Authors
Claim
ಹೊಸ ಸಂಸತ್ ಭವನಕ್ಕೆ ಯೋಜನಾ ವೆಚ್ಚ ಯುಪಿಎ ಕಾಲದಲ್ಲಿ 3 ಸಾವಿರ ಕೋಟಿ , ಮೋದಿ ಕಾಲದಲ್ಲಿ 970 ಕೋಟಿ ರೂ.
Fact
2012ರಲ್ಲಿ ಯುಪಿಎ ಕಾಲದಲ್ಲಿ ಹೊಸ ಸಂಸತ್ ಭವನ ನಿರ್ಮಾಣ ಕೇವಲ ಪ್ರಸ್ತಾವನೆ ಮಾತ್ರ ಆಗಿತ್ತಷ್ಟೇ. ಯೋಜನಾ ವೆಚ್ಚ ಎಲ್ಲವೂ ತೀರ್ಮಾನ ಆಗಿದ್ದು ಮೋದಿ ಕಾಲದಲ್ಲಿ
ಹೊಸ ಸಂಸತ್ ಭವನ ನಿರ್ಮಾಣಕ್ಕೆ ಯುಪಿಎ ಕಾಲದಲ್ಲಿ ಅನುಮೋದನೆಯಾಗಿದ್ದು ಅದರ ವೆಚ್ಚ 3 ಸಾವಿರ ಕೋಟಿ ರೂ. ಆಗಿತ್ತು. ಆದರೆ 2020ರಲ್ಲಿ ಬಿಜೆಪಿ ಅವಧಿಯಲ್ಲಿ ನಿರ್ಮಾಣ ವೆಚ್ಚ 970 ಕೋಟಿ ರೂ. ಆಗಿದೆ ಎಂಬ ಕುರಿತ ಮೆಸೇಜ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಕುರಿತ ಕ್ಲೇಮಿನಲ್ಲಿ “ಮೋದಿ ಜೀ ನೇತೃತ್ವದ ಬಿಜೆಪಿ ಸರ್ಕಾರಕ್ಕೂ ಕಾಂಗ್ರೆಸಿಗರಿಗೂ ಎಷ್ಟು ವ್ಯತ್ಯಾಸ ಅಂತ…?” ಹೊಸ ಸಂಸತ್ ಭವನದ ವಿಚಾರದಲ್ಲಿ ಕಾಂಗಿ ಗುಲಾಮರು ಯಾಕೆ ಬೊಬ್ಬೆ ಹೊಡೆಯುತ್ತಿದ್ದಾರೆ ಗೊತ್ತೇ?” ಎಂದು ಸಂದೇಶವೊಂದನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ 2012ರಲ್ಲಿ ಸಂಸತ್ ಭವನಕ್ಕೆ ಅನುಮೋದನೆ ಸಿಕ್ಕಿದ್ದು, ವೆಚ್ಚ 3 ಸಾವಿರ ಕೋಟಿ ರೂ. ಎಂದು ಹೇಳಲಾಗಿದೆ. ಅಲ್ಲದೇ 2020ರ ಹೊತ್ತಿಗೆ ಹೊಸ ಸಂಸತ್ ಭವನದ ವೆಚ್ಚ 970 ಕೋಟಿ ಎಂದು ನಿಗದಿ ಪಡಿಸಲಾಗಿದೆ ಎಂಬಂತೆ ಪೋಸ್ಟ್ ಮಾಡಲಾಗಿದೆ.
ಈ ಕುರಿತು ಸತ್ಯಶೋಧನೆಗೆ ನ್ಯೂಸ್ಚೆಕರ್ ಮುಂದಾಗಿದ್ದು ಇದು ತಪ್ಪು ಕ್ಲೇಮ್ ಎಂಬುದನ್ನು ಕಂಡುಕೊಳ್ಳಲಾಗಿದೆ.
Fact Check/ Verification
ಸತ್ಯಶೋಧನೆಗಾಗಿ, ನ್ಯೂಸ್ಚೆಕರ್ ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದು, ಹಲವು ಫಲಿತಾಂಶಗಳು ಲಭ್ಯವಾಗಿವೆ.
