Authors
ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿದೆ. ಅತ್ಯಂತ ಭರವಸೆಯ ನಟ ಎಂದು ಅವರನ್ನು ಗುರುತಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳು ಹರಿದಾಡಿವೆ.
ಈ ಕುರಿತು ಸುವರ್ಣ ನ್ಯೂಸ್ ಮಾಡಿದ ಟ್ವೀಟ್ ಒಂದು ಹೀಗಿದೆ. “ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಕಾಂತಾರ ನಟ ರಿಷಭ್ ಶೆಟ್ಟಿ” ಎಂದಿದೆ. ಇದನ್ನು ಇಲ್ಲಿ ನೋಡಬಹುದು.
ಈ ಕ್ಲೇಮಿನ ಸತ್ಯ ಶೋಧನೆಯನ್ನು ನ್ಯೂಸ್‌ಚೆಕರ್ ಮಾಡಿದ್ದು, ಇದು ತಪ್ಪು ಎಂದು ಕಂಡುಬಂದಿದೆ.
Fact Check/Verification
ಸತ್ಯಶೋಧನೆಗಾಗಿ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ , ಎಂದು ಗೂಗಲ್ ಸರ್ಚ್ ನಲ್ಲಿ ಟೈಪ್ ಮಾಡಲಾಗಿದ್ದು, ಈ ವೇಳೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿರುವ ಡೈರೆಕ್ಟೊರೇಟ್ ಫಿಲಂ ಫೆಸ್ಟಿವಲ್ ನ ವೆಬ್‌ಸೈಟ್ ಭ್ಯವಾಗಿದೆ. ಇದರಲ್ಲಿ ರಾಷ್ಟ್ರೀಯ ಸಿನೆಮಾ ಪ್ರಶಸ್ತಿಯ ವಿಭಾಗದಡಿಯಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯ ಕುರಿತು ವಿವರವಿದ್ದು, ಈ ಪ್ರಶಸ್ತಿಯ ವಿವರ ಹೀಗಿದೆ” 1969ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಯು ಮೊದಲನೆಯದಾಗಿ ದೇವಿಕಾ ರಾಣಿಯವರಿಗೆ ನೀಡಲಾಗಿದ್ದು, ಈ ಮೂಲಕ 1913ರಲ್ಲಿ ಭಾರತದ ಮೊದಲ ಪೂರ್ಣ ಚಲನಚಿತ್ರವನ್ನು ನಿರ್ದೇಶಿಸಿದ ದಾದಾಸಾಹೇಬ್ ಫಾಲ್ಕೆ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು.” ಎಂದಿದೆ.
ಜೊತೆಗೆ “ಇದು ಯಾವುದೇ ಚಲನಚಿತ್ರ, ಸರಣಿಗೆ ನೀಡುವುದಲ್ಲ. ಭಾರತೀಯ ಚಿತ್ರರಂಗದಲ್ಲಿ ಸಿನೆಮಾದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಕೊಡುಗೆ ನೀಡಲ್ಪಟ್ಟವರನ್ನು ಗುರುತಿಸಲು ಸಿನೆಮಾ ಕ್ಷೇತ್ರದ ಈ ಅತ್ಯುನ್ನತ ಪ್ರಶಸ್ತಿಯನ್ನು ಒಬ್ಬ ವ್ಯಕ್ತಿಗೆ ಇದನ್ನು ನೀಡಲಾಗುತ್ತದೆ” ಎಂದೂ ಇದರಲ್ಲಿ ಹೇಳಲಾಗಿದೆ. ಈ ಪ್ರಶಸ್ತಿಯು ಸ್ವರ್ಣ ಕಮಲದ ಮೆಡಲ್, ಶಾಲು, 10 ಲಕ್ಷ ರೂ. ನಗದು ಬಹುಮಾನವನ್ನು ಒಳಗೊಂಡಿದೆ.
