Claim
ಬೆಂಗಳೂರು ಬೊಮ್ಮನಹಳ್ಳಿ ಕ್ರಾಸ್ ನಲ್ಲಿ ಮೆಟ್ರೋ ರೈಲು ಅಪಘಾತವಾಗಿದೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್ ನಲ್ಲಿ ಈ ವೀಡಿಯೋವನ್ನು ನಾವು ನೋಡಿದ್ದೇವೆ


ಇದರ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಇದು ಎಐ (ಕೃತಕಬುದ್ಧಿಮತ್ತೆ) ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಿಂದ ಮಾಡಲಾದ ವೀಡಿಯೋ ಎಂಬುದನ್ನು ಪತ್ತೆ ಮಾಡಿದ್ದೇವೆ.
Also Read: ಪಾಕಿಸ್ತಾನದಲ್ಲಿ ಜನರು ಆಹಾರಕ್ಕಾಗಿ ಮಸೀದಿ ಧ್ವಂಸ ಮಾಡಿ ಕಬ್ಬಿಣ, ಇಟ್ಟಿಗೆ ಮಾರಾಟ ಮಾಡುತ್ತಿದ್ದಾರೆಯೇ?
Fact
ಸತ್ಯಶೋಧನೆಗಾಗಿ ನಾವು ಈ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಇದೇ ವೀಡಿಯೋವನ್ನು ಬೇರೆ ಬೇರೆ ಸ್ಥಳಗಳ ಹೆಸರಿನಲ್ಲಿ ಹಂಚಿಕೊಂಡಿರುವುದನ್ನು ನಾವು ಗಮನಿಸಿದ್ದೇವೆ.

ಇದರೊಂದಿಗೆ ನಾವು ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಮೆಟ್ರೋ ಅಪಘಾತದ ಯಾವುದೇ ವರದಿಗಳನ್ನು ಮಾಧ್ಯಮಗಳಲ್ಲಿ ನೋಡಿಲ್ಲ. ಅಂತಹ ಯಾವುದೇ ಘಟನೆಗಳಾದ ಬಗ್ಗೆ ತಿಳಿದುಬಂದಿಲ್ಲ.
ಇನ್ನು ವೀಡಿಯೋವನ್ನು ನಾವು ಕೂಲಂಕಷವಾಗಿ ಪರಿಶೀಲಿಸಿದಾಗ, ಅದರಲ್ಲಿ ಜನರ ಓಡಾಟ, ವಾಹನಗಳ ಓಡಾಟ ಅಸಹಜವಾಗಿರುವುದು ಕಂಡುಬಂದಿದೆ. ಇದು ಎಐ ನಿಂದ ಮಾಡಿದ್ದಾಗಿರಬಹುದು ಎಂಬ ಸಂಶಯಕ್ಕೆ ಕಾರಣವಾಗಿದೆ.
ಅದಕ್ಕಾಗಿ ನಾವು ವಾಸ್ ಇಟ್ ಎಐ ಎಂಬ ಎಐ ಪತ್ತೆ ವೆಬ್ ಸೈಟ್ ನಲ್ಲಿ ಕೀಫ್ರೇಂಗಳನ್ನು ಪರಿಶೀಲಿಸಿದ್ದು, “ಈ ಚಿತ್ರ ಅಥವಾ ಅದರ ಮಹತ್ವದ ಭಾಗವು AI ನಿಂದ ರಚಿಸಲ್ಪಟ್ಟಿದೆ ಎಂದು ನಮಗೆ ಸಾಕಷ್ಟು ವಿಶ್ವಾಸವಿದೆ.” ಎಂಬ ಉತ್ತರವನ್ನು ಪಡೆದುಕೊಂಡಿದ್ದೇವೆ.

ಹೆಚ್ಚಿನ ಮಾಹಿತಿಗಾಗಿ ನ್ಯೂಸ್ ಚೆಕರ್ ಒಂದು ಭಾಗವಾಗಿರುವ ದಿ ಮಿಸ್‌ಇನ್‌ಫಾರ್ಮೇಶನ್ ಕಾಂಬ್ಯಾಟ್ ಅಲೈಯನ್ಸ್ (MCA) ನ ಡೀಪ್‌ಫೇಕ್ಸ್ ಅನಾಲಿಸಿಸ್ ಯೂನಿಟ್ (DAU) ಗೆ ನಾವು ವೀಡಿಯೋವನ್ನು ಪರಿಶೀಲಿಸಲು ಕೇಳಿಕೊಂಡಿದ್ದು ಇದು ಎಐ ನಿಂದ ರಚಿತವಾಗಿರುವುದನ್ನು ಖಚಿತಪಡಿಸಿದೆ.
ಜೊತೆಗೆ ಈ ಕಾರಣಗಳನ್ನು DAU ಪಟ್ಟಿ ಮಾಡಿದೆ.
- ಆ ಸ್ಥಳದಲ್ಲಿ ನೆರೆದಿರುವ ಜನರನ್ನು ನೋಡಿದಾಗ, ಅವರ ಕೈಕಾಲುಗಳು (ವಿಶೇಷವಾಗಿ ಕಾಲುಗಳು) ಚಲಿಸುವಾಗ ಅದರ ಆಕಾರ ಬದಲಾಗುತ್ತಿವೆ. ಅಲ್ಲದೆ, ಅವರ ಭಂಗಿಗೆ ಯಾವುದೇ ವ್ಯತ್ಯಾಸವಿಲ್ಲ. ಅಪಘಾತಕ್ಕೀಡಾದಾಗ ಜನರು ಏನನ್ನನಾದರೂ ಮಾಡುತ್ತಾರೆ ಎಂದು ನಿರೀಕ್ಷಿಸಬಹುದು. ಆದರೆ ಇಲ್ಲಿ ಜನರು ಏನೂ ಆಗಿಲ್ಲ ಎಂಬಂತೆ ಚಲಿಸುತ್ತಿರುವುದು ಕಾಣಿಸುತ್ತದೆ.
- ರೈಲು ಅಪಘಾತ ಸ್ಥಳದ ಸನಿಹದ ಮೇಲ್ಸೇತುವೆ ಪ್ರದೇಶವನ್ನು ನೋಡಿದರೆ, ಕೆಲವು ಕಾರುಗಳು ಗಾಳಿಯಲ್ಲಿ ಕಣ್ಮರೆಯಾಗುವಂತೆ ಕಾಣುವುದನ್ನು ಗಮನಿಸಬಹುದು. ಇದೆಲ್ಲವೂ ಇದು ಎಐ ವೀಡಿಯೋ ಎಂದು ತೋರಿಸುತ್ತದೆ ಎಂದು ಹೇಳಿದೆ.
ಆದ್ದರಿಂದ ಬೆಂಗಳೂರು ಬೊಮ್ಮನಹಳ್ಳಿ ಕ್ರಾಸ್ ನಲ್ಲಿ ಮೆಟ್ರೋ ರೈಲು ಅಪಘಾತವಾಗಿದೆ ಎಂದ ವೀಡಿಯೋ ಸುಳ್ಳಾಗಿದ್ದು, ಇದು ಎಐ ನಿಂದ ಮಾಡಿದ್ದು ಎಂದು ತಿಳಿದುಬಂದಿದೆ.
Also Read: ಭಜನೆಯಿಂದ ಅಪೌಷ್ಠಿಕತೆ ಕಡಿಮೆ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆಯೇ?
Our Sources:
Results from wasitai.com
Analysis By The Deepfakes Analysis Unit (DAU)