Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಗಣೇಶ ಮೂರ್ತಿ ಮೆರವಣಿಗೆ ವೇಳೆ ಮುಸ್ಲಿಮರು ಕಲ್ಲುತೂರಿದ್ದಾರೆ
ಕರ್ನಾಟಕದ ರಾಯಚೂರಿನಲ್ಲಿ ನಡೆದ ಈ ಘಟನೆಗೆ ಯಾವುದೇ ಕೋಮು ಆಯಾಮವಿಲ್ಲ. ಇದು ಯುವಕರ ತಂಡಗಳ ನಡುವಿನ ಘರ್ಷಣೆ ಎಂದು ತಿಳಿದುಬಂದಿದೆ
ಗಣೇಶ ಮೆರವಣಿಗೆ ವೇಳೆ ಮುಸ್ಲಿಮರು ಕಲ್ಲುತೂರಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದು ವೈರಲ್ ಆಗುತ್ತಿದೆ.
ವಿವಿಧ ಕೋಮು ವಿರೋಧಿ ಹೇಳಿಕೆಗಳೊಂದಿಗೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದ್ದು, ಅವುಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಈ ವೈರಲ್ ವೀಡಿಯೋ 45 ಸೆಕೆಂಡುಗಳಿದ್ದು, ಇದರಲ್ಲಿ ಜನರು ಗಣೇಶ ಮೆರವಣಿಗೆ ರಸ್ತೆಯಲ್ಲಿ ಸಾಗುತ್ತಿರುವ ವೇಳೆ ಒಂದು ಕಟ್ಟಡದ ಮೇಲೆ ಇದ್ದ ಇಬ್ಬರು ಯುವಕರು ಆ ಮೆರವಣಿಗೆ ಮೇಲೆ ಕಲ್ಲು ಎಸೆಯುವ ದೃಶ್ಯ ಕಾಣುತ್ತದೆ.

ಈ ವೈರಲ್ ವೀಡಿಯೋ ಬಗ್ಗೆ ನ್ಯೂಸ್ಚೆಕರ್ ತನಿಖೆ ನಡೆಸಿದ್ದು, ಇದು ಕರ್ನಾಟಕದ ರಾಯಚೂರಿನಲ್ಲಿ ನಡೆದ ಘಟನೆ ಮತ್ತು ಇದು ಯುವಕರ ನಡುವಿನ ಗಲಾಟೆಯ ಸಂದರ್ಭದ್ದಾಗಿದೆ, ಘಟನೆಗೆ ಯಾವುದೇ ಕೋಮು ಆಯಾಮವಿಲ್ಲ ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ.
ಈ ವೇಳೆ ಸೆ.6, 2025ರ ಕನ್ನಡಪ್ರಭ ವರದಿ ಕಂಡುಬಂದಿದೆ. ಈ ವರದಿಯಲ್ಲಿ “ರಾಯಚೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಕಲ್ಲು ತೂರಾಟ ನಡೆದಿದ್ದು, ಈ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ರಾಯಚೂರಿನ ಗಂಗಾ ನಿವಾಸ ರಸ್ತೆಯಲ್ಲಿ ಈ ಹಿಂದೆ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ನಡೆಯುವ ವೇಳೆ ಇಬ್ಬರು ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದರು. ಗಣೇಶ ಮೂರ್ತಿ ವಿಸರ್ಜನೆಗಾಗಿ ಮೆರವಣಿಗೆ ಬರುತ್ತಿರುವ ವೇಳೆ ಸಮೀಪದ ಅಂಗಡಿ ಮೇಲೆ ಹತ್ತಿದ್ದ ಇಬ್ಬರು ದುಷ್ಕರ್ಮಿಗಳು ನೋಡ ನೋಡುತ್ತಲೇ ಕಲ್ಲು ತೆಗೆದುಕೊಂಡು ಮೆರವಣಿಗೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದರು. ಈ ವೇಳೆ ಮಂಗಳವಾರ ಪೇಟೆ ನಿವಾಸಿಗಳಾದ ವಿನಯ್ ಮತ್ತು ಗಣೇಶ್ ಎಂಬುವವರಿಗೆ ಗಾಯಗಳಾಗಿದ್ದವು. ಗಾಯಾಳುಗಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.” ಎಂದಿದೆ. ಇದರಲ್ಲಿ ವೈರಲ್ ವೀಡಿಯೋ ಹೋಲುವ ಕ್ಲಿಪ್ಪಿಂಗ್ ಅನ್ನು ನೋಡಿದ್ದೇವೆ.

