ತಾಮ್ರ ಪಾತ್ರೆಯಲ್ಲಿ ಹಾಕಿದ ನೀರು ಕುಡಿದರೆ ಕ್ಷಯ ರೋಗ ನಿವಾರಣೆ: ಸತ್ಯ ಏನು?

ತಾಮ್ರ ಪಾತ್ರೆಯಲ್ಲಿ ಹಾಕಿದ ನೀರು ಕುಡಿದರೆ, ಕ್ಷಯ ಸೇರಿದಂತೆ ಹಲವು ರೋಗಗಳು ಉಪಶಮನವಾಗುತ್ತವೆ ಎಂದು ಮೆಸೇಜೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಲಾದ ಕ್ಲೇಮಿನಲ್ಲಿ “‘ರಸರತ್ನ ಸಮುಚ್ಚಯ’ ಇದು ಆಯುರ್ವೇದದ ರಸ ಶಾಸ್ತ್ರ ವಿಷಯದ ಒಂದು ಪ್ರಮಾಣೀಕೃತ ಸಂಸ್ಕೃತ ಗ್ರಂಥವಿದೆ. ತಾಮ್ರವು ಪಿತ್ತ ಹಾಗೂ ಕಫ ನಾಶಕವಾಗಿದೆ ತಾಮ್ರದಿಂದ ಹೊಟ್ಟೆನೋವು, ಚರ್ಮರೋಗ, ಜಂತಾಗುವುದು, ಸ್ಥೂಲಕಾಯ, ಮೂಲವ್ಯಾಧಿ, ಕ್ಷಯ, ಅನೀಮಿಯಾ ಈ ರೋಗ ನಿವಾರಣೆಯಾಗಲು ಸಹಾಯವಾಗುತ್ತದೆ.” ಎಂದು ಹೇಳಲಾಗಿದೆ.

ತಾಮ್ರ ಪಾತ್ರೆ, ನೀರು, ಕ್ಷಯ ರೋಗ, ರೋಗ ನಿವಾರಣೆ
ಟ್ವಿಟರ್‌ನಲ್ಲಿ ಕಂಡು ಬಂದ ಕ್ಲೇಮ್‌

ಈ ಕ್ಲೇಮ್‌ ಅನ್ನು ನ್ಯೂಸ್‌ ಚೆಕರ್‌ ಸತ್ಯಪರಿಶೀಲನೆಗೆ ಒಳಪಡಿಸಿದ್ದು, ಇದು ತಪ್ಪಾದ ಸಂದರ್ಭವಾಗಿದೆ ಎಂಬುದು ತಿಳಿದು ಬಂದಿದೆ. ಅಲ್ಲದೇ ಕ್ಲೇಮಿನಲ್ಲಿ ಹೇಳಿದಂತೆ ಕ್ಷಯ ರೋಗಕ್ಕೆ ತಾಮ್ರ ಪಾತ್ರೆಯಲ್ಲಿ ಹಾಕಿದ ನೀರು ರೋಗ ನಿವಾರಣೆ ಮಾಡುವುದಿಲ್ಲ ಎನ್ನುವುದು ಗೊತ್ತಾಗಿದೆ.

Fact Check/ Verification

ಕ್ಷಯ ಎನ್ನುವುದು, ಕ್ಷಯ ಪೀಡಿತ ರೋಗಿಯಿಂದ ಆರೋಗ್ಯವಂತ ವ್ಯಕ್ತಿಗೆ ಬ್ಯಾಕ್ಷೀರಿಯಾ ಮೂಲಕ ಹರಡುತ್ತದೆ. ರೋಗಿ ವ್ಯಕ್ತಿ ಸೀನಿದಾಗ, ಕಫ ಹೊರಹಾಕಿದಾಗ ಗಾಳಿಯಿಂದಾಗಿ ಅತಿ ಸಣ್ಣ ಹನಿಗಳ ಮೂಲಕ ಇದು ಹರಣಡುತ್ತದೆ. ಈ ಸಣ್ಣ ಹನಿಗಳು ಮೈಕೋಬ್ಯಾಕ್ಟೀರಿಯಮ್‌ ಟ್ಯುಬರ್‌ಕ್ಯುಲೋಸಿಸ್‌ ಬ್ಯಾಕ್ಟೀರಿಯಾಗಳನ್ನು ಹೊಂದಿದ್ದು ಇದು ರೋಗಕ್ಕೆ ಕಾರಣವಾಗುತ್ತದೆ. 

