Fact Check: 2013ರ ಸುಪ್ರೀಂ ಕೋರ್ಟ್‌ ತೀರ್ಪು ವಿರುದ್ಧದ ಸುಗ್ರೀವಾಜ್ಞೆಯನ್ನು ರಾಹುಲ್‌ ಹರಿದು ಹಾಕಿದ್ದರೇ?

ರಾಹುಲ್‌ ಅವರು ಸುಗ್ರೀವಾಜ್ಞೆ ಹರಿದು ಹಾಕಿದ್ದಾರೆಯೇ?

Claim
2013ರ ಸುಪ್ರೀಂ ಕೋರ್ಟ್‌ ತೀರ್ಪು ವಿರುದ್ಧದ ಸುಗ್ರೀವಾಜ್ಞೆಯನ್ನು ರಾಹುಲ್‌ ಹರಿದು ಹಾಕಿದ್ದರು

Fact
ವೈರಲ್ ಚಿತ್ರವು ಉ.ಪ್ರ.ದ ಲಕ್ನೋದ 2012ರ ಚುನಾವಣಾ ರಾಲಿಯದ್ದಾಗಿದ್ದು, ಅಲ್ಲಿ ರಾಹುಲ್‌ ಅವರು ಎಸ್‌ಪಿ ಮತ್ತು ಬಿಎಸ್‌ಪಿಯ ಚುನಾವಣಾ ಭರವಸೆಗಳನ್ನು ಹರಿದು ಹಾಕಿದ್ದರು

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹಗೊಂಡ ವಿಚಾರ ಇಡೀ ದೇಶದಲ್ಲಿ ಸುದ್ದಿ ಮಾಡಿದೆ. ಈ ವಿಚಾರ, ಕನಿಷ್ಠ 2 ವರ್ಷಗಳ ಜೈಲು ಶಿಕ್ಷೆಗೆ ಈಡಾದ ಯಾವುದೇ ಶಾಸನ ಸಭೆಯ ಸದಸ್ಯರನ್ನು ತಕ್ಷಣವೇ ಅನರ್ಹಗೊಳಿಸಲು ಅನುವು ಮಾಡಿಕೊಡುವ ಸುಪ್ರಿಂ ಕೋರ್ಟ್‌ನ 2013ರ ತೀರ್ಪಿನತ್ತ ಗಮನ ಸೆಳೆದಿದೆ.  

ಈ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಕಾಗದವೊಂದನ್ನು ಹರಿದು ಹಾಕುವ ಫೊಟೋ ಹೊಂದಿದ ಕ್ಲೇಮ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಯಾವುದೇ ಕ್ರಿಮಿನಲ್‌ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಶಾಸನ ಸಭೆಯ ಸದಸ್ಯರು ಅನರ್ಹಗೊಳ್ಳದಂತೆ ರಕ್ಷಿಸುವ  ಸುಗ್ರೀವಾಜ್ಞೆಯನ್ನು ವಿರೋಧಿಸಿ, ರಾಹುಲ್‌ ಅವರು ಅದನ್ನು ಹರಿದು ಹಾಕಿದ್ದು, ಈಗ ಅದೇ “ಕರ್ಮ” ಅವರನ್ನು ಬಾಧಿಸುತ್ತಿದೆ ಎಂಬರ್ಥದಲ್ಲಿ ವೈರಲ್‌ ಕ್ಲೇಮ್‌ ಅನ್ನು ಹಂಚಿಕೊಳ್ಳಲಾಗುತ್ತಿದೆ.

