Authors
Claim
ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಮಲ್ಲಿಕಾರ್ಜುನ ಖರ್ಗೆಯವರನ್ನು ಕೊಠಡಿ ಹೊರಗೆ ನಿಲ್ಲಿಸಿದರು
Fact
ವೈರಲ್ ವೀಡಿಯೋ ಕ್ಲಿಪ್ ಮಾಡಿದ್ದಾಗಿದೆ. ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸುವಾಗ ಕಾಂಗ್ರೆಸ್ ಅಧ್ಯಕ್ಷರು ಅವರ ಪಕ್ಕದಲ್ಲಿಯೇ ಕುಳಿತಿರುವುದನ್ನು ಫೋಟೋಗಳು ಮತ್ತು ವೀಡಿಯೊಗಳು ತೋರಿಸಿವೆ.
ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೊಠಡಿ ಹೊರಗೆ ಕಾಯುತ್ತಿರುವ ದೃಶ್ಯವಿರುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
48 ಸೆಕೆಂಡುಗಳ ವೀಡಿಯೊ ಕ್ಲಿಪ್ ಅಕ್ಟೋಬರ್ 23, 2024ರಂದು ವೈರಲ್ ಆಗಿತ್ತು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಲೋಕಸಭೆ ಉಪಚುನಾವಣೆಗೆ ವಯನಾಡಿಂದ ತಮ್ಮ ಮೊದಲ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆ ವೇಳೆ ತೆಗೆದ ವೀಡಿಯೋ ಇದು ಎಂದು ಹೇಳಲಾಗಿದೆ.
ಈ ವೀಡಿಯೋವನ್ನು ಬಿಜೆಪಿಯ ಅನೇಕ ಕಾರ್ಯಕರ್ತರು ಮತ್ತು ಅವರ ಅಧಿಕೃತ ಎಕ್ಸ್ ಖಾತೆ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೇರಿದಂತೆ ಪಕ್ಷದ ಅನೇಕ ಸಾಮಾಜಿಕ ಮಾಧ್ಯಮ ಖಾತೆಗಳು ಹಂಚಿಕೊಂಡಿವೆ. ಕರ್ನಾಟಕದಲ್ಲಿ ಎನ್‌ಡಿಎ ಮೈತ್ರಿಕೂಟದ ಪಕ್ಷ, ಜನತಾದಳ ಸೆಕ್ಯುಲರ್ ಎಕ್ಸ್ ಹ್ಯಾಂಡಲ್ ಕೂಡ ಈ ಕುರಿತು ಪೋಸ್ಟ್ ಮಾಡಿದೆ. ಇದೇ ರೀತಿಯ ಪೋಸ್ಟ್ ಅನ್ನು ಇಲ್ಲಿ ನೋಡಬಹುದು.
“ಕಾಂಗ್ರೆಸ್ ಪಕ್ಷದಲ್ಲಿ ದಲಿತರಿಗೆ ಯಾವ ರೀತಿ ಅವಮಾನ ಮಾಡಲಾಗುತ್ತಿದೆ, ಹೇಗೆ ದಲಿತ ನಾಯಕರನ್ನು ನಡೆಸಿಕೊಳ್ಳಲಾಗುತ್ತಿದೆ ಎನ್ನುವುದಕ್ಕೆ ಈ ಘಟನೆಯೇ ಪ್ರತ್ಯಕ್ಷ
ಸಾಕ್ಷಿ! ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸುವ ವೇಳೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಬಾಗಿಲ ಹೊರಗಡೆ ನಿಲ್ಲಿಸಿರುವುದು ನಾಚಿಕೆಗೇಡು. @INCIndia ಪಕ್ಷದ ರಾಷ್ರೀಯ ಅಧ್ಯಕ್ಷರಾದ ಕನ್ನಡಿಗ @kharge ಅವರಿಗೆ, ಸೋನಿಯಾ ಗಾಂಧಿ ಕುಟುಂಬದವರು ಮಾಡಿರುವ ಅಪಮಾನ ಸಹಿಸಲು ಸಾಧ್ಯವಿಲ್ಲ. ಹೆಸರಿಗಷ್ಟೆ ಅಧ್ಯಕ್ಷರನ್ನಾಗಿ ಮಾಡಿ ಅವರನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡಿದ್ದಾರೆ. ದಲಿತರ ವೋಟು ಪಡೆದು ಬಲಿತಿರುವ ಕಾಂಗ್ರೆಸ್ ಪಕ್ಷ, ಅವರನ್ನು ತುಳಿಯುತ್ತಲೇ ಬೆಳೆಯುತ್ತ ಬರುತ್ತಿದೆ !” ಎಂದು ಬರೆಯಲಾಗಿದೆ.
