Fact Check: ಭಟ್ಕಳ ಕಾಂಗ್ರೆಸ್ ವಿಜಯೋತ್ಸವದಲ್ಲಿ ಪಾಕಿಸ್ಥಾನ ಧ್ವಜ ಹಾರಿಸಲಾಗಿದೆಯೇ? ಇಲ್ಲ, ಈ ಕ್ಲೇಮ್‌ ಸುಳ್ಳು

ಪಾಕಿಸ್ಥಾನ ಧ್ವಜ, ಇಸ್ಲಾಮಿಕ್‌ ಧ್ವಜ, ಕಾಂಗ್ರೆಸ್‌ ವಿಜಯೋತ್ಸವ, ಭಟ್ಕಳ

Claim
ಭಟ್ಕಳ ಕಾಂಗ್ರೆಸ್‌ ವಿಜಯೋತ್ಸವದಲ್ಲಿ ಪಾಕಿಸ್ಥಾನ ಧ್ವಜ ಹಾರಿಸಲಾಗಿದೆ

Fact
ಕಾಂಗ್ರೆಸ್‌ ವಿಜಯೋತ್ಸವದಲ್ಲಿ ಪಾಕಿಸ್ಥಾನ ಧ್ವಜ ಹಾರಾಡಿಲ್ಲ. ಅದು ಮುಸ್ಲಿಂ ಧಾರ್ಮಿಕ ಧ್ವಜವಾಗಿದ್ದು, ಸ್ಥಳೀಯ ತಂಝೀಮ್‌ ಸಂಘಟನೆ ಬೆಂಬಲಿಗರು ಇದನ್ನು ಹಾರಿಸಿದ್ದಾರೆ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ ಬೆನ್ನಲ್ಲೇ, ಭಟ್ಕಳದಲ್ಲಿ ಪಾಕಿಸ್ಥಾನ ಧ್ವಜ ಹಾರಾಡಿದೆ ಎಂದ ಹೇಳಲಾದ ಕ್ಲೇಮ್‌ ಒಂದು ಸಾಕಷ್ಟು ವೈರಲ್‌ ಆಗಿದೆ. ಭಟ್ಕಳದಲ್ಲಿ ಪಾಕಿಸ್ಥಾನದ ಧ್ವಜ ಹಾರಾಡಿದೆ ಎಂದು ವಿಡಿಯೋವೊಂದು ವೈರಲ್‌ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ. ಹಲವು ಬಳಕೆದಾರರು ಭಟ್ಕಳದಲ್ಲಿ ಪಾಕಿಸ್ಥಾನ ಧ್ವಜ ಹಾರಿಸಲಾಗಿದೆ ಎಂದು ಹೇಳಿದ್ದರೆ, ಇನ್ನು ಕೆಲವರು ಇಸ್ಲಾಮಿಕ್ ಧ್ವಜವನ್ನು ಹಾರಿಸಲಾಗಿದೆ ಎಂದು ಪೋಸ್ಟ್‌ಗಳನ್ನು ಮಾಡಿದ್ದಾರೆ. ಇದನ್ನು ಇಲ್ಲಿ ನೋಡಬಹುದು.

ಭಟ್ಕಳದಲ್ಲಿ ಕಾಂಗ್ರೆಸ್ ವಿಜಯೋತ್ಸವದಲ್ಲಿ ಪಾಕಿಸ್ಥಾನ ಧ್ವಜ ಹಾರಾಡಿತೇ? ಇಲ್ಲ, ಈ ಕ್ಲೇಮ್‌ ಸುಳ್ಳು

ಇದೇ ರೀತಿಯ ಹಲವು ಕ್ಲೇಮುಗಳು ಕಂಡುಬಂದಿವೆ.

ಭಟ್ಕಳದಲ್ಲಿ ಕಾಂಗ್ರೆಸ್ ವಿಜಯೋತ್ಸವದಲ್ಲಿ ಪಾಕಿಸ್ಥಾನ ಧ್ವಜ ಹಾರಾಡಿತೇ? ಇಲ್ಲ, ಈ ಕ್ಲೇಮ್‌ ಸುಳ್ಳು

ಇಂತಹ ಕ್ಲೇಮ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯೂಸ್‌ಚೆಕರ್‌ ಸತ್ಯಶೋಧನೆಗೆ ಮುಂದಾಗಿದ್ದು, ಪಾಕಿಸ್ಥಾನ ಧ್ವಜ ಅಲ್ಲ ಎಂಬುದನ್ನು ಗುರುತಿಸಿದೆ.

