Fact check: ಅಮಿತ್‌ ಶಾ ಬಸವಣ್ಣರಿಗೆ ಅವಮಾನ ಮಾಡಿದ್ದಾರೆಯೇ? ವೈರಲ್ ಪೋಸ್ಟ್ ಹಿಂದಿನ ಸತ್ಯ ಏನು?

ಬಸವಣ್ಣನಿಗೆ ಅಮಿತ್‌ ಶಾ ಅವಮಾನ

Claim
ಅಮಿತ್‌ ಶಾ ಬಸವಣ್ಣ ಅವರಿಗೆ ಅವಮಾನ ಮಾಡಿದ್ದಾರೆ

Fact
ಅಮಿತ್‌ ಶಾ ಅವರು ಬಸವಣ್ಣ ಪ್ರತಿಮೆಗೆ ಹೂಮಾಲೆ ಹಾಕುವ ಯತ್ನದಲ್ಲಿ ಎಸೆದಿರುವುದು, ಅದು ಕೆಳಕ್ಕೆ ಬಿದ್ದ ಘಟನೆ 2018ರದ್ದು

ಅಮಿತ್‌ ಶಾ ಅವರು ಬಸವಣ್ಣ ಅವರಿಗೆ ಅವಮಾನ ಮಾಡಿದ್ದಾರೆ ಎಂದು ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕರ್ನಾಟಕ ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ ಹಲವು ವೀಡಿಯೋಗಳು, ಕ್ಲೇಮುಗಳು ಹರಿದಾಡುತ್ತಿದ್ದು,  ಅದರಲ್ಲಿ ಅಮಿತ್‌ ಶಾ ಬಸವಣ್ಣ ಅವರಿಗೆ ಅವಮಾನ ಮಾಡಿದ್ದಾರೆ ಎಂಬ ಕ್ಲೇಮ್‌ ಕೂಡ ಹರಿದಾಡುತ್ತಿದೆ.

ಟ್ವೀಟರ್‌ನಲ್ಲಿ ಕಂಡುಬಂದ ಈ ಕ್ಲೇಮ್‌ ಪ್ರಕಾರ, “ದುರಹಂಕಾರಿ ಅಮಿತ್‌ ಶಾ ಅವರು ಬಸವಣ್ಣ ಅವರಿಗೆ ಅವಮಾನ ಮಾಡಿದ್ದಾರೆ. ಕರ್ನಾಟಕದದ ಜನರು ಖಂಡಿತವಾಗಿ ಅವರಿಗೆ ಪಾಠವನ್ನು ಕಲಿಸುತ್ತಾರೆ” ಎಂದಿದೆ.

ಅಮಿತ್‌ ಶಾ ಬಸವಣ್ಣನಿಗೆ ಅವಮಾನ ಮಾಡಿದ್ದಾರೆಯೇ? ವೈರಲ್ ಪೋಸ್ಟ್ ಹಿಂದಿನ ಸತ್ಯ ಏನು?

ಈ ಕ್ಲೇಮಿನೊಂದಿಗೆ ಹಾಕಲಾದ ವೀಡಿಯೋದಲ್ಲಿ ಅಮಿತ್‌ ಶಾ ಅವರು ಅಶ್ವಾರೋಹಿ ಬಸವಣ್ಣ ಪ್ರತಿಮೆಗೆ ಕ್ರೇನ್‌ನಲ್ಲಿ ನಿಂತು ಹೂಮಾಲೆಯನ್ನು ಹಾಕಲು ನೋಡುತ್ತಾರೆ. ಆದರೆ ಅದು ಬಸವಣ್ಣ ಅವರ ಪ್ರತಿಮೆಗೆ ಬೀಳುವುದಿಲ್ಲ. ಈ ಮಾಲೆಯನ್ನು ಅವರು ಎಸೆದ ರೀತಿ ಹಾಕಲು ಪ್ರಯತ್ನಿಸಿರುವುದು ವೀಡಿಯೋದಲ್ಲಿ ಕಂಡುಬರುತ್ತದೆ. ಆ ನಂತರ ಇನ್ನೊಂದು ಹೂ ಮಾಲೆಯನ್ನು ಯಶಸ್ವಿಯಾಗಿ ಹಾಕಲಾಗುತ್ತದೆ.

ಇದೇ ರೀತಿಯ ಕ್ಲೇಮ್‌ಗಳು ಟ್ವೀಟರ್ನಲ್ಲಿ ಹಲವು ಕಂಡುಬಂದಿವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಈ ಕ್ಲೇಮಿನ ಕುರಿತ ಸತ್ಯಶೋಧನೆಯನ್ನು ನ್ಯೂಸ್‌ಚೆಕರ್‌ ಮಾಡಿದ್ದು ಇದೊಂದು ತಪ್ಪಾದ ಸಂದರ್ಭ ಎಂದು ತಿಳಿದುಬಂದಿದೆ.

