಇರುವುದನ್ನು ಗುರುತಿಸಿತ್ತು. ಸಾಚಾರ್‌ ವರದಿಯಲ್ಲೂ ಕೂಡ ಮುಸ್ಲಿಮರು ಹಿಂದುಳಿದಿರುವುದನ್ನು ಗುರುತಿಸಲಾಗಿತ್ತು ಮತ್ತು ಕೆಲವು ಹಿಂದುಳಿದ ವರ್ಗಕ್ಕಿಂತಲೂ ಅವರು ಹಿಂದುಳಿದಿದ್ದಾರೆ ಎಂದು ಹೇಳಲಾಗಿತ್ತು.

ಮುಸ್ಲಿಮರಿಗೆ ಮೀಸಲಾತಿ ರಾಜ್ಯದಲ್ಲಿ ಮಾತ್ರವೇ?

ಮುಸ್ಲಿಮರಿಗೆ ಮೀಸಲಾತಿ ಇರುವ ರಾಜ್ಯಗಳು

ಮುಸ್ಲಿಮರಿಗೆ ಮೀಸಲಾತಿ ನೀಡಿದ್ದು ಇಲ್ಲಿ ಮಾತ್ರವಲ್ಲ. ತೆಲಂಗಾಣ ಆಧ್ರ, ತಮಿಳುನಾಡು ಕೇರಳದಲ್ಲಿಯೂ ಮುಸ್ಲಿಮರಿಗೆ ಮೀಸಲಾತಿ ಇದೆ. ಕೇರಳದಲ್ಲಿ ಅತ್ಯಧಿಕ ಶೇ.12ರಷ್ಟು ಮೀಸಲಾತಿ ಇದ್ದರೆ, ತೆಲಂಗಾಣ, ಆಂಧ್ರಪ್ರದೇಶದಲ್ಲಿ ಶೇ.4ರಷ್ಟು ಮೀಸಲಾತಿ ಇದೆ. ತಮಿಳುನಾಡಿನಲ್ಲಿ ಶೇ.3.5ರಷ್ಟು ಮೀಸಲಾತಿಯನ್ನ ನೀಡಲಾಗಿದೆ. ವಿವಿಧ ಸಮಿತಿಗಳ ಅಧ್ಯಯನ ಮತ್ತು ಶಿಫಾರಸುಗಳ ಆಧಾರದ ಮೇಲೆ ಈ ಮೀಸಲಾತಿಯನ್ನು ನೀಡಲಾಗಿದೆ.

ಮುಸ್ಲಿಂ ಸಮುದಾಯಕ್ಕೆ ಆತಂಕ!

ಈ ಹಿಂದೆ ಮುಸ್ಲಿಂ ಸಮುದಾಯಕ್ಕೆ 2ಬಿ ಅಡಿಯಲ್ಲಿ ಮೀಸಲಾತಿ ಇದ್ದಾಗ, ಶಿಕ್ಷಣ ಸಂಸ್ಥೆಗಳಲ್ಲಿ 12 ಲಕ್ಷ ಮಿತಿ ಒಳಗೆ ಇದ್ದ ಕುಟುಂಬಗಳಿಗೆ ಶೇ.4ರಷ್ಟು ಮೀಸಲಾತಿ ಸಿಗುತ್ತಿತ್ತು. ಉಳಿದವರಿಗೆ ಸಾಮಾನ್ಯ ಕೋಟಾದಲ್ಲಿ ಅವಕಾಶ ಇತ್ತು. ಜೊತೆಗೆ ಸರ್ಕಾರಿ ಕೆಲಸ, ನಿಗಮ ಮಂಡಳಿ ಅಡಿಯಲ್ಲಿ ಶೇ.4ರಷ್ಟು ಮೀಸಲಾತಿ ಇರುತ್ತಿತ್ತು. ಇದರಿಂದ ಬಡ ಮುಸ್ಲಿಂ ವರ್ಗಕ್ಕೆ ಪ್ರಯೋಜನವಾಗಿತ್ತು.

