ಮುಸ್ಲಿಮರು ಟಿಕೆಟ್ ರಹಿತವಾಗಿ ದಿಲ್ಲಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, ಶುಕ್ರವಾರದ ಪ್ರಾರ್ಥನೆಯ ಬಳಿಕ ಮುಸ್ಲಿಮರು ಟಿಕೆಟ್ ರಹಿತವಾಗಿ ದಿಲ್ಲಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ ಎಂದಿದೆ.

ನ್ಯೂಸ್‌ಚೆಕರ್ ಇದರ ಬಗ್ಗೆ ಸತ್ಯಶೋಧನೆ ನಡೆಸಿದ್ದು, ಇದು ತಪ್ಪು ಎಂದು ಕಂಡುಕೊಂಡಿದೆ.
Fact Check/Verification
ಸತ್ಯಶೋಧನೆಗಾಗಿ ನಾವು ಗೂಗಲ್ ಮೂಲಕ ಕೀವರ್ಡ್ ಸರ್ಚ್ ನಡೆಸಿದ್ದೇವೆ.
ಈ ವೇಳೆ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮ ವರದಿಗಳು ಲಭ್ಯವಾಗಿವೆ.
ಫೆಬ್ರವರಿ 15, 2025ರಂದು ನ್ಯೂಸ್ ಎಕ್ಸ್ ಪ್ರಕಟಿಸಿದ ವರದಿಯಲ್ಲಿ, “ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಯುವಕರ ಗುಂಪೊಂದು ಸ್ವಯಂಚಾಲಿತ ಶುಲ್ಕ ಸಂಗ್ರಹ (ಎಎಫ್‌ಸಿ) ಗೇಟ್‌ಗಳನ್ನು ದಾಟಿ ಹಾರುತ್ತಿರುವುದನ್ನು ತೋರಿಸುವ ವೈರಲ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ಹೇಳಲಾಗುವ ವ್ಯಕ್ತಿಗಳು ಕ್ಯಾಪ್‌ಗಳನ್ನು ಧರಿಸಿ, ಶುಲ್ಕ ಪಾವತಿಸದೆ ಅಕ್ರಮವಾಗಿ ನಿರ್ಗಮನ ದ್ವಾರಗಳನ್ನು ದಾಟಿ ಗದ್ದಲ ಉಂಟು ಮಾಡುತ್ತಿರುವುದನ್ನು ಈ ವಿಡಿಯೋ ತೋರಿಸುತ್ತದೆ. ಮೆಟ್ರೋ ನಿಲ್ದಾಣದಲ್ಲಿನ ಭದ್ರತೆ ಮತ್ತು ಸುವ್ಯವಸ್ಥೆಯ ಬಗ್ಗೆ ಈ ಘಟನೆ ಪ್ರಶ್ನೆಯನ್ನೆಬ್ಬಿಸಿದೆ. ಭದ್ರತಾ ಸಿಬ್ಬಂದಿಯ ಹಸ್ತಕ್ಷೇಪದ ಕೊರತೆಯಿಂದಾಗಿ ಈ ಘಟನೆಯು ವಿಶೇಷವಾಗಿ ಗಮನ ಸೆಳೆದಿದ್ದು, ದೆಹಲಿ ಮೆಟ್ರೋ ನಿಲ್ದಾಣಗಳಲ್ಲಿನ ಭದ್ರತೆಯ ಸ್ಥಿತಿಯನ್ನು ಹಲವರು ಪ್ರಶ್ನಿಸುವಂತೆ ಮಾಡಿದೆ.” ಎಂದಿದೆ.
