Claim
ತುಮಕೂರಿನ ಶಿರಾದಲ್ಲಿ ದೊಡ್ಡ ಡ್ಯಾಮ್ ನಿರ್ಮಿಸಲಾಗುತ್ತಿದೆ ಎಂಬಂತೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್ ನಲ್ಲಿ ಕಂಡುಬಂದ ಈ ವೈರಲ್ ವೀಡಿಯೋದಲ್ಲಿ ಡ್ಯಾಮ್ ನಿರ್ಮಾಣವಾಗುತ್ತಿದೆ ಎಂದು ಹೇಳಲಾಗಿದೆ.

ಇದರ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಚೀನಾ ಅಣೆಕಟ್ಟಿನ ವೀಡಿಯೋವನ್ನು ಶಿರಾದಲ್ಲಿ ನಡೆಯುತ್ತಿದೆ ಎಂಬಂತೆ ಹಂಚಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
Fact
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋ ನೋಡಿದಾಗ ಅದರಲ್ಲಿ ಚೀನಿ ಭಾಷೆಯಲ್ಲಿ ಬರೆದಿರುವುದನ್ನು ಗಮನಿಸಿದ್ದೇವೆ.

ಆ ಬಳಿಕ ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ಶೋಧಿಸಿದ್ದೇವೆ. ಈ ವೇಳೆ ವೈರಲ್ ವೀಡಿಯೋ ಚೀನದ ಗೂಝು ಪ್ರಾಂತ್ಯದ ವು ನದಿಗೆ ಕಟ್ಟಲಾದ ವೈಜುಂಡ್ದು ಜಲವಿದ್ಯುತ್ ಗಾರದ ದೃಶ್ಯಾವಳಿ ಎಂದು ಕಂಡುಬಂದಿದೆ.
ಶೋಧನೆ ವೇಳೆ 24 ಜನವರಿ 2025ರಂದು ಡ್ರೋನ್ ಶಾಟ್ ರೀಲ್ಸ್ ಎಂಬ ಇನ್‌ಸ್ಟಾ ಗ್ರಾಂ ಖಾತೆಯಿಂದ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವೀಡಿಯೋಕ್ಕೂ, ವೈರಲ್ ವೀಡಿಯೋಕ್ಕೂ ಸಾಮ್ಯತೆ ಇರುವುದನ್ನು ಕಂಡಿದ್ದೇವೆ.

ಇದೇ ರೀತಿಯ ಪೋಸ್ಟ್ ಅನ್ನು ಡಿಸೆಂಬರ್ 8, 2024ರಂದು amazingbeautifulchina ಎಂಬ ಇನ್‌ಸ್ಟಾಗ್ರಾಂ ಪೋಸ್ಟ್ ನಿಂದಲೂ ಮಾಡಲಾಗಿದೆ. ಇದರಲ್ಲಿನ ವಿವರಣೆಯಲ್ಲಿ, ವುಜಿಯಾಂಗ್ ನದಿಯ ಮೇಲೆ ನಿರ್ಮಾಣ ಹಂತದಲ್ಲಿರುವ ಚಾಂಗಿಂಗ್ ಬೈಮಾ ವಿದ್ಯುತ್ ಕೇಂದ್ರವು 10.9 ಬಿಲಿಯನ್ ಯುವಾನ್ ಹೂಡಿಕೆಯನ್ನು ಹೊಂದಿದೆ ಎಂದಿದೆ.