ರಿಷಬ್ ಶೆಟ್ಟಿಯವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಎಂಬುದರ ಬಗ್ಗೆ ನಾವು ಪರಿಶೀಲಿಸಿದ್ದು, ಆ ಕುರಿತು ಯಾವುದೇ ಮಾಹಿತಿಗಳು ಕಂಡುಬಂದಿಲ್ಲ. ಈ ಕುರಿತು ಘೋಷಣೆ, ಪತ್ರಿಕಾ ವರದಿಗಳೂ ಕಂಡುಬಂದಿಲ್ಲ. ಈ ಬಗ್ಗೆ ದಾದಾ ಸಾಹೇಬ್ ಫಾಲ್ಕೆ ಕುರಿತ ವಿವರಗಳನ್ನು ಅನ್ವೇಷಿಸಿದಾಗ 2020ರ ಸಾಲಿನಲ್ಲಿ ಆಶಾ ಪಾರೇಖ್ ಅವರಿಗೆ ಕೊಡಮಾಡಿದ ಪ್ರಶಸ್ತಿ ಇತ್ತೀಚಿನದ್ದು ಎಂದು ತಿಳಿದು ಬಂದಿದೆ. ಮತ್ತು ಈವರೆಗೆ ಪ್ರಶಸ್ತಿ ವಿಜೇತರಾದ 52 ಮಂದಿಯ ಫೊಟೋಗಳನ್ನು ಇಲ್ಲಿ ನೀಡಲಾಗಿದೆ.
Also Read: ಥಾಣೆಯಲ್ಲಿ ಕುಸಿದು ಬಿದ್ದ ಕಾಂಕ್ರೀಟ್ ತೊಲೆ; ಆ ದುರ್ಘಟನೆ ನಿಜಕ್ಕೂ ಅಲ್ಲಿ ನಡೆದಿದ್ದಲ್ಲ!
ಇನ್ನೂ ಒಂದು ಮಹತ್ವದ ಅಂಶವೇನೆಂದರೆ 68ನೇ ರಾಷ್ಟ್ರೀಯ ಸಿನೆಮಾ ಪ್ರಶಸ್ತಿ ವಿತರಣೆ ಮತ್ತು 2020ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿತರಣೆ ಸೆಪ್ಟೆಂಬರ್ 30, 2022ರಂದು ನಡೆದಿದ್ದು, ಇದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ವಿಜೇತರನ್ನು ಅಭಿನಂದಿಸುವ ದೃಶ್ಯವನ್ನು ಇಲ್ಲಿ ಕಾಣಬುದು. ಇಲ್ಲಿ ಆಶಾ ಪಾರೇಖ್ ಅವರು ಪ್ರಶಸ್ತಿ ಸ್ವೀಕರಿಸುತ್ತಿರುವುದನ್ನೂ ನೋಡಬಹುದು.
ಹಾಗಿದ್ದರೆ, ರಿಷಬ್ ಶೆಟ್ಟಿಯವರಿಗೆ ಸಿಕ್ಕಿದ್ದೇನು?
ತಮಗೆ ಇತ್ತೀಚೆಗೆ ಸಿಕ್ಕಿದ ಪ್ರಶಸ್ತಿ ಕುರಿತಂತೆ ಸ್ವತಃ ರಿಷಭ್ ಶೆಟ್ಟಿಯವರೇ ಹೇಳಿಕೊಂಡಂತೆ ಅವರಿಗೆ ಸಿಕ್ಕಿದ್ದು “ದಾದಾ ಸಾಹೇಬ್ ಫಾಲ್ಕೆ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಪ್ರಶಸ್ತಿ 2023.” (ಡಿಪಿಐಎಫ್‌ಎಫ್) ಇದರಲ್ಲಿ ಅವರಿಗೆ ಹಿಂದಿ ವಿಭಾಗದಲ್ಲಿ “ಭರವಸೆಯ ನಟ” ಎಂಬ ಪ್ರಶಸ್ತಿ ಸಿಕ್ಕಿದೆ. ಇದನ್ನವರು ಟ್ವೀಟ್ ಮಾಡಿ ಹೇಳಿದ್ದಾರೆ. ಇದು ಅವರು ಟ್ವೀಟರ್‌ನಲ್ಲಿ ಶೇರ್ ಮಾಡಿದ ಪಾರಿತೋಷಕದ ಚಿತ್ರದಲ್ಲೂ ಸ್ಪಷ್ಟವಾಗಿ ಕಾಣಿಸುತ್ತದೆ.
ಡಿಪಿಐಎಫ್ಎಫ್ ಎಂದರೇನು?