ಜುಲೈ 14, 2012ರ ಇಂಡಿಯಾ ಟುಡೇ ವರದಿ ಪ್ರಕಾರ, “ಈಗಿನ ಸಂಸತ್ ಭವನ ಶಿಥಿಲಗೊಂಡಿದ್ದು, ಹೊಸ ಸಂಸತ್ ಭವನ ನಿರ್ಮಾಣದ ಅಗತ್ಯ ಕಂಡುಬಂದಿದೆ. ಇದಕ್ಕಾಗಿ ಸ್ಪೀಕರ್ ಅವರು ಸಮಿತಿಯೊಂದು ರಚಿಸಿದ್ದು, ಹೊಸ ಕಟ್ಟಡ ನಿರ್ಮಾಣದ ಬಗ್ಗೆ ಪರಾಮರ್ಶೆ ನಡೆಸಲಿದೆ” ಎಂದು ಹೇಳಿದೆ.
ಹೊಸ ಸಂಸತ್ ಭವನದ ಕುರಿತ ಚರ್ಚೆಗಳ ಬಗ್ಗೆ ಯುಪಿಎ ಅವಧಿಯಲ್ಲಿ ಸ್ಪೀಕರ್ ಆಗಿದ್ದ ಮೀರಾ ಕುಮಾರ್ ಅವರು ಮಾರ್ಚ್ 31, 2023ರಂದು ಎನ್ಡಿಟಿವಿ ಇಂಡಿಯಾದೊಂದಿಗೆ ಮಾತನಾಡಿದ್ದು, “ತಮ್ಮ ಅವಧಿಯಲ್ಲಿ ನೂತನ ಸಂಸತ್ ಭವನ ನಿರ್ಮಾಣಕ್ಕೆ ಸೂಚಿಸಲಾಗಿತ್ತು” ಎಂದು ಹೇಳಿದ್ದಾರೆ.
ಡಿಸೆಂಬರ್ 11, 2020ರ ಟೈಮ್ಸ್ ನೌ ವರದಿಯೊಂದರಲ್ಲಿ “ಹೊಸ ಸಂಸತ್ ಭವನ ನಿರ್ಮಾಣದ ಪ್ರಸ್ತಾವಕ್ಕೆ ಸ್ಪೀಕರ್ ಮೀರಾ ಕುಮಾರ್ ಅವರು ಸಮ್ಮತಿ ಸೂಚಿಸಿದ್ದಾರೆ” ಎಂದಿದೆ. ಈ ಕುರಿತು ಅದು ಆಗಿನ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯೊಬ್ಬರ ಪತ್ರವನ್ನು ಸಾಕ್ಷ್ಯವಾಗಿರಿಸಿ ವರದಿ ಮಾಡಿದೆ.
ಅನಂತರ ಡಿಸೆಂಬರ್ 28, 2015ರ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ “ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಕೇಂದ್ರ ನಗರಾಭಿವೃದ್ಧಿ ಖಾತೆ ಸಚಿವರಾದ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದು, ಹೊಸ ಸಂಸತ್ ಭವನ ನಿರ್ಮಾಣದ ಬಗ್ಗೆ ಮುಂದಡಿಯಿಡುವಂತೆ ಹೇಳಿದ್ದಾರೆ. ಕಟ್ಟಡ ಶಿಥಿಲಗೊಂಡಿರುವುದು ಮತ್ತು ಹೆಚ್ಚಿನ ಸ್ಥಳಾವಕಾಶದ ಅಗತ್ಯಗಳನ್ನು ಅವರು ಪತ್ರದಲ್ಲಿ ಹೇಳಿದ್ದಾರೆ” ಎಂದು ವರದಿ ಹೇಳಿದೆ. ಜುಲೈ 2012ರ ವೇಳೆಗೆ ಮೀರಾ ಕುಮಾರ್ ಅವರು ಇದೇ ಪ್ರಸ್ತಾವನೆಯನ್ನು ಮಾಡಿದ್ದಾಗ ಹೆಚ್ಚು ಬೆಂಬಲ ಸಿಕ್ಕಿರಲಿಲ್ಲ. ಆ ಬಳಿಕ ಸುಮಿತ್ರಾ ಮಹಾಜನ್ ಅವರು ಇದೇ ಪ್ರಸ್ತಾವನೆಯನ್ನು ಮಾಡಿದ್ದಾಗ ಹೆಚ್ಚಿನ ಮಂದಿ ಬೆಂಬಲಿಸಿದ್ದಾಗಿ ಈ ವರದಿ ಹೇಳಿದೆ.
