Authors
Claim
ಕೇರಳದಲ್ಲಿ ಹಿಂದೂ ಯುವತಿಗೆ ಕಿರುಕುಳ ನೀಡಿದ ಮುಸ್ಲಿಮ್ ವ್ಯಕ್ತಿಯನ್ನು ಹಿಂದೂ ಯುವತಿಯರ ಗುಂಪು ಥಳಿಸಿದೆ
Fact
ಮಹಿಳೆಯರು ವ್ಯಕ್ತಿಗೆ ಥಳಿಸಿದ ಪ್ರಕರಣ
ಇರಿಙಾಲಕುಡದ ಕ್ರೈಸ್ತ ಸಮುದಾಯದ ಎಂಪರರ್ ಎಮ್ಯಾನುಯೆಲ್ ಚರ್ಚ್ ನಲ್ಲಿನ ಸಮಸ್ಯೆಗೆ ಸಂಬಂಧಿಸಿದ್ದಾಗಿದೆ ಹೊರತು ಹಿಂದೂ-ಮುಸ್ಲಿಂ ಕೋಮುಗಳ ಕುರಿತಾದ್ದಲ್ಲ
ಕೇರಳದಲ್ಲಿ ಹಿಂದೂ ಯುವತಿಗೆ ಕಿರುಕುಳ ನೀಡಿದ ಮುಸ್ಲಿಮ್ ವ್ಯಕ್ತಿಯನ್ನು ಹಿಂದೂ ಯುವತಿಯರ ಗುಂಪೇ ಥಳಿಸಿದೆ ಎಂಬಂತೆ ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ವಾಟ್ಸಾಪಿನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಕೇರಳದಲ್ಲಿ ಒಬ್ಬ ಮುಸ್ಲಿಂ ಹಿಂದೂ ಯುವತಿಗೆ ಕಿರುಕುಳ ಕೊಟ್ಟ. ತಕ್ಷಣ ಅಲ್ಲಿದ್ದ ಎಲ್ಲಾ ಹುಡುಗಿಯರು ಅವನ ಮೇಲೆ ಗುಂಪುಗೂಡಿ ಥಳಿಸಿದರು. ನಮ್ಮ ದೇಶ ಬದಲಾಗುತ್ತಿದೆ ಇದೇ ಟ್ರೆಂಡ್ ಮುಂದುವರಿದರೆ ಈ ರಾಕ್ಷಸರ ಕಿರುಕುಳ, ಲವ್ ಜಿಹಾದ್ ಬಂದ್ ಮಾಡುವ ದಿನ ದೂರವಿಲ್ಲ. ಆರಂಭ ಚೆನ್ನಾಗಿದೆ. ಹಿಂದೂ ತಾಯಂದಿರು ಮತ್ತು ಸಹೋದರಿಯರಲ್ಲಿ ವಿನಮ್ರ ವಿನಂತಿ, ನೀವು ಎಲ್ಲಿಯಾದರೂ ಮುಸ್ಲಿಮರು ಕಿರುಕುಳವನ್ನು ಕಂಡರೆ ತಕ್ಷಣ ನಿಮ್ಮ ಸುತ್ತಮುತ್ತಲಿನ ಹಿಂದೂಗಳಿಗೆ ಕರೆ ಮಾಡಿ ಗಲಾಟೆ ಮಾಡಲು ಪ್ರಾರಂಭಿಸಿ ಇದರಿಂದ ಹಿಂದೂ ಮಹಿಳೆಯರು ಸುರಕ್ಷಿತ ಜೀವನ ನಡೆಸಬಹುದು.” ಎಂದಿದೆ.
ಇದರ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಹಿಂದೂ-ಮುಸ್ಲಿಂ ಕೋಮುಗಳ ಕುರಿತಾದ್ದಲ್ಲ, ತಪ್ಪಾದ ಹೇಳಿಕೆ ಎಂದು ಕಂಡುಬಂದಿದೆ.