ಕ್ಲೇಮಿನ ಕುರಿತ ಸತ್ಯಶೋಧನೆಯ ಭಾಗವಾಗಿ ನಾವು ಅಮೃತ ಸೆಂಟರ್‌ ಫಾರ್‌ ಅಡ್ವಾನ್ಸ್ಡ್ ರಿಸರ್ಚ್‌ ಆಯುರ್ವೇದ (ಎಸಿಎಆರ್‌ಎ)ಯ ಸಂಶೋಧನಾ ನಿರ್ದೇಶಕರಾದ ಡಾ.ಪಿ. ರಾಮಮನೋಹರ್‌ ಅವರನ್ನು ಸಂಪರ್ಕಿಸಿದ್ದು, ತಾಮ್ರದ ಪಾತ್ರೆಯಿಂದ ನೀರು ಕುಡಿದರೆ, ಅದು ಬ್ಯಾಕ್ಟೀರಿಯಾದಿಂದಾಗುವ ಸೋಂಕುಗಳನ್ನು ನಿವಾರಣೆ ಮಾಡುತ್ತದೆಯೇ ಎಂದು ಕೇಳಿದ್ದೆವು. ಅದಕ್ಕವರು ಪ್ರತಿಕ್ರಿಯಿಸಿ, “ತಾಮ್ರದ ಪಾತ್ರೆಯಲ್ಲಿಟ್ಟ ನೀರು ಕೆಲವೊಂದು ಬ್ಯಾಕ್ಟೀರಿಯಾಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡಬಹುದು. ಇದು ಭೇದಿಯನ್ನೂ ತಡೆಗಟ್ಟಬಹುದು. ಇನ್ನು ತಾಮ್ರದ ಪಾತ್ರೆಯಲ್ಲಿ ನೀರು ಹಾಕಿಟ್ಟರೆ ಸೂಕ್ಷ್ಮಾಣು ಜೀವಿಗಳನ್ನು ನಾಶ ಮಾಡಬಹುದು. ಆದರೆ ತಾಮ್ರದ ಪಾತ್ರೆಯಲ್ಲಿ ಹಾಕಿಟ್ಟ ನೀರು ಕ್ಷಯರೋಗ ನಿವಾರಣೆಗೆ ಕಾರಣವಾಗುತ್ತದೆ ಎಂದು ಹೇಳುವುದು ಸಾಧ್ಯವಿಲ್ಲ. ಇಂತಹ ರೋಗಿ ಯಾವತ್ತೂ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಶುಶ್ರೂಷೆಯನ್ನು ಪಡೆದುಕೊಳ್ಳುವುದು ಉತ್ತಮ” ಎಂದು ಹೇಳಿದ್ದಾರೆ. 

Also Read: ಕರಿದ ಈರುಳ್ಳಿಯಲ್ಲಿ ಯಾವ ಪೋಷಕಾಂಶವೂ ಇಲ್ಲ, ಇದು ಸತ್ಯವೇ?

ಟಿಬಿ ಕಾಯಿಲೆ ಇರುವವರು ಸಂಪೂರ್ಣ ಚಿಕಿತ್ಸೆ ಪಡೆದುಕೊಳ್ಳಬೇಕು. ಟಿಬಿ ಕಾಯಿಲೆಗೆ isoniazid, rifampin, ethambutol, pyrazinamide, bedaquiline, linezolid fluoroquinolones ಔಷಧಗಳು ಮತ್ತು ಇಂಜೆಕ್ಷನ್‌ಗಳನ್ನು ನೀಡಲಾಗುತ್ತದೆ. 