ಇದನ್ನು ಸಾಕ್ಷ್ಯವಾಗಿರಿಸಿ ನಾವು ಇನ್ನಷ್ಟು ತನಿಖೆ ನಡೆಸಿದ್ದೇವೆ.
ಸೆಪ್ಟೆಂಬರ್ 6, 2025ರ ಪಬ್ಲಿಕ್ ಟಿವಿ ವರದಿಯಲ್ಲಿ “ಹಳೆಯ ದ್ವೇಷ ಹಿನ್ನೆಲೆ ಗಣೇಶ ಮೆರವಣಿಗೆ ವೇಳೆ ಇಬ್ಬರು ಯುವಕರು ಕಲ್ಲು ತೂರಾಟ ನಡೆಸಿ ಪುಂಡಾಟ ಮೆರೆದಿರುವ ಘಟನೆ ರಾಯಚೂರು ನಗರದ ಗಂಗಾನಿವಾಸ ರಸ್ತೆಯಲ್ಲಿ ನಡೆದಿದೆ. ಪ್ರಶಾಂತ್ ಹಾಗೂ ಪ್ರವೀಣ್ ಮಳಿಗೆಯೊಂದರ ಟೆರೆಸ್ ಮೇಲೆ ನಿಂತು ಕಲ್ಲು ತೂರಿದ್ದಾರೆ. ಗಂಗಾನಿವಾಸ ಮಾರ್ಗ ಮೂಲಕ ಮೆರವಣಿಗೆ ಬಂದಿದ್ದಕ್ಕೆ ಯುವಕರು ವಿನಯ್ ಕುಮಾರ್ ಹಾಗೂ ಗಣೇಶ್ ಇಬ್ಬರನ್ನ ಗುರಿಯಾಗಿಸಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ.” ಎಂದಿದೆ.

ಈ ವರದಿಗಳು ಘಟನೆ ರಾಯಚೂರಿನಲ್ಲಿ ನಡೆದಿವೆ ಎಂದು ಹೇಳುತ್ತವೆ. ಇದೇ ವೇಳೆ ನಾವು ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಒಂದು ಕಟ್ಟಡದ ಮೇಲೆ “ಶ್ರೀ ಸಾಯಿ ಟ್ಯಾಟೂ ಸ್ಟುಡಿಯೋ” ಎಂದು ಬರೆದಿರುವುದು ಕಂಡುಬಂದಿದೆ.

ಈ ಸ್ಥಳವನ್ನು ಗೂಗಲ್ ಮ್ಯಾಪ್ಸ್ನಲ್ಲಿ ಹುಡುಕಿದಾಗ ಅದು ರಾಯಚೂರಿನ ಗಂಗಾ ನಿವಾಸ ರಸ್ತೆ ಎಂಬುದು ಖಚಿತಗೊಂಡಿದೆ.

ಈ ಸಾಕ್ಷ್ಯದನ್ವಯ ನಾವು ಸಾಯಿ ಟ್ಯಾಟೂ ಸ್ಟುಡಿಯೋವನ್ನು ಸಂಪರ್ಕಿಸಿದಾಗ ಅವರು ಈ ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು, ಆದರೆ ವೈರಲ್ ವೀಡಿಯೋ ಅವರ ಕಟ್ಟಡದ್ದೇ ಎನ್ನುವುದನ್ನು ಖಚಿತಪಡಿಸಿದ್ದಾರೆ.
ತನಿಖೆಯ ವೇಳೆ ಸ್ಥಳೀಯ ವರದಿಗಾರರು ನಮಗೆ ಸೆಪ್ಟೆಂಬರ್ 1, 2025ರಂದು ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ನ್ನು ಕಳಿಸಿದ್ದಾರೆ. ಅದರಲ್ಲಿ ಆರೋಪಿಗಳ ಹೆಸರು ಪ್ರಶಾಂತ್, ಪವನ್ ಮತ್ತು ಅನಿಲ್ ಎಂಬ ಉಲ್ಲೇಖವಿದೆ.

