ಫ್ರಾನ್ಸ್ ನಲ್ಲಿ ಹೊಸವರ್ಷ ಮುನ್ನಾದಿನ ಕಾರುಗಳಿಗೆ ಬೆಂಕಿ ಹಚ್ಚಿದ್ದು ಮುಸ್ಲಿಮರೇ?

ಫ್ರಾನ್ಸ್‌, ಹೊಸವರ್ಷ, ಮುನ್ನಾದಿನ, ಕಾರು, ಬೆಂಕಿ

ಫ್ರಾನ್ಸ್‌ನಲ್ಲಿ ಹೊಸ ವರ್ಷ ಮುನ್ನಾ ದಿನ ಕಾರುಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಈ ವಿದ್ಯಮಾನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕ್ಲೇಮಿನಲ್ಲಿ “ಹೊಸ ವರ್ಷದ ಮುನ್ನಾದಿನದಂದು ಫ್ರಾನ್ಸ್‌ನ ಸಾಂಪ್ರದಾಯಿಕ ‘ನಾಸ್ತಿಕರ ಕಾರುಗಳನ್ನು ಸುಡಲು ಪ್ರಾರಂಭಿಸುತ್ತಿದೆ ಕಳೆದ ವರ್ಷ, ಡಿಸೆಂಬರ್‌ 31ರ ರಾತ್ರಿ 1000+ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಶಾಂತಿದೂತರಿಗೆ ಫ್ರಾನ್ಸ್ ದೇಶದಲ್ಲಿ ಆಶ್ರಯ ನೀಡಿ ಷರಿಯಾ ಕಾನೂನಿಗೆ ಫ್ರಾನ್ಸ್‌ ಜನಸಾಮಾನ್ಯರು ಭಯಭೀತರಾಗುವಂತೆ ಮಾಡಿದೆ” ಎಂದು ಇದರಲ್ಲಿ ಹೇಳಲಾಗಿದೆ.

ಫ್ರಾನ್ಸ್‌, ಹೊಸವರ್ಷ, ಮುನ್ನಾದಿನ, ಕಾರು, ಬೆಂಕಿ

ನಿಜಕ್ಕೂ ಫ್ರಾನ್ಸ್‌ನಲ್ಲಿ ಹೊಸ ವರ್ಷ ಮುನ್ನಾದಿನ ನಡೆದ ಘಟನೆ ಏನು? ಕಾರುಗಳಿಗೆ ಬೆಂಕಿ ಹಚ್ಚಿದ ಘಟನೆ ಹಿಂದಿನ ಸತ್ಯಾಸತ್ಯತೆ ಏನು ಎಂಬುದನ್ನು ತಿಳಿಯಲು ನ್ಯೂಸ್‌ಚೆಕರ್‌ ಮುಂದಾಗಿದ್ದು, ಕ್ಲೇಮಿನಲ್ಲಿ ಹೇಳಿರುವುದು ತಪ್ಪು ಎಂದು ಸಾಬೀತಾಗಿದೆ.

Fact Check/ Verification

ಕ್ಲೇಮಿನ ಸತ್ಯ ಪರಿಶೀಲನೆಗಾಗಿ, ವೀಡಿಯೋದ ಕೀಫ್ರೇಂಗಳನ್ನು ತೆಗೆದು ಯಾಂಡೆಕ್ಸ್‌ ಮೂಲಕ ರಿವರ್ಸ್‌ ಇಮೇಜ್‌ ಸರ್ಚ್ ನಡೆಸಲಾಯಿತು. ಈ ವೇಳೆ ಫ್ರಾನ್ಸ್‌ನ ವಿವಿಧ ನಗರಗಳಲ್ಲಿ ಹೊಸ ವರ್ಷದ ಮುನ್ನಾದಿನ ಕಾರುಗಳಿಗೆ ಬೆಂಕಿ ಇಕ್ಕಿದ ವರದಿಗಳು ಲಭ್ಯವಾಗಿವೆ.

ವಿಯೋನ್‌ ನ್ಯೂಸ್‌ ಪ್ರಕಾರ, ಜನರು 8 ಗಂಟೆ ರಾತ್ರಿಯ ಕರ್ಫ್ಯೂ ನಿಷೇಧಾಜ್ಞೆಯನ್ನು ಉಲ್ಲಂಘಿಸಿ, ಹಿಂಸಾಕೃತ್ಯಗಳಲ್ಲಿ ತೊಡಗಿದ್ದು ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಘಟನೆಯಲ್ಲಿ ಹಲವು ಪೊಲೀಸರು, ಅಗ್ನಿಶಾಮಕದಳದವರು, ಸುಮಾರು 40 ರಷ್ಟು ಅಂಗಡಿ ಮುಂಗಟ್ಟುಗಳು ಹಾನಿಗೊಳಗಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಅಪ್ರಾಪ್ತ ವಯಸ್ಸಿನವರನ್ನು ಬಂಧಿಸಲಾಗಿದೆ.

