Authors
Claim
ಮಹಾರಾಷ್ಟ್ರದ ಗ್ರಾಮದಲ್ಲಿ ಕಾಂಗ್ರೆಸ್ ಗೆ ‘ಶೂನ್ಯ ಮತ’ ವಿರುದ್ಧ ಮತ ಹಾಕಿದ ಗ್ರಾಮಸ್ಥರಿಂದಲೇ ಪ್ರತಿಭಟನೆ
Fact
ಮಹಾರಾಷ್ಟ್ರದ ಗ್ರಾಮದಲ್ಲಿ ಕಾಂಗ್ರೆಸ್ ಗೆ ‘ಶೂನ್ಯ ಮತ’ ವಿರುದ್ಧ ಮತ ಹಾಕಿದ ಗ್ರಾಮಸ್ಥರಿಂದಲೇ ಪ್ರತಿಭಟನೆ ಎನ್ನುವುದು ತಪ್ಪಾಗಿದೆ. ಮಹಾರಾಷ್ಟ್ರದ ಅವಧಾನ್ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುನಾಲ್ ಬಾಬಾ ಅವರಿಗೆ 1057 ಮತಗಳು ಬಿದ್ದಿವೆ
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ, ಇವಿಎಂ ತಿರುಚಲಾಗಿದೆ ಎಂದು ಆರೋಪಿಸಿ ಅನೇಕ ಕ್ಷೇತ್ರಗಳಲ್ಲಿ ಜನರು ಬೀದಿಗಿಳಿದಿದ್ದಾರೆ. ಏತನ್ಮಧ್ಯೆ, ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ, ಕಾಂಗ್ರೆಸ್‌ಗೆ ‘ಶೂನ್ಯ ಮತ’ ಎನ್ನುವುದರ ವಿರುದ್ಧ ಮತ ಹಾಕಿದ ಗ್ರಾಮಸ್ಥರು ಫಲಿತಾಂಶದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಹೇಳಿಕೆಯಲ್ಲಿ “ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ, ಕಾಂಗ್ರೆಸ್‌ಗೆ ಮತ ಹಾಕಿದ ಗ್ರಾಮಸ್ಥರು ಫಲಿತಾಂಶದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ, ಏಕೆಂದರೆ ಫಲಿತಾಂಶವು ಕಾಂಗ್ರೆಸ್‌ಗೆ 0 ಮತಗಳು ತೋರಿಸಿದೆ ನಿಜವಾಗಿಯೂ ಮುಕ್ತ,ನ್ಯಾಯಸಮ್ಮತ ಚುನಾವಣೆ? ಕಾಂಗ್ರೆಸ್‌ಗೆ ಮತ ಹಾಕಿದ ಜನರು ಫಲಿತಾಂಶವನ್ನು ಪ್ರಶ್ನಿಸುತ್ತಿದ್ದಾರೆ” ಎಂದಿದೆ.
Fact Check/Verification
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ನವೆಂಬರ್ 24, 2024ರಂದು ಡಾ.ಸಂಗಮ್ ಗೋಕುಲ್ ಸಿಂಗ್ ಪಾಟೀಲ್ ಎಂಬ ಎಕ್ಸ್ ಬಳಕೆದಾರರು ಇದೇ ರೀತಿಯ ಹೇಳಿಕೆಯನ್ನು ಹಂಚಿಕೊಂಡು ವೀಡಿಯೋ ಬಳಸಿರುವುದು ಕಂಡುಬಂದಿದೆ. ಇದರಲ್ಲಿನ ಹೇಳಿಕೆಯಲ್ಲಿ “ಅವಧ್ ಗ್ರಾಮದಲ್ಲಿಕುನಾಲ್ ಬಾಬಾ ಅವರಿಗೆ 0 ಮತಗಳು. ಯಾವ ಹಳ್ಳಿಯಲ್ಲಿ ಶೇ 70ರಷ್ಟು ಕಟ್ಟಾ ಕಾರ್‍ಯಕರ್ತರಿದ್ದು ಇದರ ವಿರುದ್ಧ ಪ್ರತಿಭಟಿಸುತ್ತಿದ್ದರೆ. ಖಂಡಿತವಾಗಿ ಇದೊಂದು ಹಗರಣ” ಎಂದಿದೆ.