ಟೈಮ್ಸ್ ನೌ ಮತ್ತು ನ್ಯೂಸ್ 18 ನಂತಹ ಪ್ರಮುಖ ಮಾಧ್ಯಮಗಳು ಸಹ ಈ ವೀಡಿಯೋವನ್ನು ವರದಿ ಮಾಡಿದ್ದು, ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸುವಾಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು “ತೆಗೆದುಹಾಕಲಾಗಿದೆ” ಎಂದು ಬಿಜೆಪಿ ಹೇಳಿದ್ದರಿಂದ ವಿವಾದ ಭುಗಿಲೆದ್ದಿದೆ ಎಂದು ಹೇಳಿದೆ.
Fact Check/Verification
ವೈರಲ್ ಕ್ಲಿಪ್ ನಲ್ಲಿ ಖರ್ಗೆ ಮತ್ತು ಇನ್ನೊಬ್ಬ ವ್ಯಕ್ತಿ ಬಾಗಿಲ ಬಳಿ ನಿಂತಿರುವುದು ಕಾಣಿಸುತ್ತದೆ. ಆದರೆ ಗಾಂಧಿ ಕುಟುಂಬದ ಯಾರನ್ನೂ ಕಾಣುತ್ತಿಲ್ಲ. ಇದರಿಂದಾಗಿ ಕ್ಲಿಪ್ ಮಾಡಿರುವ ಈ ವೀಡಿಯೋವನ್ನು ಸಂದರ್ಭಕ್ಕೆ ಅನುಗುಣವಾಗಿ ಹಂಚಿಕೊಳ್ಳಲಾಗುತ್ತಿದೆಯೇ ಎಂಬ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ.
ಅನಂತರ ನಾವು “ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ” ವಿಚಾರದಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ, ಇದರಿಂದಾಗಿ ವಯನಾಡ್ ಉಪಚುನಾವಣೆಗೆ ಪ್ರಿಯಾಂಕಾ ಗಾಂಧಿ ಅವರು ನಾಮಪತ್ರ ಸಲ್ಲಿಸಿದ ಬಗ್ಗೆ ಅನೇಕ ವರದಿಗಳು ಲಭ್ಯವಾಗಿವೆ.
ಕಲ್ಪೆಟ್ಟಾದಲ್ಲಿ ಮೆಗಾ ರೋಡ್ ಶೋ ನಡೆಸಿದ ನಂತರ ಪ್ರಿಯಾಂಕಾ ಅವರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿ ಡಾ.ಮೇಘಶ್ರೀ ಅವರಿಗೆ ನಾಮಪತ್ರ ಸಲ್ಲಿಸಿದರು. ತಾಯಿ ಸೋನಿಯಾ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಸಹೋದರ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದ್ದರು. ಪ್ರಿಯಾಂಕಾ ಅವರ ಪತಿ ರಾಬರ್ಟ್ ವಾದ್ರಾ ಮತ್ತು ಮಗ ರೆಹಾನ್ ಅವರು ಜಿಲ್ಲಾಧಿಕಾರಿ ಕೊಠಡಿಯ ಹೊರಗೆ ಇದ್ದರು” ಎಂದು ಅಕ್ಟೋಬರ್ 23, 2024 ರ ಇಂಡಿಯನ್ ಎಕ್ಸ್ ಪ್ರೆಸ್ ವರದಿಯಲ್ಲಿದೆ.
