ಪಹಲ್ಗಾಮ್ ನಲ್ಲಿ ಭಯೋತ್ಪಾದಕರು 26 ಪ್ರವಾಸಿಗರನ್ನು ಹತ್ಯೆ ಮಾಡಿದ ಬಳಿಕ ಪಾಕಿಸ್ತಾನದಲ್ಲಿರುವ ಉಗ್ರರ ವಿರುದ್ಧ ಭಾರತ ಆಪರೇಷನ್ ಸಿಂದೂರ ಹೆಸರಿನ ಕಾರ್‍ಯಾಚರಣೆ ಮಾಡಿದೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದ್ದು, ಭಾರತದ ಕ್ಷಿಪಣಿ ದಾಳಿ ಎಂದು ಹೇಳಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಹಂಚಿಕೊಂಡಿರುವ ವೈರಲ್ ವೀಡಿಯೋ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಇರಾನ್ ಇಸ್ರೇಲ್ ಮೇಲೆ 2024ರಲ್ಲಿ ನಡೆಸಿದ ದಾಳಿ ಸಂದರ್ಭದ್ದು ಎಂದು ಗೊತ್ತಾಗಿದೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ಕೂಡ ಇದೇ ವೀಡಿಯೋವನ್ನು ಹಂಚಿಕೊಂಡಿದ್ದು ಆಪರೇಷನ್ ಸಿಂದೂರದ ದೃಶ್ಯಾವಳಿ ಎಂದು ಹೇಳಿಕೊಂಡಿದೆ.


Fact Check/Verification
ಸತ್ಯಶೋಧನೆಗಾಗಿ ನಾವು ಇನ್‌ವಿಡ್ ಮೂಲಕ ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ವಿವಿಧ ಫಲಿತಾಂಶಗಳು ಇದು ಇರಾನ್ ಇಸ್ರೇಲ್ ಮೇಲೆ ದಾಳಿ ನಡೆಸಿದಾಗಿನದ್ದು ಎಂದು ಹೇಳಿವೆ.
ಅಕ್ಟೋಬರ್ 1, 2024ರಂದು ಮೈಲಾರ್ಡ್ ಬೆಬೊ ಎಂಬ ಎಕ್ಸ್ ಬಳಕೆದಾರರು ವೀಡಿಯೋ ಒಂದನ್ನು ಹಂಚಿಕೊಂಡಿದ್ದು, ವೈರಲ್ ವೀಡಿಯೋ ಹೋಲುವ ವೀಡಿಯೋ ಇದರಲ್ಲಿದೆ. ಇದರೊಂದಿಗೆ ನೀಡಿರುವ ವಿವರಣೆಯಲ್ಲಿ, “ಇಸ್ರೇಲಿ ಭದ್ರತಾ ವಿಶ್ಲೇಷಕ: ಇಸ್ರೇಲ್ ಮೇಲೆ ನಡೆದ ಇದುವರೆಗಿನ ಅತಿದೊಡ್ಡ ದಾಳಿ ಇದಾಗಿದ್ದು, ಇಸ್ರೇಲ್‌ನ ವಾಯು ರಕ್ಷಣೆಯನ್ನು ಗೊಂದಲಗೊಳಿಸುವ ಸಲುವಾಗಿ ವಿವಿಧ ಇರಾನಿನ ತಾಣಗಳಿಂದ ಕನಿಷ್ಠ 200 ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಲಾಗಿದೆ. ನೆಗೆವ್ ಮತ್ತು ಜೆರುಸಲೆಮ್ ಸೇರಿದಂತೆ ಇಡೀ ಇಸ್ರೇಲ್ ಅನ್ನು ಗುರಿಯಾಗಿಸಲಾಗಿದೆ,” ಎಂದಿದೆ.

