Fact Check:  ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋಗೆ ಜನ ಸೇರಲಿಲ್ಲವೇ, ಕ್ಲೇಮ್‌ ಹಿಂದಿನ ಸತ್ಯ ಏನು?

ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ, ಜನ ಸೇರಲಿಲ್ಲ

Claim
ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್‌ಶೋಗೆ ಜನರು ಸೇರಲಿಲ್ಲ

Fact
ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್‌ಶೋದಲ್ಲಿ ಜನರಿದ್ದರು. ರೋಡ್‌ ಶೋ ನಡೆಯುತ್ತಿರುವ ಒಂದು ಭಾಗದಲ್ಲಿ ಮಾತ್ರ ಚತುಷ್ಪಥ ರಸ್ತೆಯ ಎಡಭಾಗದಲ್ಲಿ ಜನರು ಸೇರಿದ್ದರು.

ಮಂಡ್ಯದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ರೋಡ್‌ಶೋಗೆ ಜನರು ಸೇರಲಿಲ್ಲ ಎಂಬ ಕ್ಲೇಮ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಕುರಿತ ಕ್ಲೇಮ್‌ ಒಂದು ಟ್ವಿಟರ್‌ ನಲ್ಲಿ ಕಂಡುಬಂದಿದ್ದು, “ಭ್ರಷ್ಟ ಬಿಜೆಪಿ ಸರ್ಕಾರ ತಲೆಗೆ ಸಾವಿರ ಕೊಟ್ಟು ಜನರನ್ನು ಕರೆದರೂ ಕೂಡ ಮೋದಿ ರ್ಯಾಲಿಗೆ ಜನ ಸೇರಲೇ ಇಲ್ಲ. ಮಂಡ್ಯದವರು ನಿಜಕ್ಕೂ ಸ್ವಾಭಿಮಾನಿಗಳು.” ಎಂದು ಹೇಳಲಾಗಿದೆ. ಜೊತೆಗೆ ಈ ಕ್ಲೇಮಿನಲ್ಲಿ ಮೋದಿ ರೋಡ್‌ ಶೋ ನಡೆಸುತ್ತಿರುವ ಚಿತ್ರವನ್ನು ಹಾಕಲಾಗಿದೆ. ಅದನ್ನು ಇಲ್ಲಿ ನೋಡಬಹುದು.

ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ
ಟ್ವಿಟರ್ ನಲ್ಲಿ ಕಂಡುಬಂದ ಕ್ಲೇಮ್‌

ಈ ಬಗ್ಗೆ ನ್ಯೂಸ್‌ಚೆಕರ್‌ ಸತ್ಯಶೋಧನೆ ನಡೆಸಿದ್ದು, ಇದು ತಪ್ಪು ಕ್ಲೇಮ್‌ ಎಂದು ಕಂಡುಬಂದಿದೆ.

Fact Check/ Verification

ಸತ್ಯಶೋಧನೆಗಾಗಿ, ಗೂಗಲ್‌ನಲ್ಲಿ ಕೀವರ್ಡ್‌ ಸರ್ಚ್ ನಡೆಸಲಾಗಿದ್ದು, ಈ ವೇಳೆ ಹಲವು ಮಾಧ್ಯಮ ವರದಿಗಳು ಲಭ್ಯವಾಗಿದೆ.

ಮಾರ್ಚ್ 12, 2023ರ ಒನ್‌ ಇಂಡಿಯಾ “ಸಕ್ಕರೆ ನಾಡು ಮಂಡ್ಯದಲ್ಲಿ ನಮೋ ಹವಾ, ಫೋಟೋಗಳು ಇಲ್ಲಿವೆ ನೋಡಿ” ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದ ಫೋಟೋ ವರದಿಯಲ್ಲಿ ಕ್ಲೇಮಿನಲ್ಲಿ ಹಾಕಲಾದ ಫೋಟೋದೊಂದಿಗೆ ಪ್ರಧಾನಿ ಮೋದಿ ರೋಡ್‌ಶೋದ ಇತರ ಫೋಟೋಗಳೂ ಇವೆ.

