Authors
Claim
ಮುಸ್ಲಿಂ ಗುಂಪು ಯುವಕನಿಗೆ ಥಳಿಸಿ, ಕತ್ತಿಯಲ್ಲಿ ಕುತ್ತಿಗೆ ಕಡಿಯುವ ದೃಶ್ಯ
Fact
ವೀಡಿಯೋದಲ್ಲಿ ಎರಡು ಪ್ರತ್ಯೇಕ ಅಪರಾಧಗಳ ದೃಶ್ಯಗಳನ್ನು ಎಡಿಟ್ ಮಾಡಿ ಹಾಕಲಾಗಿದ್ದು, ಇವೆರಡು ಘಟನೆಗೆ ಒಂದಕ್ಕೊಂದು ಸಂಬಂಧವಿಲ್ಲ ಮತ್ತು ಇದು ಸತ್ಯವಲ್ಲ
ಮುಸ್ಲಿಂ ಗುಂಪು ಯುವಕನಿಗೆ ಥಳಿಸಿ, ಕತ್ತಿಯಿಂದ ಕಡಿದು ಹತ್ಯೆಗೈಯುತ್ತಿರುವ ದೃಶ್ಯ ಎಂದು ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಾಟ್ಸಾಪ್‌ನಲ್ಲಿ ಕಂಡುಬಂದ ಈ ವೀಡಿಯೋದಲ್ಲಿ ಬೈಕ್ ಮೇಲೆ ಕೂತಿದ್ದ ಯುವಕನನ್ನು ಗುಂಪು ಥಳಿಸಿ ಒಂದು ಗೇಟ್ ಇರುವ ಪ್ರದೇಶದೊಳಗೆ ಕರೆದೊಯ್ಯುತ್ತದೆ ಬಳಿಕ ಆತನನ್ನು ಕಟ್ಟಿ, ಆತನ ಕುತ್ತಿಗೆಗೆ ಕತ್ತಿಯಿಂದ ಕಡಿದು ಹತ್ಯೆ ಮಾಡಲಾಗುತ್ತದೆ. ಈ ವೀಡಿಯೋದಲ್ಲಿ ಹಿಂದಿಯಲ್ಲಿ ಬರೆದ ವಾಕ್ಯವಿದ್ದು “ಕಟುಕನಿಗೆ ಕುರಿಯಾಗಲಿ, ಮನುಷ್ಯನಾಗಲಿ ಒಂದೇ, ಆತ ತುಂಡರಿಸುವ ಮೊದಲು ಯಾರು ಎಂದು ನೋಡುವುದಿಲ್ಲ” ಎಂದು ಬರೆಯಲಾಗಿದೆ.
ಈ ವೀಡಿಯೋದ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆಗೆ ನ್ಯೂಸ್‌ಚೆಕರ್ ಮುಂದಾಗಿದ್ದು, ಇದು ತಪ್ಪು ಕ್ಲೇಮ್ ಎಂಬುದನ್ನು ಕಂಡುಕೊಳ್ಳಲಾಗಿದೆ.
Fact check/ Verification
ಸತ್ಯಪರಿಶೀಲನೆಗಾಗಿ ವೀಡಿಯೋ ಪರಿಶೀಲಿಸಿದಾಗ, ಇದರಲ್ಲಿ ಎರಡು ಪ್ರತ್ಯೇಕ ವೀಡಿಯೋಗಳನ್ನು ಒಂದು ಮಾಡಿರುವುದು ತಿಳಿದುಬಂದಿದೆ. ಜೊತೆಗೆ ವೀಡಿಯೋದ ಕೀಫ್ರೇಂಗಳನ್ನು ಪಡೆದು ರಿವರ್ಸ್ ಇಮೇಜ್ ಸರ್ಚ್ ನಡೆಸಲಾಗಿದ್ದು ಮೇ 5, 2021ರಂದು ಲೈವ್ ಹಿಂದುಸ್ತಾನ್‌ನಲ್ಲಿ ಈ ಬಗ್ಗೆ ವರದಿ ಮಾಡಲಾಗಿದೆ.
ಈ ವರದಿ ಪ್ರಕಾರ, ಉತ್ತರ ಪ್ರದೇಶದ ಸಿಕ್ರಿ ಗ್ರಾಮದಲ್ಲಿ ನಡೆದ ಘಟನೆಯಾಗಿದ್ದು, ಲೈನ್‌ಮನ್ ಆಗಿರುವ ಅನುಜ್ ಎಂಬಾತನನ್ನು ಥಳಿಸುತ್ತಿರುವ ವಿಡಿಯೋ ಇದಾಗಿದೆ. ಸಿಕ್ರಿ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆಗೆ ಸಂಬಂಧಿಸಿ, ಅನೂಜ್ ಬಂದಿದ್ದು, ಈ ವೇಳೆ ಆತನ ಬಳಿ ಮನೆಯೊಂದರಿಂದ ಕೇಬಲ್ ಬದಲಾಯಿಸಲು ಕೇಳಲಾಗಿದೆ. ಇದಕ್ಕೆ ಆತ ನಿರಾಕರಿಸಿದ್ದು, ಇದು ಚರ್ಚೆಗೆ ತಿರುಗಿ, ಆತನಿಗೆ ಗುಂಪು ಥಳಿಸುತ್ತದೆ. ಇದನ್ನು ಮೇ 5, 2021ರಂದು ಅಮರ್ ಉಜಾಲಾ ಕೂಡ ವರದಿ ಮಾಡಿದೆ.
