Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಜೂನ್ 15ರಿಂದ ಎಲ್ಲ ಹಿರಿಯ ನಾಗರಿಕರಿಗೆ ಸಾರ್ವಜನಿಕ ಸಾರಿಗೆಗಳಲ್ಲಿ ಉಚಿತ ಪ್ರಯಾಣ
ಜೂನ್ 15ರಿಂದ ಎಲ್ಲ ಹಿರಿಯ ನಾಗರಿಕರಿಗೆ ಸಾರ್ವಜನಿಕ ಸಾರಿಗೆಗಳಲ್ಲಿ ಉಚಿತ ಪ್ರಯಾಣ ಎನ್ನುವುದು ಸುಳ್ಳು ಕೇಂದ್ರ ಸರ್ಕಾರ ಅಂತಹ ಯಾವುದೇ ಘೋಷಣೆ ಮಾಡಿಲ್ಲ
ಇತ್ತೀಚೆಗೆ ಕೇಂದ್ರ ಸರ್ಕಾರವು ರೈಲುಗಳು, ಬಸ್ಸುಗಳು, ಮೆಟ್ರೋ ಸೇವೆಗಳು ಮತ್ತು ದೇಶೀಯ ವಿಮಾನಗಳಲ್ಲಿ ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣವನ್ನು ಘೋಷಿಸಿದೆ ಎಂದು ಹೇಳಿಕೊಳ್ಳುವ ಸಂದೇಶವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ವಾಟ್ಸಾಪ್ ನಲ್ಲಿ ಕಂಡುಬಂದ ಈ ಸಂದೇಶದ ಪ್ರಕಾರ, “60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣದ ಉಡುಗೊರೆಯನ್ನು ಕೇಂದ್ರ ಸರ್ಕಾರ ನೀಡಿದೆ. ಜೂ.15, 2025ರಿಂದ ಯೋಜನೆ ಜಾರಿಗೆ ಬರಲಿದೆ. ಎಲ್ಲ ಸ್ಥಳೀಯ ಮತ್ತು ಇಂಟರ್ ಸಿಟಿ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ, ಆಯ್ದ ಸರ್ಕಾರಿ ಮತ್ತು ಬಜೆಟ್ ವಿಮಾನಗಳಲ್ಲಿ, ಧಾರ್ಮಿಕ ಮತ್ತು ಅಗತ್ಯ ಮಾರ್ಗಗಳಲ್ಲಿ ಉಚಿತ ಅಥವಾ ರಿಯಾಯಿತಿ ಟಿಕೆಟ್ ಗಳು ಲಭ್ಯವಿರುತ್ತವೆ. ಇದಕ್ಕಾಗಿ ಆಧಾರ್ ಕಾರ್ಡ್, ಪಿಂಚಣಿ ಪುಸ್ತಕ ಅಥವಾ ಹಿರಿಯ ನಾಗರಿಕರ ಗುರುತಿನ ಚೀಟಿ ಅಗತ್ಯವಿದೆ. ಪ್ರತಿಯೊಬ್ಬ ನಾಗರಿಕರಿಗೆ ತಿಂಗಳಿಗೆ 4 ಬಾರಿ ಉಚಿತವಾಗಿ ಪ್ರಯಾಣಿಸಲು ಅವಕಾಶವಿರುತ್ತದೆ..” ಎಂಬಂತೆ ಸಂದೇಶದಲ್ಲಿದೆ.

ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ನಿಜವಲ್ಲ ಎಂದು ಕಂಡುಬಂದಿದೆ.
ವೈರಲ್ ಆಗಿರುವ ಈ ವಿಚಾರದ ಬಗ್ಗೆ ಗೂಗಲ್ ನಲ್ಲಿ ಹುಡುಕಿದಾಗ ಅಂತಹ ಯಾವುದೇ ಮಾಧ್ಯಮ ವರದಿಗಳು ಕಂಡುಬಂದಿಲ್ಲ. ಆದ್ದರಿಂದ ವಾಟ್ಸಾಪ್ ಸಂದೇಶ ಸಂದೇಹಾಸ್ಪದವಾಗಿ ಕಂಡುಬಂದಿದೆ.