Also Read: ಭಾರತ ಈಗ ವಿಶ್ವದ ನಂಬರ್ 1 ಎಕನಾಮಿಕ್ ಪವರ್ ಆಗಿದೆಯೇ? ವೈರಲ್‌ ವೀಡಿಯೋ ಹಿಂದಿನ ಸತ್ಯಾಂಶ ಇಲ್ಲಿದೆ!

ಈ ಫೋಟೋಗಳಲ್ಲಿ ಜನರು ಇರುವುದು ಮತ್ತು ಹೂವುಗಳ ಎಸಳುಗಳನ್ನು ಎರಚುತ್ತಿರುವುದನ್ನು ನೋಡಬಹುದು. ಜೊತೆಗೆ ಜನರು ಪ್ರಧಾನಿ ಮೋದಿ ಅವರ ವಾಹನದ ಎಡಭಾಗದಲ್ಲಿ ನಿಂತಿರುವುದನ್ನು ಕಾಣಬಹುದು.

ಮಾರ್ಚ್ 12, 2023ರಂದು ಎನ್ಐಎ ಟ್ವೀಟ್‌ ಮಾಡಿದ್ದು ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್‌ಶೋದ ವೀಡಿಯೋವನ್ನು ಪ್ರಕಟಿಸಲಾಗಿದೆ. ಈ ವೀಡಿಯೋದಲ್ಲೂ ಪ್ರಧಾನಿ ಅವರು ಎಡಬದಿಯಲ್ಲಿ ನಿಂತಿರುವ ಜನರತ್ತ ಕೈಬೀಸುತ್ತಿರುವುದು ಕಂಡುಬಂದಿದೆ.

ಎಎನ್‌ಐ ಟ್ವೀಟ್

ಮಾರ್ಚ್‌ 12, 2023ರಂದು ಟೈಮ್ಸ್‌ ಆಫ್‌ ಇಂಡಿಯಾ ಪ್ರಕಟಿಸಿದ ವೀಡಿಯೋ ವರದಿಯಲ್ಲೂ ಮೋದಿ ರೋಡ್‌ಶೋದ ದೃಶ್ಯಾವಳಿಗಳು ಇವೆ. ಇಲ್ಲೂ ಜನರು ಮೋದಿಯತ್ತ ಹೂವನ್ನು ಎರಚುತ್ತಿರುವುದನ್ನು ಕಾಣಬಹುದು.

ಮಾರ್ಚ್ 12, 2023 ರಂದು ಪ್ರಧಾನಿ ಮೋದಿ ಅವರೂ ಈ ರೋಡ್‌ ಶೋದ ವೀಡಿಯೋವನ್ನು ಟ್ವಿಟರ್‌ನಲ್ಲಿ ಮತ್ತು ಯೂಟ್ಯೂಬ್‌ನಲ್ಲಿ ಶೇರ್‌ ಮಾಡಿದ್ದು, ಅದನ್ನು ಇಲ್ಲಿ ನೋಡಬಹುದು.