ಇದೇ ವರದಿಯಲ್ಲಿ “ಡಿಎಂಆರ್‌ಸಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಈ ಘಟನೆಗೆ ಸ್ಪಷ್ಟನೆ ನೀಡಿದ್ದು, ಮುಖ್ಯವಾಗಿ ಶಬ್-ಎ-ಬರಾತ್ ಆಚರಣೆಯಿಂದಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಅನಿರೀಕ್ಷಿತ ಏರಿಕೆಯಾಗಿದ್ದು, ಇದು ಜಾಮಾ ಮಸೀದಿ ಮೆಟ್ರೋ ನಿಲ್ದಾಣದಲ್ಲಿ ಪಾದಚಾರಿ ದಟ್ಟಣೆ ಹೆಚ್ಚಳಕ್ಕೆ ಕಾರಣವಾಯಿತು. ಜನದಟ್ಟಣೆಯಿಂದಾಗಿ, ಎಎಫ್‌ಸಿ ಗೇಟ್‌ಗಳು ತಾತ್ಕಾಲಿಕವಾಗಿ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದವು. ದಟ್ಟಣೆಯನ್ನು ನಿವಾರಿಸಲು, ಪ್ರಯಾಣಿಕರನ್ನು ಹತ್ತಿರದ ಪಕ್ಕದ ಗೇಟ್‌ಗಳ ಮೂಲಕ ನಿರ್ಗಮಿಸಲು ಅನುಮತಿಸಲಾಯಿತು. ಆದಾಗ್ಯೂ, ಜನದಟ್ಟಣೆಯ ಮಧ್ಯೆ, ಕೆಲವು ಪ್ರಯಾಣಿಕರು ತಮ್ಮ ಆತುರದಲ್ಲಿ ನಿಲ್ದಾಣದಿಂದ ನಿರ್ಗಮಿಸಲು ಎಎಫ್‌ಸಿ ಗೇಟ್‌ಗಳನ್ನು ಹಾರಿ ಪ್ರಯತ್ನಿಸಿದರು” ಎಂದಿದೆ.

ಫೆಬ್ರವರಿ 15, 2025ರ ಇಂಡಿಯಾ ಟುಡೇ ವರದಿಯಲ್ಲಿ, “ಮೆಟ್ರೋ ನಿಲ್ದಾಣದ ಗೇಟ್ ಮೇಲೆ ಜನರು ಹಾರಿ ನಿರ್ಗಮಿಸುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಫೆಬ್ರವರಿ 13 ರಂದು ರಾತ್ರಿ 11:22 ಕ್ಕೆ ಈ ವೀಡಿಯೋ ರೆಕಾರ್ಡ್ ಆಗಿದೆ. ಅಧಿಕಾರಿಗಳ ಪ್ರಕಾರ, ಅದು ಅಂದು ರಾತ್ರಿ ಶಬ್-ಎ-ಬರಾತ್ ಆಚರಣೆಯ ಇತ್ತು. ರಾತ್ರಿ 11:22 ರ ಸುಮಾರಿಗೆ, ಎರಡು ರೈಲುಗಳು ಒಂದೇ ಸಮಯದಲ್ಲಿ ನಿಲ್ದಾಣಕ್ಕೆ ಬಂದವು. ನಿರ್ಗಮನ ದ್ವಾರದಲ್ಲಿ ದೊಡ್ಡ ಸಂಖ್ಯೆ ಜನ ಜಮಾಯಿಸಿದ್ದರು. ಆ ಕ್ಷಣದಲ್ಲಿ, ಗೇಟ್ ಕೆಲಸ ಮಾಡುವುದನ್ನು ನಿಲ್ಲಿಸಿತು. ಜನಸಂದಣಿಯಿಂದಾಗಿ, ಜನರನ್ನು ಪಕ್ಕದ ಗೇಟ್ ಮೂಲಕ ನಿರ್ಗಮಿಸಲು ಅನುಮತಿಸಲಾಯಿತು” ಎಂದಿದೆ.

ಈ ಕುರಿತ ಇನ್ನಷ್ಟು ವರದಿಗಳು ಇಲ್ಲಿ,ಇಲ್ಲಿ ನೋಡಬಹುದು.