2013ರ ಸುಪ್ರೀಂ ಕೋರ್ಟ್‌ ತೀರ್ಪು ವಿರುದ್ಧದ ಸುಗ್ರೀವಾಜ್ಞೆಯನ್ನು ರಾಹುಲ್‌ ಹರಿದು ಹಾಕಿದ್ದರೇ

ಇಂತಹುದೇ ಕ್ಲೇಮ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಇದೇ ವಿಚಾರದಲ್ಲಿ ಮಾಧ್ಯಮ ವರದಿಗಳೂ ಕಂಡುಬಂದಿದ್ದು, ಕೇಂದ್ರ ಸಚಿವ ಪೀಯುಶ್‌ ಗೋಯೆಲ್‌ ಮತ್ತು ಗಿರಿರಾಜ್ ಸಿಂಗ್‌ ಅವರು ರಾಹುಲ್‌ ಗಾಂಧಿ ಅವರು ಸುಗ್ರೀವಾಜ್ಞೆಯನ್ನು ಹರಿದೆಸೆದಿದ್ದರು ಎಂದು ಹೇಳಿದ್ದಾರೆ ಎನ್ನಲಾಗಿದೆ. ಗೋಯಲ್‌ ಅವರು ಕಾಂಗ್ರೆಸ್‌ ಅನ್ನು ಪ್ರಶ್ನಿಸುತ್ತ, ಅನರ್ಹತೆ ವಿಚಾರದಲ್ಲಿ ಕಾಂಗ್ರೆಸ್‌ನವರು “ಶಾಸನಸಭೆ ಸದಸ್ಯರಿಗೆ ತುಸು ಸಮಾಧಾನ ನೀಡಬಹುದಾಗಿದ್ದ ಸುಗ್ರೀವಾಜ್ಞೆ ಹರಿದೆಸೆದ ರಾಹುಲ್‌ ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆಯೇ ಅಥವಾ ಈ ವಿಚಾರದಲ್ಲಿ ತೀರ್ಪು ನೀಡಿದ ಸುಪ್ರಿಂ ಕೋರ್ಟ್‌ ವಿರುದ್ಧವೇ?” ಎಂದು ಪ್ರಶ್ನಿಸಿದ್ದಾರೆ.

2013ರ ಸುಪ್ರೀಂ ಕೋರ್ಟ್‌ ತೀರ್ಪು ವಿರುದ್ಧದ ಸುಗ್ರೀವಾಜ್ಞೆಯನ್ನು ರಾಹುಲ್‌ ಹರಿದು ಹಾಕಿದ್ದರೇ
ಎಕನಾಮಿಕ್‌ ಟೈಮ್ಸ್‌ ಸ್ಕ್ರೀನ್‌ ಗ್ರ್ಯಾಬ್‌

ಗಿರಿರಾಜ್‌ ಸಿಂಗ್ ಅವರು “ರಾಹುಲ್‌ ಅವರಿಗೆ ಲಾಲು ಪ್ರಸಾದ್‌ ಯಾದವ್‌ ಅವರು ಶಾಪ ಹಾಕಿದ್ದಾರೆ. ಮೇವು ಹಗರಣ ತೀರ್ಪು ಬಂದಾಗ, ಲಾಲು ಅವರ ಸದಸ್ಯತ್ವ ಹೋಗಿತ್ತು. ಆದರೆ ರಾಹುಲ್‌ ಗಾಂಧಿಯವರು ಇಂತಹ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವ ಸುಗ್ರೀವಾಜ್ಞೆಯನ್ನು ಹರಿದೆಸೆದರು” ಎಂದು ಹೇಳಿದ್ದಾರೆ.

ಆದರೆ ನಿಜಕ್ಕೂ ರಾಹುಲ್‌ ಅವರು ಸುಗ್ರೀವಾಜ್ಞೆಯನ್ನು ಹರಿದೆಸೆದಿದ್ದಾರೆಯೇ? ಎಲ್ಲರೆದುರು ಕಾಣುವಂತೆ ಅವರು ಹರಿದೆಸೆದರೇ? ಈ ವಿಚಾರಗಳ ಕುರಿತ ಪ್ರಶ್ನೆಗೆ ಉತ್ತರಗಳನ್ನು ಕಂಡುಹಿಡಿಯಲು ನ್ಯೂಸ್‌ಚೆಕರ್‌ ಯತ್ನಿಸಿದೆ.

ರಾಹುಲ್‌ ಅವರನ್ನು ಅನರ್ಹಕ್ಕೆ ಕಾರಣವಾದ 2013ರ ಸುಪ್ರೀಂ ಕೋರ್ಟ್‌ ತೀರ್ಪು ಯಾವುದು?

