Fact Check
ಭಜನೆಯಿಂದ ಅಪೌಷ್ಠಿಕತೆ ಕಡಿಮೆ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆಯೇ?
Claim
ಭಜನೆಯಿಂದ ಅಪೌಷ್ಠಿಕತೆ ಕಡಿಮೆ ಮಾಡಬಹುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆಯೇ?
Fact
ಭಜನೆಯಿಂದ ಅಪೌಷ್ಠಿಕತೆ ಕಡಿಮೆ ಮಾಡಬಹುದು ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಲ್ಲ. ಮಧ್ಯಪ್ರದೇಶದಲ್ಲಿ ಮೇರಾ ಬಚ್ಚಾ ಅಭಿಯಾನದ ಅಂಗವಾಗಿ ಸಮುದಾಯದ ಭಾಗೀದಾರಿಕೆಯಲ್ಲಿ ಭಜನೆ, ಕೀರ್ತನೆಗಳನ್ನು ಹೇಳುವುದರೊಂದಿಗೆ ಮಕ್ಕಳಿಗೆ ಪೌಷ್ಠಿಕ ಆಹಾರ ಕೊಡುವ ವಿಶೇಷ ಯೋಜನೆಯೊಂದರ ಬಗ್ಗೆ ಹೇಳಿದ್ದಾರೆ
ಭಜನೆಯಿಂದ ಅಪೌಷ್ಠಿಕತೆ ಕಡಿಮೆ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಎಂಬಂತೆ ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಥ್ರೆಡ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ದೀಪ ಹಚ್ಚಿ, ಪಾತ್ರೆ ಬಡಿದು ಕೊರೋನಾ ಓಡಿಸಿದ!? ಈಗ ಭಜನೆ ಮಾಡಿ ಅಪೌಷ್ಠಿಕತೆ ನಿವಾರಿಸಿ ಅಂತಿದಾನೆ!” ಎಂದಿದೆ. ಈ ಪೋಸ್ಟ್ ನೊಂದಿ ವಾರ್ತಾಭಾರತಿಯ ಸುದ್ದಿಯ ಸ್ಕ್ರೀನ್ ಶಾಟ್ ಅನ್ನುಲಗತ್ತಿಸಲಾಗಿದೆ. ಈ ಸ್ಕ್ರೀನ್ ಶಾಟ್ ನಲ್ಲಿ “ಭಜನೆ, ಭಕ್ತಿಗೀತೆಗಳಿಂದ ಅಪೌಷ್ಠಿಕತೆಯ ಹೊರೆಯನ್ನು ಕಡಿಮೆ ಮಾಡಬಹುದು: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ” ಎಂದಿದೆ.

ಇದರ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋದನೆ ನಡೆಸಿದ್ದು, ಪ್ರಧಾನಿ ಮೋದಿ ಮಾತುಗಳನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ ಎಂದು ತಿಳಿದುಬಂದಿದೆ.
