ಕಾಂತಾರ ಸಿನೆಮಾ ನೋಡಲು ಹೋದ ಜೋಡಿಗೆ ಹಲ್ಲೆ ನಡೆಸಿದ್ದಕ್ಕೆ ಇಸ್ಲಾಮೋಫೋಬಿಯಾ ಕಾರಣ?

ಕಾಂತಾರ, ಮುಸ್ಲಿಂ ಜೋಡಿ,, ಹಲ್ಲೆ, ಇಸ್ಲಾಮೋಫೋಬಿಯಾ

ಕಾಂತಾರ ಸಿನೆಮಾ ನೋಡಲು ಹೋದ ಮುಸ್ಲಿಂ ಜೋಡಿಗೆ, ಗುಂಪೊಂದು ಹಲ್ಲೆ ನಡೆಸಿದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದ ಈ ಸುದ್ದಿಯನ್ನು ಹಲವರು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ನಲ್ಲಿ “ಮುಸ್ಲಿಂ ಜೋಡಿ ಕನ್ನಡ ಸಿನೆಮಾ ಕಾಂತಾರ ನೋಡಲು ಹೋಗಿದ್ದು, ಅವರ ಮೇಲೆ ಗುಂಪೊಂದು ಹಲ್ಲೆ ಮಾಡಿದೆ” ಎಂದು ಹೇಳಿದ್ದಾರೆ’’. ಜೊತೆಗೆ ಇಸ್ಲಾಮೋಫೋಬಿಯಾ ಇನ್‌ ಇಂಡಿಯಾ, ಹಿಂದುತ್ವ, ಹಿಂದೂಸ್‌4ಎಚ್ಆರ್‌, ಐಆಮ್‌ಕೌನ್ಸಿಲ್‌, ಬಿಜೆಪಿ, ಬಿಜೆಪಿಫೈಲ್ಸ್‌ಇನ್‌ಇಂಡಿಯಾ ಹೆಸರಿನಲ್ಲಿ ಹ್ಯಾಷ್‌ಟ್ಯಾಗ್‌ ಹಾಕಲಾಗಿದೆ. ಅದು ಇಲ್ಲಿದೆ.

Fact Check

ನ್ಯೂಸ್‌ಚೆಕರ್‌ ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಉದ್ದೇಶಿಸಿದ್ದು, ಈ ಸುದ್ದಿಯ ಬಗ್ಗೆ ಗೂಗಲ್‌ನಲ್ಲಿ ಕೀವರ್ಡ್‌ ಸರ್ಚ್ ನಡೆಸಿದೆ. Kantara, mob assault, Muslim couple ಎಂದು  ಹಾಕಲಾಗಿದೆ. 

ಈ ವೇಳೆ ಹಲವು ವೆಬ್‌ಸೈಟ್‌ ಸುದ್ದಿಗಳು ಬಂದಿವೆ. ನ್ಯೂಸ್‌18 ಈ ಬಗ್ಗೆ ವರದಿ ಮಾಡಿದ್ದು, ವಿದ್ಯಾರ್ಥಿಗಳಾದ ಮೊಹಮ್ಮದ್‌ ಇಮ್ತಿಯಾಝ್‌(20 ವರ್ಷ) ಮತ್ತು ಅವರ ಸ್ನೇಹಿತೆ ದಕ್ಷಿಣ ಕನ್ನಡದ ಸುಳ್ಯದ ಥಿಯೇಟರ್‌ಗೆ ಕಾಂತಾರಾ ಸಿನೆಮಾ ನೋಡಲು ಹೋಗಿದ್ದರು. ಈ ವೇಳೆ ಗುಂಪೊಂದು ಅವರು ಸಿನೆಮಾಕ್ಕೆ ಬಂದಿದ್ದನ್ನು ಪ್ರಶ್ನಿಸಿ, ತಗಾದೆ ತೆಗೆದಿದೆ. ಅಲ್ಲದೇ ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ ಎಂದು ಹೇಳಿದೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್‌ ಇಮ್ತಿಯಾಝ್‌ ಅವರು ಸುಳ್ಯ ಪೊಲೀಸ್‌ ಠಾಣೆಯಲ್ಲಿ ದೂರುನೀಡಿದ್ದು, ಕೇಸು ದಾಖಲಿಸಲಾಗಿದೆ. ಕೇಸಿನಲ್ಲಿ ಅಬ್ದುಲ್‌ ಹಮೀದ್, ಅಶ್ರಫ್‌ ಸಾದಿಕ್‌, ಜಬೀರ್‌ ಜಟ್ಟಿಪಳ್ಳ, ಸಿದ್ದಿಕಿ ಬೋರುಗುಡ್ಡೆ ಎಂಬವರ ಮೇಲೆ ದೂರುದಾರರು ದೂರು ನೀಡಿದ್ದಾಗಿ, ಅವರು ಕೊಲೆ ಬೆದರಿಕೆ ಹಾಕಿದ್ದಾಗಿಯೂ ವರದಿ ಹೇಳಿದೆ. 

ಇಂಡಿಯಾಟೈಮ್ಸ್‌,  ಫ್ರಿಪ್ರೆಸ್ ಜರ್ನಲ್‌ಗಳೂ ಈ ಕುರಿತ ಸುದ್ದಿಯನ್ನು ಪ್ರಕಟಿಸಿವೆ. 

