Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಅಕ್ರಮ ಬಾಂಗ್ಲಾದೇಶಿ, ಪಾಕಿಸ್ತಾನಿ ವಲಸಿಗರನ್ನು ಲಿಬಿಯಾದಿಂದಲೂ ಹೊರಹಾಕಲಾಗುತ್ತಿದೆ
ಬಾಂಗ್ಲಾದೇಶಿ ವಲಸಿಗರಿದ್ದ ದೋಣಿ ಗ್ರೀಸ್ ಸಾಗರ ತೀರದಲ್ಲಿ ತಾಂತ್ರಿಕ ವೈಫಲ್ಯಕ್ಕೊಳಗಾಗಿ ನಿಂತಿದ್ದು, ಅವರನ್ನು ಗ್ರೀಸ್ ಕರಾವಳಿ ಕಾವಲು ಪಡೆ ವಶಕ್ಕೆ ಪಡೆದ ವಿದ್ಯಮಾನ ಇದಾಗಿದೆ. ಇವರು ಗ್ರೀಸ್ ಅಥವಾ ಇಟೆಲಿಯ ಗಮ್ಯ ಸ್ಥಾನಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ
ಅಕ್ರಮ ಬಾಂಗ್ಲಾದೇಶಿ, ಪಾಕಿಸ್ತಾನಿ ವಲಸಿಗರನ್ನು ಲಿಬಿಯಾದಿಂದಲೂ ಹೊರಹಾಕಲಾಗುತ್ತಿದೆ ಎಂಬಂತೆ ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಒಟ್ಟು 37 ಜನ ಅಕ್ರಮ ಬಾಂಗ್ಲಾದೇಶಿ ಮತ್ತು ಪಾಕಿಸ್ತಾನಿಗಳನ್ನ ಹಡಗಿನ ಮೂಲಕ ಹೊರಗೆ ಹಾಕುತ್ತಿರುವ ಲಿಬಿಯಾ ದೇಶ” ಎಂದಿದೆ.

ಈ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದಾಗ ಈ ಹೇಳಿಕೆ ತಪ್ಪುದಾರಿಗೆಳೆಯುವಂಥಾದ್ದಾಗಿದೆ, ಗ್ರೀಸ್ ಕರಾವಳಿ ತೀರದಲ್ಲಿ ಬೋಟ್ ಹಾಳಾಗಿ ಬಳಿಕ ಗ್ರೀಸ್ ಕರಾವಳಿ ಕಾವಲು ಪಡೆಯಿಂದ ರಕ್ಷಿಸಿದ ವಲಸಿಗ ಮಂದಿ ಇವರಾಗಿದ್ದಾರೆ ಎಂದು ಗೊತ್ತಾಗಿದೆ.
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ.
ಈ ವೇಳೆ ಆಗಸ್ಟ್ 18, 2025ರಂದು @thoupou ಎಂಬ ಟ್ವಿಟರ್ ಬಳಕೆದಾರರು ಮಾಡಿರುವ ಪೋಸ್ಟ್ ಲಭ್ಯವಾಗಿದೆ. ಅದರಲ್ಲಿ ಕಲಮಟಾ ಬಂದರಿನಲ್ಲಿ 39 ವಲಸಿಗರು-ಎಲ್ಲರೂ ಯುವಕರು 17-25 ವಯಸ್ಸಿನವರು ಎಂದಿರುವುದನ್ನು ಗಮನಿಸಿದ್ದೇವೆ. ಈ ಟ್ವೀಟ್ ನೊಂದಿಗೆ ಸುದ್ದಿಯೊಂದನ್ನು ಅಟ್ಯಾಚ್ ಮಾಡಲಾಗಿದೆ.