ಇದರ ಕುರಿತ ವೆಬ್‌ಸೈಟ್‌ನಲ್ಲಿ ಕಂಡುಬಂದ ಪ್ರಕಾರ, “ದಾದಾ ಸಾಹೇಬ್ ಫಾಲ್ಕೆ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ (ಡಿಪಿಐಎಫ್‌ಎಫ್) ಎನ್ನುವುದು 2012ರಲ್ಲಿ ಸ್ಥಾಪನೆಯಾಗಿದ್ದು, 2016ರಿಂದ ದಾದಾ ಸಾಹೇಬ್ ಫಾಲ್ಕೆ ಎಂದು ಕರೆಯಲ್ಪಡುವ, ಭಾರತೀಯ ಚಿತ್ರರಂಗದ ಪಿತಾಮಹರಾದ ದಿ.ಶ್ರೀ. ಡುಂಢಿರಾಜ್ ಗೋವಿಂದ ಫಾಲ್ಕೆ ಅವರ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದೆ. ಇದು ಭಾರತದ ಏಕೈಕ ಸ್ವತಂತ್ರ ಅಂ.ರಾ. ಫಿಲಂ ಫೆಸ್ಟಿವಲ್ ಆಗಿದ್ದು, ಇದು ಯುವ, ಸ್ವತಂತ್ರ, ವೃತ್ತಿಪರ, ಮತ್ತು ಮಹತ್ವಾಕಾಂಕ್ಷಿ ಚಲನಚಿತ್ರ ನಿರ್ಮಾಪಕರ ಕೆಲಸವನ್ನು ಆಚರಿಸುವ ಉದ್ದೇಶವನ್ನು ಹೊಂದಿದೆ. ಇದರ ಗುರಿ “ಶ್ರೀ ದಾದಾ ಸಾಹೇಬ್ ಫಾಲ್ಕೆ ಅವರ ಜೀವಮಾನದ ಪ್ರಯತ್ನವನ್ನು ಗೌರವಿಸುವುದು ಮತ್ತು ಅದನ್ನು ಮುಖ್ಯವಾಹಿನಿಯ ಪ್ರೇಕ್ಷಕರಿಗೆ ತಿಳಿಸುವ ಮೂಲಕ ಹೊಸ ಯೋಜನೆಗಳನ್ನು ಅಂಗೀಕರಿಸುವ ಮತ್ತು ಸಹಾಯ ಮಾಡುವ ಪ್ರಯತ್ನವನ್ನು ಮಾಡುವ ಮೂಲಕ ಈ ಉತ್ಸವ ಭಾರತೀಯ ಚಲನಚಿತ್ರೋದ್ಯಮದ ಪ್ರತಿಭೆಯನ್ನು ಆಚರಿಸುವುದಾಗಿದೆ. ಡಿಪಿಐಎಫ್‌ಎಫ್ ಮನರಂಜನಾ ಉದ್ಯಮವನ್ನು ಗೌರವಿಸಲು ಮತ್ತು ಸಿನೆಮಾದ ಅದ್ಭುತ ಜಗತ್ತಿನಲ್ಲಿ ಸೃಜನ ಶೀಲತೆಯನ್ನು ಪ್ರಶಂಸಿಸಲು ಉದ್ದೇಶಿಸಿರುವ ಒಂದು ಅನನ್ಯ ಉಪಕ್ರಮವಾಗಿದೆ” ಎಂದು ವಿವರದಲ್ಲಿ ಹೇಳಲಾಗಿದೆ.
Conclusion
ಈ ಸತ್ಯಶೋಧನೆಯ ಪ್ರಕಾರ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ದಾದಾ ಸಾಹೇಬ್ ಫಾಲ್ಕೆ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ಪ್ರಶಸ್ತಿ (ಡಿಪಿಐಎಫ್‌ಎಫ್) ಎನ್ನುವುದು ಬೇರೆ ಬೇರೆಯದಾಗಿದೆ. ದಾದಾ ಸಾಹೇಬ್ ಎಂಬ ಹೆಸರು ಎರಡೂ ಪ್ರಶಸ್ತಿಯಲ್ಲಿ ಇರುವುದರಿಂದ ವ್ಯತ್ಯಾಸವನ್ನು ಗುರುತಿಸಲಾಗಿಲ್ಲ. ಜೊತೆಗೆ ರಿಷಬ್ ಅವರಿಗೆ ದೊರಕಿದ್ದು, ಈ ಡಿಪಿಐಎಫ್‌ಎಫ್ ಪ್ರಶಸ್ತಿಯಾಗಿದೆ. ಆದ್ದರಿಂದ ಈ ಕ್ಲೇಮ್ ತಪ್ಪಾಗಿದೆ.
Result: False
Our Sources
Official Website of Directorate of Film Festivals
Official Website of Dadasaheb Phalke International Film Festival
Self Analysis
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.