ಕನ್ನಡದಲ್ಲೂ ಈ ಕುರಿತಾಗಿ ಕಾಂತಾರ, ಜೋಡಿ ಮೇಲೆ ಹಲ್ಲೆ ಎಂದು ಗೂಗಲ್‌ನಲ್ಲಿ ಕೀವರ್ಡ್ ಸರ್ಚ್ ನಡೆಸಲಾಗಿದೆ. ಈ ವೇಳೆ ಕನ್ನಡ ನ್ಯೂಸ್‌ 18, ಪ್ರಜಾವಾಣಿ, ಪಬ್ಲಿಕ್‌ ಟೀವಿ ಮುಂದಾದ ಮಾಧ್ಯಮಗಳೂ ಈ ಸುದ್ದಿಯ ಬಗ್ಗೆ ವರದಿ ಮಾಡಿವೆ. 

ಪ್ರಜಾವಾಣಿಯ ವರದಿಯಲ್ಲೂ “ಸ್ನೇಹಿತೆಯ ಜೊತೆಗೆ ಕಾಂತಾರ ಸಿನೆಮಾ ನೋಡಲು ಬಂದ ವೇಳೆ ಗುಂಪು ಹಲ್ಲೆ ನಡೆಸಿರುವುದಾಗಿ ಬಂಟ್ವಾಳ ತಾಲೂಕು ಬಿಮೂಡ ಗ್ರಾಮದ ಕೈಕಂಬ ಮನೆಯ ಮೊಹಮ್ಮ ಇಮ್ತಿಯಾಜ್‌ ಅವರು ಠಾಣೆಗೆ ಇಮೇಲ್‌ ದೂರು ನೀಡಿರುವುದಾಗಿ” ಹೇಳಲಾಗಿದೆ. ಈ ಪ್ರಕರಣದಲ್ಲಿ “ಆರೋಪಿಗಳಾದ ಅಬ್ದುಲ್‌ ಹಮೀದ್‌, ಅಶ್ರಫ್, ಸಾದಿಕ್‌, ಜಬೀರ್‌ ಜಟ್ಟಿಪಳ್ಳ ಸಿದ್ದಿಕ್‌ ಬೋರುಗುಡ್ಡೆ ಎಂಬವರ ಮೇಲೆ ದೂರು ದಾಖಲಾಗಿದ್ದಾಗಿ” ಹೇಳಲಾಗಿದೆ. ಜೊತೆಗೆ “ಸಿನೆಮಾ ನೋಡಲು ಬಂದ ವಿದ್ಯಾರ್ಥಿಗಳೂ ಒಂದೇ ಸಮುದಾಯಕ್ಕೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾಗಿ” ವರದಿ ಹೇಳಿದೆ. 

ಇದರೊಂದಿಗೆ ದ.ಕ. ಪೊಲೀಸರು ಮಾಧ್ಯಮಕ್ಕೆ ಬಿಡುಗಡೆ ಮಾಡಿದ ವರದಿಯಲ್ಲಿ ದೂರುದಾರರು ಮತ್ತು ಆರೋಪಿಗಳ ವಿವರಗಳನ್ನು ನೀಡಿದ್ದು ಇದು ಎರಡೂ ಕಡೆಯವರು ಒಂದೇ ಸಮುದಾಯಕ್ಕೆ ಸೇರಿದವರು ಎಂಬುದನ್ನು ತಿಳಿಸಿದೆ.

ಆದ್ದರಿಂದ ಈ ಪ್ರಕರಣದಲ್ಲಿ ಒಂದು ಸಮುದಾಯದ ಮಂದಿ ಅದೇ ಸಮುದಾಯದ ವಿದ್ಯಾರ್ಥಿ ಜೋಡಿಗೆ ಹಲ್ಲೆ ನಡೆಸಿರುವುದು ತಿಳಿದು ಬಂದಿದೆ. ಆದ್ದರಿಂದ ಕ್ಲೇಮಿನಲ್ಲಿ ಹೇಳಿರುವಂತೆ “ಇಸ್ಲಾಮೋಫೋಬಿಕ್‌” ಎಂಬ ಹ್ಯಾಶ್‌ಟ್ಯಾಗ್‌ಗೆ ಸಂಬಂಧ ಪಟ್ಟಿದ್ದಲ್ಲ ಎಂದು ತಿಳಿದು ಬರುತ್ತದೆ. 

Also Read: ಶಬರಿಮಲೆಗೆ ಮೋದಿ ಭೇಟಿ ನೀಡಿದ್ದು ನಿಜವೇ? 

Conclusion

ಕ್ಲೇಮಿನಲ್ಲಿ ಹೇಳಿರುವಂತೆ  ಮುಸ್ಲಿಂ ಜೋಡಿ ಕನ್ನಡ ಸಿನೆಮಾ ಕಾಂತಾರ ನೋಡಲು ಹೋಗಿದ್ದು, ಅವರ ಮೇಲೆ ಗುಂಪೊಂದು ಹಲ್ಲೆ ಮಾಡಿದ ಪ್ರಕರಣದಲ್ಲಿ ಈ ಘಟನೆಗೆ ಸಂಬಂಧಿಸಿ “ಇಸ್ಲಾಮೋಫೋಬಿಯಾ ಇನ್‌ ಇಂಡಿಯಾ, ಹಿಂದುತ್ವ, ಹಿಂದೂಸ್‌4ಎಚ್ಆರ್‌, ಐಆಮ್‌ಕೌನ್ಸಿಲ್‌, ಬಿಜೆಪಿ, ಬಿಜೆಪಿಫೈಲ್ಸ್‌ಇನ್‌ಇಂಡಿಯಾ” ಎಂದು ಹ್ಯಾಶ್‌ಟ್ಯಾಗ್‌ ಹಾಕಿರುವುದು ಇದಕ್ಕೆ ಸಂಬಂಧಪಟ್ಟಿದ್ದಲ್ಲ. ಆದ್ದರಿಂದ ಇದು ಸಂಪೂರ್ಣ ತಪ್ಪಾಗಿದೆ. 

Result: False

Our Sources
Information released to the media by D.K Police on: 8/12/2022