ಈ ಹೇಳಿಕೆಯಲ್ಲಿ ಅವಧಾನ್ ಗ್ರಾಮ ಮತ್ತು ಕುನಾಲ್ ಬಾಬಾ ಅವರನ್ನು ಉಲ್ಲೇಖಿಸಲಾಗಿದೆ. ಈ ಮಧ್ಯೆ, ಅದು ಯಾವ ಕ್ಷೇತ್ರ ಮತ್ತು ಯಾವ ಅಭ್ಯರ್ಥಿಯ ಕುರಿತಾಗಿ ಹೇಳಿದ್ದಾರೆ ಎಂಬುದನ್ನು ನಾವು ಮೊದಲು ಅನ್ವೇಷಿಸಿದ್ದೇವೆ. ಗೂಗಲ್ ನಲ್ಲಿ ಹುಡುಕಾಟ ನಡೆಸಿದ ಬಳಿಕ ಅವಧಾನ್ ಗ್ರಾಮವು ಮಹಾರಾಷ್ಟ್ರದ ಧುಲೆ ಜಿಲ್ಲೆಯ ಧುಲೆ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿದುಬಂದಿದೆ. ಏತನ್ಮಧ್ಯೆ, ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಆಯಾ ಕ್ಷೇತ್ರಗಳ ಫಲಿತಾಂಶಗಳನ್ನು ನಾವು ನೋಡಿದ್ದೇವೆ.
ಧುಲೆ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯ ರಾಘವೇಂದ್ರ ಮನೋಹರ್ ಪಾಟೀಲ್ ಗೆಲುವು ಸಾಧಿಸಿದರೆ, ಕಾಂಗ್ರೆಸ್ ನ ಕುನಾಲ್ ಬಾಬಾ ರೋಹಿದಾಸ್ ಪಾಟೀಲ್ ಎರಡನೇ ಸ್ಥಾನದಲ್ಲಿದ್ದಾರೆ. ಇಬ್ಬರ ನಡುವಿನ ಮತಗಳ ಅಂತರ 66,320 ಆಗಿದೆ. ವಿಜೇತ ರಾಘವೇಂದ್ರ ಪಾಟೀಲ್ 170398 ಮತಗಳನ್ನು ಪಡೆದರೆ, ಪರಾಜಿತ ಕುನಾಲ್ ಬಾಬಾ 104078 ಮತಗಳನ್ನು ಪಡೆದರು. ಕುನಾಲ್ ಬಾಬಾ ಅದೇ ಕ್ಷೇತ್ರದವರು ಎಂದು ಸ್ಪಷ್ಟವಾದ ಕೂಡಲೇ ನಾವು ಮತ್ತಷ್ಟು ಶೋಧ ನಡೆಸಿದ್ದೇವೆ.
ಹೆಚ್ಚಿನ ಮಾಹಿತಿಗಾಗಿ ಕೀವರ್ಡ್ ಸರ್ಚ್ ಮಾಡಿದ್ದು, ನವೆಂಬರ್ 25, 2024 ರಂದು ಮುಂಬೈ ತಕ್‌ನ ಎಕ್ಸ್ ಪೋಸ್ಟ್ ಲಭ್ಯವಾಗಿದೆ. ಇದರಲ್ಲಿ ಕುನಾಲ್ ಬಾಬಾ ಪಾಟೀಲ್ ಅವಧಾನ್ ಗ್ರಾಮದಲ್ಲಿ 1057 ಮತಗಳನ್ನು ಗಳಿಸಿದ್ದಾರೆ ಮತ್ತು ಹೇಳಿಕೆಗಳಲ್ಲಿ ಹೇಳಿರುವಂತೆ ಸೊನ್ನೆ ಮತಗಳಲ್ಲ ಎಂದು ಹೇಳಲಾಗಿದೆ.
ಬಳಿಕ ನಾವು ಆ ಚಾನೆಲ್ ನ ಸ್ಥಳೀಯ ಪತ್ರಕರ್ತ ವಿಶಾಲ್ ಠಾಕೂರ್ ಅವರನ್ನು ಸಂಪರ್ಕಿಸಿದೆವು. ಅವರು “ಭಿನ್ನಾಭಿಪ್ರಾಯ ವ್ಯಕ್ತಪಡಿಸಲಾಗಿದೆ ಎಂಬುದು ನಿಜ. ಆದರೆ, ಅವಧಾನ್ ಗ್ರಾಮದಿಂದ ಕುನಾಲ್ ಬಾಬಾ ಪಾಟೀಲ್ 1057 ಮತಗಳನ್ನು ಪಡೆದಿದ್ದಾರೆ. ಅದು ಶೂನ್ಯವಲ್ಲ” ಎಂದು ಹೇಳಿದ್ದಾರೆ.