ಕೆಲ ದಿನಗಳ ಹಿಂದೆ  ಸೂರತ್ ನ್ಯಾಯಾಲಯವು 2019 ರ “ಮೋದಿ ಹೆಸರು”ಬಳಸಿದ ಮಾನನಷ್ಟ ಮೊಕದ್ದಮೆ ಕುರಿತಂತೆ ರಾಹುಲ್ ಗಾಂಧಿಯವರನ್ನು ತಪ್ಪಿತಸ್ಥರೆಂದು ಘೋಷಿಸಿತು ಮತ್ತು 2 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. ಆದಾಗ್ಯೂ, ಕಾಂಗ್ರೆಸ್ ನಾಯಕನಿಗೆ ಜಾಮೀನು ನೀಡಲಾಯಿತು ಮತ್ತು ಈ ತೀರ್ಪಿನ ವಿಚಾರದಲ್ಲಿ ಮೇಲ್ಮನವಿ ಸಲ್ಲಿಸಲು ಅವರ ಶಿಕ್ಷೆಯನ್ನು 30 ದಿನಗಳವರೆಗೆ ಅಮಾನತುಗೊಳಿಸಲಾಯಿತು. ಮರುದಿನವೇ, 2013 ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವಯನಾಡ್ ಕ್ಷೇತ್ರದ ಸಂಸದರಾಗಿ ಗಾಂಧಿ ಅವರನ್ನು ಅನರ್ಹಗೊಳಿಸಲಾಯಿತು.

Also Read: UPI ವಹಿವಾಟಿಗೂ ಸುಂಕ ವಿಧಿಸಲಾಗಿದೆಯೇ, ವೈರಲ್‌ ಕ್ಲೇಮ್‌ ಹಿಂದಿನ ಸತ್ಯ ಏನು?

2005 ರಲ್ಲಿ, ವಕೀಲ ಲಿಲ್ಲಿ ಥಾಮಸ್ ಮತ್ತು ಎನ್‌ಜಿಒ ಒಂದು 1951 ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 8(4) ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು (ಇದನ್ನು ಮುಂದೆ RPA ಎಂದು ಉಲ್ಲೇಖಿಸಲಾಗಿದೆ), ಅಂದಿನ ತೀರ್ಪಿನ ಪ್ರಕಾರ, ಯಾವುದೇ ಶಾಸನ ಸಭೆಯ ಸದಸ್ಯನಿಗೆ ಕನಿಷ್ಠ 2 ವರ್ಷ ಜೈಲು ಶಿಕ್ಷೆಯೊಂದಿಗೆ ಅಪರಾಧಿಯೆಂದು ಘೋಷಿತವಾದ ದಿನಾಂಕದಿಂದ ಮೂರು ತಿಂಗಳವರೆಗೆ ಕಾಲಾವಕಾಶವನ್ನು ನೀಡುತ್ತದೆ ಮತ್ತು ಈ ಅವಧಿಯಲ್ಲಿ ಅವರು ಶಿಕ್ಷೆಯ ವಿರುದ್ಧ ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ.

ಗಮನಾರ್ಹವಾದ ಸಂಗತಿಯೆಂದರೆ, ಎರಡು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟು ವರ್ಷ ಶಿಕ್ಷೆಗೊಳಪಟ್ಟರೆ, ಶಾಸನ ಸಭೆಯ ಸದಸ್ಯರ ಅನರ್ಹತೆಗೆ ಕಾರಣವಾಗುತ್ತದೆ ಎಂದು ಅದೇ ಕಾಯಿದೆಯ ಸೆಕ್ಷನ್‌ 8(3) ಹೇಳುತ್ತದೆ.