ಘಟನೆ ಬಗ್ಗೆ ನಾವು ಎಕ್ಸ್ ನಲ್ಲಿ ಸರ್ಚ್ ಮಾಡಿದ್ದು ಡಿಎಮ್ ಆರ್ ಸಿ (ದಿಲ್ಲಿ ಮೆಟ್ರೋ ರೈಲ್ ಕಾರ್ಪೊರೇಷನ್) ಖಾತೆಯನ್ನು ಪರಿಶೀಲಿಸಿದ್ದೇವೆ. ಇದರಲ್ಲಿ “ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೈರಲ್ ವಿಡಿಯೋವನ್ನು ಉಲ್ಲೇಖಿಸಿ, ಡಿಎಂಆರ್‌ಸಿ ತಿಳಿಸಲು ಬಯಸುವುದೇನೆಂದರೆ, ಕೆಲವು ಪ್ರಯಾಣಿಕರು ಎಎಫ್‌ಸಿ ಗೇಟ್‌ಗಳ ಮೇಲೆ ಹಾರಿ ನಿರ್ಗಮಿದ್ದು, ಫೆಬ್ರವರಿ 13, 2025 ರ ಸಂಜೆ ವೈಲೆಟ್ ಲೈನ್‌ನಲ್ಲಿರುವ ಜಾಮಾ ಮಸೀದಿ ಮೆಟ್ರೋ ನಿಲ್ದಾಣದಿಂದ ಈ ಘಟನೆ ವರದಿಯಾಗಿದೆ. ಕೆಲವು ಪ್ರಯಾಣಿಕರು ಎಎಫ್‌ಸಿ ಗೇಟ್ ಅನ್ನು ದಾಟಿ ನಿರ್ಗಮಿಸಲು ಹೋದಾಗ ಸ್ವಲ್ಪ ಸಮಯದವರೆಗೆ ಪ್ರಯಾಣಿಕರ ಸಂಖ್ಯೆಯಲ್ಲಿ ತಾತ್ಕಾಲಿಕ ಏರಿಕೆ ಕಂಡುಬಂದಿತು. ಅಂತಹ ಪ್ರಯಾಣಿಕರಿಗೆ ಸಲಹೆ ನೀಡಲು ಭದ್ರತಾ ಸಿಬ್ಬಂದಿ ಮತ್ತು ಇತರ ಸಿಬ್ಬಂದಿ ಸಮರ್ಪಕವಾಗಿ ಹಾಜರಿದ್ದರು ಮತ್ತು ಪರಿಸ್ಥಿತಿ ಎಂದಿಗೂ ನಿಯಂತ್ರಣ ತಪ್ಪಲಿಲ್ಲ. ಬದಲಿಗೆ, ಎಎಫ್‌ಸಿ ಗೇಟ್‌ಗಳಲ್ಲಿ ಹಠಾತ್ ಹೆಚ್ಚಳದಿಂದ ಕೆಲವು ಪ್ರಯಾಣಿಕರ ಕ್ಷಣಿಕ ಪ್ರತಿಕ್ರಿಯೆ ಅದಾಗಿತ್ತು” ಎಂದಿದೆ.
Conclusion
ಈ ಸತ್ಯಶೋಧನೆಯ ಪ್ರಕಾರ, ಶುಕ್ರವಾರದ ಪ್ರಾರ್ಥನೆಯ ಬಳಿಕ ಮುಸ್ಲಿಮರು ಟಿಕೆಟ್ ರಹಿತವಾಗಿ ದಿಲ್ಲಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ ಎನ್ನುವುದು ತಪ್ಪಾಗಿದೆ. ಪ್ರಯಾಣಿಕರ ಸಂಖ್ಯೆ ಏಕಾಏಕಿ ಏರಿಕೆಯಾದ್ದರಿಂದ ಜಾಮಾ ಮಸ್ಜಿದ್ ಮೆಟ್ರೋ ನಿಲ್ದಾಣದಲ್ಲಿ ಹೊರಹೋಗುವ ದಟ್ಟಣೆ ವೇಳೆ ಕೆಲವರು ಎಎಫ್‌ಸಿ ಗೇಟ್ ಗಳನ್ನು ಹಾರಿ ಹೋಗಿದ್ದಾರೆ ಎಂದು ತಿಳಿದುಬಂದಿದೆ.
Our Sources
Report By NewsX, Dated: February 15, 2025
Report By India Today, Dated: February 15, 2025
X post By DMRC, Dated: February 15, 2025