Also Read: ಮಹಾಕುಂಭ ಮೇಳ 2025: ಎಐನಿಂದ ಮಾಡಿದ ಸೆಲೆಬ್ರಿಟಿಗಳ ಫೋಟೋಗಳನ್ನು ನಿಜವಾದ್ದೆಂದು ಹಂಚಿಕೆ
Fact Check/Verification
ಸತ್ಯಶೋಧನೆಗಾಗಿ ನಾವು ಮೊದಲು ವಾರ್ತಾಭಾರತಿ ವರದಿ ಬಗ್ಗೆ ಸರ್ಚ್ ಮಾಡಿದ್ದೇವೆ. ಆಗಸ್ಟ್ 31, 2022ರ ವಾರ್ತಾಭಾರತಿ ವರದಿಯಲ್ಲಿ “ಆಗಸ್ಟ್ 28 ರಂದು ತಮ್ಮ’ಮನ್ ಕಿ ಬಾತ್ (Mann ki Baat) ರೇಡಿಯೊ ಕಾರ್ಯಕ್ರಮದ 92 ನೇ ಸಂಚಿಕೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ‘ಮೇರಾ ಬಚ್ಚಾ’ ಅಭಿಯಾನದ ಕುರಿತು ಮತ್ತು ಸೆಪ್ಟೆಂಬರ್‌ನಲ್ಲಿ ‘ಪೋಶನ್ ಮಾ’ (ಪೌಷ್ಟಿಕಾಂಶದ ಬಗ್ಗೆ ಹೊಂದಿರುವ ಕಾರ್ಯಕ್ರಮ)ವನ್ನು ಆಚರಿಸುವ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಭಜನೆ(Bhajan) ನಡೆಸಿ ಭಕ್ತಿಗೀತೆಗಳನ್ನು ಹಾಡುವುದರಿಂದ ಅಪೌಷ್ಟಿಕತೆಯ ಹೊರೆಯನ್ನು ಕಡಿಮೆ ಮಾಡಬಹುದು ಎಂದು ಅವರು ಇದೇ ಸಂಚಿಕೆಯಲ್ಲಿ ಮಾತನಾಡಿದ್ದಾರೆ. ಭಾರತದ ಜನರ ಪೌಷ್ಟಿಕಾಂಶ ಮತ್ತು ಆರೋಗ್ಯ ಸ್ಥಿತಿಯನ್ನು ಸುಧಾರಿಸಲು ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಆಹಾರದ ಲಭ್ಯತೆ ನಿರ್ಣಾಯಕವಾಗಿದೆ ಎಂದು ಸಾಕಷ್ಟು ಪುರಾವೆಗಳಿವೆ. ಆದರೆ, ಭಜನೆಗಳು ಬಗ್ಗೆ ಅಂತಹ ಯಾವುದೇ ಪುರಾವೆಗಳಿಲ್ಲ ಎಂದು thewire.in ತನ್ನ ವರದಿಯಲ್ಲಿ ತಿಳಿಸಿದೆ.” ಎಂದು ಉಲ್ಲೇಖಿಸಿರುವುದನ್ನು ಗಮನಿಸಿದ್ದೇವೆ.

ಈ ವರದಿಯಲ್ಲಿ ಉಲ್ಲೇಖಿಸಿರುವ ವಿಷಯಗಳ ಬ್ಗಗೆ ಖಚಿತಪಡಿಸಿಕೊಳ್ಳಲು ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಮಾಧ್ಯಮ ವರದಿಗಳು ಲಭ್ಯವಾಗಿವೆ.
ಆಗಸ್ಟ್ 30, 2022ರ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, “ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ , ಡಾಟಿಯಾ ಜಿಲ್ಲೆಯಲ್ಲಿ ಅಪೌಷ್ಟಿಕತೆಯನ್ನು ನಿರ್ಮೂಲನೆ ಮಾಡಲು ನಡೆದ ” ಮೇರಾ ಬಚ್ಚಾ ಅಭಿಯಾನ ” ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ . ಹಾಡುಗಳು, ಸಂಗೀತ ಮತ್ತು ಭಜನೆಗಳನ್ನು ಸಹ ಅಪೌಷ್ಟಿಕತೆಯನ್ನು ಹೋಗಲಾಡಿಸಲು ಬಳಸಬಹುದು ಎಂದು ನೀವು ಊಹಿಸಬಲ್ಲಿರಾ ಎಂದು ಅವರು ಹೇಳಿದರು. ಮಧ್ಯಪ್ರದೇಶದ ಡಾಟಿಯಾ ಜಿಲ್ಲೆಯಲ್ಲಿ ನಡೆದ “ಮೇರಾ ಬಚ್ಚಾ ಅಭಿಯಾನ”ದಲ್ಲಿ ಇದನ್ನು ಯಶಸ್ವಿಯಾಗಿ ಬಳಸಲಾಯಿತು. ಈ ಅಭಿಯಾನದ ನಂತರ, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಾಗಿದೆ ಮಾತ್ರವಲ್ಲದೆ ಅಪೌಷ್ಟಿಕತೆಯೂ ಕಡಿಮೆಯಾಗಿದೆ. ಅಭಿಯಾನದಲ್ಲಿ ಜಿಲ್ಲೆಯಲ್ಲಿ ಭಜನೆ-ಕೀರ್ತನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಇದರಲ್ಲಿ ಪೌಷ್ಟಿಕಾಂಶ ಗುರುಗಳು ಎಂದು ಕರೆಯಲ್ಪಡುವ ಶಿಕ್ಷಕರನ್ನು ಸಹ ಕರೆಯಲಾಗಿದೆ ಎಂದು ಅವರು ಹೇಳಿದರು. ಅಂಗನವಾಡಿ ಕೇಂದ್ರಕ್ಕೆ ಮಹಿಳೆಯರು ಒಂದು ಹಿಡಿ ಧಾನ್ಯಗಳನ್ನು ತರುವ ಮಟ್ಕಾ ಕಾರ್ಯಕ್ರಮವೂ ಇತ್ತು ಮತ್ತು ಶನಿವಾರದಂದು ಮಕ್ಕಳ ಔತಣಕೂಟವನ್ನು ಮಾಡಲಾಗುತ್ತದೆ. ದಾಟಿಯಾ ಜಿಲ್ಲೆಯಲ್ಲಿ ಮಕ್ಕಳನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸಲು ಸೆಪ್ಟೆಂಬರ್ 2019 ರಿಂದ “ಮೇರಾ ಬಚ್ಚಾ ಅಭಿಯಾನ”ವನ್ನು ಪ್ರಾರಂಭಿಸಲಾಗಿದೆ. ಅಭಿಯಾನದಲ್ಲಿ ಜಿಲ್ಲೆಯ ಗುರುತಿಸಲಾದ ಅಪೌಷ್ಟಿಕ ಮಕ್ಕಳನ್ನು ಪೋಷಿಸಲು ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಕ್ಕಳ ಕಡಿಮೆ ತೂಕ, ಕುಂಠಿತ ಮತ್ತು ದೈಹಿಕ ಸಮಸ್ಯೆಗಳನ್ನು ತೆಗೆದುಹಾಕಲು ಪೌಷ್ಟಿಕಾಂಶದ ಗುರಿಯೊಂದಿಗೆ ಜಿಲ್ಲೆಯಲ್ಲಿ ಈ ಅಭಿಯಾನವನ್ನು ನಡೆಸಲಾಯಿತು.” ಎಂದು ಮೋದಿ ಹೇಳಿದ್ದಾರೆಂದು ವರದಿಯಲ್ಲಿದೆ.

ಈ ವರದಿಯನ್ವಯ ನಾವು ಪ್ರಧಾನಿ ಮೋದಿ ಅವರ ಮನ್ ಕಿ ಬಾತ್ ಕಾರ್‍ಯಕ್ರಮದ ಧ್ವನಿ ರೆಕಾರ್ಡ್ ಬಗ್ಗೆ ಹುಡುಕಾಡಿದ್ದೇವೆ. ಈ ವೇಳೆ ಆಗಸ್ಟ್ 2022ರ 92ನೇ ಎಪಿಸೋಡ್ ಲಭ್ಯವಾಗಿದೆ.
ಇದೇ ಕಾರ್‍ಯಕ್ರಮದ ಯೂಟ್ಯೂಬ್ ಆವೃತ್ತಿಯನ್ನೂ ನಾವು ಗಮನಿಸಿದ್ದೇವೆ.
ಆಗಸ್ಟ್ 28, 2022ರಂದು ನರೇಂದ್ರ ಮೋದಿ ಯೂಟ್ಯೂಬ್ ಚಾನೆಲ್ ನಿಂದ ಅಪ್ ಲೋಡ್ ಮಾಡಲಾದ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಅವರು ಅಪೌಷ್ಟಿಕತೆ ಬಗ್ಗೆ ಮಾತನಾಡಿರುವುದನ್ನು ಗಮನಿಸಿದ್ದೇವೆ.