ಹೊಸ ವರ್ಗೀಕರಣದಿಂದ ಇಡಬ್ಲ್ಯೂಎಸ್‌ ಅಡಿಯಲ್ಲಿ ಮುಸ್ಲಿಮರು ಬಂದಿದ್ದು, ಇದರಲ್ಲಿ ಹಿಂದೂ ಬ್ರಾಹ್ಮಣ, ಜೈನ್‌ ಮುಂತಾದ ಸಮುದಾಯಗಳಿದ್ದು ಶೇ.10ರಷ್ಟು ಮೀಸಲಾತಿ ಇರಲಿದೆ. ಆದರೆ ಇದು ಸಾಮಾಜಿಕ ಸ್ತರವನ್ನು ನೋಡದೆ, ಕೇವಲ ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ಇದೆ. ಇಡಬ್ಲ್ಯೂಎಸ್‌ನಲ್ಲಿ ಮುಸ್ಲಿಮರನ್ನು ಸೇರಿಸುವುದರಿಂದ, ಅಲ್ಲಿ ನಿರ್ದಿಷ್ಟವಾಗಿ  ಮೀಸಲಾತಿ ಸಿಗುತ್ತದೆಯೇ ಇಲ್ಲವೇ ಎಂಬುದು ಖಚಿತವಿಲ್ಲ. ಇದರೊಂದಿಗೆ ಹಿಂದುಳಿದ ಮುಸ್ಲಿಮರಿಗೆ ಖಚಿತವಾಗಿ ದೊರಕುತ್ತಿದ್ದ ಶೇ.4ರ ಮೀಸಲಾತಿ ಇಲ್ಲವಾಗಿರುವುದು ಆತಂಕ ತಂದಿದೆ. 

ಕಾನೂನು ಸಂಗತಿಗಳು

ಹಿಂದುಳಿದ ವರ್ಗಗಳಿಂದ ತೆಗೆದು ಇಡಬ್ಲ್ಯೂಎಸ್‌ ಅಡಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಿರುವುದು ಕೆಲವೊಂದು ಕಾನೂನು ಅಂಶಗಳನ್ನು ಹೊಂದಿದೆ. ಹಿಂದುಗಳಿದ ವರ್ಗಗಳ ಆಯೋಗದ ನಿಯಮದ ಪ್ರಕಾರ ಯಾವದೇ ವರ್ಗವನ್ನು ಮೀಸಲಾತಿಗೆ ಸೇರಿಸಲು, ಪರಿಷ್ಕರಿಸಲು, ತೆಗೆಯಲು ಆಯೋಗದ ಅಧ್ಯಯನ ವರದಿ (ಕಾಯ್ದೆಯ ಸೆಕ್ಷನ್‌ 10)ಅಗತ್ಯ. ಇಂತಹ ಅಧ್ಯಯನ  ಮುಸ್ಲಿಮರ ಆರ್ಥಿಕ ಸಾಮಾಜಿಕ ಸ್ಥಿತಿಗತಿ ಬಗ್ಗೆ ನಡೆದಿತ್ತೇ ಎನ್ನವುದದನ್ನು ಈಗ ಸಮುದಾಯದವರು ಎತ್ತಿದ್ದಾರೆ. ಜೊತೆಗೆ ಈ ಹಿಂದೆ ಅನೇಕ ಆಯೋಗಗಳು ಅಧ್ಯಯನ ನಡೆಸಿ ಮೀಸಲಾತಿಯನ್ನು ಕಲ್ಪಿಸಿದ್ದು, ಏಕಾಏಕಿ ತೆಗೆದಿರುವುದು ಅಸಮಾನತೆಗೆ ಕಾರಣವಾಗುತ್ತದೆ ಎಂಬ ಅಂಶವೂ.  ಇದರೊಂದಿಗೆ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಳವಾಗಿರುವುದರಿಂದ ಸರ್ಕಾರ ಅದನ್ನೂ ಸಂವಿಧಾನದ 9ನೇ ಪರಿಚ್ಛೇದದಲ್ಲಿ (ಇದರಿಂದ ಮೀಸಲಾತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದು ಸಾಧ್ಯವಾಗದು) ಸೇರಿಸಬೇಕಾಗುತ್ತದೆ. 