ಪ್ರಿಯಾಂಕಾ ಅವರ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ನಾಯಕ ಖರ್ಗೆ ಅವರಿಗೆ ಅಗೌರವ ತೋರಿದೆ ಎಂದು ಆರೋಪಿಸಿ ಮತ್ತು ದಲಿತರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಪ್ರಶ್ನಿಸಿ ಬಿಜೆಪಿ ಕಾಂಗ್ರೆಸನ್ನು ಟೀಕಿಸಿತ್ತು ಎಂದು ಅಕ್ಟೋಬರ್ 24. 2024ರಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿತ್ತು. ವರದಿಯ ಪ್ರಕಾರ, ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ಚಿತ್ರಗಳಲ್ಲಿ ಖರ್ಗೆ ಅವರು ಹಿರಿಯ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಕುಳಿತಿರುವುದನ್ನು ತೋರಿಸಲಾಗಿದೆ. ಅಕ್ಟೋಬರ್ 24, 2024 ರ ಡೆಕ್ಕನ್ ಹೆರಾಲ್ಡ್ ವರದಿಯು ನಾಮಪತ್ರ ಸಲ್ಲಿಕೆಯ ಫೋಟೋಗಳನ್ನು ಪ್ರಕಟಿಸಿದೆ. ಇದರಲ್ಲಿ ಕಾಂಗ್ರೆಸ್ ಅಧ್ಯಕ್ಷರು ಪ್ರಿಯಾಂಕಾ ಗಾಂಧಿ ಅವರ ಪಕ್ಕದಲ್ಲಿ ಕುಳಿತಿರುವುದನ್ನು ಕಾಣಬಹುದು.
ಅಕ್ಟೋಬರ್ 23, 2024 ರಂದು ಕಾಂಗ್ರೆಸ್ ಅಧಿಕೃತ ಎಕ್ಸ್ ಖಾತೆಯು ಪ್ರಿಯಾಂಕಾ ಗಾಂಧಿ ಅವರು ಕಲ್ಪೆಟ್ಟಾದ ವಯನಾಡ್ ಸಂಸದೀಯ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವ ವೀಡಿಯೋವನ್ನು ಹಂಚಿಕೊಂಡಿದೆ, ಅಲ್ಲಿ ಖರ್ಗೆ, ಕಾಂಗ್ರೆಸ್ ಸಂಸದೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನುನೋಡಬಹುದು. ಪಕ್ಷದ ಫೇಸ್ಬುಕ್ ಖಾತೆ ಕೂಡ ಈ ವೀಡಿಯೋವನ್ನು ಅಪ್ಲೋಡ್ ಮಾಡಿದೆ.
ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ತಮ್ಮ ಎಕ್ಸ್ ಖಾತೆಗಳಲ್ಲಿ ಈ ಸಂದರ್ಭದ ಚಿತ್ರಗಳನ್ನು ಹಂಚಿಕೊಂಡಿದ್ದು, ನಾಮಪತ್ರ ಸಲ್ಲಿಸುವ ಸಮಯದಲ್ಲಿ ಕಾಂಗ್ರೆಸ್ ಅಧ್ಯಕ್ಷರನ್ನು ಕೊಠಡಿಯಿಂದ ಹೊರಹಾಕಲಾಗಿದೆ ಎಂಬ ವೈರಲ್ ಹೇಳಿಕೆಗೆ ಮತ್ತಷ್ಟು ವಿರುದ್ಧವಾಗಿದೆ.
ಬಿಜೆಪಿ ವೈರಲ್ ವೀಡಿಯೋವನ್ನು ಪೋಸ್ಟ್ ಮಾಡಿರುವುದನ್ನು ಕಾಂಗ್ರೆಸ್, ಇದು ಬಿಜೆಪಿಯ ನಕಲಿ ಸುದ್ದಿ ತಂತ್ರಗಳು ಎಂದು ಎಕ್ಸ್ ನಲ್ಲಿ ಕರೆದಿದೆ. ಈ ಬಗ್ಗೆ
ಅಕ್ಟೋಬರ್ 24, 2024 ರಂದು ಪೋಸ್ಟ್ ಮಾಡಿದೆ.