12.56ನೇ ನಿಮಿಷದಿಂದ ಆರಂಭವಾಗುವ ಪ್ರಧಾನಿ ಮೋದಿ ಅವರು ಮಾತನಾಡುತ್ತ, “ಅಪೌಷ್ಟಿಕತೆಯನ್ನು ತೊಡೆದುಹಾಕಲು ಹಾಡು, ಸಂಗೀತ ಮತ್ತು ಭಜನೆಗಳನ್ನು ಸಹ ಬಳಸಬಹುದೇ ಎಂದು ನೀವು ಊಹಿಸಬಲ್ಲಿರಾ? ಇದನ್ನು “ಮೇರಾ ಬಚ್ಚಾ ಅಭಿಯಾನ”ದಲ್ಲಿ ಯಶಸ್ವಿಯಾಗಿ ಬಳಸಲಾಯಿತು; ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯಲ್ಲಿ “ಮೇರಾ ಬಚ್ಚಾ ಅಭಿಯಾನ”. ಇದರ ಅಡಿಯಲ್ಲಿ, ಜಿಲ್ಲೆಯಲ್ಲಿ ಭಜನೆ-ಕೀರ್ತನೆಗಳನ್ನು ಆಯೋಜಿಸಲಾಯಿತು, ಇದರಲ್ಲಿ ಶಿಕ್ಷಕರನ್ನು ಪೌಷ್ಟಿಕಾಂಶ ಗುರುಗಳಾಗಿ ಕರೆಯಲಾಯಿತು. ಮಹಿಳೆಯರು ಅಂಗನವಾಡಿ ಕೇಂದ್ರಕ್ಕೆ ಒಂದು ಹಿಡಿ ಧಾನ್ಯಗಳನ್ನು ತರುವ ಮಟ್ಕಾ ಕಾರ್ಯಕ್ರಮವನ್ನು ಸಹ ನಡೆಸಲಾಯಿತು ಮತ್ತು ಈ ಧಾನ್ಯದೊಂದಿಗೆ ಶನಿವಾರದಂದು ‘ಬಾಲ್ ಭೋಜ್’ (ಮಕ್ಕಳ ಊಟ) ಆಯೋಜಿಸಲಾಗುತ್ತದೆ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿಯಲ್ಲಿನ ಹೆಚ್ಚಳದ ಜೊತೆಗೆ, ಅಪೌಷ್ಟಿಕತೆಯೂ ಕಡಿಮೆಯಾಗಿದೆ. ಅಪೌಷ್ಟಿಕತೆಯ ಬಗ್ಗೆ ಜಾಗೃತಿ ಮೂಡಿಸಲು ಜಾರ್ಖಂಡ್‌ನಲ್ಲಿ ಒಂದು ವಿಶಿಷ್ಟ ಅಭಿಯಾನವೂ ನಡೆಯುತ್ತಿದೆ. ಜಾರ್ಖಂಡ್‌ನ ಗಿರಿದಿಹ್‌ನಲ್ಲಿ ಹಾವಿನ ಏಣಿ ಆಟವನ್ನು ಸಿದ್ಧಪಡಿಸಲಾಗಿದೆ. ಆಟದ ಮೂಲಕ, ಮಕ್ಕಳು ಒಳ್ಳೆಯ ಮತ್ತು ಕೆಟ್ಟ ಅಭ್ಯಾಸಗಳ ಬಗ್ಗೆ ಕಲಿಯುತ್ತಾರೆ.” ಎಂದು ಹೇಳುತ್ತಾರೆ.