ಮುಸ್ಲಿಂ ಮೀಸಲಾತಿ ಬಗ್ಗೆ ನಿವೃತ್ತ ಡಾ.ರಜಾಕ್‌ ಉಸ್ತಾದ್ ಅವರು ಹೇಳುವ ಪ್ರಕಾರ, “ಸಂವಿಧಾನದ 15(4)ದ ಪ್ರಕಾರ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ನಾಗರಿಕರ ಅಭಿವೃದ್ಧಿಗೆ ಮೀಸಲಾತಿಯನ್ನು ನೀಡಬಹುದು. ಸ್ವಾತಂತ್ರ್ಯಾ ನಂತರ ಈವರೆಗೆ ಹಿಂದುಳಿದ ವರ್ಗಗಳ ಅಧ್ಯಯನಕ್ಕಾಗಿ ನೇಮಕವಾಗಿದ್ದ ಎಲ್ಲ ಆಯೋಗಗಳು ಮುಸ್ಲಿಮರನ್ನು ಹಿಂದುಳಿದ ವರ್ಗ ಎಂದೇ ಪರಿಗಣಿಸಿದೆ. ಮುಸ್ಲಿಮ್‌ ಮೀಸಲಾತಿ ಎಂದಿಗೂ ಧರ್ಮಾಧಾರಿತವಾಗಿ ಇರಲಿಲ್ಲ. ಆದ್ದರಿಂದ ಸಮಾಜದ ತಳವರ್ಗದಲ್ಲಿರುವ ಮುಸ್ಲಿಮರಿಗೆ ಮೀಸಲಾತಿಯನ್ನು ಪಡೆಯುವ ಸಂವಿಧಾನಾತ್ಮಕ ಹಕ್ಕಿದೆ” ಎಂದು ಹೇಳಿದ್ದಾರೆ. 

ಸುಪ್ರೀಂ ಕೋರ್ಟ್ ಅಂಗಳದಲ್ಲಿ

ಏತನ್ಮಧ್ಯೆ ಬೆಳವಣಿಗೆಯೊಂದರಲ್ಲಿ ಮುಸ್ಲಿಂ ಮೀಸಲಾತಿ ವಿಚಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ವಿಚಾರಣೆ ನಡೆದಿದೆ. ನ್ಯಾ.ಕೆ.ಎಂ.ಜೋಸೆಫ್‌ ಮತ್ತು ನ್ಯಾ.ಬಿ.ವಿ. ನಾಗರತ್ನ ಅವರ ಪೀಠದ ಮುಂದೆ ಪ್ರಕರಣ ವಿಚಾರಣೆಯಲ್ಲಿದ್ದು, ಈ ವೇಳೆ ಮೊದಲ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ ಮುಸ್ಲಿಂ ಮೀಸಲಾತಿ ರದ್ದತಿಗೊಳಿಸಿದ ಸರ್ಕಾರದ ಕ್ರಮಕ್ಕೆ ನಿಖರವಾದ ಆಧಾರಗಳಿಲ್ಲ ನೇರವಾಗಿಯೇ ಹೇಳಿದೆ. 