ಪ್ರಿಯಾಂಕಾ ಅವರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಏನಾಯಿತು ಎಂಬುದನ್ನು ವಿವರಿಸುವ ಅಕ್ಟೋಬರ್ 24, 2024 ರ ಇಂಡಿಯಾ ಟುಡೇ ವರದಿಯನ್ನುನಾವು ನೋಡಿದ್ದೇವೆ. ಆ ಸಮಯದಲ್ಲಿ ಹಾಜರಿದ್ದ ಅವರ ವರದಿಗಾರರ ಪ್ರಕಾರ “ತಮ್ಮ ಸಹೋದರ ರಾಹುಲ್ ಗಾಂಧಿ ಅವರಿಂದ ತೆರವಾದ ವಯನಾಡ್ ಸ್ಥಾನಕ್ಕೆ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರಿಯಾಂಕಾ ಗಾಂಧಿ ಅವರು ರಾಲಿಯ ನಂತರ ಮಧ್ಯಾಹ್ನ 1 ಗಂಟೆಗೆ ನಾಮಪತ್ರ ಸಲ್ಲಿಸಲು ಕಲ್ಪೆಟ್ಟಾದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಬೇಕಿತ್ತು. ಆದರೆ, ನಿಗದಿತ ಸಮಯಕ್ಕಿಂತ ತಡವಾದ್ದರಿಂದ ಪ್ರಿಯಾಂಕ ಅವರು ಅರ್ಧದಲ್ಲೇ ರ್‍ಯಾಲಿಯಿಂದ ಹೋದರು. ಮಧ್ಯಾಹ್ನ 1.24ಕ್ಕೆ ಪತಿ ರಾಬರ್ಟ್ ವಾದ್ರಾ ಮತ್ತು ಮಗನೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು. ಪ್ರಿಯಾಂಕಾ ಕಚೇರಿಯನ್ನು ತಲುಪಿದ ನಂತರ, ಕಾಂಗ್ರೆಸ್ ಅಧ್ಯಕ್ಷರು, ಅವರ ತಾಯಿ ಮತ್ತು ಸಹೋದರ ಸಭೆಯೊಂದರಲ್ಲಿ ಭಾಗಿಯಾಗಿದ್ದು, ಅವರು ಶೀಘ್ರದಲ್ಲೇ ಆಗಮಿಸಲಿದ್ದಾರೆ ಎಂದು ಅವರು ರಿಟರ್ನಿಂಗ್ ಅಧಿಕಾರಿಗೆ (ಆರ್ ಒ) ಅವರಿಗೆ ತಿಳಿಸಿದರು. ಅವರು ಬಂದಾಗ ಪತಿ ಮತ್ತು ಮಗ ಹೊರಗೆ ಹೋಗುತ್ತಾರೆ ಎಂದು ಅವರು ತಿಳಿಸಿದರು” ಎಂದು ವರದಿಯಲ್ಲಿ ತಿಳಿಸಲಾಗಿದೆ.
ವರದಿಯ ಪ್ರಕಾರ, ಸೋನಿಯಾ ಗಾಂಧಿ ನಂತರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು, ನಂತರ ಖರ್ಗೆ ಮತ್ತು ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ್ ಕೂಡ ಸ್ಥಳಕ್ಕೆ ಆಗಮಿಸಿದರು, ಆದಾಗ್ಯೂ, ಚುನಾವಣಾಧಿಕಾರಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದರಿಂದ ಕಲೆಕ್ಟರ್ ಕಚೇರಿಯಲ್ಲಿ ಕಾವಲುಗಾರರು ಅವರನ್ನು ಪ್ರವೇಶಿಸಲು ಅನುಮತಿಸಲಿಲ್ಲ.
“ಪ್ರಕ್ರಿಯೆ ಪೂರ್ಣಗೊಂಡ ನಂತರ, ರಾಬರ್ಟ್ ವಾದ್ರಾ ಮತ್ತು ಅವರ ಮಗ ಹೊರಗೆ ಹೋದರು ಮತ್ತು ಖರ್ಗೆ ಎರಡನೇ ಸೆಟ್ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಪ್ರವೇಶಿಸಿದರು. ವಾಸ್ತವವಾಗಿ, ರಾಹುಲ್ ಗಾಂಧಿ ಅವರನ್ನು ಮೊದಲ ಸೆಟ್ ನಾಮಪತ್ರಗಳ ಪರಿಶೀಲನೆ ಪೂರ್ಣಗೊಳ್ಳುವವರೆಗೆ ಹೊರಗೆ ಕಾಯುವಂತೆ ಮಾಡಲಾಯಿತು. ನಂತರ ಅವರನ್ನು ಒಳಗೆ ಕರೆಸಲಾಯಿತು. ಆದರೆ, ಖರ್ಗೆ ಅವರು ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಕಾಯುತ್ತಿದ್ದ ಭಾಗ ಮಾತ್ರ ವೈರಲ್ ಆಗಿದ್ದು, ಕಾಂಗ್ರೆಸ್ ಮೇಲೆ ದಾಳಿ ನಡೆಸಲು ಬಿಜೆಪಿ ಇದನ್ನು ಬಳಸಿದೆ ಎಂದು ವರದಿ ಹೇಳಿದೆ.
