Authors
Claim
ನಂದಿನಿ ಅಮುಲ್ ವಿವಾದ ಬಳಿಕ ಕೇರಳದಲ್ಲಿ ನಂದಿನಿ ಹಾಲಿಗೆ ನಿಷೇಧ
Fact
ಕೇರಳದಲ್ಲಿ ನಂದಿನಿ ಹಾಲಿಗೆ ನಿಷೇಧ ಹೇರಿಲ್ಲ. ನಂದಿನಿ ಮಾರುಕಟ್ಟೆ ವಿಸ್ತರಣೆ ವಿರುದ್ಧ ಅಸಮಾಧಾನ, ಆತಂಕ ವ್ಯಕ್ತಪಡಿಸಲಾಗಿದೆ.
ನಂದಿನಿ ಅಮುಲ್ ವಿವಾದ ಬಳಿಕ ಕೇರಳದಲ್ಲಿ ನಂದಿನಿಯನ್ನು ಕೇರಳ ಹಾಲು ಒಕ್ಕೂಟ ಬ್ಯಾನ್ ಮಾಡಿದೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಈ ಕುರಿತು ಟ್ವಿಟರ್‌ನಲ್ಲಿ ಕಂಡುಬಂದ ಕ್ಲೇಮ್ ಹೀಗಿದೆ. “ಓಲಾಟಗಾರರೆ ನಿಮ್ಮ ಸಾಧನೆಉನ್ನು ಸಂಭ್ರಮಿಸಲು ಒಂದೈದು ಲೀಟರ್ ಹಾಲು ಕುಡಿದು ಖುಷಿಪಡಿ, ಈ ಸಾಧನೆಯ ಪಾಲುದಾರ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಪೋಷಿಸಿ ರೈತರೆ” ಎಂದಿದೆ. ಜೊತೆಗೆ ಫೋಟೋದಲ್ಲಿ ಇರುವ ಬರಹದಲ್ಲಿ “ನಂದಿನಿ-ಅಮೂಲ್ ವಿವಾದ ಕೇರಳದಲ್ಲಿ ನಂದಿನಿಯನ್ನು ಬ್ಯಾನ್ ಮಾಡಿದ ಕೇರಳ ಹಾಲು ಒಕ್ಕೂಟ” ಎಂದಿದೆ. ಈ ಕ್ಲೇಮ್ ಅನ್ನು ಇಲ್ಲಿ ನೋಡಬಹುದು.
ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆಯನ್ನು ನಡೆಸಿದ್ದು, ಇದು ತಪ್ಪು ಕ್ಲೇಮ್ ಎಂದು ಕಂಡುಬಂದಿದೆ.
Fact Chek/Verification
ಸತ್ಯಶೋಧನೆಗಾಗಿ ಗೂಗಲ್ ಕೀವರ್ಡ್ ಸರ್ಚ್ ನಡೆಸಲಾಗಿದ್ದು, ನಂದಿನಿಯನ್ನು ಕೇರಳದಲ್ಲಿ ನಿಷೇಧಿಸಲಾಗಿದೆಯೇ ಎಂದು ಪರಿಶೀಲಿಸಲಾಯಿತು.
ಈ ವೇಳೆ ನಂದಿನಿಯನ್ನು ಕೇರಳದಲ್ಲಿ ನಿಷೇಧಿಸಿದ ಕುರಿತು ಯಾವುದೇ ವರದಿಗಳು, ಪುರಾವೆಗಳು ಲಭ್ಯವಾಗಿಲ್ಲ.
ಆದರೆ ಕೇರಳದಲ್ಲಿ ನಂದಿನಿ ಮಾರಾಟಕ್ಕೆ ಕೇರಳ ಹಾಲು ಒಕ್ಕೂಟ ವಿರೋಧ ವ್ಯಕ್ತಪಡಿಸಿದ್ದರ ಕುರಿತ ವರದಿಗಳು ಲಭ್ಯವಾಗಿವೆ.