ಎಫ್ಐಆರ್ ಪ್ರಕಾರ, ಈ ಘಟನೆ ಸೆಪ್ಟೆಂಬರ್ 1, 2025ರ ಬೆಳಗ್ಗೆ ರಾಯಚೂರಿನ ಗಂಗಾ ನಿವಾಸ್ ರಸ್ತೆಯಲ್ಲಿ ನಡೆದಿತ್ತು. ಅಲ್ಲಿ ಒಂದು ತಂಡ ಗಣೇಶ ಪ್ರತಿಮೆಯನ್ನು ವಿಸರ್ಜನೆಗೆ ಕೊಂಡೊಯ್ಯುತ್ತಿದ್ದಾಗ, ಇನ್ನೊಂದು ತಂಡದ ಪ್ರಶಾಂತ್, ಪವನ್ ಮತ್ತು ಅನಿಲ್ ಇದಕ್ಕೆ ವಿರೋಧಿಸಿದರು. ಈ ಸಮಯದಲ್ಲಿ ಪ್ರಶಾಂತ್ ಮತ್ತು ಪವನ್ ಹತ್ತಿರದ ಅಂಗಡಿಯ ಮೇಲ್ಚಾವಣಿಗೆ ಏರಿ ಕಲ್ಲು ಎಸೆಯಲು ಆರಂಭಿಸಿದರು. ಇದರಿಂದ ಇಬ್ಬರು ಗಾಯಗೊಂಡರು. ಅವರನ್ನು ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. FIRನಲ್ಲಿ ಉಲ್ಲೇಖಗೊಂಡ ಹೆಸರುಗಳ ಪ್ರಕಾರ, ಎರಡೂ ತಂಡಗಳಲ್ಲಿದ್ದವರು ಹಿಂದೂಗಳೇ ಆಗಿದ್ದಾರೆ. ಆದರೆ ಗಾಯಗೊಂಡವರು ಅಪ್ರಾಪ್ತ ವಯಸ್ಕನಾದ್ದರಿಂದ ಇಲ್ಲಿ ಆತನ ಹೆಸರನ್ನು ಪ್ರಕಟಿಸುತ್ತಿಲ್ಲ.

ಹೆಚ್ಚಿನ ಮಾಹಿತಿಗಾಗಿ ನಾವು ರಾಯಚೂರು ಸದರ್ ಬಜಾರ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದೇವೆ. ಅವರು ಕೂಡ ವೈರಲ್ ಹೇಳಿಕೆಯನ್ನು ತಳ್ಳಿ ಹಾಕಿ, ಗಂಗಾ ನಿವಾಸ ರಸ್ತೆಯಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕಲ್ಲೆಸೆತದ ಘಟನೆ ಯುವಕರ ನಡುವಿನ ವಿಚಾರವಾಗಿದ್ದು, ಎರಡೂ ತಂಡಗಳಲ್ಲಿದ್ದವರು ಹಿಂದೂಗಳು ಎಂದು ತಿಳಿಸಿದ್ದಾರೆ.
ಆದ್ದರಿಂದ ನಮ್ಮ ತನಿಖೆಯಲ್ಲಿ ಲಭಿಸಿದ ಸಾಕ್ಷ್ಯಗಳ ಪ್ರಕಾರ, ಮುಸ್ಲಿಮರು ಗಣೇಶ ವಿಸರ್ಜನೆ ಸಮಯದಲ್ಲಿ ಕಲ್ಲು ಎಸೆದಿದ್ದಾರೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗಿರುವ ಈ ವೀಡಿಯೋ ವಾಸ್ತವದಲ್ಲಿ ಕರ್ನಾಟಕದ ರಾಯಚೂರಿನದ್ದೇ ಆಗಿದೆ ಎಂದು ಗೊತ್ತಾಗಿದೆ. ಸೆಪ್ಟೆಂಬರ್ 1, 2025 ರಂದು ನಡೆದ ಈ ಘಟನೆಯಲ್ಲಿ ಭಾಗಿಯಾದ ಯುವಕರು ಒಂದೇ ಸಮುದಾಯಕ್ಕೆ ಸೇರಿದವರು ಎನ್ನುವುದು ಸ್ಪಷ್ಟವಾಗಿದೆ.
Also Read: ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಚೀನಾ ನಿಯೋಗದ ಭೇಟಿ ವೇಳೆ ಸೋನಿಯಾ ಗಾಂಧಿ ಅವರನ್ನು ಕಡೆಗಣಿಸಿದ್ದರೇ?
Our Sources
Report by Kannadprabha, Dated: September 6, 2025
Report by Public Tv, Dated: September 6, 2025
Google Street View
Telephonic Conversation with Sadar Bazar Police Station
FIR copy from karnataka police website
Tanujit Das
November 17, 2025
Ishwarachandra B G
October 29, 2025
Ishwarachandra B G
September 13, 2025