Fact Check
ಬೆಳಗಾವಿಯಲ್ಲಿ ಭೂಗತ ಹೈಡ್ರಾಲಿಕ್ ಕಸದ ತೊಟ್ಟಿ ಎಂದು ಟರ್ಕಿಯ ವೀಡಿಯೋ ಹಂಚಿಕೆ
Claim
ಬೆಳಗಾವಿಯಲ್ಲಿ ಭೂಗತ ಹೈಡ್ರಾಲಿಕ್ ಕಸದ ತೊಟ್ಟಿ ಯೋಜನೆ
Fact
ಬೆಳಗಾವಿಯಲ್ಲಿ ಭೂಗತ ಹೈಡ್ರಾಲಿಕ್ ಕಸದ ತೊಟ್ಟಿ ಯೋಜನೆ ಎಂದು ಹಂಚಿಕೊಳ್ಳಲಾದ ವೀಡಿಯೋ ಟರ್ಕಿಯದ್ದು
ಬೆಳಗಾವಿಯಲ್ಲಿ ವಿನೂತನ ಮಾದರಿಯ ಭೂಗತ ಹೈಡ್ರಾಲಿಕ್ ಕಸದ ತೊಟ್ಟಿ ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಎಕ್ಸ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ಬೆಳಗಾವಿಯ ಬಿಜೆಪಿ ಶಾಸಕ iamabhaypatil ರಿಂದ ಕಸಸಂಗ್ರಹಕ್ಕಾಗಿ ಇಂತಹ ಅದ್ಭುತ ಉಪಕ್ರಮ, ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತದಲ್ಲಿಯೂ ಮೊದಲ ಬಾರಿಗೆ 1 ಟನ್ ಸಾಮರ್ಥ್ಯದ ಭೂಗತ ಹೈಡ್ರಾಲಿಕ್ ಡಸ್ಟ್ಬಿನ್, 75% ಕಸವನ್ನು ಸಂಗ್ರಹಿಸಿದ ನಂತರ, ನೈರ್ಮಲ್ಯ ಇಲಾಖೆಗೆ ಸ್ವಯಂಚಾಲಿತವಾಗಿ ಮಾಹಿತಿ ನೀಡಲಾಗುವುದು, 100% ತುಂಬಿದ ನಂತರವೂ ಕಸವನ್ನು ಸಂಗ್ರಹಿಸದಿದ್ದರೆ, ಸಂಬಂಧಪಟ್ಟ ತಂಡದ ವಿರುದ್ಧ ಶಿಕ್ಷಾರ್ಹ ಕ್ರಮ ಕೈಗೊಳ್ಳಲಾಗುವುದು…” ಎಂದಿದೆ.

ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಭೂಗತ ಹೈಡ್ರಾಲಿಕ್ ಕಸದ ತೊಟ್ಟಿಯ ಕುರಿತ ಪೋಸ್ಟ್ ಜೊತೆಗೆ ಹಂಚಿಕೊಂಡಿರುವ ವೀಡಿಯೋ ಟರ್ಕಿಯದ್ದಾಗಿದೆ ಎಂದು ಕಂಡುಕೊಂಡಿದೆ.
Fact Check/Verification
ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ Hidro-Mak ಹೆಸರಿನ ಯೂಟ್ಯೂಬ್ ಚಾನೆಲ್ ನಲ್ಲಿ ಆಗಸ್ಟ್ 27, 2013ರಂದು ಪ್ರಕಟಿಸಲಾದ ವೀಡಿಯೋ ಲಭ್ಯವಾಗಿದೆ. ಅಲ್ಲಿ ವೈರಲ್ ವೀಡಿಯೋವನ್ನು ಹೋಲುವ ವೀಡಿಯೋ ಲಭ್ಯವಾಗಿದೆ ಮತ್ತು ಭೂಗತ ಕಸದ ತೊಟ್ಟಿಯಿಂದ ಲಾರಿಗೆ ಕಸವನ್ನು ಹಾಕುವ ದೃಶ್ಯಗಳನ್ನು ಕಾಣಬಹುದು.