ಈ ಕುರಿತು ಇತರ ಮಾಧ್ಯಮ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಇನ್ನು ಯುಪಿಎ ಸರ್ಕಾರ ಇದ್ದಾಗ, ಹೊಸ ಸಂಸತ್ ಭವನ ನಿರ್ಮಾಣಕ್ಕೆ 3 ಸಾವಿರ ಕೋಟಿ ರೂ. ಯೋಜನಾ ವೆಚ್ಚ ಇತ್ತೇ ಎಂದು ನೋಡಲು ಗೂಗರ್ ಕೀವರ್ಡ್ ಸರ್ಚ್ ನಡೆಸಲಾಗಿದ್ದು, ಯಾವುದೇ ಫಲಿತಾಂಶಗಳು ಲಭ್ಯವಾಗಿರುವುದಿಲ್ಲ.
Also Read: 2013ರ ಸುಪ್ರೀಂ ಕೋರ್ಟ್ ತೀರ್ಪು ವಿರುದ್ಧದ ಸುಗ್ರೀವಾಜ್ಞೆಯನ್ನು ರಾಹುಲ್ ಹರಿದು ಹಾಕಿದ್ದರೇ?
ಯೋಜನಾ ವೆಚ್ಚ
ಹೊಸ ಸಂಸತ್ ಭವನದ ಯೋಜನಾ ವೆಚ್ಚಗಳ ಬಗ್ಗೆ ಗೂಗಲ್ ಸರ್ಚ್ ನಡೆಸಲಾಗಿದೆ. ಈ ವೇಳೆ ಹಲವು ವರದಿಗಳು ಲಭ್ಯವಾಗಿವೆ.
ಹೊಸ ಸಂಸತ್ ಭವನದ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯ ಬಗ್ಗೆ ಸೆಪ್ಟೆಂಬರ್ 22, 2020ರ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಇದರಲ್ಲಿ “ಹೊಸ ಸಂಸತ್ ಭವನಕ್ಕೆ ಆರಂಭಿಕ ಲೆಕ್ಕಾಚಾರದಿಂದ 82 ಕೋಟಿ ರೂ. ಏರಿಕೆಯಾಗಿದ್ದು, ಒಟ್ಟು ಯೋಜನಾ ವೆಚ್ಚ 971 ಕೋಟಿ ಆಗಿರಲಿದೆ” ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಪುರಿ ಅವರು ಹೇಳಿದ್ದಾಗಿ ವರದಿ ಹೇಳಿದೆ.
ಡಿಸೆಂಬರ್ 6, 2020ರಂದು ಡೆಕ್ಕನ್ ಹೆರಾಲ್ಡ್ ವರದಿಯಲ್ಲಿ “ಹೊಸ ಸಂಸತ್ ಭವನ ನಿರ್ಮಾಣಕ್ಕೆ 971 ಕೋಟಿ ರೂ. ಯೋಜನಾ ವೆಚ್ಚವನ್ನು ಅಂದಾಜಿಸಲಾಗಿದೆ” ಎಂದು ಹೇಳಿದೆ.
ಜುಲೈ 11, 2022ರ ದಿ ಕ್ವಿಂಟ್ ವರದಿಯ ಪ್ರಕಾರ “ಹೊಸ ಸಂಸತ್ ಭವನದ ಆರಂಭಿಕ ವೆಚ್ಚ 977 ಕೋಟಿ ರೂ. ಆಗಿದ್ದು, ಇದು ಶೇ.29ರಷ್ಟು ಏರಿಕೆ ಅಂದರೆ 1250 ಕೋಟಿಗೆ ಏರಿಕೆಯಾಗುವ ಸಾಧ್ಯತೆ ಇದೆ” ಎಂದು ವರದಿಗಳನ್ನುದ್ದೇಶಿಸಿ ಹೇಳಿದೆ.
