ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸರ್ಕಾರ ಎಲ್ಲ ಕುಟುಂಬಗಳಿಗೆ 500 ರೂ.ಗೆ ಎಲ್‌ಪಿಜಿ ಸಿಲಿಂಡರ್‌ ಕೊಡುವುದು ಸತ್ಯವೇ?

ಎಲ್‌ಪಿಜಿ ಸಿಲಿಂಡರ್‌, ಕಾಂಗ್ರೆಸ್‌, ರಾಜಸ್ಥಾನ

ಕರ್ನಾಟಕ ಚುನಾವಣೆ ಸಮೀಪಿಸುತ್ತಿರುವಂತೆಯೇ, ರಾಜಕೀಯ ಪಕ್ಷಗಳು ವಿವಿಧ ಆಶ್ವಾಸನೆಗಳನ್ನು ನೀಡುತ್ತಿವೆ. ಇದಕ್ಕೆ ಪೂರಕವಾಗಿ, ವಿವಿಧೆಡೆ ಅಧಿಕಾರದಲ್ಲಿರುವ ಪಕ್ಷಗಳು ಕರ್ನಾಟಕದಲ್ಲೂ ಅದೇ ಆಶ್ವಾಸನೆಯನ್ನು ಪೂರೈಸಲಾಗುವುದು ಎಂಬ ರೀತಿ ಹೇಳಲಾಗುತ್ತಿದೆ. 

ಇಂತಹ ಒಂದು ಕ್ಲೇಮಿನಲ್ಲಿ ನುಡಿದಂತೆ ನಡೆದ ನಮ್ಮ ಕಾಂಗ್ರೆಸ್‌ ಸರ್ಕಾರ ಎಂದು ಪೋಸ್ಟ್‌ ಒಂದನ್ನು ಮಾಡಲಾಗಿದೆ. ಈ ಪೋಸ್ಟ್‌ನಲ್ಲಿ “ರಾಜಸ್ಥಾನ ರಾಜ್ಯದ ಕಾಂಗ್ರೆಸ್‌ ಸರ್ಕಾರದಿಂದ ಮಹತ್ವದ ಘೋಷಣೆ, ಇದೇ 2023 ರಿಂದ ರಾಜ್ಯದ ಎಲ್ಲ ಜನರಿಗೆ ರಾಜಸ್ಥಾನ ಕಾಂಗ್ರೆಸ್‌ ಸರ್ಕಾರವು ಎಲ್‌ಪಿಜಿ ಸಿಲಿಂಡರ್‌ನ ಕೇವಲ 500 ರೂಪಾಯಿಗೆ ನೀಡಲು ನಿರ್ಧರಿಸಿದೆ” ಎಂದು ಹೇಳಲಾಗಿದೆ. 

ಎಲ್‌ಪಿಜಿ ಸಿಲಿಂಡರ್‌, ಕಾಂಗ್ರೆಸ್‌ ಸರ್ಕಾರ, ರಾಜಸ್ಥಾನ, 500 ರೂ.
ಫೇಸ್‌ಬುಕ್‌ನಲ್ಲಿ ಕಂಡುಬಂದಿರುವ ಕ್ಲೇಮ್‌

ನ್ಯೂಸ್‌ಚೆಕರ್‌ ಈ ಬಗ್ಗೆ ಸತ್ಯ ಶೋಧನೆಯನ್ನು ನಡೆಸಿದ್ದು, ಈ ಕ್ಲೇಮ್‌ ತಪ್ಪು ಎಂದು ತಿಳಿದುಬಂದಿದೆ. 

Fact check/Verification

ಕ್ಲೇಮ್‌ನ ಕುರಿತ ಸತ್ಯಶೋಧನೆಗೆ ಗೂಗಲ್ ನಲ್ಲಿ ಕೀವರ್ಡ್‌ ಸರ್ಚ್ ನಡೆಸಲಾಗಿದ್ದು, ಹಲವು ಫಲಿತಾಂಶಗಳು ಲಭ್ಯವಾಗಿವೆ. 

ಆ ಪ್ರಕಾರ, ರಾಜಸ್ಥಾನದಲ್ಲಿ ಅಶೋಕ್‌ ಗೆಹ್ಲೋಟ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ, ಬಿಪಿಎಲ್‌ ಕುಟುಂಬಗಳಿಗೆ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು 500 ರೂ.ಗಳಿಗೆ ಇಳಿಸಿ ಕೊಡಲು ಮುಂದಾಗಿದ್ದನ್ನು ಮಾಧ್ಯಮಗಳು ವರದಿ ಮಾಡಿವೆ. 