ಹಿಂದುಳಿದ ವರ್ಗಗಳ ಆಯೋಗದ ಮಧ್ಯಾಂತರ ವರದಿಯನ್ನು ಆಧರಿಸಿ, ಶೇ.4ರ ಮೀಸಲಾತಿ ರದ್ದುಗೊಳಿಸಿ, ಇಬ್ಲ್ಯೂಎಸ್‌ ಅಡಿಯಲ್ಲಿ ನೀಡಲಾಗಿದೆ ಎಂದು ಕರ್ನಾಟಕ ಸರ್ಕಾರ ಹೇಳುವುದಾದರೂ, ಆಯೋಗದ ಅಂತಿಮ ವರದಿಗೆ ಅದು ಕಾಯಬೇಕಿತ್ತು ಎಂದು ಹೇಳಿದೆ. ಅಲ್ಲದೇ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾ.ಜೋಸೆಫ್‌ ಅವರು “ಮುಸ್ಲಿಮರು ಹಲವು ವರ್ಷಗಳಿಂದ ಈ ಮೀಸಲಾತಿ ಅನುಕೂಲವನ್ನು ಪಡೆಯುತ್ತಿದ್ದಾರೆ. ದಾಖಲೆಗಳ ಪ್ರಕಾರ ಮುಸ್ಲಿಮರು ಹಿಂದುಳಿದಿದ್ದಾರೆ ಎಂದಿದ್ದು, ಈಗ ಅದನ್ನು ಏಕಾಏಕಿ ಬದಲಾವಣೆ ಮಾಡಲಾಗಿದೆ” ಎಂದರು. 

ಇದೇ ವೇಳೆ ನ್ಯಾಯಲಯಕ್ಕೆ ಅಫಿಡವಿಟ್‌ ಸಲ್ಲಿಸಿದ ಸರ್ಕಾರಿ ಪರ ವಕೀಲರಾದ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಅವರು “ಇಂದು ಅಥವಾ ನಾಳೆ ಏನೂ ಬದಲಾವಣೆಯಾಗುವುದಿಲ್ಲ. ಎಪ್ರಿಲ್‌ 18ರವರೆಗೆ ಮೀಸಲಾತಿ ರದ್ದತಿ ಅನ್ವಯ ಯಾವುದೇ ನೇಮಕಾತಿ ಅಥವಾ ಪ್ರವೇಶಾತಿಯನ್ನು ಮಾಡಲಾಗುವುದಿಲ್ಲ” ಎಂದು ಹೇಳಿದ್ದಾರೆ. 

ಇನ್ನು ಮುಸ್ಲಿಂ ಸಮುದಾಯದ ಪರ ಹಿರಿಯ ವಕೀಲರಾದ ಕಪಿಲ್‌ ಸಿಬಲ್‌ ಮತ್ತು ದುಷ್ಯಂತ್ ದವೆ ವಾದ ಮಂಡಿಸಿದ್ದಾರೆ. “ಯಾವುದೇ ಮೀಸಲಾತಿ ರದ್ದತಿ ರಾಜಕೀಯ ಕಾರಣಕ್ಕೆ ಆಗಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ದವೆ ಅವರು ಈ ಕುರಿತು ದಾಖಲೆಗಳನ್ನೂ ಸಲ್ಲಿಸಿದ್ದು, “ಮುಸ್ಲಿಂ ಸಮುದಾಯ ಹಿಂದುಳಿದ ಸಮುದಾಯ ಮತ್ತು ಮೀಸಲಾತಿಗೆ ಅರ್ಹರಾಗಿದ್ದಾರೆ ಎನ್ನುವ ಸಾಕ್ಷ್ಯಗಳನ್ನು ಒದಗಿಸಿದ್ದಾರೆ. ಯಾವುದೇ ಸೂಕ್ತ ಅಧ್ಯಯನ ಇಲ್ಲದೆ, ಕೇವಲ ಮಧ್ಯಾಂತರ ವರದಿಯನ್ನಷ್ಟೇ ಆಧರಿಸಿ ಮೀಸಲಾತಿ ರದ್ದುಗೊಳಿಸಲಾಗಿದೆ” ಎಂದು ಹೇಳಿದರು.

ಇದಕ್ಕೆ ಪ್ರತಿಯಾಗಿ ವಾದ ಮಂಡಿಸಿದ ಮೆಹ್ತಾ ಅವರು, “ಧರ್ಮದ ಆಧಾರವಾಗಿಯೇ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಲಾಗಿದೆ. ಅವರು ಹಿಂದುಳಿದಿದ್ದಾರೆ, ಮೀಸಲಾತಿಗೆ ಅರ್ಹರು ಎನ್ನುವುದಕ್ಕೆ ಯಾವುದೇ ಸೂಕ್ತ ದತ್ತಾಂಶಗಳ ಆಧಾರ ಇಲ್ಲ ಎಂದು ಹೇಳಿದರು.” 