2013 ರಲ್ಲಿ, ಸುಪ್ರೀಂ ಕೋರ್ಟ್ RPA ಯ ಈ ನಿಬಂಧನೆಯನ್ನು ರದ್ದುಗೊಳಿಸಿತು. ಈ ವೇಳೆ ಅದು, “ಕಾಯ್ದೆಯ ಸೆಕ್ಷನ್ 8 ರ ಉಪ-ವಿಭಾಗ (4) ಅನ್ನು ಜಾರಿಗೊಳಿಸಲು ಸಂಸತ್ತಿಗೆ ಯಾವುದೇ ಅಧಿಕಾರವಿಲ್ಲ ಮತ್ತು ಅದರ ಪ್ರಕಾರ ಕಾಯಿದೆಯ ಸೆಕ್ಷನ್ 8 ರ ಉಪ-ವಿಭಾಗ (4) ಸಂವಿಧಾನಕ್ಕೆ ಮೀರಿದೆ ಎಂದು ಕೋರ್ಟ್‌ ಗಮನಿಸಿದೆ. ಸಂಸತ್ತಿನ ಅಥವಾ ರಾಜ್ಯ ಶಾಸಕಾಂಗದ ಯಾವುದೇ ಹಾಲಿ ಸದಸ್ಯರು ಉಪ-ವಿಭಾಗ (1), (2), ಮತ್ತು (3) ಸೆಕ್ಷನ್ 8, RPA ಅಡಿಯಲ್ಲಿ ಯಾವುದೇ ಅಪರಾಧದಲ್ಲಿ ಶಿಕ್ಷೆಗೊಳಗಾದರೆ, ಆನಂತರ “ಅಂತಹ ಅಪರಾಧ ಮತ್ತು/ಅಥವಾ ಶಿಕ್ಷೆಯ ಕಾರಣದಿಂದ ” ಅವರನ್ನು ಅನರ್ಹಗೊಳ್ಳುತ್ತಾರೆ. ಈ ಹಿಂದೆ ಇದ್ದಂತೆ ಅಪರಾಧಿ ಸಂಸದ ಅಥವಾ ಶಾಸಕರ ಸದಸ್ಯತ್ವವನ್ನು ಇನ್ನು ಮುಂದೆ ಸೆಕ್ಷನ್ 8 (4) ನಿಂದ ರಕ್ಷಿಸಲಾಗುವುದಿಲ್ಲ ಎಂದು ನ್ಯಾಯಾಲಯವು ಈ ತೀರ್ಪಿನಲ್ಲಿ ಸೇರಿಸಿದೆ.

Fact Check/Verification

ರಾಹುಲ್‌ ಸುಗ್ರೀವಾಜ್ಞೆ ಹರಿದೆಸೆದಿದ್ದಾರೆ ಎಂಬ ಕ್ಲೇಮ್‌ ಕುರಿತಂತೆ ನಾವು ಸತ್ಯಶೋಧನೆಯನ್ನು ನಡೆಸಿದ್ದು, ಗೂಗಲ್‌ ಕೀವರ್ಡ್ ಸರ್ಚ್‌ ನಡೆಸಿದ್ದೇವೆ. ಈ ವೇಳೆ, ಫೆಬ್ರವರಿ 16, 2012ರಂದು ಎನ್‌ಡಿಟಿವಿ ಪ್ರಕಟಿಸಿದ ವೀಡಿಯೋವೊಂದು ಲಭ್ಯವಾಗಿದೆ. ಈ ವೀಡಿಯೋದೊಂದಿಗೆ ಇರುವ ಸುದ್ದಿಯಲ್ಲಿ ಹೀಗೆ ವರದಿ ಮಾಡಲಾಗಿದೆ “ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ)ಗಳು ಕೇವಲ ಭರವಸೆಗಳನ್ನು ನೀಡುತ್ತಿವೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಇಂದಿನ ಚುನಾವಣಾ ಸಭೆಯಲ್ಲಿ ಅದು ಕೇವಲ ಆಶ್ವಾಸನೆಗಳ ಕೇವಲ ಪಟ್ಟಿಯಾಗಿದ್ದು, ಇದನ್ನುಮನೆಗೆ ತೆಗೆದುಕೊಂಡು ಹೋಗುವುದಕ್ಕೆ ಯಾವುದೇ ಉಪಯೋಗವಿಲ್ಲ, ಇದು ಕೇವಲ ಕಾಗದದ ತುಂಡು ಎಂದು ಹರಿದು ಹಾಕಿದರು” ಎಂದು ಹೇಳಲಾಗಿದೆ.