Also Read: ಕುಳಿತುಕೊಳ್ಳಲೂ ಸೋನಿಯಾ ಗಾಂಧಿ ಅನುಮತಿಗೆ ಮಲ್ಲಿಕಾರ್ಜುನ ಖರ್ಗೆ ಕಾಯುತ್ತಿದ್ದರೆ?

Fact Check/Verification

ಸತ್ಯಶೋಧನೆಗಾಗಿ ನ್ಯೂಸ್‌ಚೆಕರ್‌ ಕೀವರ್ಡ್‌ ಸರ್ಚ್ ನಡೆಸಿದ್ದು ಈ ವೇಳೆ ವಿವಿಧ ಪತ್ರಿಕಾ ವರದಿಗಳು ಲಭ್ಯವಾಗಿವೆ.

ಮೇ 13, 2023ರ ಟಿವಿ9 ಕನ್ನಡ ವರದಿ ಪ್ರಕಾರ, “ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಬಹುಮತ ಸಿಕ್ಕಿದ್ದು, ಭಟ್ಕಳದಲ್ಲೂ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವಾಗಿದೆ. ಹೀಗಾಗಿ ಮುಸ್ಲಿಂ ಯುವಕರು ಇಸ್ಲಾಂ ಧ್ವಜವನ್ನು ಹಿಡಿದು ಸಂಭ್ರಮಿಸಿದ್ದಲ್ಲದೆ, ಕೇಸರಿ ಧ್ವಜದ ಪಕ್ಕ ಅದನ್ನು ಅಳವಡಿಸಿದ್ದಾರೆ. ಭಟ್ಕಳ ಸಂಶುದ್ದಿನ್ ಸರ್ಕಲ್ ಮೇಲೆ ನಿಂತು ಕೇಸರಿ ಭಾವುಟ ಪಕ್ಕದಲ್ಲಿ ಇಸ್ಲಾಂ ಪ್ಲ್ಯಾಗ್ ಹಿಡಿದು ಸಂಭ್ರಮಾಚರಣೆ ನಡೆಸಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಆಕ್ರೋಶವೂ ವ್ಯಕ್ತವಾಗುತ್ತಿದೆ.” ಎಂದಿದೆ.

ಮೇ 13, 2023ರ ವಾರ್ತಾಭಾರತಿ ವರದಿಯಲ್ಲಿ ಭಟ್ಕಳ-ಹೊನ್ನಾವರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವನ್ನು ಸಂಬ್ರಮಿಸಲು ಕಾಂಗ್ರೆಸ್‌ ಬೆಂಬಲಿಗರು ಭಟ್ಕಳ ಶಂಶುದ್ದೀನ್‌ ವೃತ್ತದ ಬಳಿ ಹಸಿರು ಹಾಗೂ ಕೇಸರಿ ಧ್ವಜಗಳನ್ನು ಹಿಡಿದು ನೆರೆದಿದ್ದರು. ಆ ಘಟನೆಯ ಚಿತ್ರಗಳು ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ಕಾಂಗ್ರೆಸ್‌ ಬೆಂಬಲಿಗರು ‘ಮುಸ್ಲಿಂ ಧ್ವಜ’ ಹಿಡಿದುಕೊಂಡಿದ್ದರು ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ‘ಪಾಕಿಸ್ಥಾನ ಧ್ವಜ’ ಹಿಡಿದುಕೊಂಡಿದ್ದರು ಎಂದು ವಾದಿಸಿದ್ದರು. ಈ ಕುರಿತು ಸ್ಪಷ್ಟೀಕರಣ ನೀಡಿರುವ ಉತ್ತರ ಕನ್ನಡ ಪೊಲೀಸ್‌ ವರಿಷ್ಠಾಧಿಕಾರಿ ವಿಷ್ಣುವರ್ಧನ್‌ ಎನ್‌. ಕಾಂಗ್ರೆಸ್‌ ಬೆಂಬಲಿಗರು ಬಳಸಿದ್ದು ಪಾಕಿಸ್ಥಾನ ಧ್ವಜ ಅಲ್ಲ. ಅದು ಕೆಲವು ವ್ಯಕ್ತಿಗಳು ಪ್ರದರ್ಶಿಸಿದ್ದ ಧಾರ್ಮಿಕ ಧ್ವಜವಾಗಿತ್ತು ಎಂದು ಹೇಳಿದ್ದಾರೆ. ಸ್ಥಳದಲ್ಲಿದ್ದ ಪೊಲೀಸ್‌ ಅಧಿಕಾರಿಗಳು ಅದು ಪಾಕಿಸ್ಥಾನ ಧ್ವಜ ಅಲ್ಲ ಎಂದು ದೃಢಪಡಿಸಿರುವುದರಿಂದ ಯಾವುದೇ ದೂರನ್ನು ದಾಖಲಿಸಿಕೊಳ್ಳಲಾಗಿಲ್ಲ ಎಂದೂ ತಿಳಿಸಿದ್ದಾರೆ” ಎಂದಿದೆ.