ನಾಮಪತ್ರ ಪರಿಶೀಲನೆ ನಿಯಮಗಳು
ಹೆಚ್ಚುವರಿ ಮಾಹಿತಿಗಾಗಿ ನಾವು ಕೇರಳದ ಮುಖ್ಯ ಚುನಾವಣಾ ಅಧಿಕಾರಿಗಳ ಅಧಿಕೃತ ವೆಬ್‌ಸೈಟ್‌ಗೆ ನೋಡಿದ್ದೇವೆ. ಅಲ್ಲಿ ಚುನಾವಣಾಧಿಕಾರಿಗಳಿಗಾಗಿ ECI ಯ 2023 ಹ್ಯಾಂಡ್‌ಬುಕ್ ಅನ್ನು ನೋಡಿದ್ದೇವೆ ಮತ್ತು ಅದರ 45 ನೇ ಪುಟದಲ್ಲಿ “ನಾಮಪತ್ರ ಸಲ್ಲಿಕೆ ಸಮಯದಲ್ಲಿ ವಾಹನಗಳು ಮತ್ತು ಜನರ ಸಂಖ್ಯೆಯ ಮೇಲಿನ ನಿರ್ಬಂಧಗಳು” ಎಂಬ ಶೀರ್ಷಿಕೆಯ 5.8ನೇ ವಿಭಾಗ ಅನ್ನು ನಾವು ಕಂಡುಕೊಂಡಿದ್ದೇವೆ.
“ಚುನಾವಣಾ ಅಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯ 100 ಮೀಟರ್ ಪರಿಧಿಯೊಳಗೆ ಬರಲು ಅಭ್ಯರ್ಥಿಯ ಬೆಂಗಾವಲು ಪಡೆ ಅಥವಾ ಅವನೊಂದಿಗೆ ಬರುವ ಗರಿಷ್ಠ ಸಂಖ್ಯೆಯ ವಾಹನಗಳನ್ನು ಮೂರಕ್ಕೆ ಸೀಮಿತಗೊಳಿಸಲಾಗಿದೆ ಮತ್ತು ಪ್ರವೇಶಿಸಲು ಅನುಮತಿಸಬಹುದಾದ ವ್ಯಕ್ತಿಗಳು ನಾಮಪತ್ರ ಸಲ್ಲಿಸುವ ಸಮಯದಲ್ಲಿ ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿ ಕಚೇರಿಯನ್ನು ಐದಕ್ಕೆ (ಅಭ್ಯರ್ಥಿ ಸೇರಿದಂತೆ) ಸೀಮಿತಗೊಳಿಸಲಾಗಿದೆ. 100 ಮೀಟರ್ ಪರಿಧಿಯನ್ನು ಸ್ಪಷ್ಟವಾಗಿ ಗುರುತಿಸಬೇಕು. ಅಭ್ಯರ್ಥಿ ಮತ್ತು ಇತರ ನಾಲ್ಕು ಅಧಿಕೃತ ವ್ಯಕ್ತಿಗಳ ಪ್ರವೇಶಕ್ಕಾಗಿ ಒಂದು ಬಾಗಿಲು ಮಾತ್ರ ತೆರೆದಿರುತ್ತದೆ ಮತ್ತು ಇತರ ಎಲ್ಲಾ ಬಾಗಿಲುಗಳನ್ನು ಮುಚ್ಚಿರುವಂತೆ ಖಚಿತಪಡಿಸಿಕೊಳ್ಳಬೇಕು. ಪ್ರವೇಶದ ನಿಜವಾದ ಸಮಯವನ್ನು ದಾಖಲಿಸಲು ಪ್ರವೇಶ ದ್ವಾರದಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಇರಿಸಬೇಕು,” ಎಂದಿದೆ. ಈ ಸೂಚನೆಗಳ ಪ್ರಕಾರ, ನಾಮಪತ್ರ ಸಲ್ಲಿಸುವ ಸಮಯದಲ್ಲಿ ಸೀಮಿತ ಸಂಖ್ಯೆಯ ವ್ಯಕ್ತಿಗಳನ್ನು ಮಾತ್ರ ಕೋಣೆಯೊಳಗೆ ಅನುಮತಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.
Conclusion
ವಯನಾಡ್ ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ವಾದ್ರಾ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೊಠಡಿಯಿಂದ ಹೊರಗೆ ನಿಲ್ಲಿಸಲಾಗಿದೆ ಎಂಬ ಹೇಳಿಕೆ ತಪ್ಪಾದ ಸಂದರ್ಭವಾಗಿದೆ ಎಂದು ತಿಳಿದುಬಂದಿದೆ.
Result: Missing Context
Our Sources
X post By Congress, Dated: October 23, 2024
Report By India Today, Dated: October 24, 2024
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.