ಈ ವೀಡಿಯೋ ಟ್ವಿಟರ್‌ನಲ್ಲಿ ಕೂಡ ಕಂಡುಬಂದಿದ್ದು, ಇದು ಪಶ್ಚಿಮ ಬಂಗಾಳದ್ದು ಎಂಬಂತೆ ಬೃಜೇಶ್‌ಯಾದವ್945 ಎಂಬ ಬಳಕೆದಾರರು ಶೇರ್ ಮಾಡಿರುವುದು ತಿಳಿದುಬಂದಿದೆ. ಆದರೆ ಇದಕ್ಕೆ ಮುಜಫ್ಫರ್‌ನಗರ ಪೊಲೀಸರು ಪ್ರತಿಕ್ರಿಯಿಸಿದ್ದು, ಇದು ಉತ್ತರ ಪ್ರದೇಶದಲ್ಲಿ ನಡೆದ ಘಟನೆಯಾಗಿದ್ದು, 10-12 ಜನರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಕುತ್ತಿಗೆ ಕಡಿಯುವ ವೀಡಿಯೋದ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಈ ಬಗ್ಗೆ ಗೂಗಲ್‌ನಲ್ಲಿ ಕೀವರ್ಡ್ ಸರ್ಚ್ ನಡೆಸಲಾಗಿದ್ದು, ಫೆಬ್ರವರಿ 6, 2018ರಂದು ನ್ಯೂಸ್.ಕಾಮ್ ಎಯು ವರದಿ ಕಂಡುಬಂದಿದೆ. ಈ ವರದಿ ಪ್ರಕಾರ, ಕುತ್ತಿಗೆ ಕಡಿದ ಘಟನೆ ಉತ್ತರ ಅಮೆರಿಕದ ವೆನಿಜುವೆಲಾದಲ್ಲಿ ನಡೆದಿದೆ. ಡ್ರಗ್ ಮಾಫಿಯಾ ಗ್ಯಾಂಗ್ ಜೊತೆಗೆ ವೀಡಿಯೋದಲ್ಲಿ ಕಾಣಿಸುವ ಯುವಕನಿಗೆ ದ್ವೇಷವಿದ್ದು ಆತನನ್ನು ಮಾಫಿಯಾ ಗ್ಯಾಂಗ್ ಹಿಡಿದು, ಅಪರಿಚಿತ ಪ್ರದೇಶದಲ್ಲಿ ಕುತ್ತಿಗೆ ಕಡಿದು ಹತ್ಯೆ ಮಾಡಿತ್ತು. ಇದರೊಂದಿಗೆ ಘಟನೆಯನ್ನು ವೀಡಿಯೋ ಮಾಡಲಾಗಿದ್ದು, ಇಂಟರ್ನೆಟ್‌ನಲ್ಲಿ ಶೇರ್ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಘಟನೆಯ ವರದಿಯನ್ನು ಫೆಬ್ರವರಿ 6, 2018ರಂದು ದಿ ಸನ್ ಕೂಡ ಪ್ರಕಟಿಸಿತ್ತು.
Conclusion
ಸತ್ಯಶೋಧನೆಯ ಪ್ರಕಾರ, ಗುಂಪೊಂದು ಹತ್ಯೆ ಮಾಡಲಾದ ವೀಡಿಯೋ ತಪ್ಪಾಗಿದೆ. ಥಳಿಸುವ ಮತ್ತು ಹತ್ಯೆ ಮಾಡುವ ಎರಡು ವೀಡಿಯೋಗಳನ್ನು ಜೋಡಿಸಿ, ಒಂದೇ ಘಟನೆ ಎಂಬಂತೆ ಹರಿಯಬಿಡಲಾಗಿದೆ. ಮೊದಲನೇ ಘಟನೆ ವಿದ್ಯುತ್ ವಿಚಾರಕ್ಕೆ ಸಂಬಂಧಿಸಿದ್ದಾಗಿದ್ದು, ಎರಡನೇ ವಿಡಿಯೋ ವೆನಿಜುವೆಲಾದಲ್ಲಿ ನಡೆದ ಘಟನೆಯಾಗಿದೆ.
Result: False
Our Sources:
Report by Live Hindustan, Dated May 5, 2021
Report by Amarujala, Dated May 5, 2021
Report by News.com.au, Dated, February 6, 2018
Report by The Sun, Dated, February 6, 2018
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.