ಶೆಪರ್ಟಾನ್‌ ನ್ಯೂಸ್‌ ಈ ಘಟನೆಯನ್ನು ವರದಿ ಮಾಡಿದ್ದು, 690ರಷ್ಟು ಕಾರುಗಳನ್ನು ಸುಟ್ಟು ಹಾಕಲಾಗಿದೆ. ಈ ಘಟನೆ ಆಗದಂತೆ 90 ಸಾವಿರದಷ್ಟು ಪೊಲೀಸರನ್ನು ದೇಶದ ವಿವಿಧೆಡೆ ನೇಮಿಸಲಾಗಿತ್ತು. ಈ ಪ್ರಕರಣದಲ್ಲಿ 490 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದೆ.

ಫ್ರಾನ್ಸ್‌ನ ಲಾ ಪಾರಿಸಿಯೆನ್‌ ವರದಿ ಪ್ರಕಾರ 180 ಕಾರುಗಳನ್ನು ಸುಟ್ಟು ಹಾಕಿದ ವಿದ್ಯಮಾನ ಸಂಭವಿಸಿದೆ ಎಂದಿದೆ.

ಘಟನೆ ಬಗ್ಗೆ ಫ್ರಾನ್ಸ್‌ನ ಆಂತರಿಕ ಸಚಿವ ಗೆರಾಲ್ಡ್ ಡಾರ್ಮ್ನಿನ್‌ ಅವರೂ ಪ್ರತಿಕ್ರಿಯಿಸಿದ್ದು 690 ಕಾರುಗಳನ್ನು ಸುಡಲಾಗಿದೆ. ಹೀಗೆ ಕಾರುಗಳನ್ನು ಸುಟ್ಟ ವಿದ್ಯಮಾನ ಶೇ.21ರಷ್ಟು ಕಡಿಮೆಯಾಗಿದ್ದು, ಶೇ.11ರಷ್ಟು ಹೆಚ್ಚು ಬಂಧನಗಳು ನಡೆದಿವೆ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

Also Read: ವೈರಲ್‌ ವೀಡಿಯೋದಲ್ಲಿ ದೇವಿ ಸರಸ್ವತಿ ಫೋಟೋ ಒದ್ದವನು ಮುಸ್ಲಿಂ ವ್ಯಕ್ತಿ ಅಲ್ಲ!

ಈ ಘಟನೆ ಕುರಿತು ಹೆಚ್ಚಿನ ಮಾಹಿತಿಗೆ ಕೀವರ್ಡ್‌ ಸರ್ಚ್‌ ನಡೆಸಲಾಗಿದ್ದು, ಯಾವುದೇ ವರದಿಗಳಲ್ಲಿ ಈ ಘಟನೆಯೊಂದಿಗೆ ಯಾವುದೇ ಸಮುದಾಯವನ್ನು ಹೇಳಿಲ್ಲ. ಫ್ರಾನ್ಸ್‌ ಆಂತರಿಕ ಸಚಿವಾಲಯವೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ. ಬದಲಾಗಿ ಫ್ರಾನ್ಸ್‌ನಲ್ಲಿ ಹೊಸ ವರ್ಷ ಮುನ್ನಾದಿನ ಕಾರುಗಳಿಗೆ ಬೆಂಕಿ ಇಡುವುದು ಮತ್ತು ಆಸ್ತಿಪಾಸ್ತಿಗಳಿಗೆ ಹಾನಿಮಾಡುವುದು ಮತ್ತು ಹಿಂಸಾಕೃತ್ಯಗಳನ್ನು ನಡೆಸುವ ವಿಚಿತ್ರ ಪದ್ಧತಿ ಇದೆ ಎಂಬುದು ತಿಳಿದುಬಂದಿದೆ.

ಕಾರುಗಳಿಗೆ ಬೆಂಕಿ ಹಚ್ಚುವುದೇಕೆ?

ದಿ ಲೋಕಲ್‌ ನ ವರದಿ ಪ್ರಕಾರ 1990ರಲ್ಲೇ ಇಂತಹ ಚಾಳಿ ಶುರುವಾಗಿತ್ತು. ಇನ್ನು, 2005ರಲ್ಲಿ ಗಲಭೆ ನಡೆದ ಬಳಿಕ ಪ್ರತಿ ವರ್ಷ ಮರುಕಳಿಸುತ್ತಿದೆ. ಹೊಸ ವರ್ಷದ ಮುನ್ನಾದಿನ ಗಲಭೆ ನಡೆಸುವುದು ಆಟದಂತೆ ಆಗಿದ್ದು,  ಏಕತಾನತೆಯನ್ನು ಮುರಿಯಲು ಎಂಬಂತೆ ಮಾಡಲಾಗುತ್ತಿದೆ. ಅಥವಾ ವಿಮಾ ಹಣವನ್ನು ಪಡೆಯಲು, ಹಿಂಸಾಕೃತ್ಯಗಳಲ್ಲಿ ಬಳಸಿದ ಕಾರನ್ನು ನಾಶಮಾಡುವ ಉದ್ದೇಶಕ್ಕಾಗಿ ಈ ಸಂದರ್ಭವನ್ನು ಬಳಸಲಾಗುತ್ತದೆ.