ಈ ವೀಡಿಯೋದಲ್ಲಿ ಕಂಡುಬರುವ ಟ್ರಕ್ ನಲ್ಲಿ Üsküdar Belediyesi ಎಂಬ ಹೆಸರಿದ್ದು, 34 EF 4247 ಎಂಬ ರಿಜಿಸ್ಟ್ರೇಶನ್ ಸಂಖ್ಯೆ ಇದೆ. ಇದು ಟರ್ಕಿಯದ್ದಾಗಿದ್ದು, Üsküdar Belediyesi ಎಂಬುದು ಟರ್ಕಿಯ ಒಂದು ಮುನ್ಸಿಪಾಲಿಟಿ ಎಂದು ಗೊತ್ತಾಗಿದೆ.

ಸತ್ಯಶೋಧನೆಗಾಗಿ ನಾವು ಇನ್ನಷ್ಟು ಹುಡುಕಾಡಿದ್ದು ಈ ವೇಳೆ ವಿವಿಧ ಪತ್ರಿಕಾ ವರದಿಗಳು ಲಭ್ಯವಾಗಿವೆ. ಅದರಲ್ಲಿ ಬೆಳಗಾವಿ ಮಹಾನಗರದಲ್ಲಿ ಕಸವಿಲೇವಾರಿಗೆ ಹೈಡ್ರಾಲಿಕ್ ಚಾಲಿತ ಭೂಗತ ಕಸದ ತೊಟ್ಟಿ ಳವಡಿಸಿದ್ದರ ಕುರಿತು ಹೇಳಲಾಗಿದೆ.
ಡಿಸೆಂಬರ್ 10, 2022ರ ವಿಜಯವಾಣಿ ವರದಿಯಲ್ಲಿ, “ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ 18 ಕಡೆ ಹೈಟೆಕ್ ಸೌಲಭ್ಯ ಮತ್ತು ಸೆನ್ಸಾರ್ ಒಳಗೊಂಡಿರುವ ಡಸ್ಟ್ ಬಿನ್ಗಳನ್ನು ಅಳವಡಿಸಲಾಗಿದೆ. ಇದಕ್ಕಾಗಿ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಪ್ರತಿ ಡಸ್ಟ್ಬಿನ್ಗೆ 6.5 ಲಕ್ಷ ರೂ.ರಂತೆ 1.56 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಅಲ್ಲದೆ, ಈ ಡಸ್ಟಬಿನ್ಗಳಲ್ಲಿ ಸಂಗ್ರಹವಾಗುವ ಕಸ ವಿಲೇವಾರಿ ಮಾಡಲು 80 ಲಕ್ಷ ರೂ. ವೆಚ್ಚದ ವಾಹನ ಜತೆಗೆ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ 24 ಯೂನಿಟ್ಗಳ ಭೂಗತ ಸ್ಮಾರ್ಟ್ ಡಸ್ಟ್ ಬಿನ್ ಗಳ ಪೈಕಿ 18 ಡಸ್ಟ್ ಬಿನ್ ಅಳವಡಿಸಲಾಗಿದೆ.” ಎಂದಿದೆ.