ಈ ಸುದ್ದಿಯ ಮೇಲೆ ಕ್ಲಿಕ್ ಮಾಡಿದಾಗ ಅದು Messinia Live ಹೆಸರಿನ ವೆಬ್ಸೈಟ್ ಗೆ ನಮ್ಮನ್ನು ಕರೆದೊಯ್ದಿದೆ. ಇದರಲ್ಲಿ ಆಗಸ್ಟ್ 18, 2025ರ “ಕಲಾಮಟಾ ಬಂದರಿನಲ್ಲಿ 39 ವಲಸಿಗರು – ಅವರೆಲ್ಲರೂ 17-25 ವರ್ಷ ವಯಸ್ಸಿನ ಯುವಕರು” ಎಂಬ ಶೀರ್ಷಿಕೆಯಲ್ಲಿ ಸುದ್ದಿಯನ್ನು ಕೊಡಲಾಗಿದ್ದು, “ಬಾಂಗ್ಲಾದೇಶ ಮತ್ತು ಸುಡಾನ್ನಿಂದ ಬಂದವರು ಎಂದು ಘೋಷಿಸಿಕೊಂಡ ಒಟ್ಟು 39 ವಿದೇಶಿಯರು, ಆಗಸ್ಟ್ 17, 2025 ರ ಭಾನುವಾರ ಸಂಜೆ ಕಲಾಮತಾ ಬಂದರಿನಲ್ಲಿ ಇಳಿದರು ಮತ್ತು ಕಲಾಮತಾದಿಂದ 58 ಮೈಲಿ ದೂರದಲ್ಲಿರುವ ಸಮುದ್ರ ಪ್ರದೇಶದಲ್ಲಿ ವಿಪತ್ತು ಸಂಕೇತವನ್ನು ಕಳುಹಿಸಿದ ಹಡಗಿನಲ್ಲಿದ್ದರು.” ಎಂದಿದೆ. ಇದೇ ವರದಿಯಲ್ಲಿ “ವಿದೇಶಿಯರು ಆಗಸ್ಟ್ 15 ರ ಮುಂಜಾನೆ ಲಿಬಿಯಾದ ಬೆಂಗಾಜಿ ಬಳಿಯ ಕರಾವಳಿಯಿಂದ ಗ್ರೀಸ್ ಅಥವಾ ಇಟಲಿಯ ಗಮ್ಯಸ್ಥಾನದೊಂದಿಗೆ ಹೊರಟಿದ್ದರು. ಕಲಾಮಟಾದ ಕೇಂದ್ರ ಬಂದರು ಪ್ರಾಧಿಕಾರವು ಈ ಬಗ್ಗೆ ಪ್ರಾಥಮಿಕ ತನಿಖೆಯನ್ನು ನಡೆಸುತ್ತಿದೆ.” ಎಂದಿದೆ. (ಗ್ರೀಕ್ ನಿಂದ ಭಾಷಾಂತರಿಸಲಾಗಿದೆ)

ಆಗಸ್ಟ್ 18, 2025ರ mesogeiostv ವರದಿಯಲ್ಲಿ, “ಭಾನುವಾರ ಮಧ್ಯಾಹ್ನ ಕೋಸ್ಟ್ ಗಾರ್ಡ್ ಕಾರ್ಯಾಚರಣೆಯಲ್ಲಿ, ಮೆಸ್ಸಿನಿಯನ್ ಕೊಲ್ಲಿಯ ಕರಾವಳಿಯಿಂದ ಕಲಾಮಟಾದಿಂದ ದಕ್ಷಿಣಕ್ಕೆ 58 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಯಾಂತ್ರಿಕ ವೈಫಲ್ಯದಿಂದಾಗಿ ನಿಂತಿದ್ದ ಸ್ಪೀಡ್ ಬೋಟ್ನಲ್ಲಿದ್ದ 39 ವಲಸಿಗರನ್ನು ರಕ್ಷಿಸಲಾಯಿತು…. ಪ್ರಾಥಮಿಕ ಮಾಹಿತಿಯ ಪ್ರಕಾರ, ವಲಸಿಗರಲ್ಲಿ ಹೆಚ್ಚಿನವರು