ಅಕ್ಟೋಬರ್ 2, 2024 ರಂದು ಹುರಿಯತ್ ರೇಡಿಯೋ ಇಂಗ್ಲಿಷ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಇರಾನ್ ಇಸ್ರೇಲ್ ವಿರುದ್ಧ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯನ್ನು ಆರಂಭಿಸಿದೆ ಎಂದಿದೆ. ಇದರೊಂದಿಗೆ ಬರೆಯಲಾದ ವಿವರಣೆಯಲ್ಲಿ, “ಟೆಲ್ ಅವೀವ್ ಇರಾನ್ ದಾಳಿಯ ಕೇಂದ್ರಬಿಂದುವಾಗಿದೆ, ನೂರಾರು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಕೇವಲ 12 ನಿಮಿಷಗಳಲ್ಲಿ ನಗರವನ್ನು ತಲುಪಿವೆ. ಈ ಕ್ಷಿಪಣಿಗಳೊಂದಿಗೆ ಇಸ್ರೇಲಿ ಮಿಲಿಟರಿ ಸ್ಥಾಪನೆಗಳು ಮತ್ತು ಕೇಂದ್ರಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಇರಾನ್ ಹೇಳಿಕೊಂಡಿದೆ. ಇರಾನಿನ ಮಾಧ್ಯಮ ವರದಿಗಳ ಪ್ರಕಾರ, ಶೇಕಡಾ 80 ರಷ್ಟು ಕ್ಷಿಪಣಿಗಳು ಯಾವುದೇ ಪ್ರತಿಬಂಧವಿಲ್ಲದೆ ತಮ್ಮ ಉದ್ದೇಶಿತ ಗುರಿಗಳನ್ನು ಯಶಸ್ವಿಯಾಗಿ ಹೊಡೆದವು. ದಾಳಿಗೊಳಗಾದ ಗುರಿಗಳಲ್ಲಿ ತನ್ನ ಮಿಲಿಟರಿ ನೆಲೆಗಳು ಸೇರಿವೆ ಎಂದು ಇಸ್ರೇಲ್ ಒಪ್ಪಿಕೊಂಡಿದೆ.” ಎಂದಿದೆ.

ಅಕ್ಟೋಬರ್ 2, 2024ರಂದು ಡಿಡಿ ಇಂಡಿಯಾ ಯೂಟ್ಯೂಬ್ ಶಾರ್ಟ್ಸ್ ನಲ್ಲಿ ವೈರಲ್ ವೀಡಿಯೋವನ್ನು ಹೋಲುವ ವೀಡಿಯೋವನ್ನು ಅಪ್ ಲೋಡ್ ಮಾಡಿದ್ದು, “ನೆಗೆವ್ ಮರುಭೂಮಿಯಲ್ಲಿರುವ ನೆವತೀಮ್ ಏರ್ ಬೇಸ್ ಮೇಲೆ ಇರಾನಿಯನ್ ಕ್ಷಿಪಣಿಗಳು ದಾಳಿ ನಡೆಸಿವೆ” ಎಂಬ ಶೀರ್ಷಿಕೆ ನೀಡಲಾಗಿದೆ.
ಡಿಡಿ ಇಂಡಿಯಾ ಇನ್‌ಸ್ಟಾಗ್ರಾಂನಲ್ಲೂ ಇದೇ ವಿಚಾರದ ಕುರಿತು ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ.
ಡಿಡಿ ಇಂಡಿಯಾ ಸಾಮಾಜಿಕ ಮಾಧ್ಯಮ ಚಾನೆಲ್ ಗಳು ಪೋಸ್ಟ್ ಮಾಡಿದ ವೀಡಿಯೋಗಳು ಕೂಡ ವೈರಲ್ ವೀಡಿಯೋಕ್ಕೆ ಸಾಮ್ಯತೆ ಹೊಂದಿರುವುದು ತನಿಖೆಯಲ್ಲಿ ಗೊತ್ತಾಗಿದೆ.
ಈ ಕುರಿತು ನಾವು ಇನ್ನಷ್ಟು ಶೋಧ ನಡೆಸಿದಾಗ, ವಿವಿಧ ಮಾಧ್ಯಮ ವರದಿಗಳನ್ನೂ ನೋಡಿದ್ದೇವೆ. ಅವುಗಳನ್ನು ಇಲ್ಲಿ,ಇಲ್ಲಿ ನೋಡಬಹುದು.
Conclusion
ಸಾಕ್ಷ್ಯಾಧಾರಗಳ ಪ್ರಕಾರ, ಪಾಕಿಸ್ತಾನ ಮೇಲೆ ಭಾರತದ ದಾಳಿ ಎಂದು ಹಂಚಿಕೊಳ್ಳಲಾದ ವೀಡಿಯೋ 2024ರ ಅಕ್ಟೋಬರ್ ಸಂದರ್ಭದಲ್ಲಿ ಇರಾನ್ ಇಸ್ರೇಲ್ ಮೇಲೆ ಮಾಡಿದ ಕ್ಷಿಪಣಿ ದಾಳಿಯದ್ದಾಗಿದೆ ಎಂದು ಕಂಡುಬಂದಿದೆ.
Our Sources
X post By Mylordbebo, Dated: October 1, 2024
X post By Hurriyat Radio English, Dated: October 2, 2024
YouTube Shorts By DD India, Dated: October 2, 2024