Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಹಾಸನ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಎರಗಿದ ಲಾರಿ; ಅದರ ಚಾಲಕ ಮುಸ್ಲಿಂ
ಹಾಸನ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಎರಗಿದ ಲಾರಿ ಚಾಲಕ ಮುಸ್ಲಿಂ ಎಂಬುದು ನಿಜವಲ್ಲ, ಆತ ಭುವನೇಶ್ ಎಂಬಾತನಾಗಿದ್ದಾರೆ
ಹಾಸನದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಲಾರಿ ಎಂದು ಎರಗಿದ್ದು, 9 ಮಂದಿ ಸಾವನ್ನಪ್ಪಿದ ಘಟನೆ ಸೆಪ್ಟೆಂಬರ್ 12ರಂದು ಜಿಲ್ಲೆಯ ಮೊಸಳೆ ಹೊಸಳ್ಳಿಯಲ್ಲಿ ನಡೆದಿದೆ. ಈ ಘಟನೆ ನಡೆದ ಬೆನ್ನಲ್ಲೇ ಲಾರಿ ಚಾಲಕ ಮುಸ್ಲಿಂ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯನ್ನು ಹಂಚಿಕೊಳ್ಳಲಾಗುತ್ತಿದೆ.
‘ಹಾಸನ ಮೆರವಣಿಗೆ ಮೇಲೆ ಲಾರಿ ಎರಗಿದ ಘಟನೆ ಅಪಘಾತವೇ ಅಥವಾ ಸಂಚೇ, ಲಾರಿ ಚಾಲಕನ ಹೆಸರು ಮೊಹಮ್ಮದ್ ಫಿರೋಜ್, ಕರ್ನಾಟಕದಲ್ಲಿ ಇಸ್ಲಾಮಿಸ್ಟ್ ಭಯೋತ್ಪಾದಕ ದಾಳಿಯಾಗಿದೆ’ ಎಂಬ ಹೇಳಿಕೆ ಇದೆ.

ಇದೇ ರೀತಿಯ ಹೇಳಿಕೆಯನ್ನು ಇಲ್ಲಿ ನೋಡಬಹುದು.

ಈ ಕುರಿತು ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ನಿಜವಲ್ಲ, ಲಾರಿ ಚಾಲಕನ ಹೆಸರು ಭುವನೇಶ್ ಎಂದಾಗಿದೆ ಎಂದು ತಿಳಿದುಬಂದಿದೆ.
Also Read: ನೇಪಾಳ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಫೋಟೋ ಪ್ರದರ್ಶಿಸಲಾಗಿದೆಯೇ?
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಮಾಧ್ಯಮ ವರದಿಗಳು ಕಂಡುಬಂದಿವೆ.
ಸೆಪ್ಟೆಂಬರ್ 13, 2025ರ ವಿಜಯ ಕರ್ನಾಟಕ ವರದಿಯ ಪ್ರಕಾರ, ಹಾಸನ ಜಿಲ್ಲೆಯ ಮೊಸಳೆಹೊಸಳ್ಳಿಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಕ್ಯಾಂಟರ್ ಲಾರಿ ನುಗ್ಗಿ ಒಂಬತ್ತು ಜನ ಮೃತಪಟ್ಟಿದ್ದಾರೆ. ಗಾಯಗೊಂಡಿದ್ದ ಪ್ರವೀಣ್ ಕುಮಾರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರಲ್ಲಿ ಆರು ಗ್ರಾಮಸ್ಥರು, ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿದ್ದಾರೆ. ಬೈಕ್ ಅಡ್ಡ ಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಚಾಲಕ ಭುವನೇಶ್ ಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗೊತ್ತಾಗಿದೆ.

ಸೆಪ್ಟೆಂಬರ್ 13, 2025ರ ವಾರ್ತಾಭಾರತಿ ವರದಿಯಲ್ಲಿ, ತಾಲೂಕಿನ ಮೊಸಳೆ ಹೊಸಳ್ಳಿ ಬಳಿ ಗಣಪತಿ ಮೆರವಣಿಗೆ ಮೇಲೆ ಲಾರಿ ನುಗ್ಗಿ 9 ಜನ ಪ್ರಾಣ ಕಳೆದುಕೊಂಡ ಭೀಕರ ರಸ್ತೆ ದುರಂತ ಪ್ರಕರಣದಲ್ಲಿ ಲಾರಿ ಚಾಲಕನೂ ಗಂಭೀರ ಗಾಯಗೊಂಡಿರುವುದು ಬೆಳಕಿಗೆ ಬಂದಿದೆ. ದುರಂತಕ್ಕೆ ಬೈಕ್ ಸವಾರ ಬೇಕಾಬಿಟ್ಟಿಯಾಗಿ ಅಡ್ಡ ಬಂದಿದ್ದು ಹಾಗೂ ಟ್ರಕ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ಚಾಲಕನನ್ನು ಹೊಳೆನರಸೀಪುರ ತಾಲೂಕಿನ ಕಟ್ಟೆಬೆಳಗುಲಿ ಗ್ರಾಮದ ಭುವನೇಶ ಎಂದು ಗುರುತಿಸಲಾಗಿದೆ. ಲಾರಿಯು ಮಹಾರಾಷ್ಟ್ರ ನೋಂದಣಿ ಹೊಂದಿದ್ದು, ಚಾಲನೆ ಮಾಡುವ ವೇಳೆ ಭುವನೇಶ್ ಕುಡಿದಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ ಎಂದಿದೆ.