ಮೇ 14, 2023ರ ಪ್ರಜಾವಾಣಿ ವರದಿಯಲ್ಲಿ “ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಶನಿವಾರ ನಡೆದ ಸಂಭ್ರಮಾಚರಣೆ ವೇಳೆ ಜಿಲ್ಲೆಯ ಭಟ್ಕಳ ಮತ್ತು ಶಿರಸಿಯಲ್ಲಿ ಹಸಿರು ಧ್ವಜ ಹಾರಾಡಿರುವುದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಭಟ್ಕಳ ಪಟ್ಟಣದಲ್ಲಿ ಮಂಕಾಳ ವೈದ್ಯ ಬೆಂಬಲಿಗರು ನಡೆಸಿದ್ದ ಸಂಭ್ರಮಾಚರಣೆ ವೇಳೆ ಶಂಶುದ್ದೀನ್‌ ವೃತ್ತದಲ್ಲಿ ಯುವಕನೊಬ್ಬ ಅರ್ಧ ಚಂದ್ರಾಕೃತಿ, ನಕ್ಷತ್ರದ ಹಸಿರು ಬಣ್ಣದ ಧ್ವಜ ಹಾರಿಸಿದ್ದ. ಪಕ್ಕದಲ್ಲಿಯೇ ಕೇಸರಿ ಬಣ್ಣದ ಧ್ವಜ, ನೀಲಿ ಧ್ವಜಗಳು ಹಾರಾಡಿದ್ದವು.” ಎಂದಿದೆ. ಇದೇ ವರದಿಯಲ್ಲಿ”ಭಟ್ಕಳ ಮತ್ತು ಶಿರಸಿಯಲ್ಲಿ ಹಾರಿಸಲಾಗಿದ್ದ ಧ್ವಜಗಳು ಪಾಕಿಸ್ಥಾನದ ಧ್ವಜ ಆಗಿರಲಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಜನರು ವದಂತಿಗಳಿಗೆ ಕಿವಿಕೊಡುವ ಅಗತ್ಯವಿಲ್ಲ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿಷ್ಣುವರ್ಧನ ಪ್ರತಿಕ್ರಿಯಿಸಿದ್ದಾರೆ” ಎಂದಿದೆ.

Also Read: ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನದ ವೇಳೆ ಕಾಂಗ್ರೆಸ್‌ನಿಂದ ವಂಚನೆ, ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