ಸಿವಿಲ್ ಎಂಜಿನೀರ್‍ಸ್ ವರ್ಲ್ಡ್ ಹೆಸರಿನ ಖಾತೆಯಿಂದ ಲಿಂಕ್ಡ್ ಇನ್ ನಲ್ಲಿ ಕಂಡುಬಂದ ಜನವರಿ ತಿಂಗಳ ಪೋಸ್ಟ್ ನಲ್ಲಿ, ವೈರಲ್ ವೀಡಿಯೋ ಹೋಲುವ ವೀಡಿಯೋ ಕಂಡುಬಂದಿದೆ. ಈ ವೀಡಿಯೋ ಬಗ್ಗೆ ನೀಡಲಾದ ವಿವರಣೆಯಲ್ಲಿ, “ಚಾಂಗಿಂಗ್ ಬೈಮಾ ನ್ಯಾವಿಗೇಷನ್ ಮತ್ತು ಪವರ್ ಹಬ್: ವುಜಿಯಾಂಗ್ ನದಿಯ ಮೇಲೆ ಒಂದು ಪರಿವರ್ತನಾ ಯೋಜನೆ, ಪ್ರಾದೇಶಿಕ ಬೆಳವಣಿಗೆ ಮತ್ತು ಪರಿಸರ ಸಮತೋಲನಕ್ಕಾಗಿ ಸುಸ್ಥಿರ ಜಲವಿದ್ಯುತ್‌ನೊಂದಿಗೆ ಸಂಚರಣೆ ದಕ್ಷತೆಯನ್ನು ಸಂಯೋಜಿಸುತ್ತದೆ. ಚಾಂಗಿಂಗ್ ಬೈಮಾ ನ್ಯಾವಿಗೇಷನ್ ಮತ್ತು ಪವರ್ ಹಬ್ ಚೀನಾದ ವುಜಿಯಾಂಗ್ ನದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಒಂದು ಮೂಲಸೌಕರ್ಯ ಯೋಜನೆಯಾಗಿದೆ. ಈ ದ್ವಿ-ಉದ್ದೇಶದ ಸೌಲಭ್ಯವು ಸಂಚರಣೆ ಮತ್ತು ಜಲವಿದ್ಯುತ್ ಉತ್ಪಾದನೆಯನ್ನು ಸಂಯೋಜಿಸುತ್ತದೆ, ಪ್ರಾದೇಶಿಕ ಆರ್ಥಿಕ ಮತ್ತು ಪರಿಸರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.” ಎಂದಿದೆ. ಈ ಮೂಲಕ ಈ ವೀಡಿಯೋ ಚೀನದ ಯೋಜನೆಯೊಂದರದ್ದು ಎನ್ನುವುದು ಖಚಿತವಾಗಿದೆ.

ಇದರೊಂದಿಗೆ ತುಮಕೂರಿನ ಶಿರಾದ ಭೌಗೋಳಿಕ ಭಾಗವನ್ನು ನಾವು ನೋಡಿದ್ದು, ಅಲ್ಲಿ ಅಂತಹ ಯಾವುದೇ ನದಿ, ಯೋಜನೆ ನಡೆಯುತ್ತಿಲ್ಲ ಇಲ್ಲ ಎಂಬುದನ್ನು ಖಚಿತಪಡಿಸಿದ್ದೇವೆ. ಸಿರಾ ಭಾಗದ ಗೂಗಲ್ ಮ್ಯಾಪ್ ಅನ್ನು ಇಲ್ಲಿ ನೋಡಬಹುದು.

ಈ ಸತ್ಯಶೋಧನೆಯ ಪ್ರಕಾರ, ತುಮಕೂರಿನ ಶಿರಾದಲ್ಲಿ ದೊಡ್ಡ ಡ್ಯಾಮ್ ನಿರ್ಮಿಸಲಾಗುತ್ತಿದೆ ಎನ್ನುವ ವೀಡಿಯೋ ಚೀನಾಕ್ಕೆ ಸಂಬಂಧಿಸಿದ್ದಾಗಿದೆ ಎಂಬುದನ್ನು ಪತ್ತೆ ಮಾಡಿದ್ದೇವೆ.
Our Sources
Instagram Post By amazingbeautifulchina, Dated: December 8, 2025
LinkedIn Post By Civil Engineers World
Google Maps, Sira, Tumkur