ಇದನ್ನು ಆಧಾರವಾಗಿರಿಸಿ ನಾವು ಮತ್ತಷ್ಟು ಕೀವರ್ಡ್ ಸರ್ಚ್ ನಡೆಸಿದ್ದು, ಗೂಗಲ್‌ ನಲ್ಲಿ ಫೆಬ್ರವರಿ 15, 2022ರಂದು ಇಂಡಿಯಾ ಟುಡೇ ಪ್ರಕಟಿಸಿದ ವರದಿ ಲಭ್ಯವಾಗಿದೆ. ಇದರಲ್ಲೂ ರಾಹುಲ್‌ ಅವರು ಕಾಗದ ಹರಿದು ಹಾಕುವ ಚಿತ್ರ ಕಂಡುಬಂದಿದ್ದು, ಇದರೊಂದಿಗೆ ಎನ್‌ಡಿಟಿವಿ ವರದಿಯನ್ನು ಹೋಲುವ ವರದಿ ಕಂಡುಬಂದಿದೆ. “ಅವರು ವಿದ್ಯುತ್, ನೀರು, ಉದ್ಯೋಗ ನೀಡುವುದಾಗಿ ಭರವಸೆ ನೀಡುತ್ತಾರೆ ಮತ್ತು ಉದ್ಯೋಗ ನೀಡದಿದ್ದರೆ ನಿರುದ್ಯೋಗ ಭತ್ಯೆ ಕೊಡುವುದಾಗಿ ಹೇಳುತ್ತಾರೆ. ಇದು ಕೇವಲ ಭರವಸೆಗಳ ಪಟ್ಟಿಯಾಗಿದೆ ಎಂದು ಚುನಾವಣೆ ಸಭೆಯಲ್ಲಿ ಹೇಳಿ ಕಾಗದವನ್ನು ಹರಿದುಹಾಗಿದರು. ತಾನು ಹೇಳಿದ ವಿಷಯವನ್ನು ಒತ್ತಿ ಹೇಳಲು ಅವರು ಕಾಗದ ಹರಿದು ಹಾಕಿದರು” ಎಂದು ಹೇಳಲಾಗಿದೆ.

2013ರ ಸುಪ್ರೀಂ ಕೋರ್ಟ್‌ ತೀರ್ಪು ವಿರುದ್ಧದ ಸುಗ್ರೀವಾಜ್ಞೆಯನ್ನು ರಾಹುಲ್‌ ಹರಿದು ಹಾಕಿದ್ದರೇ

ಆದ್ದರಿಂದ ಕ್ಲೇಮಿನಲ್ಲಿರುವ ಫೋಟೋ, ಶಾಸನ ಸಭೆ ಸದಸ್ಯರ ಅನರ್ಹತೆ ಕುರಿತಂತೆ, ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಸರ್ಕಾರ ಹೊರತಂದಿದ್ದ ಸುಗ್ರೀವಾಜ್ಞೆಯನ್ನು ರಾಹುಲ್‌ ಗಾಂಧಿ ಅವರು ಹರಿದು ಹಾಕುವ ಫೋಟೋ ಅಲ್ಲ ಎಂಬುದು ತಿಳಿದುಬಂದಿದೆ.

ರಾಹುಲ್‌ ಅವರು ಸುಗ್ರೀವಾಜ್ಞೆ ಹರಿದು ಹಾಕಿದ್ದಾರೆಯೇ?

ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆಗೆ ಗುರಿಯಾದ ತಕ್ಷಣ ಶಾಸನ ಸಭೆಯ ಸದಸ್ಯರನ್ನು ಅನರ್ಹಗೊಳಿಸುವ ಕುರಿತು ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪು 2013 ರಲ್ಲಿ ಬಂದಿತ್ತು. ಇದಾದ ನಂತರ, ಕೇಂದ್ರದಲ್ಲಿ ಆಗಿನ ಯುಪಿಎ ಸರ್ಕಾರವು ಅಪರಾಧಿ ಶಾಸನ ಸಭೆ ಸದಸ್ಯರನ್ನು ರಕ್ಷಿಸುವ ಉದ್ದೇಶದಿಂಧ ತೀರ್ಪಿನ ವಿರುದ್ಧ ಸುಗ್ರೀವಾಜ್ಞೆ ಜಾರಿಗೆ ತರುವ ಮಾರ್ಗವನ್ನು ಆಯ್ಕೆಮಾಡಿತ್ತು.