ಒಟ್ಟು ಮೀಸಲಾತಿ ಶೇ.56ರಷ್ಟು ಹೇಗೆ?

ಸುಪ್ರೀಂ ಕೋರ್ಟ್‌ ಶೇ.50ರ ಮೀಸಲಾತಿಯನ್ನು ಮೀರಬಾರದು ಎಂದು 1991ರಲ್ಲಿ ತೀರ್ಪು ನೀಡಿದ್ದರೂ ವಿವಿಧ ರಾಜ್ಯವೂ ಸೇರಿದಂತೆ ವಿವಿಧ ರಾಜ್ಯಗಳು ಈ ಮಿತಿಯನ್ನು ಮೀರಿವೆ. ಕರ್ನಾಟಕದಲ್ಲಿ ಒಟ್ಟು ಮೀಸಲಾತಿ ಶೇ.56 ಆಗಿದ್ದು ತಮಿಳುನಾಡು, ಆಂಧ್ರಪ್ರದೇಶ, ಮಧ್ಯಪ್ರದೇಶ, ಉತ್ತರಪ್ರದೇಶ, ಹರಿಯಾಣಾ, ರಾಜಸ್ಥಾನ, ಛತ್ತೀಸ್‌ಗಢ, ಮಹಾರಾಷ್ಟ್ರದಲ್ಲಿ ಶೇ.50ರ ಮಿತಿಯನ್ನು ದಾಟಿದೆ. ಇದು ಸುಪ್ರೀಂ ತೀರ್ಪಿನ ವಿರುದ್ಧವಾದರೂ ರಾಜ್ಯಗಳು ಕಾನೂನಾತ್ಮಕವಾಗಿ ಇದರಿಂದ ರಕ್ಷೆಯನ್ನು ಹೊಂದಿವೆ. ಮೀಸಲಾತಿಯ ವರ್ಗೀಕರಣದ ಪ್ರಮಾಣವನ್ನು ಸಂವಿಧಾನದ 9ನೇ ಪರಿಚ್ಛೇದದ ಅಡಿ ರಾಜ್ಯಗಳು ಸೇರಿಸಿರುವುದರಿಂದ ಈ ವಿಚಾರವನ್ನು ಕಾನೂನು ಪ್ರಕ್ರಿಯೆಗೆ ಒಳಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಹಲವು ರಾಜ್ಯಗಳಲ್ಲಿ ಶೇ.50ಕ್ಕಿಂತ ಹೆಚ್ಚು ಮೀಸಲಾತಿ ಇದೆ.  

ಆಂಧ್ರದಲ್ಲೂ ಮುಸ್ಲಿಂ ಮೀಸಲಾತಿ ಸಮಸ್ಯೆ

ಮುಸ್ಲಿಮರಿಗೆ ಮೀಸಲಾತಿ ರದ್ದತಿಯ ಬೆನ್ನಲ್ಲೇ ಸರ್ಕಾರ ಆಂಧ್ರದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ನೀಡಿದ್ದ ಅಲ್ಲಿನ ಹೈಕೋರ್ಟ್‌ ಆದೇಶವನ್ನು ಉದಾಹರಿಸಿದೆ. ಅಲ್ಲಿನ ಸರ್ಕಾರಗಳು ಮೂರು ಬಾರಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ಪ್ರಯತ್ನ ಮಾಡಿದ್ದವು. ಒಬಿಸಿ ಕೋಟಾದಡಿ ತರುವ ಯತ್ನವೂ ಆಗಿತ್ತು. ಆದರೆ ಅದು ಕೋರ್ಟ್‌ನಲ್ಲಿ ರದ್ದಾಗಿತ್ತು. ಕಾರಣ ಮುಸ್ಲಿಮರು ಒಂದು ಸಮುದಾಯವಾಗಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎನ್ನುವುದು ಸಾಬೀತಾಗಬೇಕು ಎಂದು ಕೋರ್ಟ್‌ ಹೇಳಿತ್ತು. ಅಲ್ಲಿನ ಮುಸ್ಲಿಮರು ಸಾಮಾಜಿಕವಾಗಿ, ಆರ್ಥಿಕವಾಗಿ ಹೆಚ್ಚು ಹಿಂದುಳಿಯದೇ ಇರುವುದರಿಂದ ಮೀಸಲಾತಿಗೆ ಸಮರ್ಥನೆಯಿಲ್ಲ ಎಂದು ಆದೇಶ ಹೇಳಿತ್ತು. ಆದರೆ ಮೀಸಲಾತಿ ಕೊಡಬಾರದು ಎಂದು ಹೇಳಿರಲಿಲ್ಲ. ಸದ್ಯ ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ.