ಈ ಕುರಿತು ಹೆಚ್ಚಿನ ಮಾಹಿತಿಗೆ ಉದಯವಾಣಿಯ ಸ್ಥಳೀಯ ವರದಿಗಾರರಾದ ಆರ್.ಕೆ.ಭಟ್‌ ಅವರನ್ನು ಸಂಪರ್ಕಿಸಲಾಗಿದ್ದು, “ಭಟ್ಕಳ ಕ್ಷೇತ್ರದ ಶಾಸಕರಾಗಿ ಕಾಂಗ್ರೆಸ್ ಪಕ್ಷದ ಮಂಕಾಳ ವೈದ್ಯ ಅವರು ಸ್ಥಳೀಯ ಸಂಸ್ಥೆಯಾದ ತಂಜೀಮ್ ಬೆಂಬಲವನ್ನು ಪಡೆದು 1,00,442 ಮತಗಳನ್ನು ಪಡೆದು ಆಯ್ಕೆಯಾಗುತ್ತಲೇ ಭಟ್ಕಳ ನಗರದ ಶಂಶುದ್ದೀನ್ ಸರ್ಕಲ್ ನಲ್ಲಿ ಸಾವಿರಾರು ಹಿಂದೂ, ಮುಸ್ಲಿಂ ಜನರು ಸೇರಿ ವಿಜಯೋತ್ಸವ ಆಚರಿಸಲು ಆರಂಭಿಸಿದ್ದರು. ಇದು ಮಧ್ಯಾಹ್ನ ಸುಮಾರು 2 ಗಂಟೆಯಿಂದ ರಾತ್ರಿ 11 ಗಂಟೆಯತನಕ ಅಂದರೆ ಮಂಕಾಳ ವೈದ್ಯ ಅವರು ಬರುವಾಗ 10.30 ಆಗಿದ್ದು ಅವರು ವಾಪಾಸು ಹೋಗುವ ತನಕ ವಿಜಯೋತ್ಸವ ನಡೆಯಿತು. ಆ ಸಂದರ್ಭದಲ್ಲಿ ಈ ಬಾರಿ ಬಿ.ಜೆ.ಪಿ. ಯ ಅಭ್ಯರ್ಥಿ ಸುನಿಲ್ ನಾಯ್ಕ ಅವರಿಂದ ದೌರ್ಜನ್ಯಕ್ಕೊಳಗಾಗಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರು ಚುನಾವಣೆಯಲ್ಲಿ ಕೂಡಾ ಮಂಕಾಳ ವೈದ್ಯರನ್ನು ಬೆಂಬಲಿಸಿದ್ದ ಕಾರಣಕ್ಕಾಗಿ ಭಗವಾಧ್ವಜ (ಕೇಸರಿ ಧ್ವಜ) ಹಿಡಿದು ಬಂದಿದ್ದರೆ, ಮುಸ್ಲಿಂ ಯುವಕರು ಅನೇಕರು ತಮ್ಮ ಧರ್ಮದ ಧ್ವಜವನ್ನು ಹಿಡಿದು ಬಂದಿದ್ದರು.  ಅವರು ಶಂಶುದ್ದೀನ್ ಸರ್ಕಲ್ ನಲ್ಲಿ ಜೊತೆ ಜೊತೆಯಾಗಿ ಎರಡೂ ಬಾವುಟವನ್ನು ಹಾರಿಸಿದ್ದಾರೆ.  ಜೊತೆಗೆ ಕಾಂಗ್ರೆಸ್ ಪಕ್ಷದ ಧ್ವಜ, ಮಂಕಾಳ ವೈದ್ಯರ ಫೋಟೋ ಇರುವ ಧ್ವಜ, ದಲಿತ ಸಂಘಟನೆ ಧ್ವಜ ಕೂಡಾ ಹಾರಾಡಿದೆ. ಇಲ್ಲಿ ಕೇಸರಿ ಧ್ವಜವನ್ನು ಹಿಂದೂ ಸಂಘನೆಯ ಕಾರ್ಯಕರ್ತರು ಹಾಗೂ ಹಸಿರು ಧ್ವಜವನ್ನು ಮುಸ್ಲಿಂ ಯುವಕರು (ತಂಝೀಮ್ ಬೆಂಬಲಿಗರು) ಹಾರಿಸಿದ್ದಾರೆ” ಎಂದಿದ್ದಾರೆ.