ಹಿರಿಯ ನಾಗರಿಕರಿಗೆ ಉಚಿತ ರೈಲು ಪ್ರಯಾಣ ಇರಲಿದೆ ಎಂಬ ಹೇಳಿಕೆಗೆ ಪೂರಕವಾದ ಅಂಶಗಳು ಗೂಗಲ್ ಹುಡುಕಾಟದ ವೇಳೆ ಕಂಡುಬಂದಿಲ್ಲ. ಈ ಕುರಿತ ವರದಿಗಳೂ ಇಲ್ಲ. ಆದರೆ ರೈಲು ಟಿಕೆಟ್ಗಳಲ್ಲಿ ಶೇ. 50 ರಷ್ಟು ರಿಯಾಯಿತಿ ನೀಡುವ ಹೊಸ ನೀತಿಯನ್ನು ಭಾರತೀಯ ರೈಲ್ವೆ ಪರಿಚಯಿಸಿದೆ ಎಂದು ಹೇಳುವ ಇದೇ ರೀತಿಯ ಹೇಳಿಕೆಗಳು ಈ ಹಿಂದೆಯೂ ಹರಡಿದ್ದವು. ಕೋವಿಡ್-19 ಸುರಕ್ಷತೆ ಮತ್ತು ವೆಚ್ಚ ನಿಯಂತ್ರಣ ಕ್ರಮಗಳ ಭಾಗವಾಗಿ ಭಾರತೀಯ ರೈಲ್ವೆ 19 ಮಾರ್ಚ್ 2020 ರಲ್ಲಿ ಹಿರಿಯ ನಾಗರಿಕರ ರಿಯಾಯಿತಿಗಳನ್ನು ರದ್ದುಗೊಳಿಸಿತು . ಹಣಕಾಸಿನ ನಿರ್ಬಂಧಗಳಿಂದಾಗಿ, ಪ್ರಸ್ತುತ ಈ ರಿಯಾಯಿತಿಗಳನ್ನು ಪುನರಾರಂಭಿಸುವ ಯಾವುದೇ ಯೋಜನೆಯಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈಗ ಹಿರಿಯ ನಾಗರಿಕರಿಗೆ ಸಾಮಾನ್ಯ ಪ್ರಯಾಣಿಕರಂತೆಯೇ ಅದೇ ದರವನ್ನು ವಿಧಿಸಲಾಗುತ್ತದೆ. 2025–26ರ ಕೇಂದ್ರ ಬಜೆಟ್ನಲ್ಲೂ ಈ ರಿಯಾಯಿತಿಗಳನ್ನು ಪುನರಾರಂಭಿಸುವ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ.
ಈ ಹೇಳಿಕೆಯನ್ನು ಮತ್ತಷ್ಟು ಪರಿಶೀಲಿಸಲು, ನ್ಯೂಸ್ ಚೆಕರ್ ಪೂರ್ವ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ದೀಪ್ತಿಮೊಯ್ ದತ್ತಾ ಅವರನ್ನು ಸಂಪರ್ಕಿಸಿತು. ಈ ಪೋಸ್ಟ್ ಸಂಪೂರ್ಣ ಸುಳ್ಳು ಎಂದು ಅವರು ತಿಳಿಸಿದ್ದಾರೆ.
ಈ ಮೊದಲು ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣಕ್ಕೆ ಟಿಕೆಟ್ ಗಳಲ್ಲಿ ರಿಯಾಯಿತಿ ಸೌಲಭ್ಯ ಘೋಷಿಸಿದೆ ಎಂದೂ ಸುದ್ದಿ ಹಬ್ಬಿದ್ದು ಅದು ಸುಳ್ಳು ಎಂದು ನ್ಯೂಸ್ಚೆಕರ್ ಸಾಬೀತು ಪಡಿಸಿದೆ.
ವಿಮಾನ ಯಾನದಲ್ಲೂ ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿದೆಯೇ ಎಂಬ ಬಗ್ಗೆ ನಾವು ಪರಿಶೀಲನೆ ನಡೆಸಿದಾಗ, ಏರ್ ಇಂಡಿಯಾ, ಇಂಡಿಗೋ ಮುಂತಾದವುಗಳು ಹಿರಿಯ ನಾಗರಿಕೆ ತುಸು ರಿಯಾಯಿತಿ ಟಿಕೆಟ್ ನೀಡುವುದನ್ನು ಕಂಡಿದ್ದೇವೆ. ಆದರೆ ಎಲ್ಲೂ ಉಚಿತ ಪ್ರಯಾಣದ ವಿಚಾರವು ಕಂಡುಬಂದಿಲ್ಲ.