ಸರ್ಕಾರದ ವಾದವೇನು?

ಮುಸ್ಲಿಂ ಎನ್ನುವುದು ಪ್ರತ್ಯೇಕ ಧರ್ಮವಾಗಿದ್ದು, ಹಿಂದೂ ಹಿಂದುಳಿದ ವರ್ಗಗಳಡಿ ಮೀಸಲಾತಿ ನೀಡುವುದು ಸಂವಿಧಾನ ಬಾಹಿರವಾಗುತ್ತದೆ. ಆದ್ದರಿಂದ ಮುಸ್ಲಿಮರನ್ನು ಅನುಸೂಚಿತ ಹಿಂದುಳಿದ ವರ್ಗಗಳಿಂದ ತೆಗೆದು ಇಡಬ್ಲ್ಯೂಎಸ್‌ ಅಡಿ ಮೀಸಲಾತಿ ನೀಡಲಾಗಿದೆ. ಕಾಂಗ್ರೆಸ್‌, ಜೆಡಿಎಸ್‌ಗಳು ವೋಟ್ ಬ್ಯಾಂಕ್‌ ಆಧಾರದಲ್ಲೇ ಮುಸ್ಲಿಮರಿಗೆ ಮೀಸಲಾತಿ ನೀಡಿವೆ ಎನ್ನುವುದು ಬಿಜೆಪಿ ಸರ್ಕಾರದ ವಾದವಾಗಿದೆ. ಜೊತೆಗೆ ಒಬಿಸಿ ಮೀಸಲಾತಿಯನ್ನು ಪರಿಷ್ಕರಿಸದೆ 20 ವರ್ಷವಾಗಿದ್ದು, ಯಾವುದೇ ಧರ್ಮಕ್ಕೆ ಅವಕಾಶವಿಲ್ಲ. ಡಾ.ಅಂಬೇಡ್ಕರ್‌ ಅವರು ಮೀಸಲಾತಿ ಧರ್ಮಕ್ಕೆ ಆನುಸಾರವಾಗಿಲ್ಲದೆ, ಹಿಂದುಳಿದ ವರ್ಗಗಳನ್ನು ಗಮನಿಸಿ ಇರಬೇಕು ಎಂದು ಹೇಳಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿರೋಧ ಪಕ್ಷಗಳು ಹೇಳುವುದೇನು?