ಎಪ್ರಿಲ್ 13, 2023ರ ದಿ ಹಿಂದೂ ವರದಿ ಪ್ರಕಾರ, “ಕೇರಳಕ್ಕೆ ನಂದಿನಿ ಪ್ರವೇಶ ವಿರುದ್ಧ ಮಿಲ್ಮಾ ಅಸಮಾಧಾನ ವ್ಯಕ್ತಪಡಿಸಿದೆ” “ಕೇರಳಕ್ಕೆ ಇತರ ರಾಜ್ಯದ ಹಾಲು ಪ್ರವೇಶಿಸುವುದರಿಂದ ಲಕ್ಷಾಂತರ ಹೈನುಗಾರರ ಅನುಕೂಲಕ್ಕಾಗಿ ಆಯೋಜಿಸಿದ ಸಹಕಾರಿ ಮನೋಭಾವನೆಯನ್ನು ಉಲ್ಲಂಘಿಸಿದಂತೆ ಆಗುತ್ತದೆ.” ಎಂದಿದೆ. ಈ ಕುರಿತಂತೆ ಮಿಲ್ಮಾ ಅಧ್ಯಕ್ಷ ಕೆ.ಎಸ್. ಮಣಿ ಅವರ ಅಭಿಪ್ರಾಯವನ್ನೂ ದಿ ಹಿಂದೂ ಪ್ರಕಟಿಸಿದ್ದು, ಅದರಲ್ಲಿ “ಹಾಲು ಸಹಕಾರ ಸಂಘಗಳ ನಡುವೆ ಚಾಲ್ತಿಯಲ್ಲಿರುವ ಒಪ್ಪಂದ ಮತ್ತು ಸೌಜನ್ಯಯುತ ವ್ಯಾಪಾರ ಸಂಬಂಧಗಳ ಪ್ರಕಾರ, ದ್ರವೀಕೃತ ಹಾಲಿನ ಗಡಿಯಾಚೆಗಿನ ಮಾರಾಟವನ್ನು ತಪ್ಪಿಸಬೇಕು, ಏಕೆಂದರೆ ಇದು ಆಯಾ ರಾಜ್ಯದ ಮಾರಾಟ ಪ್ರದೇಶದ ಅತಿಕ್ರಮಣವಾಗುತ್ತದೆ. ಇಂತಹ ಪ್ರಯತ್ನಗಳಿಂದ ದೀರ್ಘಕಾಲದಿಂದ ನಡೆದುಕೊಂಡು ಬಂದ ಸಹಕಾರ ತತ್ವಕ್ಕೆ ಧಕ್ಕೆ ತರುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾಗಿ ವರದಿಯಲ್ಲಿದೆ.
Also Read: ಬಿಜೆಪಿ ನಾಯಕರ ಪಕ್ಷಾಂತರ ಪರ್ವ: ಇದು ಪ್ಲಸ್ ಆಗುತ್ತಾ ಮೈನಸ್ ಆಗುತ್ತಾ?
ಎಪ್ರಿಲ್ 17, 2023ರ ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, “ಕೇರಳ ಕೊ-ಆಪರೇಟಿವ್ ಮಿಲ್ ಮಾರ್ಕೆಟಿಂಗ್ ಫೆಡರೇಶನ್ (ಮಿಲ್ಮಾ ಮಾರಾಟ ಮಾಡುವ ಸಂಸ್ಥೆ) ಕರ್ನಾಟಕದ ನಂದಿನಿ ಹಾಲು ಉತ್ಪನ್ನ ಕೇರಳದಲ್ಲಿ ಮಾರಾಟ ಮಾಡುವುದರ ವಿರುದ್ಧ ಸರ್ಕಾರದ ಮಧ್ಯಪ್ರವೇಶವನ್ನು ಬಯಸಿದೆ ಎಂದು ಹೇಳಿದೆ. ಈ ಕುರಿತಂತೆ ಮಿಲ್ಮಾ ಅಧ್ಯಕ್ಷ ಕೆ.ಎಸ್. ಮಣಿ ಅವರು ಕೆಎಂಎಫ್‌ಗೆ ಪತ್ರವನ್ನೂ ಬರೆದಿದ್ದು ಕೇರಳದಲ್ಲಿ ಔಟ್‌ಲೆಟ್‌ಗಳ ಸ್ಥಾಪನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಆದರೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ” ಎಂದಿದೆ. ಇದರೊಂಧಿಗೆ ಈ ವಿಚಾರವನ್ನು ಸರ್ಕಾರದ ಮುಂದೆ ಇರಿಸಿ, ಮಧ್ಯಪ್ರವೇಶಿಸಲು ಬಯಸುವುದಾಗಿ ಅವರು ಹೇಳಿದ್ದಾರೆ.
“ನಂದಿನಿ ಈಗಾಗಲೇ ಎರಡು ಔಟ್‌ಲೆಟ್‌ಗಳನ್ನು ಕೇರಳದಲ್ಲಿ ಹೊಂದಿದ್ದು ಇದರ ಸಂಖ್ಯೆ 100ಕ್ಕೇರಿಸಲು ಬಯಸಿದ್ದಾಗಿ ಹೇಳಿದೆ. ನಂದಿನಿ-ಅಮೂಲ್ ವಿವಾದದ ಬೆನ್ನಲ್ಲೇ ಮಿಲ್ಮಾದ ಈ ವಿರೋಧ ಬೆಳಕಿಗೆ ಬಂದಿದೆ” ಎಂದು ಈ ವರದಿ ಹೇಳಿದೆ.