Also Read: ಕಾಶ್ಮೀರದಲ್ಲಿ ಶಾರದಾ ದೇವಿ ಪೀಠ ಮರು ನಿರ್ಮಾಣವಾಗಿದೆಯೇ, ಇದು ನಿಜವೇ?

ಗಮನಿಸಬೇಕಾದ ಅಂಶವೆಂದರೆ, ರಾಹುಲ್‌ ಅವರು ಶಿಕ್ಷೆಗೊಳಗಾದ ಶಾಸನಸಭೆ ಸದಸ್ಯರನ್ನು ರಕ್ಷಿಸುವ ಸುಗ್ರೀವಾಜ್ಞೆ ಬಗ್ಗೆ “ಕಂಪ್ಲೀಟ್ ನಾನ್‌ಸೆನ್ಸ್‌” ಎಂದು ಹೇಳಿದ್ದರು. ಈ ಬಗ್ಗೆ ಸೆಪ್ಟೆಂಬರ್ 27, 2013ರಂದು ಎಕನಾಮಿಕ್‌ ಟೈಮ್ಸ್ ವರದಿಯಲ್ಲಿ ಹೀಗೆ ಹೇಳಲಾಗಿದೆ “ಯುಪಿಎ ಸರ್ಕಾರಕ್ಕೆ ಮುಜುಗರ ತರುವ ಸನ್ನಿವೇಶವೊಂದರಲ್ಲಿ ರಾಹುಲ್‌ ಗಾಂಧಿ ಅವರು “ಶಿಕ್ಷೆಗೊಳಗಾದ ಶಾಸನ ಸಭೆಯ ಸದಸ್ಯರನ್ನು ರಕ್ಷಿಸುವ, ಸುಪ್ರೀಂ ತೀರ್ಪಿನ ವಿರುದ್ಧದ ಸುಗ್ರೀವಾಜ್ಞೆಯನ್ನು “ಕಂಪ್ಲೀಟ್‌ ನಾನ್‌ಸೆನ್ಸ್‌” ಎಂದು ಹೇಳಿದ್ದಾರೆ. ಜೊತೆಗೆ “ನಮ್ಮ ಸರ್ಕಾರ ತಪ್ಪು ಮಾಡಿದೆ” ಎಂದು ಹೇಳಿದ್ದಾರೆ ಎಂದು ಹೇಳಿದೆ. ಈ ವರದಿಯಲ್ಲಿ “ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ತಮ್ಮ ಪಕ್ಷದ ಕಾರ್ಯದರ್ಶಿ ಅಜಯ್‌ ಮಾಕೆನ್‌ ಅವರು ನಡೆಸುತ್ತಿದ್ದ ಪತ್ರಿಕಾಗೋಷ್ಠಿಯಲ್ಲಿ ಅನಿರೀಕ್ಷಿತವಾಗಿ ಕಾಣಿಸಿಕೊಂಡ ಅವರು “ಸುಗ್ರೀವಾಜ್ಞೆಯನ್ನು ಹರಿದು ಎಸೆಯಬೇಕು” ಎಂದು ಹೇಳಿದರು” ಎಂದು ಹೇಳಲಾಗಿದೆ.