 ಮೀಸಲಾತಿ ಮರು ವರ್ಗೀಕರಣದ ಹಿಂದೆ ರಾಜಕೀಯ ಲೆಕ್ಕಾಚಾರ ಇರುವುದು ಢಾಳಾಗಿ ಗೋಚರಿಸಿದೆ ಎನ್ನುವುದು ವಿಪಕ್ಷಗಳ ಆರೋಪವಾಗಿದೆ. ಮುಸ್ಲಿಮರಿಗೆ ಇರುವ ಮೀಸಲಾತಿಯನ್ನು ಕಿತ್ತುಕೊಂಡು ನಮಗೆ ಕೊಡಿ ಎಂದು ಒಕ್ಕಲಿಗ, ವೀರಶೈವ ಲಿಂಗಾಯತರು ಕೇಳಿಲ್ಲ.ಆದರೆ ಉದ್ದೇಶ ಪೂರ್ವಕವಾಗಿ ಕಿತ್ತುಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಕರ್ನಾಟಕದಲ್ಲಿ ಲಿಂಗಾಯತ ಸಮುದಾಯ ಮತ್ತು ಒಕ್ಕಲಿಗ ಸಮುದಾಯ ದೊಡ್ಡ ಸಮುದಾಯಗಳಾಗಿದ್ದು, ಚುನಾವಣೆಯಲ್ಲಿ ನಿರ್ಣಾಕವಾಗಿವೆ. ಆದ್ದರಿಂದ ಅವುಗಳನ್ನೇ ಗಮನದಲ್ಲಿಟ್ಟು ಈ ಮೀಸಲಾತಿ ಪುನರ್‌ ವರ್ಗೀಕರಣ ಎನ್ನುವುದು ವಿಪಕ್ಷಗಳ ಆರೋಪವಾಗಿದೆ. 

Also Read: ರಸಗೊಬ್ಬರ ಬೆಲೆ ದಿಢೀರ್ 700 ರೂ. ಏರಿಕೆಯಾಗಿದೆಯೇ, ಸತ್ಯ ಏನು?

ಈ ವಿಚಾರದಲ್ಲಿ ಸರಣಿ ಟ್ವೀಟ್‌ ಮಾಡಿದ್ದ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು, “ಅವಕಾಶ ವಂಚಿತರಿಗೆ ವಿಶೇಷ ಸವಲತ್ತು ನೀಡಿ, ಅವರನ್ನು ಕೂಡ ಮುಖ್ಯವಾಹಿನಿಗೆ ತರಬೇಕು ಎನ್ನುವುದು ಸಂವಿಧಾನದ 14ನೇ ಪರಿಚ್ಛೇದದ ಆಶಯವಾಗಿದೆ. 15 ಮತ್ತು 16ನೇ ಪರಿಚ್ಛೇದವು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿದೆ. ಆದರೆ ರಾಜ್ಯ ಬಿಜೆಪಿ ಸರ್ಕಾರದ ಪರಿಷ್ಕೃತ ಮೀಸಲಾತಿ ಇದಕ್ಕೆ ವಿರುದ್ಧವಾಗಿದೆ” ಎಂದಿದ್ದಾರೆ. ಜೊತೆಗೆ ಮೇ 1995ರಿಂದ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲಾಗಿದೆ. ಅದನ್ನು ರದ್ದುಮಾಡಿ ಎಂದು ಈವರೆಗೆ ಯಾವುದೇ ನ್ಯಾಯಾಲಯದ ತೀರ್ಪು ಬಂದಿಲ್ಲ. ಯಾವ ಸಮಿತಿಯ ವರದಿಗಳೂ ಬಂದಿಲ್ಲ ಹೀಗಿರುವಾಗ ರಾಜ್ಯ ಬಿಜೆಪಿ ಸರ್ಕಾರ ಯಾಕೆ ಮುಸ್ಲಿಮರ ಮೀಸಲಾತಿ ರದ್ದು ಮಾಡುವ ನಿರ್ಧಾರ ಕೈಗೊಂಡಿದೆ” ಎಂದವರು ಪ್ರಶ್ನಿಸಿದ್ದಾರೆ. 