ನ್ಯೂಸ್‌ ಎಬಿಪಿ ಲೈವ್‌ನ ಡಿಸೆಂಬರ್ 19 2022ರ ವರದಿ ಪ್ರಕಾರ, 2023ರಲ್ಲಿ ನಡೆಯಲಿರುವ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಗೆಹ್ಲೋಟ್‌ ಸರ್ಕಾರ ಬಿಪಿಎಲ್‌ ಕುಟುಂಬಗಳಿಗೆ ಒಂದು ಸಿಲಿಂಡರ್‌ಗೆ 500 ರೂ.ನಂತೆ ವಾರ್ಷಿಕ 12 ಸಿಲಿಂಡರ್‌ ಕೊಡಲು ನಿರ್ಧರಿಸಿದೆ. ಬೆಲೆ ಏರಿಕೆ ಬಡಕುಟುಂಬಗಳಿಗೆ ತೀವ್ರ ಸವಾಲಾಗಿದ್ದು, ಎಪ್ರಿಲ್‌ 1ರಿಂದ ಬಿಪಿಎಲ್‌ ಕುಟುಂಬಗಳಿಗೆ ವಾರ್ಷಿಕ 12 ಸಿಲಿಂಡರ್‌ಗಳನ್ನು ಒಂದಕ್ಕೆ 500 ರೂ.ಗಳಂತೆ ಕೊಡಲು ರಾಜಸ್ಥಾನ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಗೆಹ್ಲೋಟ್‌ ಹೇಳಿದ್ದಾಗಿ ವರದಿ ಹೇಳಿದೆ. 

Also Read: ಕಬಿನಿಯಲ್ಲಿ ಕೃಷ್ಣಮೃಗವನ್ನು ಮೊಸಳೆ ಬೆನ್ನಟ್ಟಿದೆಯೇ?; ಸತ್ಯ ಇಲ್ಲಿದೆ! 

ಇಂಡಿಯಾ ಟಿವಿಯ ಡಿಸೆಂಬರ್‌ 19 2022ರ   ವರದಿಯೂ ರಾಜಸ್ಥಾನ ಕಾಂಗ್ರೆಸ್‌ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದೆ. ಅಲ್ಲೂ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಎಪ್ರಿಲ್‌ 1 2023ರ ನಂತರ ರಾಜ್ಯದ ಬಿಪಿಎಲ್‌ ಕುಟುಂಬಗಳಿಗೆ ವಾರ್ಷಿಕ 12 ಸಿಲಿಂಡರ್‌ನಂತೆ ಒಂದು ಸಿಲಿಂಡರ್‌ ಅನ್ನು 500 ರೂ.ಗಳಿಗೆ ಕೊಡುವುದಾಗಿ ಘೋಷಿಸಿದ್ದಾರೆ ಎಂದು ಹೇಳಿದೆ. 

ಮಿಂಟ್‌ ಫೆಬ್ರವರಿ 1 2023 ಪ್ರಕಟಿಸಿದ ವರದಿ ಪ್ರಕಾರ, ರಾಜಸ್ಥಾನದ ಗೆಹ್ಲೋಟ್‌ ಸರ್ಕಾರ ಕೇಂದ್ರ ಸರ್ಕಾರದ ಉಜ್ವಲ ಯೋಜನೆ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್‌ನ್ನು 500 ರೂ.ಗಳಿಗೆ ಕೊಡಲು ಉದ್ದೇಶಿಸಿದೆ. 76 ಲಕ್ಷ ಕುಟುಂಬಗಳಿಗೆ ಪ್ರಯೋಜವಾಗುವ ಈ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದ್ದು, ವಾರ್ಷಿಕ 12 ಸಿಲಿಂಡರ್‌ಗಳನ್ನು ಕೊಡಲಾಗುತ್ತದೆ ಎಂದು ಹೇಳಲಾಗಿದೆ. 

ಮಿಂಟ್‌ ವರದಿ

ಇದೇ ವರದಿಯಲ್ಲಿ ಡಿಸೆಂಬರ್ ವೇಳೆ ಮುಖ್ಯಮಂತ್ರಿ ಗೆಹ್ಲೋಟ್‌ ಅವರು ಬಿಪಿಎಲ್‌ ಕುಟುಂಬಗಳಿಗೆ ಸಿಲಿಂಡರ್‌ಗೆ 500 ರೂ.ಗಳಂತೆ ವಾರ್ಷಿಕ 12 ಸಿಲಿಂಡರ್‌ಗಳನ್ನು ಕೊಡುವುದಾಗಿ ಘೋಷಣೆ ಮಾಡಿದ್ದರು ಎಂದೂ ಹೇಳಿದೆ. 