ಇಂಡಿಗೋ ವೆಬ್ ಸೈಟ್ ನಲ್ಲಿರುವ ಮಾಹಿತಿಯ ಪ್ರಕಾರ, 60 ವರ್ಷ ಕಳೆದ ಹಿರಿಯ ನಾಗರಿಕರಿಗೆ ಬೇಸ್ ರೇಟ್ ನಲ್ಲಿ ಶೇ.6ರಷ್ಟು ರಿಯಾಯಿತಿ ಲಭ್ಯವಿದೆ. ಇದು ದೇಶೀಯ ವಿಮಾನ ಯಾನಕ್ಕೆ ಮಾತ್ರ ಅನ್ವಯಿಸುತ್ತದೆ. ಇದಕ್ಕೆ ಸೂಕ್ತ ದಾಖಲೆಗಳನ್ನು ನೀಡಬೇಕು
ಏರ್ ಇಂಡಿಯಾ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಒಟ್ಟಾರೆಯಾಗಿ ಶೇ.50ರಷ್ಟರವರೆಗೆ ರಿಯಾಯಿತಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನೀಡಲಾಗುತ್ತದೆ. ಇಲ್ಲೂ ದೇಶೀಯ ವಿಮಾನ ಯಾನಕ್ಕೆ ಮಾತ್ರ ರಿಯಾಯಿತಿ ಅನ್ವಯಿಸುತ್ತದೆ. ಹಿರಿಯ ನಾಗರಿಕರಿಗೆ ಬೇಸ್ ದರದ ಮೇಲೆ ಶೇ.25ರಷ್ಟು ರಿಯಾಯಿತಿ ನೀಡಲಾಗುವುದು. ಇದರೊಂದಿಗೆ ವೆಬ್ಸೈಟ್ ನಲ್ಲಿ ಟಿಕೆಟ್ ಬುಕ್ಕಿಂಗ್ ವೇಳೆ ಯುಪಿಐ ಮೂಲಕ ಪಾವತಿಸಿದರೆ, ₹400 ಕಡಿತ, ಏರ್ ಇಂಡಿಯಾ ಆಪ್ ಮೂಲಕ ಟಿಕೆಟ್ ಬುಕ್ಕಿಂಗ್ ವೇಳೆ ಯುಪಿಐ ಮೂಲಕ ಪಾವತಿಸಿದರೆ, ₹500 ಕಡಿತ ಆಗಲಿದೆ. ಹಿರಿಯ ನಾಗರಿಕರು ಎಂಬ ಬಗ್ಗೆ ಸೂಕ್ತ ದಾಖಲೆಗಳನ್ನು ನೀಡಬೇಕಾಗುತ್ತದೆ.
ಬಸ್ ಪ್ರಯಾಣದ ಕುರಿತಾಗಿ ವಿವಿಧ ರಾಜ್ಯಗಳಲ್ಲಿ ಮಹಿಳೆಯರಿಗೆ ಮೀಸಲಾಗಿರುವಂತೆ ಉಚಿತ ಪ್ರಯಾಣ ಸೌಕರ್ಯ ಲಭ್ಯವಿದೆ. ಇದು ಆಯಾ ರಾಜ್ಯದ ನಿವಾಸಿಯಾಗಿದ್ದು ಮಹಿಳೆಯರಿಗೆ ಸೀಮಿತವಾಗಿದೆ. ಕರ್ನಾಟಕದಲ್ಲಿ ಶಕ್ತಿ ಯೋಜನೆ ಸರ್ಕಾರಿ ಸ್ವಾಮ್ಯದ, ರಾಜ್ಯದೊಳಗೆ ಸಂಚರಿಸುವ ಸಾಮಾನ್ಯ ಸಾರಿಗೆಯಲ್ಲಿ ಲಭ್ಯವಿದೆ. ಇದಕ್ಕೆ ಆಧಾರ್ ಗುರುತಿನ ಚೀಟಿ ಕಡ್ಡಾಯವಾಗಿ ತೋರಿಸಬೇಕಾಗುತ್ತದೆ.
ಅದೇ ರೀತಿ ತಮಿಳುನಾಡಿನಲ್ಲಿ ಝೀರೋ ಟಿಕೆಟ್ ವ್ಯವಸ್ಥೆ, ತೆಲಂಗಾಣದಲ್ಲಿ ಮಹಾಲಕ್ಷ್ಮೀ, ದಿಲ್ಲಿಯಲ್ಲಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಯಲ್ಲಿದೆ. ಈ ಯೋಜನೆ ಮಹಿಳೆಯರಿಗೆ ಸೀಮಿತವಾಗಿದ್ದು, ಷರತ್ತುಗಳನ್ನು ಒಳಗೊಂಡಿದೆ.
ಆದ್ದರಿಂದ ಈ ಸಾಕ್ಷ್ಯಾಧಾರಗಳ ಪ್ರಕಾರ, ಜೂನ್ 15ರಿಂದ ಎಲ್ಲ ಹಿರಿಯ ನಾಗರಿಕರಿಗೆ ಸಾರ್ವಜನಿಕ ಸಾರಿಗೆಗಳಲ್ಲಿ ಉಚಿತ ಪ್ರಯಾಣ ಎನ್ನುವುದು ಸುಳ್ಳಾಗಿದೆ. ಕೇಂದ್ರ ಸರ್ಕಾರ ಅಂತಹ ಯಾವುದೇ ಘೋಷಣೆಗಳನ್ನು ಮಾಡಿಲ್ಲ.
Our Sources
Press release by Ministry of Railways, Dated: March 19, 2020
GoIndigo website
Air India website
Report By Vijayakarnataka, Dated: April 11, 2025
Conformation from Diptimoy Dutta, Chief Public Relations Officer of Eastern Railway
(With Inputs from Tanujit Das Newschecker, Bengali)
Ishwarachandra B G
October 16, 2025
Ishwarachandra B G
June 27, 2025
Ishwarachandra B G
June 14, 2025