Fact Check/Verification

ಸತ್ಯಶೋಧನೆಗಾಗಿ, ನಾವು ವೀಡಿಯೋದ ಕೀಫ್ರೇಮ್‌ಗಳನ್ನು ತೆಗೆದು ರಿವರ್ಸ್‌ ಇಮೇಜ್‌ ಸರ್ಚ್ ನಡೆಸಿದ್ದೇವೆ. ಈ ವೇಳೆ ಎಪ್ರಿಲ್‌ 18, 2018ರಂದು ಭಾರತೀಯ ಜನತಾ ಪಾರ್ಟಿ ಯೂಟ್ಯೂಬ್‌ನಲ್ಲಿ ಅಪ್ಲೋಡ್‌ ಮಾಡಿದ ವೀಡಿಯೋ ಲಭ್ಯವಾಗಿದೆ. “Shri Amit Shah garlanding statue of Lord Basaveshwara in Bengaluru” ಎಂಬ ಶೀರ್ಷಿಕೆ ಇದಕ್ಕಿದೆ. ಈ ವೀಡಿಯೋ ಆರಂಭದಲ್ಲೇ ಅಮಿತ್‌ ಶಾ ಅವರು ಬಸವಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡುವ ದೃಶ್ಯವಿದೆ. ಜೊತೆಗೆ ಕ್ರೇನ್‌ನಲ್ಲಿ ನಿಂತು ಮಾಲಾರ್ಪಣೆ ಮಾಡುವ ವೇಳೆ ಹೂಮಾಲೆ ಸರಿಯಾಗಿ ಬೀಳದೇ ಇರುವುದು ಕಾಣುತ್ತದೆ ಅನಂತರ ಯಡಿಯೂರಪ್ಪ ಅವರು ಮಾಲಾರ್ಪಣೆ ಮಾಡುವ ದೃಶ್ಯವಿದೆ. ಜೊತೆಗೆ ಈ ವೀಡಿಯೋಕ್ಕೆ ಮತ್ತು ಕ್ಲೇಮಿನಲ್ಲಿ ಕಂಡುಬಂದಿರುವ ವೀಡಿಯೋಕ್ಕೆ ಸಾಮ್ಯತೆ ಇರುವುದು ತಿಳಿದುಬಂದಿದೆ.

ಬಿಜೆಪಿ ಪ್ರಕಟಿಸಿದ ವೀಡಿಯೋ

ಈ ವೀಡಿಯೋವನ್ನು ಆಧಾರವಾಗಿರಿಸಿಕೊಂಡು ಗೂಗಲ್‌ನಲ್ಲಿ ಇಂಗ್ಲಿಷ್‌ ಭಾಷೆಯ ಪದಗಳನ್ನು ಬಳಸಿ ಕೀವರ್ಡ್‌ ಸರ್ಚ್ ನಡೆಸಲಾಯಿತು. ಈ ವೇಳೆ ಎಪ್ರಿಲ್‌ 18, 2018ರಂದು ಇಂಡಿಯಾ ಟಿವಿ ಪ್ರಕಟಿಸಿದ ವರದಿ ಲಭ್ಯವಾಗಿದೆ. ಈ ವರದಿಯಲ್ಲಿ “ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಇನ್ನೊಂದು ಮುಜುಗರದ ಸಂದರ್ಭಕ್ಕೆ ಒಳಗಾದರು. ಬಸವಣ್ಣ ಪ್ರತಿಮೆಗೆ ಹಾರ ಹಾಕಲು ಅವರು ವಿಫಲಗೊಂಡಿದ್ದು ಮುಜುಗರಕ್ಕೀಡಾದರು ಎಂದಿದೆ. 12ನೇ ಶತಮಾನದ ಸಮಾಜ ಸುಧಾರಕನ ಜನ್ಮಶತಮಾನೋತ್ಸವದ ಅಂಗವಾಗಿ ಬಸವೇಶ್ವರರ ಪ್ರತಿಮೆಗೆ ಅಮಿತ್ ಶಾ ಹಾಗೂ ಯಡಿಯೂರಪ್ಪ ಅವರು ಮಾಲಾರ್ಪಣೆ ಮಾಡಲು ಉದ್ದೇಶಿಸಿದ್ದರು. ಇಬ್ಬರೂ ನಾಯಕರನ್ನು ಕ್ರೇನ್‌ನಲ್ಲಿ ಪ್ರತಿಮೆಯ ಮೇಲ್ಭಾಗಕ್ಕೆ ಕರೆದೊಯ್ದು, ಸಲೀಸಾಗಿ ಹಾರ ಹಾಕುವಂತೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಬಿಜೆಪಿ ಅಧ್ಯಕ್ಷರು ಪ್ರತಿಮೆಯ ಕಡೆಗೆ ಹಾರವನ್ನು ಎಸೆದಾಗ ಅದು ಸರಿಯಾದ ಸ್ಥಳದಲ್ಲಿ ಕೂರಲು ವಿಫಲವಾಯಿತು. ಮತ್ತೊಂದೆಡೆ, ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಯಡಿಯೂರಪ್ಪನವರು ಸರಿಯಾದ ರೀತಿಯಲ್ಲಿ ಬಸವಣ್ಣ ಪ್ರತಿಮೆಗೆ ಹಾರ ಹಾಕಿದರು. ಈ ವೇಳೆ ಸ್ಥಳದಲ್ಲಿದ್ದ ಪಕ್ಷದ ಕಾರ್ಯಕರ್ತರು ಅವರ ಕೌಶಲವನ್ನು ಶ್ಲಾಘಿಸಿದರು. ಈ ಘಟನೆ ಅಮಿತ್ ಶಾ ಅವರ ಮುಖದಲ್ಲೂ ನಗುವನ್ನು ಮೂಡಿಸಿತ್ತು” ಎಂದು ವರದಿ ಹೇಳಿದೆ.