ಯು.ಎಸ್‌. ಸೆಂಟರ್‌ ಫಾರ್‌ ಡಿಸೀಸ್ ಕಂಟ್ರೋಲ್‌ ಆಂಡ್‌ ಪ್ರಿವೆನ್ಷನ್‌ (ಸಿಡಿಸಿ) ವೆಬ್‌ಸೈಟ್‌ ಪ್ರಕಾರ, ಕ್ಷಯ ರೋಗಕ್ಕೆ 4, 6, 9 ಅಥವಾ ಕಟ್ಟುಪಾಡುಗಳನ್ನು ಅವಲಂಬಿಸಿ ಚಿಕಿತ್ಸೆ ನೀಡಲಾಗುತ್ತದೆ. ಯು.ಕೆ. ನ್ಯಾಷನಲ್‌ ಹೆಲ್ತ್‌ ಸರ್ವೀಸ್‌ (ಎನ್‌ಎಚ್‌ಎಸ್‌) ವೆಬ್‌ಸೈಟ್‌ ಪ್ರಕಾರ, ಸಂಪೂರ್ಣ ಚಿಕಿತ್ಸೆಯನ್ನು ಅನುಸರಿಸದೇ ಇರುವುದರಿಂದ ಪ್ರತಿಜೀವಕ ನಿರೋಧಕತೆಯನ್ನು ಉಂಟುಮಾಡಬಹುದು ಎಂದು ಹೇಳಿದೆ. 

ತಾಮ್ರ ಎನ್ನುವುದು ದೇಹಕ್ಕೆ ಅತ್ಯಗತ್ಯ ಅಂಶವಾಗಿದೆ. ಅದನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಬೇಕು. ತಾಮ್ರವು ಆಂಟಿ ಮೈಕ್ರೊಬಿಯಲ್‌ ಗುಣಲಕ್ಷಣಗಳನ್ನು ಹೊಂದಿದೆ. ಇದಲ್ಲದೆ ಆಯುರ್ವೇದ ಪ್ರಕಾರ ಇದು ನೀರಿನ ಶುದ್ಧೀಕರಣಕ್ಕೆ ಉತ್ತಮ ಎಂದು ಹೇಳುತ್ತದೆ. ಇದು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯಬಹುದು. ಇದು ಕುಡಿಯುವ ನೀರಿನ ಶುದ್ಧತೆಗೆ ಕಾರಣವಾಗುತ್ತದೆ. ತಾಮ್ರ ಹೃದಯ, ಮೆದುಳು ಮತ್ತು ಮೂಳೆಗಳ ಆರೋಗ್ಯ, ದೇಹದ ರೋಗ ನಿರೋಧಕ ಶಕ್ತಿಗೆ, ತೂಕ ಕಡಿಮೆಯಾಗುವುದರ ವಿರುದ್ಧ, ವಯಸ್ಸಾಗುವಿಕೆ ಮತ್ತು ಚರ್ಮದ ಆರೋಗ್ಯಕ್ಕೆ ಉತ್ತಮ ಎನ್ನಲಾಗಿದೆ. 