Fact Check/Verification
ನಾವು ಚಿತ್ರದಲ್ಲಿನ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಜನವರಿ 8, 2023ರ ಎಚ್ ಡಬ್ಲ್ಯೂ ಇಂಗ್ಲಿಷ್ ನ ವರದಿ ಪತ್ತೆಯಾಗಿದೆ. ಇದರಲ್ಲಿ ತ್ರಿಶೂರ್ ಜಿಲ್ಲೆಯ ಆಲೂರ್ನ ಪೊಲೀಸರು ವ್ಯಕ್ತಿಯೊಬ್ಬ ಮತ್ತು ಆತನ ಕುಟುಂಬದ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಹನ್ನೊಂದು ಮಹಿಳೆಯರನ್ನು ಬಂಧಿಸಿದ್ದಾರೆ. ಶುಕ್ರವಾರ ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆಲೂರು ಪೊಲೀಸರ ಪ್ರಕಾರ, ಮಹಿಳೆಯೊಬ್ಬರ ಮಾರ್ಫ್ ಮಾಡಿದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯರು ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದಾರೆ. ಮಹಿಳೆಯರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 307 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತ್ರಿಶೂರ್ ಜಿಲ್ಲೆಯ ಮುರಿಯಾದ್ ಮೂಲದ ಶಾಜಿ ಎಂಬಾತನ ದೂರಿನ ಮೇರೆಗೆ ಪೊಲೀಸರು ಮಹಿಳೆಯರನ್ನು ಬಂಧಿಸಿದ್ದಾರೆ. ಆರೋಪಿಗಳೆಲ್ಲರೂ ತ್ರಿಶೂರ್ ಜಿಲ್ಲೆಯ ಚಾಲಕ್ಕುಡಿಯ ಎಂಪರರ್ ಇಮ್ಯಾನುಯೆಲ್ ರಿಟ್ರೀಟ್ ಸೆಂಟರ್‌ನ ಸದಸ್ಯರಾಗಿದ್ದಾರೆ. ದೂರುದಾರ ಶಾಜಿ, ಅವರ ಪತ್ನಿ ಆಶ್ಲಿನ್, ಪುತ್ರ ಸಜನ್ ಮತ್ತು ಅವರ ಸಂಬಂಧಿಕರನ್ನು ಕಾರಿನಿಂದ ಎಳೆದೊಯ್ದು ಥಳಿಸಿದ್ದಾರೆ ಎನ್ನಲಾಗಿದೆ ಎಂದಿದೆ.
ಈ ಕುರಿತು ಜನವರಿ 6, 2023 ರಂದು ಏಷ್ಯಾನೆಟ್ ನ್ಯೂಸ್ ವರದಿಯಲ್ಲಿ ‘ಹನ್ನೊಂದು ಮಹಿಳೆಯರು ರಿಮಾಂಡ್ನಲ್ಲಿ’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿಯನ್ನು ಪ್ರಕಟಿಸಲಾಗಿದೆ ಎಂದು ನಾವು ನೋಡಿದ್ದೇವೆ. ಶಾಜಿ, ಅವರ ಮಗ ಸಾಜನ್, ಪತ್ನಿ ಆಶ್ಲಿನ್ ಮತ್ತು ಸಂಬಂಧಿಕರಾದ ಎಡ್ವಿನ್ ಮತ್ತು ಅನ್ವಿನ್ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಥಳಿಸಲಾಗಿದೆ. ಶಾಜಿಯ ಕುಟುಂಬವು ಚರ್ಚ್ ಸಂಬಂಧಗಳನ್ನು ತ್ಯಜಿಸಿತ್ತು. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಾಜನ್ ಅವರು ಇಮ್ಯಾನ್ಯುಯೆಲ್ ಚರ್ಚ್ನಿಂದ ಹೊರಬಂದ ನಂತರ ಅಲ್ಲಿನ ಮಹಿಳೆಯ ಮಾರ್ಫಿಂಗ್ ಮಾಡಿದ ನಗ್ನ ಚಿತ್ರವನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಮಹಿಳೆಯರ ಗುಂಪು ಅವರನ್ನು ತಡೆದಿದೆ ಎಂದು ವರದಿ ತಿಳಿಸಿದೆ.
ಕೈರಲಿ ಟಿವಿ ಕೂಡ ಜನವರಿ 6, 2023 ರಂದು ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಇದೇ ರೀತಿಯ ವಿವರಣೆಯೊಂದಿಗೆ ವೀಡಿಯೋ ಬಗ್ಗೆ ವರದಿ ಮಾಡಿದೆ.