ಅಮಿತ್‌ ಶಾ ಬಸವಣ್ಣನಿಗೆ ಅವಮಾನ ಮಾಡಿದ್ದಾರೆಯೇ? ವೈರಲ್ ಪೋಸ್ಟ್ ಹಿಂದಿನ ಸತ್ಯ ಏನು?
ಇಂಡಿಯಾ ಟಿವಿ ವರದಿ

ಇದೇ ರೀತಿ ಕನ್ನಡ ಭಾಷೆಯಲ್ಲಿ ಕೀವರ್ಡ್ ಸರ್ಚ್‌ ನಡೆಸಿದಾಗ, ಎಪ್ರಿಲ್‌ 19, 2018ರ ವಿಜಯಕರ್ನಾಟಕ ವರದಿಯಲ್ಲಿ ಬಸವ ಜಯಂತಿ ಪ್ರಯುಕ್ತ ಬುಧವಾರ ಚಾಲುಕ್ಯ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಹಾರ ಹಾಕುವುದಕ್ಕೆ ಕ್ರೇನ್‌ ಕಲ್ಪಿಸಲಾಗಿತ್ತು. ಅಮಿತ್‌ ಶಾ ಹಾಗೂ ಪ್ರತಿಮೆ ನಡುವೆ ಅಂತರವಿದ್ದ ಕಾರಣ ನೇರವಾಗಿ ಹಾರ ಹಾಕಲು ಸಾಧ್ಯವಾಗದ ಕಾರಣ ಕೊಂಚ ಸಮಯ ತೆಗೆದುಕೊಂಡು ಪ್ರತಿಮೆಗೆ ಹಾರವನ್ನು ಎಸೆದರು. ಆದರೆ ಹಾರ ತಲೆ ಭಾಗಕ್ಕೆ ತಲುಪಿ ಕೆಳಗೆ ಬಿತ್ತು. ಯಡಿಯೂರಪ್ಪ ಹಾಕಿದ ಹಾರ ಬಸವೇಶ್ವರರ ಕೊರಳಿಗೆ ಬಿತ್ತು. ಹಾರ ಸರಿಯಾಗಿ ಬೀಳುತ್ತಿದ್ದಂತೆ ಯಡಿಯೂರಪ್ಪ ಮುಗುಳ್ನಕ್ಕರು ಇದನ್ನು ನೋಡಿದ ಅಮಿತ್‌ ಶಾ ಕೂಡ ನಸು ನಗುತ್ತಲೇ ಕ್ರೇನ್‌ ನಿಂದ ಕೆಳಗಿಳಿದರು” ಎಂದು ವರದಿ ಹೇಳಿದೆ.

ಅಮಿತ್‌ ಶಾ ಬಸವಣ್ಣನಿಗೆ ಅವಮಾನ ಮಾಡಿದ್ದಾರೆಯೇ? ವೈರಲ್ ಪೋಸ್ಟ್ ಹಿಂದಿನ ಸತ್ಯ ಏನು?
ವಿಜಯಕರ್ನಾಟಕ ವರದಿ

Conclusion

ಈ ಸತ್ಯಶೋಧನೆಯ ಪ್ರಕಾರ, ಬಸವೇಶ್ವರ ಪ್ರತಿಮೆಗೆ ಅಮಿತ್‌ ಶಾ ಹಾರ ಎಸೆದಿರುವುದು ಮತ್ತು ಹಾರ ಕೆಳಕ್ಕೆ ಬಿದ್ದ ಘಟನೆ ಆ ಘಟನೆ 2018ರಲ್ಲಿ ನಡೆದಿದ್ದಾಗಿದೆ. ಮತ್ತು ಈ ಸಂದರ್ಭದ್ದಲ್ಲ ಎನ್ನುವುದು ತಿಳಿದುಬಂದಿದೆ.

Result: Missing Context

Our Sources
YouTube Video by Bharatiya Janata Party, Dated: April 18, 2018

Report by India Tv Dated, April 18, 2018

Report by Vijayakaranataka Dated, April 19, 2018


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.