ಬಳಿಕ ನಾವು ಕಾಂಗ್ರೆಸ್ ಅಭ್ಯರ್ಥಿ ಕುನಾಲ್ ಬಾಬಾ ಪಾಟೀಲ್ ಅವರ ಕಚೇರಿಯನ್ನು ಸಂಪರ್ಕಿಸಿದ್ದೇವೆ. ಮತ ಎಣಿಕೆಯ ಸಮಯದಲ್ಲಿ ಚುನಾವಣಾ ಆಯೋಗವು ಒದಗಿಸಿದ ಗ್ರಾಮ ಮತ್ತು ಬೂತ್ ವಾರು ಮತದಾನ ದತ್ತಾಂಶದ ಕೋಷ್ಟಕವನ್ನು ಅವರಿಂದ ಪಡೆದಿದ್ದು, ಅವಧಾನ್ ಗ್ರಾಮದ ಬೂತ್ ಸಂಖ್ಯೆ 247, 248, 249 ಮತ್ತು 250 ರಲ್ಲಿ ಕುನಾಲ್ ಬಾಬಾ ಪಾಟೀಲ್ ಪರ ಚಲಾಯಿಸಲಾದ ಮತಗಳ ಮೊತ್ತ 1057 ಎಂದು ನಾವು ಕಂಡುಕೊಂಡಿದ್ದೇವೆ. ಮತದಾನ ಅಂಕಿ ಅಂಶಗಳ ಕೋಷ್ಟಕವನ್ನು ಈ ಕೆಳಗೆ ನೋಡಬಹುದು.
ಏತನ್ಮಧ್ಯೆ, ಈ ಪ್ರಕರಣಕ್ಕೆ ಸಂಬಂಧಿಸಿ ಚುನಾವಣಾ ಆಯೋಗ ಅಥವಾ ಧುಲೆ ಜಿಲ್ಲಾಡಳಿತದಿಂದ ಯಾವುದೇ ಪ್ರತಿಕ್ರಿಯೆ ಬಂದಿದೆಯೇ? ಎಂಬುದನ್ನು ನಾವು ಹುಡುಕಿದ್ದೇವೆ. ಇದರ ಬಗ್ಗೆ ನವೆಂಬರ್ 25ರಂದು ಧುಲೆ ಜಿಲ್ಲಾ ಮಾಹಿತಿ ಕಚೇರಿಯಿಂದ ಎಕ್ಸ್ ಪೋಸ್ಟ್ ಮಾಡಿರುವುದನ್ನು ಗಮನಿದ್ದೇವೆ. ಇದರಲ್ಲಿ, ಅವಧಾನ್ ಮತಗಟ್ಟೆ ದತ್ತಾಂಶದ ಬಗ್ಗೆ ತಪ್ಪು ಮಾಹಿತಿ ಹರಡಲಾಗುತ್ತಿದ್ದು, ಈ ವದಂತಿ ತಪ್ಪು ಮತ್ತು ಕುನಾಲ್ ಬಾಬಾ ಪಾಟೀಲ್ ಅವರು 1057 ಮತಗಳನ್ನು ಪಡೆದಿರುವುದಾಗಿ ಹೇಳಲಾಗಿದೆ.
Conclusion
ಸತ್ಯಶೋಧನೆಯ ಪ್ರಕಾರ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ, ಕಾಂಗ್ರೆಸ್ ಸೊನ್ನೆ ಮತಗಳು ಬಿದ್ದಿದ್ದರಿಂದ ಮತ ಹಾಕಿದ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ ಎನ್ನುವುದು ತಪ್ಪಾಗಿದೆ.
Also Read: ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62ಕ್ಕೆ ಹೆಚ್ಚಳ ಮಾಡಲು ಹೊರಟಿದೆ ಎನ್ನುವುದು ನಿಜವೇ?
Result: Partly False
Our Sources
X Post By Mumbai Tak, Dated: November 25, 2024
Conversation with Local Journalist Vishal Thakur
Conversation with The Office Of Kunalbaba Patil
X Post By District Information Office, Dhule, Dated: November 25, 2024
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಮರಾಠಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.