ಜನವರಿ 2, 2023ರ ಔಟ್ಲುಕ್ ವರದಿಯಲ್ಲೂ, “ನೂತನ ಸಂಸತ್ ಭವನದ ವೆಚ್ಚ 1200 ಕೋಟಿ ರೂ. ದಾಟುವ ಅಂದಾಜಿದೆ ಎಂಬುದನ್ನು ಕೇಂದ್ರ ಸರ್ಕಾರ ಅಂದಾಜಿಸಿದೆ” ಎಂದು ಹೇಳಿದೆ. ಜನವರಿ 20, 2022ರ ಎನ್ಡಿಟಿವಿ ವರದಿ ಪ್ರಕಾರ, “ಹೊಸ ಸಂಸತ್ ಭವನದ ವೆಚ್ಚ ಆರಂಭಿಕ 977 ಕೋಟಿ ರೂ.ಗಳಿಂದ ಶೇ.29ರಷ್ಟು ಏರಿಕೆ ಕಂಡಿದ್ದು 1250 ಕೋಟಿ ರೂ. ದಾಟಬಹುದು ಎಂದು ಅಂದಾಜಿಸಲಾಗಿದೆ” ಎಂದು ಹೇಳಿದೆ.
ಇದರೊಂದಿಗೆ ಹೊಸ ಸಂಸತ್ ಭವನ ಕಟ್ಟಡ ನಿರ್ಮಾಣವಾಗುವ ಜಾಗದ ಒಟ್ಟು ವಿಸ್ತಾರದ ಬಗ್ಗೆಯೂ ಪರಿಶೀಲನೆ ನಡೆಸಲಾಗಿದೆ.
ಸೆಪ್ಟೆಂಬರ್ 10, 2022ರ ಸಂಡೇ ಗಾರ್ಡಿಯನ್ ಲೈವ್ ವರದಿ ಪ್ರಕಾರ “ನೂತನ ಸಂಸತ್ ಭವನ 65 ಸಾವಿರ ಚದರ ಅಡಿ ವಿಸ್ತಾರದಲ್ಲಿ ವ್ಯಾಪಿಸಿದೆ” ಎಂದಿದೆ. ಡಿಸೆಂಬರ್ 6, 2020ರ ಡೆಕ್ಕನ್ ಹೆರಾಲ್ಡ್ ವರದಿಯಲ್ಲೂ “ಹೊಸ ಸಂಸತ್ ಭವನ 65 ಸಾವಿರ ಚದರ ಅಡಿ ವಿಸ್ತಾರದಲ್ಲಿರಲಿದೆ” ಎಂದಿದೆ.
ಹೊಸ ಸಂಸತ್ ಭವನಕ್ಕೆ ಡಿಸೆಂಬರ್ 10 2020ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದ್ದರ ಕುರಿತ ಪತ್ರಿಕಾ ಪ್ರಕಟಣೆ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದಲ್ಲಿ ಲಭ್ಯವಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷರಾದ ಪವನ್ ಖೇರಾ ಅವರನ್ನು ನ್ಯೂಸ್ಚೆಕರ್ ಸಂಪರ್ಕಿಸಿದ್ದು, “ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್ ಸಂಪೂರ್ಣ ಸುಳ್ಳು. ಯುಪಿಎ ಅವಧಿಯಲ್ಲಿ ಅಂತಹ ಯಾವುದೇ ಯೋಜನಾ ವೆಚ್ಚದ ಚಿಂತನೆ ನಡೆದಿರಲಿಲ್ಲ” ಎಂದು ಹೇಳಿದ್ದಾರೆ.