ಇದರೊಂದಿಗೆ ಭಟ್ಕಳದ ಸ್ಥಳೀಯ ನ್ಯೂಸ್‌ವೆಬ್‌ಸೈಟ್‌ ಸಹೀಲ್‌ ಆನ್‌ಲೈನ್‌ ಇದರ ಕಾರ್ಯನಿರ್ವಾಹಕ ಸಂಪಾದಕ ಇನಾಯತುಲ್ಲಾ ಅವರನ್ನು ಸಂಪರ್ಕಿಸಲಾಗಿದ್ದು, ಅವರು “ಮಂಕಾಳ ವೈದ್ಯ ಅವರ ವಿಜಯೋತ್ಸವದ ವೇಳೆ ಹಾರಿಸಲಾಗಿರುವ ಧ್ವಜ ಇಸ್ಲಾಂನ ಧಾರ್ಮಿಕ ಧ್ವಜವಾಗಿದೆ ಎಂದು ಹೇಳಿದ್ದಾರೆ. ಈ ಧ್ವಜವನ್ನು ದರ್ಗಾಗಗಳಲ್ಲಿ ವಿವಿಧ ಹಬ್ಬದ ಸಂದರ್ಭಗಳಲ್ಲಿ ಹಾರಿಸಲಾಗುತ್ತದೆ. ಇದನ್ನು ಸ್ಥಳೀಯ ತಂಝೀಂ ಸಂಘಟನೆಯ ಯುವಕರು ವಿಜಯೋತ್ಸವದ ಖುಷಿಯಲ್ಲಿ ಹಾರಿಸಿದ್ದಾರೆ. ಈ ಧ್ವಜದಲ್ಲಿ ಚಂದ್ರ, ದೊಡ್ಡ ನಕ್ಷತ್ರ ಮತ್ತು ಸಣ್ಣ ನಕ್ಷತ್ರದ ಚಿತ್ರಗಳಿವೆ. ಈ ವಿಜಯೋತ್ಸವದಲ್ಲಿ ಹಿಂದೂ, ಮುಸ್ಲಿಂ ಎನ್ನದೆ ಕಾರ್ಯಕರ್ತರು ಭಾಗವಹಿಸಿದ್ದರು ಎಂದು ಹೇಳಿದ್ದಾರೆ”

ಸಾಹಿಲ್‌ ಆನ್‌ಲೈನ್‌ ಮಾಡಿದ ಯೂಟ್ಯೂಬ್‌ ವೀಡಿಯೋದಲ್ಲೂ ತಡರಾತ್ರಿ ಭಟ್ಕಳ ಸರ್ಕಲ್‌ನಲ್ಲಿ ಹಸಿರು, ಕೇಸರಿ ಸೇರಿದಂತೆ ವಿವಿಧ ಧ್ವಜಗಳನ್ನು ಬೀಸುತ್ತಿರುವುದನ್ನು ಕಾಣಬಹುದು.

Also Read: ಮತ ಕೇಳಲು ಹೋದಾಗ ಸಿಎಂ ಬಸವರಾಜ ಬೊಮ್ಮಾಯಿಗೆ ಥಳಿತ? ಈ ಹೇಳಿಕೆ ಸುಳ್ಳು

ಶಹೀಲ್‌ ಆನ್‌ಲೈನ್‌ ಪ್ರಸಾರ ಮಾಡಿದ ವರದಿ

ವೈರಲ್‌ ವೀಡಿಯೋವನ್ನು ಪರಿಶೀಲಿಸಿದ ವೇಳೆ, ಇದರಲ್ಲಿ ಕಾಣಬರುವ ಧ್ವಜದಲ್ಲಿ ಚಂದ್ರ, ನಕ್ಷತ್ರ ಚಿಹ್ನೆ ದೊಡ್ಡದಾಗಿದ್ದರೆ, ಉಳಿದಂತೆ ಸಣ್ಣ ಸಣ್ಣ ನಕ್ಷತ್ರದ ಚಿತ್ರ ಇದೆ. ಪಾಕಿಸ್ಥಾನದ ಧ್ವಜ ವಿಭಿನ್ನವಾಗಿದ್ದು ಇದರ ಕಾಲುಭಾಗ ಬಿಳಿ ಬಣ್ಣ ಇದೆ ಎಂಬುದನ್ನು ಗಮನಿಸಬಹುದು.

Conclusion

ಈ ಸತ್ಯಶೋಧನೆಯ ಪ್ರಕಾರ, ಭಟ್ಕಳದಲ್ಲಿ ಕಾಂಗ್ರೆಸ್‌ ವಿಜಯೋತ್ಸವದಲ್ಲಿ ಹಾರಿಸಿರುವುದು ಮುಸ್ಲಿಂ ಧಾರ್ಮಿಕ ಧ್ವಜವಾಗಿದ್ದು, ಅದು ಪಾಕಿಸ್ಥಾನ ಧ್ವಜವಲ್ಲ ಎಂದು ತಿಳಿದುಬಂದಿದೆ.

Results: False

Our Sources

Report By TV9 Kannada, Dated: May 13, 2023

Reporty By Vartha Bharathi, Dated: May 13, 2023

Reporty By Prajavani, Dated: May 14, 2023

YouTube Video By Sahilonline, Dated: May 15, 2023

Conversation with R.K.Bhat, Udayvani Reporter Bhatkal

Conversation with Inayathulla, Managing Editor Sahilonline


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.