2013ರಲ್ಲಿ ಕಾರು ಸುಡುವ ಅಭ್ಯಾಸ ವಿಪರೀತವಾಗಿದ್ದು, 1193 ಕಾರುಗಳಿಗೆ ಬೆಂಕಿ ಹಾಕಲಾಗಿತ್ತು. ಸ್ಟ್ರಾನ್ಸ್ ಬರ್ಗ್ ನಲ್ಲಿ ಬಡಮಂದಿ ಹೆಚ್ಚು ವಾಸಿಸುವ ಪ್ರದೇಶಗಳಲ್ಲಿ ಕಾರುಗಳಿಗೆ ಬೆಂಕಿ ಹಚ್ಚುವ ಕೃತ್ಯಗಳು ಹೆಚ್ಚು ಕಂಡು ಬರುತ್ತವೆ ಎಂದು ದಿ ಲೋಕಲ್‌ ವರದಿಯಲ್ಲಿ ಹೇಳಲಾಗಿದೆ.

ಜನವರಿ 1 2022ರ ವರದಿಯಲ್ಲೂ ಬಿಬಿಸಿ ನ್ಯೂಸ್‌ ಕಾರಿಗೆ ಬೆಂಕಿ ಇಕ್ಕುವ ಪ್ರಕರಣದ ಬಗ್ಗೆ ವರದಿ ಮಾಡಿದೆ. 2019ರ ಸಮಯಕ್ಕಿಂತ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಫ್ರಾನ್ಸ್ ಆಂತರಿಕ ಸಚಿವಾಲಯ ಹೇಳಿದ್ದನ್ನು ಅದು ಉಲ್ಲೇಖಿಸಿದೆ.

ಹೊಸ ವರ್ಷ ಮುನ್ನಾದಿನ ಬಹುತೇಕ ಬಡವರು, ವಲಸೆಗಾರರು ಮತ್ತು ಕೆಲವು ಗುಂಪುಗಳು ಇಂತಹ ಕೃತ್ಯಗಳನ್ನೆಸಗುತ್ತಿದ್ದು, ಇದಲ್ಲಿ ಯಾವುದೇ ನಿರ್ದಿಷ್ಟ ಸಮುದಾಯ ವಿರುದ್ಧ ದೂರುಗಳಿಲ್ಲ. ಫ್ರಾನ್ಸ್ ಮಾಧ್ಯಮಗಳೂ ಇದನ್ನು ಉಲ್ಲೇಖಿಸಿಲ್ಲ ಎಂದು ಫ್ರಾನ್ಸ್‌ 24 ಮಾಧ್ಯಮದ ನವೋದಿತಾ ಕುಮಾರಿ ಹೇಳಿದ್ದಾರೆ.

ಕಾರಿಗೆ ಬೆಂಕಿ ಇಕ್ಕಿದ ಪ್ರಕರಣಗಳ ಕುರಿತ ಯಾವುದೇ ವರದಿಗಳಲ್ಲಿ ನಿರ್ದಿಷ್ಟ ಸಮುದಾಯವನ್ನು ಉಲ್ಲೇಖಿಸಿಲ್ಲ. ಜೊತೆಗೆ ಫ್ರಾನ್ಸ್ ಆಂತರಿಕ ಸಚಿವಾಲಯದ ಟ್ವೀಟರ್‌ ಖಾತೆಯಲ್ಲೂ ಈ ಬಗ್ಗೆ ಹೇಳಿಲ್ಲ.

Conclusion

ಈ ಸತ್ಯಶೋಧನೆ ಪ್ರಕಾರ ಹೊಸ ವರ್ಷದ ಮುನ್ನಾದಿನದಂದು ಫ್ರಾನ್ಸ್‌ನ ಸಾಂಪ್ರದಾಯಿಕ ‘ನಾಸ್ತಿಕರ ಕಾರುಗಳನ್ನು ಸುಡಲು ಪ್ರಾರಂಭಿಸುತ್ತಿದೆ ಕಳೆದ ವರ್ಷ, ಡಿಸೆಂಬರ್‌ 31ರ ರಾತ್ರಿ 1000+ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಶಾಂತಿದೂತರಿಗೆ ಫ್ರಾನ್ಸ್ ದೇಶದಲ್ಲಿ ಆಶ್ರಯ ನೀಡಿ ಷರಿಯಾ ಕಾನೂನಿಗೆ ಫ್ರಾನ್ಸ್‌ ಜನಸಾಮಾನ್ಯರು ಭಯಭೀತರಾಗುವಂತೆ ಮಾಡಿದೆ” ಎಂದು ಕ್ಲೇಮಿನಲ್ಲಿ ಹೇಳಿರುವುದು ಭಾಗಶಃ ಸುಳ್ಳಾಗಿದೆ.

Result: Partly False

Our Sources
Wion News Report on France New Year Eve, Dated, January 1, 2023
leparisien Report on France New Year Eve, Dated, January 1, 2023
Shepperton News Report on France New Year Eve, Dated, January 3, 2023
Telephonic Conversation with France 24 Journalist Navodita Kumari

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.