ಡಾ.ರಾಮಮನೋಹರ್‌ ಅವರ ಪ್ರಕಾರ “ಅಯಾನೀಕರಿಸಿದ ಮತ್ತು ತಾಮ್ರದ ಪಾತ್ರೆಯಲ್ಲಿ ಸೋಸಿದ ನೀರನ್ನು ಕುಡಿಯುವುದನ್ನು ಆಯುರ್ವೇದದಲ್ಲಿ ಹೇಳಲಾಗಿದೆ. ದಿನವೊಂದಕ್ಕೆ ಸುಮಾರು 900 ಮ್ರೈಕ್ರೋಗ್ರಾಮ್ಸ್‌ ತಾಮ್ರದಲ್ಲಿದ್ದ ನೀರನ್ನು ಕುಡಿಯಬಹುದು ಎಂದು ಹೇಳಲಾಗಿದೆ. ಅಲ್ಲದೇ ದಿನವೊಂದಕ್ಕೆ ಗರಿಷ್ಠ 10 ಮಿಲಿಗ್ರಾಮ್‌ನಷ್ಟು ತಾಮ್ರವನ್ನು ಸೇವಿಸಬಹುದು. ತಾಮ್ರದ ಪಾತ್ರೆಯಲ್ಲಿ ನೀರು ಇಟ್ಟು ಅದನ್ನು ಸೇವಿಸುವುದರಿಂದ ಹೆಚ್ಚು ತಾಮ್ರವನ್ನುಸೇವಿಸಿದಂತೆ ಆಗುವುದಿಲ್ಲ. ಆದ್ದರಿಂದ ಸಾಮಾನ್ಯವಾಗಿ ಈ ವಿಧಾನವನ್ನು ಆರೋಗ್ಯಕಾರಿ ಎಂದು ಪರಿಗಣಿಸಲಾಗುತ್ತದೆ” ಎಂದು ಹೇಳಿದ್ದಾರೆ. 

ಆದಾಗ್ಯೂ, ತಾಮ್ರದ ಪ್ರಮಾಣ ಕಡಿಮೆಯಾಗುವುದು ಮತ್ತು ಅದನ್ನು ಹೆಚ್ಚು ತೆಗೆದುಕೊಳ್ಳುವುದು ಆರೋಗ್ಯಕ್ಕೆ ಅಪಾಯಕಾರಿ. ಆದ್ದರಿಂದ ಆಹಾರದ ಮೂಲಕ ಅಥವಾ ನೀರಿನ ಮೂಲಕ ತಾಮ್ರವನ್ನು ತೆಗೆದುಕೊಳ್ಳುವುದು ಕೂಡ ನಿಗದಿತ ಪ್ರಮಾಣದಲ್ಲೇ ಇರಬೇಕು. ತಾಮ್ರದ ಅಯಾನುಗಳು ದೇಹದಲ್ಲಿ ಕಡಿಮೆಯಾದರೆ ತಲೆನೋವು, ವಾಂತಿ, ಭೇದಿ, ವಾಕರಿಕೆ ಇತ್ಯಾದಿ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗೆಯೇ ತಾಮ್ರದ ಅಯಾನುಗಳು ಹೆಚ್ಚಾದರೆ ಕಿಡ್ನಿಗೆ ಅಥವಾ ಯಕೃತ್ತಿನ ಸಮಸ್ಯೆಗೆ ಕಾರಣವಾಗಬಹುದು. 

Conclusion

ಸತ್ಯಶೋಧನೆ ಪ್ರಕಾರ, ತಾಮ್ರದ ಪಾತ್ರೆಯಿಂದ ಟಿಬಿಯಂತಹ ಕಾಯಿಲೆ ನಿವಾರಣೆಯಾಗುತ್ತದೆ ಎಂದು ಹೇಳುವುದು ತಪ್ಪಾಗುತ್ತದೆ. ಜೊತೆಗೆ ಕ್ಲೇಮಿನಲ್ಲಿ ಹೇಳಿದ ವಿಚಾರಗಳು ತಪ್ಪಾದ ಸಂದರ್ಭವಾಗಿದೆ. 

Result: Missing Context

Our Sources 
Self Analysis
Conversation with Dr. P. Rammanohar, Research Director, Amrita Centre for Advanced Research in Ayurveda (ĀCĀRA)

(This article has been published in collaboration with THIP Media)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.