ಸೆಂಟ್ರಲ್ ವಿಸ್ತಾ ಪ್ರಾಜೆಕ್ಟ್
ಹೊಸ ಸಂಸತ್ ಭವನ ಸೆಂಟ್ರಲ್ ವಿಸ್ತಾ ಪ್ರಾಜೆಕ್ಟ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ದೇಶದ ಆಡಳಿತ ನಿರ್ವಹಣೆಯ ಈ ಪ್ರದೇಶವನ್ನು ಸಂಪೂರ್ಣ ಹೊಸದಾಗಿ ನಿರ್ಮಿಸಲಾಗುತ್ತಿದ್ದು, 2024ರಲ್ಲಿ ಪೂರ್ಣಗೊಳ್ಳುವ ಗುರಿ ಹಾಕಿಕೊಳ್ಳಲಾಗಿದೆ. ಇದರಲ್ಲಿ ಹೊಸ ಸಂಸತ್ ಭವನ ನಿರ್ಮಾಣವೂ ಸೇರಿದೆ. 3.2 ಕಿಲೋ ಮೀಟರ್ ಉದ್ದದ ವ್ಯಾಪ್ತಿಯಲ್ಲಿ ಈ ಯೋಜನೆ ಇದ್ದು, ಒಟ್ಟು 20 ಸಾವಿರ ಕೋಟಿ ರೂ. ಯೋಜನಾ ವೆಚ್ಚವನ್ನು ಅಂದಾಜಿಸಲಾಗಿದೆ. 1930ರಲ್ಲಿ ಬ್ರಿಟಿಷರು ನಿರ್ಮಿಸಿದ ಆಡಳಿತ ಕಟ್ಟಡಗಳಿಗೆ ಪರ್ಯಾಯವಾಗಿ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕೊರೊನಾ ಸಂದರ್ಭದಲ್ಲಿ ಈ ಯೋಜನೆಗೆ ವಿಪಕ್ಷಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದು, ಈ ಹಣವನ್ನು ಕೊರೊನಾ ವಿರುದ್ಧ ಮತ್ತು ಇತರ ಅಭಿವೃದ್ಧಿ ಕೆಲಸಗಳಿಗೆ ಬಳಸಬೇಕೆಂದು ಆಗ್ರಹಿಸಿದ್ದವು. ಇದರ ಕುರಿತ ವರದಿ ಇಲ್ಲಿದೆ. ಇದರ ಜೊತೆಗೆ ಹೊಸ ಸಂಸತ್ ಭವನದ ಮಾಹಿತಿ ಕುರಿತ ವೆಬ್ಸೈಟ್ ಇಲ್ಲಿದೆ.
Conclusion
ಈ ಸತ್ಯಶೋಧನೆಯ ಪ್ರಕಾರ, ಹೊಸ ಸಂಸತ್ ಭವನಕ್ಕೆ ಯುಪಿಎ ಕಾಲದಲ್ಲಿ 3 ಸಾವಿರ ಕೋಟಿ ಯೋಜನಾ ವೆಚ್ಚ, ಮೋದಿ ಕಾಲದಲ್ಲಿ 970 ಕೋಟಿ ರೂ. ಎನ್ನುವುದು ತಪ್ಪು ಕ್ಲೇಮ್ ಆಗಿದೆ. 2012ರ ಹೊತ್ತಿಗೆ ಸ್ಪೀಕರ್ ಮೀರಾ ಕುಮಾರ್ ಅವರು ಹೊಸ ಸಂಸತ್ ಭವನದ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿದ್ದರೂ, ಇದು ಮುಂದುವರಿದಿರಲಿಲ್ಲ. ಜೊತೆಗೆ ಯಾವುದೇ ಯೋಜನಾ ವೆಚ್ಚವನ್ನು ಅಂದಾಜಿಸಿರಲಿಲ್ಲ. 2015ರಲ್ಲಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಯೋಜನೆ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿದ್ದು, ಯೋಜನೆ ಮುನ್ನೆಲೆಗೆ ಬಂದಿತ್ತು. ಇದರೊಂದಿಗೆ ಈಗ ಯೋಜನಾ ವೆಚ್ಚ 1200 ಕೋಟಿ ರೂ. ದಾಟಲಿದೆ ಎಂದು ಅಂದಾಜಿಸಲಾಗಿದೆ.
Results: False
Our Sources:
Report by India Today, Dated, July 14, 2012
Report by NDTV India Dated, March 31, 2023
Report by Times Now, Dated: December, 11, 2020
Report by Time of India, Dated: December 28, 2015
Report by Hindustan Times, Dated: September, 22, 2022
Report by by The Quint Dated: July 11, 2022
Report by NDTV, Dated: January 20, 2022
Report by The Sundaygaurdianlive, Dated: September 10, 2020
Report by Deccan Herald, Dated: December 6, 2020
Report by Outlook, Dated: January 2, 2023
Central Vista | Aatmanirbhar Bharat | Make In India
Conversation with Pawan Khera, Chairman, Media & Publicity Dept. All India Congress Committee
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.