ಇನ್ನು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿಯವರು ಕೂಡ ಸರಣಿ ಟ್ವೀಟ್‌ಗಳನ್ನು ಮಾಡಿದ್ದು, “ಸಾಮಾಜಿಕ ನ್ಯಾಯದಿಂದಲೇ ಇಡೀ ದೇಶಕ್ಕೆ ಮೇಲ್ಪಂಕ್ತಿಯಾಗಿದ್ದ ಕರ್ನಾಟಕವನ್ನು ಮೀಸಲು ಮೂಲಕವೇ ವಿಭಜಿಸಿ ಮತಫಸಲು ತೆಗೆಯುವ ದುರಾಲೋಚನೆಯೊಂದಿಗೆ ಬಿಜೆಪಿ, ಸಾಮಾಜಿಕ ನ್ಯಾಯಕ್ಕೆ ಚಟ್ಟ ಕಟ್ಟಿ ಸ್ಮಶಾಣ ಕೇಕೆ ಹಾಕುತ್ತಿದೆ. ಮಾಜಿ ಪ್ರಧಾನಿಗಳಾದ ದೇವೇಗೌಡ ಅವರು ಅವರು ಮುಸ್ಲೀಮರಿಗೆ 2 ಬಿ ಅಡಿಯಲ್ಲಿ ನೀಡಿದ್ದ ಶೇ.4ರಷ್ಟು ಮೀಸಲು ಕಸಿದುಕೊಂಡು, ಅದಕ್ಕೆ ಆರ್ಥಿಕ ಹಿಂದುಳಿದಿರುವಿಕೆಯ ಲೇಪ ಹಚ್ಚಿ, ಮೀಸಲು ಆಶಯವನ್ನೇ ಹಾಳುಗೆಡವಿ ಬದುಕುಗಳನ್ನು ಸುಟ್ಟು ಹಾಕುವ ದುಷ್ಟತನವಲ್ಲದೆ ಮತ್ತೇನೂ ಅಲ್ಲ.” ಎಂದು ಬಿಜೆಪಿ ಸರ್ಕಾರದ ಮೀಸಲಾತಿ ನೀತಿ ವಿರುದ್ಧ ಟೀಕಿಸಿದ್ದಾರೆ.  

ಈ ಹಿನ್ನೆಲೆಯಲ್ಲಿ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸುವ ರಾಜ್ಯದ ಬಿಜೆಪಿ ಸರ್ಕಾರದ ನಡೆ ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಇನ್ನೊಂದು ಹೋರಾಟಕ್ಕೆ ವೇದಿಕೆ ಒದಗಿಸಿಕೊಟ್ಟಿದೆ. ಮತ್ತು ರಾಜಕೀಯವಾಗಿ ಲಾಭ-ನಷ್ಟದ ಲೆಕ್ಕಾಚಾರಕ್ಕೆ ಕಾರಣವಾಗಿದೆ. 2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಆಧರಿಸಿ, ಮುಂದಿನ ಸರ್ಕಾರದ ನಿರ್ಧಾರದ ನಿರ್ಧಾರ ಈ ಮೀಸಲಾತಿ ಪರಿಷ್ಕರಣೆ ನೀತಿಯ ಮೇಲೆ ಪರಿಣಾಮ ಬೀರಬಹುದು ಮತ್ತು ಮುಸ್ಲಿಂ ಸಮುದಾಯ ಈ ಬಗ್ಗೆ ಕೋರ್ಟ್‌ ಮೆಟ್ಟಿಲೇರಿದ್ದೇ ಆದಲ್ಲಿ ಅದೂ ಮೀಸಲಾತಿ ಕುರಿತ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಕೊಡಲಿದೆ.

Our Sources:

Report by Times of India, Dated: December 30, 2022

Report by Live Mint, Dated: March 25, 2023

Article by Times of India, Dated: April 2, 2023

Article by Varthabharathi, Dated: April 1, 2023

Article by Varthabharathi, Dated: March 30, 2023

Article by Online International Interdisciplinary Research Journal, Dated: January 2015

Article by Prajavani, Dated: January 9 2019

Article by Round Table India, Dated: December 11, 2016

Report by India Today, Dated: May 7, 2021

Article by Frontline, Dated: August 27, 2004

Article by International Journal of Creative research thoughts, Dated: March 2021

Report by Freepress Journal, Dated: March 25, 2023

Tweet by Basavaraja Bommai, Dated: March 26, 2023

Tweet by Siddaramaiah, Dated: March 26, 2023

Tweet by HD Kumaraswami, Dated: March 25, 2023

Karnataka State Commission for Backward classes

Conversation with Dr.Razak Ustad, Raichur


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.