ಗಾಂಧಿ ಅವರು ಈ ಹೇಳಿಕೆ ನೀಡಿದ ಪತ್ರಿಕಾಗೋಷ್ಠಿಯ ವಿಡಿಯೋ ತುಣುಕು ಕೂಡ ನಮಗೆ ಲಭ್ಯವಾಗಿದೆ. ಈ ವೀಡಿಯೋದಲ್ಲಿ ರಾಹುಲ್ ಹೀಗೆ ಹೇಳುತ್ತಾರೆ “ಸುಗ್ರೀವಾಜ್ಞೆ ಬಗ್ಗೆ ನನ್ನ ಅಭಿಪ್ರಾಯವೇನು ಎಂಬುದನ್ನು ನಾನು ನಿಮಗೆ ಹೇಳುತ್ತೇನೆ. ಸುಗ್ರೀವಾಜ್ಞೆಯ ಸಂಪೂರ್ಣ ಅಸಂಬದ್ಧವಾಗಿದೆ ಮತ್ತು ಅದನ್ನು ಹರಿದು ಎಸೆಯಬೇಕು. ಅದು ನನ್ನ ಅಭಿಪ್ರಾಯ. ಸುಗ್ರೀವಾಜ್ಞೆಯ ಬಗ್ಗೆ ನನ್ನ ವೈಯಕ್ತಿಕ ಅಭಿಪ್ರಾಯ”ವಾಗಿದೆ ಎಂದು ಹೇಳುತ್ತಾರೆ.

ಈ ಕುರಿತ ಪತ್ರಿಕಾಗೋಷ್ಠಿಯ ವಿಸ್ತೃತ ವೀಡಿಯೋವನ್ನು ಇಲ್ಲಿ ನೋಡಬಹುದು.

ಶಾಸನಸಭೆಯ ಸದಸ್ಯರನ್ನು ಸುಪ್ರೀಂ ಕೋರ್ಟ್‌ ತೀರ್ಪಿನಿಂದ ರಕ್ಷಿಸುವ ಸುಗ್ರೀವಾಜ್ಞೆಯನ್ನು “ಹರಿದೆಸೆಯಬೇಕು” ಎಂದು ರಾಹುಲ್‌ ಗಾಂಧಿ ಹೇಳುತ್ತಾರಾದರೂ ಅವರು ಹಾಗೆ ಮಾಡುವುದು ಮತ್ತು ದಾಖಲೆಯನ್ನು ಹರಿದು ಎಸೆಯುವುದು ಎಲ್ಲಿಯೂ ಕಂಡುಬರುವುದಿಲ್ಲ.

ಇದರೊಂದಿಗೆ ರಾಹುಲ್‌ ಅವರ ಈ ಹೇಳಿಕೆ ಕುರಿತು ವಿವಿಧ ಮಾಧ್ಯಮಗಳು “ಅಚ್ಚರಿ” ಎಂಬಂತೆ ವರದಿ ಮಾಡಿದ್ದು ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ರಾಹುಲ್‌ ಅವರ ವಿರೋಧದಿಂದಾಗಿ ಆ ಬಳಿಕ ಈ ಸುಗ್ರೀವಾಜ್ಞೆಯನ್ನು ಸರ್ಕಾರ ಹಿಂಪಡೆದಿತ್ತು.

Conclusion

ಈ ಸತ್ಯಶೋಧನೆಯ ಪ್ರಕಾರ, RPA ಯ ಸೆಕ್ಷನ್ 8(4) ಅನ್ನು ರದ್ದುಗೊಳಿಸುವ 2013 ರ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧದ ಸುಗ್ರೀವಾಜ್ಞೆಯನ್ನು ರಾಹುಲ್ ಗಾಂಧಿ ಖಂಡಿಸಿದ್ದಾರೆ ಎಂದು ನಾವು ತೀರ್ಮಾನಿಸಬಹುದು. ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಯನ್ನು ಭೌತಿಕವಾಗಿ ಹರಿದು ಹಾಕಲಿಲ್ಲ. ಈ ತಪ್ಪು ಕ್ಲೇಮ್‌ಗೆ 2012ರ ಚುನಾವಣಾ ರಾಲಿಯ ರಾಹುಲ್‌ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ ಎಂಬುದು ತಿಳಿದುಬಂದಿದೆ.

Result: False

Our Sources:

Report By India Today, Dated February 15, 2012

Report By Economic Times, Dated September 27, 2013

YouTube Video By NDTV, Dated September 27, 2013

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.