ಭಜನೆ-ಕೀರ್ತನೆ ಕಾರ್ಯಕ್ರಮಗಳ ಸಮಯದಲ್ಲಿ ‘ಪೌಷ್ಠಿಕಾಂಶ ಗುರುಗಳನ್ನು’ ಸೇರಿಸಿಕೊಳ್ಳುವ ಮೂಲಕ ಅಪೌಷ್ಟಿಕತೆಯ ಕುರಿತು ಜಾಗೃತಿ ಅಭಿಯಾನಗಳ ಸಂಘಟನೆಯ ಬಗ್ಗೆ ಮೋದಿ ಮಾತನಾಡುತ್ತಾರೆ. ಅಂಗನವಾಡಿ ಕೇಂದ್ರಕ್ಕೆ ಮಹಿಳೆಯರು ಒದಗಿಸುವ ಧಾನ್ಯಗಳನ್ನು ಬಳಸಿಕೊಂಡು ಮಕ್ಕಳಿಗೆ ಊಟ ನೀಡುವುದನ್ನು ಪ್ರಸ್ತಾಪಿಸಿದ್ದಾರೆ ಎನ್ನುವುದನ್ನು ಗಮನಿಸಿದ್ದೇವೆ.
ಆ ಬಳಿಕ ನಾವು ಮೇರಾ ಬಚ್ಚಾ ಅಭಿಯಾನದ ಬಗ್ಗೆ ಹುಡುಕಾಟ ನಡೆಸಿದ್ದೇವೆ. ಮಧ್ಯಪ್ರದೇಶದ ಸರ್ಕಾರ ನೀಡಿರುವ ಅಭಿಯಾನದ ವಿವರಣೆಯಲ್ಲಿ, “ಮೇರಾ ಬಚ್ಚಾ ಅಭಿಯಾನದ ಅಡಿಯಲ್ಲಿ ಮಗುವಿಗೆ ಸಂಪನ್ಮೂಲಗಳನ್ನು ಒದಗಿಸಲು ಕ್ಲಬ್‌ಗಳನ್ನು ಒಂದು-ನಿಲುಗಡೆ ಕೇಂದ್ರವಾಗಿ ಕಲ್ಪಿಸಲಾಗಿದೆ. ಸಮುದಾಯದ ಒಳಗೊಳ್ಳುವಿಕೆಯನ್ನು ಮತ್ತಷ್ಟು ಗಾಢವಾಗಿಸಲು ಸ್ಥಳೀಯ ಭಜನ್ ಕೀರ್ತನೆ ಜಾನಪದ ಗೀತೆಗಳ ಮೂಲಕ ಅಪೌಷ್ಟಿಕತೆಯ ವಿರುದ್ಧ ಹೋರಾಡುವ ಅಗತ್ಯತೆಯ ಬಗ್ಗೆ ಸಂದೇಶವನ್ನು ಹರಡಲು ಮತ್ತು ಪೋಷಣೆಯ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಸಾಮಾಜಿಕ ಬದಲಾವಣೆಯನ್ನು ತರಲು ಮಾಂಡ್ಲಿಗಳನ್ನು ಸಮುದಾಯ ಸಜ್ಜುಗೊಳಿಸುವವರಾಗಿ ಬಳಸಲಾಯಿತು.” ಎಂದಿದೆ.