ಪ್ರಧಾನಿ ಮೋದಿ ಟ್ವೀಟ್

ಈ ವರದಿಗಳ ಫೋಟೋ ಮತ್ತು ವೀಡಿಯೋಗಳಲ್ಲಿ ಮೋದಿ ಎಡಭಾಗಕ್ಕೆ ತಿರುಗಿ ಕೈಬೀಸುತ್ತಿರುವುದನ್ನು ಕಾಣಬಹುದು ಮತ್ತು ಎಡಭಾಗದಿಂದ ಜನರು ಮೋದಿಯವರತ್ತ ಹೂವಿನ ಎಸಳುಗಳನ್ನು ಹಾಕುತ್ತಿರುವ ದೃಶ್ಯಗಳಿವೆ. ಪ್ರಧಾನಿ ಮೋದಿ ಅವರ ರೋಡ್‌ ಶೋ ಕುರಿತ ಇತರ ಮಾಧ್ಯಮಗಳ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಈ ಕುರಿತು ಸ್ಪಷ್ಟೀಕರಣಕ್ಕಾಗಿ ನ್ಯೂಸ್‌ಚೆಕರ್‌ ಕಾರ್ಯಕ್ರಮದಲ್ಲಿ ಹಾಜರಿದ್ದ ಸ್ಥಳೀಯ ಪತ್ರಕರ್ತರನ್ನು ಮಾತನಾಡಿಸಿ ಸತ್ಯಾಂಶವನ್ನು ತಿಳಿದುಕೊಳ್ಳಲಾಗಿದೆ.
ಕನ್ನಡ ಪ್ರಭ ಪತ್ರಿಕೆಯ ಮಂಡ್ಯ ಜಿಲ್ಲಾ ವರದಿಗಾರರಾದ ಮಂಜುನಾಥ ಮಂಡ್ಯ ಅವರನ್ನು ಸಂಪರ್ಕಿಸಲಾಗಿದ್ದು, ಅವರು “ರೋಡ್‌ಶೋದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರಿದ್ದರು. ಮಂಡ್ಯದ ಪ್ರವಾಸಿ ಮಂದಿರದಿಂದ ನಂದಾವೃತ್ತದವರೆಗೆ ಎಸ್‌.ಡಿ.ಜಯರಾಂ ರಸ್ತೆಯಲ್ಲಿ ರೋಡ್‌ಶೋ ನಡೆದಿತ್ತು. ಪ್ರವಾಸಿ ಮಂದಿರದ ಆರಂಭದ ಸ್ವಲ್ಪ ದೂರದವರೆಗೆ ಚತುಷ್ಪಥ ರಸ್ತೆಯ ಒಂದು ಬದಿಯಲ್ಲಿ ಮಾತ್ರ ಜನರು ನಿಲ್ಲಲು ಅವಕಾಶ ನೀಡಲಾಗಿತ್ತು. ಇನ್ನೊಂದು ಬದಿ ಖಾಲಿ ಬಿಡಲಾಗಿತ್ತು. ಭದ್ರತೆ ಕಾರಣಕ್ಕೆ ಹೀಗೆ ಮಾಡಲಾಗಿತ್ತು. ಆ ಕಾರ್ಯಕ್ರಮ ನಂತರ ಮೋದಿ ಅವರು ರಾಲಿಗೆ ತೆರಳಿದ್ದು, ಅದರಲ್ಲೂ ಜನರಿದ್ದರು.” ಎಂದು ಹೇಳಿದ್ದಾರೆ.

ಟಿವಿ 9 ಕನ್ನಡ ಇದರ ಮಂಡ್ಯ ಜಿಲ್ಲಾ ವರದಿಗಾರರಾದ ಸೂರಜ್‌ ಪ್ರಸಾದ್‌ ಅವರನ್ನು ಸಂಪರ್ಕಿಸಲಾಗಿದ್ದು, ಅವರು “ ಪ್ರಧಾನಿ ಮೋದಿ ಅವರ ರೋಡ್‌ಶೋದಲ್ಲಿ ಮತ್ತು ರಾಲಿಯಲ್ಲೂ ದೊಡ್ಡ ಸಂಖ್ಯೆಯಲ್ಲಿ ಜನರಿದ್ದರು” ಎಂದು ಹೇಳಿದ್ದಾರೆ.

Conclusion

ಈ ಸತ್ಯಶೋಧನೆ ಪ್ರಕಾರ, ಮೋದಿ ರೋಡ್‌ಶೋದಲ್ಲಿ ಚತುಷ್ಪಥ ರಸ್ತೆಯ ಒಂದು ಭಾಗದಲ್ಲಿ ಮಾತ್ರ ಜನರು ಎಡಭಾಗದಲ್ಲಿ ನಿಂತಿದ್ದರು. ಇನ್ನೊಂದು ಭಾಗವನ್ನು ಖಾಲಿ ಬಿಡಲಾಗಿತ್ತು. ಈ ಫೋಟೋವನ್ನು ಕ್ಲೇಮಿನಲ್ಲಿ ಬಳಸಿಕೊಳ್ಳಲಾಗಿದೆ. ಆದ್ದರಿಂದ ಜನರಿರಲಿಲ್ಲ ಎನ್ನುವುದು ತಪ್ಪು ಕ್ಲೇಮ್‌ ಎಂದು ತಿಳಿದುಬಂದಿದೆ.

Result: False

Our Sources
Conversation with Kannadaprabha Reporter Manjunath Mandya
Conversation with TV9 Kannada Reporter Suraj Prasad
Report by OneIndia, Dated: March 12, 2023
Report by Times Of India, Dated: March 12, 2023
Tweet by ANI, Dated: March 12, 2023


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.