ಎಪ್ರಿಲ್ 16, 2023ರ ಎಕನಾಮಿಕ್ಸ್ ಟೈಮ್ಸ್ ವರದಿಯಲ್ಲಿ, “ಅಮೂಲ್ ಕರ್ನಾಟಕದಲ್ಲಿ ಹೇಗೆ ಹಾಲು ಮಾರಾಟ ಮಾಡಬಾರದು ಎಂದು ನಂದಿನಿ ಬಯಸುತ್ತದೆಯೋ ಅದೇ ರೀತಿ ನಂದಿನಿ ಕೇರಳದಲ್ಲಿ ಹಾಲು ಮಾರಾಟ ಮಾಡಬಾರದು ಎಂದು ಕೇರಳ ಹಾಲು ಒಕ್ಕೂಟ ಬಯಸುತ್ತದೆ” ಎನ್ನಲಾಗಿದೆ. “ಕೇರಳ ಹಾಲು ಒಕ್ಕೂಟ “ಮಿಲ್ಮಾ” ಎಂಬ ಹಾಲಿನ ಬ್ರ್ಯಾಂಡ್ ಅನ್ನು ಹೊಂದಿದ್ದು, ಕರ್ನಾಟಕ ಹಾಲು ಒಕ್ಕೂಟ “ನಂದಿನಿ”ಯನ್ನು ಕೇರಳದಲ್ಲಿ ಮಾರಾಟ ಮಾಡುವುದರಿಂದ ಸ್ಥಳೀಯ ಹೈನುಗಾರರಿಗೆ ಮತ್ತು ಡೈರಿ ಕೆಲಸಗಾರರಿಗೆ ಇದರಿಂದ ತೊಂದರೆಯಾಗುತ್ತದೆ” ಎಂದು ಹೇಳಲಾಗಿದೆ.
ಈ ವಿಚಾರದಲ್ಲಿ ಔಟ್‌ಲುಕ್ ಕೂಡ ಎಪ್ರಿಲ್ 17, 2023ರಂದು ವರದಿ ಪ್ರಕಟಿಸಿದ್ದು, “ಕೇರಳದಲ್ಲಿ ಕರ್ನಾಟಕದ ನಂದಿನಿ ಹಾಲು ಮಾರಾಟವನ್ನು ಕೆಎಂಎಫ್ ಕೇರಳ
ವಿರೋಧಿಸುತ್ತಿದೆ” ಎಂದು ಹೇಳಿದೆ. ಕೇರಳದಲ್ಲಿ ಈಗಾಗಲೇ ನಂದಿನಿ ಎರಡು ಔಟ್‌ಲೆಟ್‌ಗಳನ್ನು ಹೊಂದಿದ್ದು, ಮಾರುಕಟ್ಟೆ ವಿಸ್ತರಣೆಗೆ ಚಿಂತಿಸಿದ್ದು ವಿರೋಧ ವ್ಯಕ್ತವಾಗಿದೆ” ಎಂದಿದೆ.
ನಂದಿನಿ ಮಾರಾಟ ಬಗ್ಗೆ ಕೇರಳದ ಮಿಲ್ಮಾ ಅಸಮಾಧಾನ, ವಿರೋಧ ಎಂಬುದನ್ನು ವಿವಿಧ ಪ್ರಮುಖ ಮಾಧ್ಯಮಗಳು ಪ್ರಕಟಿಸಿದ್ದು, ಆದರೆ ಎಲ್ಲೂ ನಂದಿನಿ ಉತ್ಪನ್ನಕ್ಕೆ ನಿಷೇಧ ಎಂಬುದು ಎಲ್ಲಿಯೂ ಕಂಡುಬಂದಿರುವುದಿಲ್ಲ.
Conclusion
ಈ ಸತ್ಯಶೋಧನೆ ಪ್ರಕಾರ, ನಂದಿನಿ ಉತ್ಪನ್ನಕ್ಕೆ ಕೇರಳದಲ್ಲಿ ನಿಷೇಧ ಹೇರಲಾಗಿದೆ ಎನ್ನುವುದು ತಪ್ಪು ಆಗಿದೆ.
Results: False
Our Sources
Report by The Hindu, Dated: April 13, 2023
Report by Deccan Herald, Dated: April 17, 2023
Report by Economic Times, Dated: April 16, 2023
Report by Outlook, Dated: April 17, 2023
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.