ಇನ್ನು ಈ ವರದಿಗೆ ಪೂರಕವಾಗಿ ಉಜ್ವಲ ಯೋಜನೆ ಬಗ್ಗೆ ಶೋಧನೆ ನಡೆಸಲಾಗಿದ್ದು, ಇದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಇದರ ಮೂಲಕ ಬಿಪಿಎಲ್‌ ಕುಟುಂಬಗಳಿಗೆ ಉಚಿತವಾಗಿ ಎಲ್‌ಪಿಜಿ ಸಂಪರ್ಕವನ್ನು ಪಡೆಯಬಹುದು. ಮತ್ತು ಮೊದಲ ರಿಫಿಲ್‌ ಸಿಲಿಂಡರ್ ಉಚಿತವಾಗಿ ಪಡೆಯಬಹುದಾಗಿದೆ. ಇದರ ಮಾಹಿತಿಗಳನ್ನು ಈ ಸ್ಕ್ರೀನ್‌ ಶಾಟ್‌ನಲ್ಲಿ ನೋಡಬಹುದು. 

ಕೇಂದ್ರ ಸರ್ಕಾರದ ಉಜ್ವಲ ಫಲಾನುಭವಿಗಳಿಗೆ ಲಭ್ಯವಾಗಯವ ಪ್ರಯೋಜನ

ಇನ್ನು ಕ್ಲೇಮ್‌ ಬಗ್ಗೆ ಇನ್ನಷ್ಟು ಶೋಧನೆಗೆ ರಾಜಸ್ಥಾನದಲ್ಲಿ ಎಲ್‌ಪಿಜಿ ದರವನ್ನು ಹುಡಕಲಾಗಿದ್ದು ಈ ಹೊತ್ತಿಗೆ ಅದರ ದರ, ರಾಜಸ್ಥಾನ ರಾಜಧಾನಿ ಜೈಪುರದಲ್ಲಿ 1056.50 ರೂ.ಗಳು ಎಂದು ತಿಳಿದುಬಂದಿದೆ. ಇತ್ತೀಚಿನ ದರವನ್ನು ಇಂಡಿಯನ್‌ ಆಯಿಲ್‌ನ ಈ ವೆಬ್‌ಸೈಟ್‌ ಮೂಲಕ ಪರೀಕ್ಷಿಸಬಹುದು.

ಫೆಬ್ರವರಿ 14, 2023ರಂದು ರಾಜಸ್ಥಾನದ ಜೈಪುರದಲ್ಲಿ ಎಲ್‌ಪಿಜಿ ಮನೆಬಳಕೆ ಸಿಲಿಂಡರ್‌ ದರ

Conclusion

ಈ ಸತ್ಯಶೋಧನೆ ಪ್ರಕಾರ, ರಾಜಸ್ಥಾನ ಸರ್ಕಾರ ರಾಜ್ಯದ ಎಲ್ಲ ಜನರಿಗೆ ಒಂದು ಸಿಲಿಂಡರ್‌ಗೆ 500 ರೂ.ಗಳಿಗೆ ಸಿಲಿಂಡರ್ ಗಳನ್ನು ಒದಗಿಸುವ ತೀರ್ಮಾನ ಮಾಡಿದೆ ಎನ್ನುವುದು ತಪ್ಪಾಗುತ್ತದೆ. ರಾಜಸ್ಥಾನ ಸರ್ಕಾರ ಈ ಯೋಜನೆಯನ್ನು ಉಜ್ವಲ ಯೋಜನೆ ಹೊಂದಿದ ಕುಟುಂಬಗಳಿಗೆ ಮಾತ್ರ ಸೀಮಿತ ಮಾಡಿದ್ದು, 12 ಸಿಲಿಂಡರ್ ಗಳನ್ನು ತಲಾ 500 ರೂ.ಗಳಿಗೆ ಕೊಡಲಿದೆ. ಅದು ಮುಂದಿನ ಎಪ್ರಿಲ್‌ 1ರಿಂದ ಜಾರಿಗೆ ಬರಲಿದೆ ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಿದೆ.

Result: False

Our Sources
Report by ABP live, Dated: December, 19, 2022
Report by India TV, Dated: December, 19, 2022
Report by Mint, Dated: February, 1, 2023
PM Ujwala yojana


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.