ಡಿಸೆಂಬರ್ 9, 2022ರ allaboutbelgaum ವರದಿಯಲ್ಲಿ ಬೆಳಗಾವಿಯಲ್ಲಿ ವಿನೂತನ ಮಾದರಿಯ ಕಸದ ಬುಟ್ಟಿಗಳನ್ನು ಇರಿಸಿದ ಕುರಿತು ಹೇಳಲಾಗಿದ್ದು ಇದರಲ್ಲಿ “ಸೆನ್ಸರ್ಗಳನ್ನು ಹೊಂದಿರುವ ಭಾರತದ ಮೊದಲ ಭೂಗತ ಕಸದ ಬುಟ್ಟಿ”ಯನ್ನು ಬೆಳಗಾವಿ ದಕ್ಷಿಣ ಕ್ಷೇತ್ರದ ಶ್ರೀ ಬಸವೇಶ್ವರ ವೃತ್ತದಲ್ಲಿ ಸ್ಥಾಪಿಸಲಾಗಿದೆ ಮತ್ತು ಇದು ದೇಶದಲ್ಲೇ ಮೊದಲನೆಯದು ಎಂದು ಶಾಸಕ ಅಭಯ್ ಪಾಟೀಲ್ ಹೇಳಿದರು. ಈ ವ್ಯವಸ್ಥೆಯನ್ನು ನನ್ನ ಕ್ಷೇತ್ರದ ಎಲ್ಲಾ 25 ವಾರ್ಡ್ಗಳಲ್ಲಿ ಸ್ಥಾಪಿಸಲಾಗುವುದು. ಇಂದಿನಿಂದ, ಇವುಗಳನ್ನು ಪ್ರಸ್ತುತ 18 ವಾರ್ಡ್ಗಳಲ್ಲಿ ಸ್ಥಾಪಿಸಲಾಗುತ್ತಿದ್ದು, ನಿವಾಸಿಗಳು ಈ ಕಸ ವಿಲೇವಾರಿ ವ್ಯವಸ್ಥೆಯನ್ನು ಬಳಸಿಕೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಶಾಸಕ ಅಭಯ್ ಪಾಟೀಲ್ ಹೇಳಿದರು.” ಎಂದಿದೆ.
ಇಟಿವಿ ಭಾರತ್ ಕರ್ನಾಟಕ ಮಾರ್ಚ್ 28, 2025ರಂದು ಪ್ರಕಟಿಸಿದ ವರದಿಯಲ್ಲಿ, “ಮಹಾನಗರ ಪಾಲಿಕೆಯ 15ನೇ ಹಣಕಾಸು ಯೋಜನೆಯಡಿ ಮೊದಲ ಹಂತದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ 24 ಕಡೆಗಳಲ್ಲಿ ಈ ಅಂಡರ್ ಗ್ರೌಂಡ್ ಡಸ್ಟ್ ಬಿನ್ಗಳನ್ನು ಕಳೆದ ಎರಡು ವರ್ಷಗಳ ಹಿಂದೆ ಅಳವಡಿಸಿದ್ದು, ಅವು ಕಾರ್ಯನಿರ್ವಹಿಸುತ್ತಿವೆ. ಇನ್ನು ಉತ್ತರ ಕ್ಷೇತ್ರದಲ್ಲೂ ಶೀಘ್ರದಲ್ಲಿ ಈ ಡಸ್ಟ್ ಬಿನ್ ಅಳವಡಿಕೆಗೆ ಪಾಲಿಕೆ ಸಿದ್ಧತೆ ನಡೆಸಿದೆ.” ಎಂದಿದೆ.

Conclusion
ಈ ಸಾಕ್ಷ್ಯಾಧಾರಗಳ ಪ್ರಕಾರ, ಬೆಳಗಾವಿಯಲ್ಲಿ ಹೈಡ್ರಾಲಿಕ್ ಚಾಲಿತ ಭೂಗತ ಕಸದ ಬುಟ್ಟಿಗಳನ್ನು ಅಳವಡಿಸಲಾಗಿರುವುದು ನಿಜವೇ ಆಗಿದ್ದರೂ ಆ ಕುರಿತ ಹೇಳಿಕೆಗೆ ಬಳಸಿದ ವೀಡಿಯೋ ಟರ್ಕಿಯದ್ದಾಗಿದೆ ಎಂದು ಕಂಡುಬಂದಿದೆ.
Also Read: ಲವ್ ಜಿಹಾದ್ ಹೇಳಿಕೆಯೊಂದಿಗೆ ಬಾಂಗ್ಲಾ ನಟಿಯ ಪೋಸ್ಟರ್ ವೈರಲ್
Our Sources
YouTube Video by Hidro-Mak, Dated: August 27, 2013
Report by Vijayavani, Dated: December 10, 2022
Report allaboutbelgaum, Dated: December 9, 2022
Report by Etv Bharat Karnataka, Dated: March 28, 2025