ಬಾಂಗ್ಲಾದೇಶಿ ಪ್ರಜೆಗಳಾಗಿದ್ದು, ಅವರಲ್ಲಿ ಸುಡಾನ್ ಪ್ರಜೆಯೊಬ್ಬರು ಸ್ಪೀಡ್ ಬೋಟ್ ನಿರ್ವಾಹಕರಾಗಿದ್ದರು ಎಂದು ಹೇಳಲಾಗಿದೆ. ಅವರನ್ನು ಬಂದರು ಅಧಿಕಾರಿಗಳು ಬಂಧಿಸಿದ್ದಾರೆ. ಎಲ್ಲಾ ವಲಸಿಗರು ಪುರುಷರಾಗಿದ್ದು, ಮಾಹಿತಿಯ ಪ್ರಕಾರ, ಅವರು ಲಿಬಿಯಾದಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದರು. ಅವರನ್ನು ತಾತ್ಕಾಲಿಕವಾಗಿ ಕಲಾಮಟಾ ಬಂದರಿನ ಗೋದಾಮುಗಳಲ್ಲಿ ಇರಿಸಲಾಗುವುದು” ಎನ್ನಲಾಗಿದೆ.

ಆಗಸ್ಟ್ 18, 2025ರ ertnews ವರದಿಯಲ್ಲಿ39 ಜನ ವಲಸಿಗರನ್ನು ಸಮುದ್ರದಿಂದ ರಕ್ಷಿಸಿದ ಬಗ್ಗೆ ಹೇಳಲಾಗಿದೆ. ಇವರಲ್ಲಿ ಬಹುತೇಕ ಮಂದಿ ಬಾಂಗ್ಲಾದೇಶೀಯರಾಗಿದ್ದು, ಲಿಬಿಯಾದಿಂದ ಇವರು ಹೊರಟಿದ್ದರು ಎಂದಿದೆ. (ಗ್ರೀಕ್ ನಿಂದ ಭಾಷಾಂತರಿಸಲಾಗಿದೆ) ಈ ವರದಿಯಲ್ಲೂ ಮೇಲಿನ ಪತ್ರಿಕಾ ವರದಿಗಳ ರೀತಿಯ ಮಾಹಿತಿಯನ್ನೇ ಕೊಡಲಾಗಿದೆ.

ಇದರೊಂದಿಗೆ ಯಾವುದೇ ವರದಿಗಳಲ್ಲಿ ಬಾಂಗ್ಲಾದೇಶೀಯರನ್ನು, ಪಾಕಿಸ್ತಾನೀಯರನ್ನು ಲಿಬಿಯಾದಿಂದ ಹೊರಕ್ಕೆ ಹಾಕಲಾಗಿದೆ ಎಂಬ ಮಾಹಿತಿಗಳು ನಮ್ಮ ಸತ್ಯಶೋಧನೆಯ ವೇಳೆ ಕಂಡುಬಂದಿಲ್ಲ.
ಆದ್ದರಿಂದ ತನಿಖೆಯ ಪ್ರಕಾರ, ಅಕ್ರಮ ಬಾಂಗ್ಲಾದೇಶಿ, ಪಾಕಿಸ್ತಾನಿ ವಲಸಿಗರನ್ನು ಲಿಬಿಯಾದಿಂದಲೂ ಹೊರಹಾಕಲಾಗುತ್ತಿದೆ ಎಂಬ ಹೇಳಿಕೆ ತಪ್ಪು ದಾರಿಗೆಳೆಯುವಂಥಾದ್ದಾಗಿದೆ ಎಂದು ತಿಳಿದುಬಂದಿದೆ.
Our Sources
Report by Messinia Live, Dated: August 18, 2025
Report by mesogeiostv, Dated: August 18, 2025
Report by ertnews, Dated: August 18, 2025