ಪ್ರಕರಣದ ಕುರಿತು ಹಾಸನ ಜಿಲ್ಲಾ ಎಸ್ಪಿ ಮೊಹಮ್ಮದ್ ಸುಜೀತಾ ಎಂ.ಎಸ್. ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಅದನ್ನು ನಾವು ಐಎಎನ್ಎಸ್ ಎಕ್ಸ್ ಪೋಸ್ಟ್ ನಲ್ಲಿ ಕಂಡಿದ್ದೇವೆ. ಈ ಪ್ರತಿಕ್ರಿಯೆಯಲ್ಲಿ ಎಸ್ ಪಿಯವರು 9 ಮಂದಿ ಮೃತಪಟ್ಟಿದ್ದಾಗಿ ಹೇಳಿದ್ದಾರೆ. ಜೊತಗೆ ಲಾರಿ ಚಾಲಕ, ಪ್ರಕರಣದ ಆರೋಪಿ ಭುವನೇಶ್ ಎಂಬಾತನಾಗಿದ್ದಾನೆ, ಜೊತೆಗೆ ಘಟನೆ ಬಗ್ಗೆ ವಿಧಿವಿಜ್ಞಾನ ತಜ್ಞರು ಪರಿಶೀಲನೆ ನಡೆಸಬೇಕಿದ್ದು, ಈ ಪ್ರಕರಣ ತಾಂತ್ರಿಕ ವೈಫಲ್ಯದಿಂದ ಆಗಿದೆಯೇ ಅಥವಾ ಬೇರೇನಾದರೂ ಕಾರಣ ಇದೆಯೇ ಎಂಬ ಬಗ್ಗೆ ತನಿಖೆಯಾಗಬೇಕಿದೆ ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ಗೊರೂರು ಪೊಲೀಸ್ ಠಾಣಾಧಿಕಾರಿಯವರನ್ನು ನಾವು ಸಂಪರ್ಕಿಸಿದ್ದು ಎಫ್ಐಆರ್ ಪ್ರತಿಯನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಲಾರಿ ಚಾಲಕನ ಹೆಸರು ಭುವನೇಶ್ ಎಂದಿದ್ದು, ಆತ MH 23 AU 3605 ಸಂಖ್ಯೆಯ ಲಾರಿಯನ್ನು ಚಲಾಯಿಸುತ್ತಿದ್ದ ಎಂದು ತಿಳಿದುಬಂದಿದೆ. ಮತ್ತು ಘಟನೆಯ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದಿದೆ.
ಘಟನೆ ಬಗ್ಗೆ ಹಾಸನ ಜಿಲ್ಲಾ ಪೊಲೀಸ್ ಅಧಿಕಾರಿ ಮೊಹಮ್ಮದ್ ಸುಜೀತಾ ಎಂ.ಎಸ್. (ಐಪಿಎಸ್) ಅವರನ್ನು ನ್ಯೂಸ್ಚೆಕರ್ ಸಂಪರ್ಕಿಸಿದ್ದು, ಅವರು ಪ್ರತಿಕ್ರಿಯಿಸಿ, “ಆರೋಪಿಗಳ ಕೋಮು ಗುರುತಿಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳನ್ನು ವ್ಯಾಪಕವಾಗಿ ಹರಡಲಾಗುತ್ತಿದೆ. ಚಾಲಕ ಹಾಸನದ ಹೊಳೆನರಸೀಪುರ ತಾಲ್ಲೂಕಿನ ಕಟ್ಟೆಬೈಲಗುಳಿ ಗ್ರಾಮದ ಭುನೇಶ್ ಎಂಬುದು ಸ್ಪಷ್ಟವಾಗಿ ದೃಢಪಟ್ಟಿದೆ. ಆತ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದು. ಎಫ್ಐಆರ್ ದಾಖಲಿಸಲಾಗಿದೆ” ಎಂದು ಹೇಳಿದರು.
ಈ ಸತ್ಯಶೋಧನೆಯ ಪ್ರಕಾರ ಹಾಸನ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಎರಗಿದ ಲಾರಿ; ಚಾಲಕ ಮುಸ್ಲಿಂ ಎಂಬ ಹೇಳಿಕೆ ನಿಜವಲ್ಲ ಎಂದು ಕಂಡುಬಂದಿದೆ.
Also Read: ಮೈಸೂರು ಬಿ.ಎಂ. ಹ್ಯಾಬಿಟೇಟ್ ಮಾಲ್ ನಲ್ಲಿ ಎಸ್ಕಲೇಟರ್ ಕುಸಿತ ಎಂದ ವೀಡಿಯೋ ನಿಜವಲ್ಲ!
Our Sources
Report by Vijayakarnataka, Dated: September 13, 2025
Report by Varthabharathi, Dated: September 13, 2025
X post by IANS, Dated: September 13, 2025
Conversation with Mohammed Sujeetha M S, IPS, District Superintendent of Police Hassan