ಪೌಷ್ಟಿಕಾಂಶ ಕೊರತೆ ನೀಗುವಿಕೆ: ದೇಶದ ಸ್ಥಿತಿಗತಿ
ಇದೇ ವೇಳೆ ದೇಶದಲ್ಲಿ ಅಪೌಷ್ಠಿಕತೆ ಹೋಗಲಾಡಿಸಲು ಸರ್ಕಾರ ಪೋಷಣ್ ಅಭಿಯಾನ್ ಕೈಗೊಂಡಿದ್ದು ಇದರಡಿಯಲ್ಲಿ ಕೈಗೊಂಡ ಕಾರ್‍ಯಗಳ ಬಗ್ಗೆ ಮಹಿಳಾ ಮತ್ತು ಕಲ್ಯಾಣ ಸಚಿವಾಲಯ 2023ರಲ್ಲಿ ರಾಜ್ಯಸಭೆಯಲ್ಲಿ ಕಲಾಪದ ವೇಳೆ ವಿವರಣೆ ನೀಡಿದ್ದು, ಇದರ ಪ್ರಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಅಡಿಯಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಡಿಮೆ ತೂಕ, ಅಪೌಷ್ಟಿಕತೆ ಮತ್ತು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಅಂದಾಜು ಸಂಖ್ಯೆಯನ್ನು ಪಡೆಯಲಾಗಿದೆ. NFHS-5 (2019-21) ರ ಇತ್ತೀಚಿನ ವರದಿಯ ಪ್ರಕಾರ, NFHS-4 (2015-16) ಕ್ಕೆ ಹೋಲಿಸಿದರೆ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪೌಷ್ಠಿಕಾಂಶ ಸೂಚಕಗಳು ಸುಧಾರಿಸಿವೆ. ಕುಂಠಿತ ಬೆಳವಣಿಗೆ 38.4% ರಿಂದ 35.5% ಕ್ಕೆ, ತೂಕ ನಷ್ಟ 21.0% ರಿಂದ 19.3% ಕ್ಕೆ ಮತ್ತು ಕಡಿಮೆ ತೂಕ 35.8% ರಿಂದ 32.1% ಕ್ಕೆ ಕಡಿಮೆಯಾಗಿದೆ. ಮಿಷನ್ ಪೋಶಣ್ 2.0 ಗಾಗಿ ಐಸಿಟಿ ಅರ್ಜಿಯಾದ ಪೋಶನ್ ಟ್ರಾಕರ್‌ನಲ್ಲಿ ದಾಖಲಾದ ಮಾಹಿತಿಯ ಪ್ರಕಾರ, ಜೂನ್ ತಿಂಗಳಲ್ಲಿ ದೇಶದಲ್ಲಿ ಸುಮಾರು 7 ಕೋಟಿ ಮಕ್ಕಳನ್ನು ಅಳೆಯಲಾಯಿತು, ಅದರಲ್ಲಿ 7% ರಷ್ಟು ಮಕ್ಕಳು ವ್ಯರ್ಥವಾಗಿದ್ದರು ಮತ್ತು 19% ರಷ್ಟು ಕಡಿಮೆ ತೂಕವಿತ್ತು, ಇದು NFHS ಸೂಚಕಗಳಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದಿದೆ.

Conclusion
ಈ ಮಾಹಿತಿಗಳ ಪ್ರಕಾರ, ಪ್ರಧಾನಿ ಮೋದಿ ಅವರು ಮಧ್ಯಪ್ರದೇಶದಲ್ಲಿ ಅಪೌಷ್ಠಿಕತೆ ಹೋಗಲಾಡಿಸುವ ಮೇರಾ ಬಚ್ಚಾ ಅಭಿಯಾನದ ಬಗ್ಗೆ ಮಾಹಿತಿ ನೀಡಿದ್ದು, ಅದನ್ನು ಭಜನೆಯಿಂದ ಅಪೌಷ್ಠಿಕತೆ ಹೋಗಲಾಡಿಸಲಾಗುತ್ತದೆ ಎಂದು ತಪ್ಪಾಗಿ ಅರ್ಥೈಸಲಾಗಿದೆ ಎಂದು ಗೊತ್ತಾಗಿದೆ.
Our Sources
Report By Times Of India, Dated: August 30,2022
YouTube Video By Narendra Modi (Man ki Baat), Dated: August 28, 2022
Information about MERA BACCHA ABHIYAN: An initiative to fight Malnutrition through public participation (MADHYA PRADESH)
Steps taken for Malnutrition among children by MINISTRY OF WOMEN AND CHILD DEVELOPMENT, Unstarred Question no: 1591 Rajyasabha, Dated: August 2, 2023