ಪ್ರಕರಣದ ಕುರಿತು ನಾವು ಆಲೂರು ಪೊಲೀಸರಿಗೆ ಕರೆ ಮಾಡಿದ್ದು, “ಈ ಪ್ರಕರಣ ಮಾರ್ಫಿಂಗ್ ಮಾಡಿದ ನಗ್ನ ಚಿತ್ರವನ್ನು ಕ್ರೈಸ್ತ ಸಮುದಾಯದೊಳಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಕುರಿತಾಗಿದೆ. ಆ ಚಿತ್ರಗಳನ್ನು ವಿದೇಶದ ಐಪಿ ವಿಳಾಸದಿಂದ ಅಪ್ಲೋಡ್ ಮಾಡಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿ ಇದರಲ್ಲಿ ಭಾಗಿಯಾಗಿದ್ದಾನೆಯೇ” ಎಂದು ತನಿಖೆ ನಡೆದಿದೆ ಎಂದಿದ್ದಾರೆ.
ಎಂಪರರ್ ಇಮ್ಯಾನುವಲ್ ಚರ್ಚ್ ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಎಡಿಸನ್ ಅವರೊಂದಿಗೆ ನ್ಯೂಸ್ ಚೆಕರ್ ಮಾತನಾಡಿದೆ. ಅವರು ಈ ವೇಳೆ “ಚರ್ಚ್ ತೊರೆದ ನಂತರ, ಶಾಜಿ ಮತ್ತು ಅವರ ಕುಟುಂಬವು ಭಕ್ತರನ್ನು ವಿವಿಧ ರೀತಿಯಲ್ಲಿ ದೂಷಿಸಲು ಪ್ರಯತ್ನಿಸಿತು. ಚರ್ಚ್ ನಲ್ಲಿ ಅನೇಕ ಜನರು ಗೌರವಿಸುವ ಮಹಿಳೆಯರ ಚಿತ್ರಗಳನ್ನು ಶಾಜಿ ಮಾರ್ಫಿಂಗ್ ಮಾಡಿ ಪ್ರಸಾರ ಮಾಡಿದಾಗ ಮಹಿಳೆಯರು ಪ್ರಚೋದಿಸಲ್ಪಟ್ಟರು” ಎಂದು ಅವರು ಹೇಳಿದ್ದಾರೆ.
Conclusion
ಈ ಸತ್ಯಶೋಧನೆಯ ಪ್ರಕಾರ, ಮಹಿಳೆಯರ ಚಿತ್ರಗಳನ್ನು ಮಾರ್ಫಿಂಗ್ ಮಾಡಿ ಪ್ರಸಾರ ಮಾಡಿದ ಆರೋಪದ ಮೇಲೆ ಮಹಿಳೆಯರು ಪುರುಷನನ್ನು ಥಳಿಸುತ್ತಿರುವುದನ್ನು ಕಾಣಬಹುದು. ಈ ಪ್ರಕರಣ ಇರಿಙಾಲಕುಡದ ಕ್ರೈಸ್ತ ಸಮುದಾಯದ ಎಂಪರರ್ ಎಮ್ಯಾನುಯೆಲ್ ಚರ್ಚ್ ನಲ್ಲಿನ ಸಮಸ್ಯೆಗೆ ಸಂಬಂಧಿಸಿದ್ದಾಗಿದೆ ಹೊರತು ಹಿಂದೂ-ಮುಸ್ಲಿಂ ಕೋಮುಗಳ ಕುರಿತಾದ್ದಲ್ಲ ಎಂದು ತಿಳಿದುಬಂದಿದೆ.
Also read: ಬಾಂಗ್ಲಾದೇಶದ ಇಸ್ಕಾನ್ ಹಸು ಕೊಟ್ಟಿಗೆಯ ಮೇಲೆ ದಾಳಿ ಎಂದ ಈ ವೀಡಿಯೋ ನಿಜಕ್ಕೂ ಭಾರತದ್ದು!
Result: False
Our Sources
News report in hwnews Dated: January 8,2023
News report in Asainet news Dated: January 6,2023
Youtbe video of Kairali TV Dated: January 6,2023
Telephone conversation with Aloor police
Telephone conversation with Dr Edison of Emperor Immanuel Church
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಮಲಯಾಳದಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.